ಪ್ರಧಾನ ಸುದ್ದಿ

ಮೈಸೂರಲ್ಲಿ ಇನ್ನೂ ಸಿಕ್ಕಿಲ್ಲ 'ಅನ್ನಭಾಗ್ಯ'!

Published On :

ಮೈಸೂರು: ರಾಜ್ಯದಲ್ಲಿ ಕೆ.ಜಿ.ಗೆ 1ರಂತೆ 30 ಕೆ.ಜಿ. ಅಕ್ಕಿ ನೀಡುವ 'ಅನ್ನಭಾಗ್ಯ'ಯೋಜನೆ ಜಾರಿಗೆ ಬಂದು ಹದಿನೈದು ದಿನಗಳಾದರೂ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ!
ಮೈಸೂರು ನಗರದ ಕೆಲವು ನ್ಯಾಯಬೆಲೆ ಅಂಗಡಿಗಳ ಮುಂದೆ 'ರೇಷನ್ ಬಂದಿಲ್ಲ' ಎಂಬ ಫಲಕ ಹಾಕಲಾಗಿದೆ. ಇನ್ನೂ ಕೆಲವು ಅಂಗಡಿಗಳ ಮುಂಭಾಗ ಗುರುವಾರ, ಶುಕ್ರವಾರ, ಸೋಮವಾರ ರೇಷನ್ ಬರಲಿದೆ ಎಂಬ ಬೋರ್ಡ್ ಕಾಣಿಸುತ್ತಿದೆ.
ಈ ಮಧ್ಯೆ 10 ವರ್ಷಗಳ ಹಿಂದಿನ ಪಡಿತರ ಚೀಟಿದಾರರು ಬಯೋ ಮೆಟ್ರಿಕ್ ಕೈ ಬೆರಳಚ್ಚು ಹಾಗೂ ಛಾಯಾಚಿತ್ರ ತೆಗೆಸುವಲ್ಲಿ ಮುಂದಾಗಿದ್ದರೆ, ಹೊಸ ಪಡಿತರ ಚೀಟಿಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆದಿದೆ. ಇದರ ನಡುವೆ ಬಯೋವುಟ್ರಿಕ್ ತೂಕದ ಮಾಪನ ಅಳವಡಿಸಲು 3 ತಿಂಗಳ ಕಾಲಾವಕಾಶ ಕೊಡಬೇಕೆಂದು ನ್ಯಾಯಬೆಲೆ ಅಂಗಡಿದಾರರು ಪ್ರತಿಭಟನೆ ನಡೆಸಿದ್ದರು.

ವಿಳಂಬ ಧೋರಣೆ:
ಈ ಹಿಂದೆ ಅರ್ಹ ಪಡಿತರದಾರರಿಗೆ ತಿಂಗಳಿಗೆ ಕಡಿಮೆ ಎಂದರೆ 15 ಕೆ.ಜಿ.ಯಾದರೂ ಅಕ್ಕಿ ದೊರೆಯುತ್ತಿತ್ತು. ಆದರೆ, ಈ ತಿಂಗಳು ಅದೂ ಸಿಕ್ಕಿಲ್ಲ. ನ್ಯಾಯಬೆಲೆ ಅಂಗಡಿ ಬಾಗಿಲು ಹಾಕುವ ಮೂಲಕ ಆಹಾರ ಪದಾರ್ಥ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ತಾರೀಖು 25 ಆಗಿದ್ದು, ಈ ಮಾಸದ ಆಹಾರ ಪಡೆಯಲು ರಜಾ ದಿನ ಹೊರತುಪಡಿಸಿದರೆ ಕೇವಲ 5 ದಿನಗಳು ಬಾಕಿ ಇವೆ. ಅಷ್ಟರಲ್ಲಿ 500 ರಿಂದ 800 ಮಂದಿ ಕಾರ್ಡುದಾರರಿಗೆ ಆಹಾರ ವಿತರಿಸಲು ಸಾಧ್ಯವೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ನ್ಯಾಯಬೆಲೆ ಅಂಗಡಿಗೆ ದಿನವೂ ಬಂದು ಅಲೆಯುವಂತಾಗಿದೆ. 3ಕ್ಕೆ ಕೆ.ಜಿ. ಅಕ್ಕಿ ಕೊಡುವಾಗಲೆ ಎಲ್ಲವೂ ಸರಿಯಾಗಿತ್ತು. ಈಗ 1 ಆದ ಮೇಲೆ ಡಿಪೋನವರು ಸರಿಯಾಗಿ ಬಾಗಿಲು ತೆಗೆಯುತ್ತಿಲ್ಲ. ಅಕ್ಕಿ ನೀಡಲು ಮುಂದಾಗಿಲ್ಲ. ರೇಷನ್ ಪಡೆಯೋಕೆ ತಿರುಗಾಡಿ ನಾಲ್ಕೈದು ದಿನದ ಕೂಲಿ ಹಾಳಾಗಿದೆ.
- ಗೌರಮ್ಮ, ಹೆಬ್ಬಾಳು

ಪ್ರತಿ ತಿಂಗಳೂ 4-15ನೇ ತಾರೀಖಿನವರೆಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥ ವಿತರಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಈ ತಿಂಗಳು ಮಾತ್ರ 31ರೊಳಗೆ ಪಡೆಯಬಹುದು. ಬಯೋವುಟ್ರಿಕ್ ಅಳತೆ ಮಾಪನದ ಸಂಬಂಧ ಸಮಸ್ಯೆಗಳಿರುವುದರಿಂದ ಕೆಲವು ಕಡೆ ವಿಳಂಬವಾಗಿದೆ. ಈಗಾಗಲೇ ಪಡಿತರ ಬಿಡುಗಡೆಯಾಗಿದ್ದು, ನ್ಯಾಯಬೆಲೆ ಅಂಗಡಿಯವರು ವಿತರಿಸಬೇಕಿದೆ. ನ್ಯಾಯಬೆಲೆ ಅಂಗಡಿಯವರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗಿದೆ.
-ದೇವಯ್ಯ, ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು ನಗರ

- ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.