ಪ್ರಧಾನ ಸುದ್ದಿ

ಹಂಪಿಗೆ ಪ್ರವಾಹ; ಮುಳುಗಿದ ರಂಗನತಿಟ್ಟು

Published On :

ಕ.ಪ್ರ.ವಾರ್ತೆ, ಬೆಂಗಳೂರು, ಜು.23-
ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವುದರಿಂದ ವಿಶ್ವವಿಖ್ಯಾತ ಹಂಪಿಯ ಪುರಂದರದಾಸ ಮಂಟಪ ಮುಳುಗಡೆಯಾಗಿದ್ದು, ಹಲವು ಸ್ಮಾರಕಗಳು, ಕೊಪ್ಪಳದ ನವವೃಂದಾವನ, ವಿರೂಪಾಪುರಗಡ್ಡೆ ಜಲಾವೃತವಾಗಿವೆ.
ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದರಿಂದ ಕೃಷ್ಣಾ ನದಿ ನೀರು ಉಕ್ಕಿ ಹರಿಯುತ್ತಿದ್ದು ಬೆಳಗಾವಿ ಜಿಲ್ಲೆಯ 10 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಕೆಆರ್‌ಎಸ್‌ನಿಂದ ನದಿಗೆ ನೀರು ಬಿಟ್ಟಿದ್ದರಿಂದ ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯಾಗಿದೆ. ರಾಯಚೂರು ತಾಲೂಕಿನ ಮುರಾನಪುರದಲ್ಲಿ ಮನೆಗೋಡೆ ಕುಸಿದು ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ತೀರ ಪ್ರದೇಶ ಸೇರಿದಂತೆ ಇತರೆಡೆ ಭಾರಿ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.
ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ 33 ಗೇಟ್‌ಗಳ ಪೈಕಿ 28 ಗೇಟ್‌ಗಳ ಮೂಲಕ ನದಿಗೆ 85 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದೆ. ನದಿ ಅಂಚಿನಲ್ಲಿರುವ ಅರಕಳ ಗುಂಡು, ಗೌರಮ್ಮನ ಗುಂಡು ಸಂಪೂರ್ಣವಾಗಿ ಮುಳುಗಿ ಹೋಗಿದ್ದು, ಪುರಂದರದಾಸರ ಮಂಟಪದ ಮೇಲಿರುವ ಗೋಪುರದ ಧ್ವಜ ಮಾತ್ರ ಕಾಣುತ್ತಿದೆ. ಕಲ್ಲು ಸೇತುವೆಯ ಕಾಲು ಸೇತುವೆ, ಕೋಟಿ ಲಿಂಗ, ರಾಮ-ಲಕ್ಷ್ಮಣ ದೇವಸ್ಥಾನದ ಸಮೀಪದಲ್ಲಿರುವ ಸಾಲು ಮಂಟಪಗಳು, ಒನಕೆ ಕಿಂಡಿ, ಕರ್ಮ ಮಂಟಪಗಳು ಸೇರಿದಂತೆ ಇತರೆ ಕೆಲ ಮಂಟಪಗಳು ನೀರಿನಲ್ಲಿ ಮುಳುಗಡೆಯಾಗಿವೆ. ತುಂಗಭದ್ರಾ ನದಿಯ ಪಕ್ಕದಲ್ಲಿರುವ ಕೋದಂಡ ರಾಮ ದೇವಸ್ಥಾನಕ್ಕೂ ನೀರು ನುಗ್ಗಿ ರಾಮ ಲಕ್ಷ್ಮಣರ ಪಾದಗಳು ಸಂಪೂರ್ಣವಾಗಿ ಮುಳುಗಿವೆ.
ರಾಮ-ಲಕ್ಷ್ಮಣ ವಿಗ್ರಹಗಳ ಮೊಣಕಾಲುವರೆಗೂ ನೀರು ನುಗ್ಗುವ ಸಾಧ್ಯತೆ ಇದೆ. ನದಿ ತೀರದ ಪಕ್ಕದಲ್ಲಿರುವ ಯಂತ್ರೋದ್ಧಾರಕ ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುವರೆಗೂ ನೀರು ನುಗ್ಗಿದೆ. ಗಂಗಾವತಿ ತಾಲೂಕಿನ ಆನೆಗೊಂದಿಯ ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಮುಳುಗುವ ಭೀತಿಯಲ್ಲಿದೆ. 9 ಯತಿವರೇಣ್ಯರ ಕ್ಷೇತ್ರವಾಗಿರುವ ನವವೃಂದಾವನ ಮತ್ತು ಪ್ರವಾಸಿಗರ ತಾಣವಾಗಿರುವ ವಿರೂಪಾಪುರಗಡ್ಡೆ ಜಲಾವೃತಗೊಂಡಿದೆ. ಇದರಿಂದ ಹಂಪಿ ಮತ್ತು ವಿರೂಪಾಪುರಗಡ್ಡೆ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರವಾಸಿಗರನ್ನು ಹರಿಗೋಲು ಮೂಲಕ ನದಿ ದಾಟಿಸಲಾಗುತ್ತಿದೆ. ಕಂಪ್ಲಿ- ಗಂಗಾವತಿ ಸೇತುವೆ ಮುಳುಗುವ ಭೀತಿ ಎದುರಿಸುತ್ತಿದೆ.

10 ಸೇತುವೆಗಳು ಮುಳುಗಡೆ: ಚಿಕ್ಕೋಡಿ ತಾಲೂಕಿನ 8 ಸೇತುವೆಗಳು ನಾಲ್ಕು ದಿನಗಳಿಂದ ಸಂಚಾರಕ್ಕೆ ಮುಕ್ತವಾಗಿಲ್ಲ. ಇದರ ಜತೆಗೆ ರಾಯಬಾಗ ತಾಲೂಕಿನ ಕುಡಚಿ- ಉಗಾರ ಸೇತುವೆ ಸೋಮವಾರ ರಾತ್ರಿ ಜಲಾವೃತವಾಗಿದ್ದು, ಮಂಗಳವಾರ ಘಟಪ್ರಭೆಯ ಪ್ರವಾಹದಿಂದಾಗಿ ಗೋಕಾಕ- ತಿಂಗಳಪುರ ಸೇತುವೆ ಇದೇ ಪ್ರಥಮ ಬಾರಿಗೆ ಮುಳುಗಿದೆ. ಹೀಗಾಗಿ ಒಟ್ಟು 10 ಸೇತುವೆಗಳು ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ದೂಧಗಂಗಾ ಪ್ರವಾಹದಿಂದ ಚಿಕ್ಕೋಡಿ ತಾಲೂಕಿನ ಚಾಂದ ಶಿರದ್ವಾಡ್- ಜನವಾಡ ರಸ್ತೆಯೂ ಮುಳುಗಿದ್ದು ಸಂಪರ್ಕ ಕಡಿತಗೊಂಡಿದೆ. ಬೆಳಗಾವಿ ಜಿಲ್ಲೆಯ 39, ಜಮಖಂಡಿ ತಾಲೂಕಿನ 27 ಗ್ರಾಮಗಳಲ್ಲಿ ಪ್ರವಾಹ ಭೀತಿ ಮುಂದುವರಿದಿದೆ. ಪ್ರವಾಹ ಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿ ಜಯರಾಂ ಸರ್ಕಾರಕ್ಕೆ 10 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ತುಂಗಾ, ಭದ್ರಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಕೆಲವೆಡೆ ಗುಡ್ಡ ಕುಸಿತ ಉಂಟಾಗಿದೆ. ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಹುಬ್ಬಳ್ಳಿಯಲ್ಲಿ ಎರಡು ಮನೆಗಳು ಕುಸಿದಿವೆ. ಹೇಮಾವತಿ ಜಲಾಶಯ ಭರ್ತಿಗೆ 5 ಅಡಿ ಬಾಕಿ ಇದೆ. ಬೀದರ್‌ನಲ್ಲಿ 5 ಮನೆಗಳು ಕುಸಿದು ಬಿದ್ದಿವೆ.

ರಂಗನತಿಟ್ಟು ಮುಳುಗಡೆ: ಕಾವೇರಿ ನದಿ ನೀರಿನ ಮಟ್ಟ 123.67 ಅಡಿಗೆ ತಲುಪಿದ್ದು ಸೋಮವಾರ 15000 ಕ್ಯುಸೆಕ್ ನೀರು ಹೊರ ಬಿಟ್ಟಿದ್ದರಿಂದ ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿದ್ದು ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಒಳಹರಿವು ಪ್ರಮಾಣ ಕಡಿಮೆಯಾಗಿದ್ದರಿಂದ ಹೊರ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.