ಅಬಕಾರಿ ಮಂತ್ರಿಗೆ ಅಧಿಕಾರಿ ನೋಟಿಸ್

-ಸುಪ್ರೀತಾ ಹೆಬ್ಬಾರ್
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.27
ಕಾನೂನು ಬಾಹಿರ ಕೆಲಸಕ್ಕೆ ಬೆಂಬಲ ನೀಡಿದ್ದಕ್ಕೆ ಕಾರಣ ಕೇಳಿ ತನ್ನ ಇಲಾಖೆಯ ಸಚಿವರೊಬ್ಬರಿಗೆ ಇಲಾಖಾ ಆಯುಕ್ತರೇ ನೋಟಿಸ್ ಜಾರಿ ಮಾಡಿದ್ದಾರೆ. ಹೌದು... ಹಾಲಿ ಸಚಿವರೊಬ್ಬರು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ತಮ್ಮ ಪ್ರಭಾವ ಬಳಸಿ ಬಾರ್‌ಗೆ ಅನುಮತಿ ಕೊಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ನಡೆದಿದೆ. ಇದಕ್ಕೆ ಇಂಬು ಕೊಡುವಂತೆ ಬಾರ್ ಉದ್ಘಾಟನಾ ಆಮಂತ್ರಣ ಪತ್ರದಲ್ಲಿ ಅಂದಿನ ಶಾಸಕ, ಹಾಲಿ ಸಚಿವರ ಫೋಟೊ ಮುದ್ರಿಸಲಾಗಿದೆ. ಸಚಿವರೊಬ್ಬರಿಗೆ ಅದೇ ಇಲಾಖೆಯ ಅಧಿಕಾರಿಯೊಬ್ಬರು ನೋಟಿಸ್ ಜಾರಿ ಮಾಡಿದ್ದು, ರಾಜ್ಯದಲ್ಲಿ ಇದೇ ಮೊದಲು. ಈ ನಿಟ್ಟಿನಲ್ಲಿ ಇದೊಂದು ಅಪರೂಪದ ಪ್ರಕರಣವಾಗಿದೆ. ಇಂಥ ಬೆಳವಣಿಗೆ ನಡೆದಿರುವುದು ಅಬಕಾರಿ ಇಲಾಖೆಯಲ್ಲಿ. ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅಬಕಾರಿ ಆಯುಕ್ತ ಶಂಭು ದಯಾಳ್ ಮೀನಾ ನೋಟಿಸ್ ಜಾರಿ ಮಾಡಿದ್ದಾರೆ.
ಸ್ಪಷ್ಟೀಕರಣ ನೀಡಿ: ಜನನಿಬಿಡ ಪ್ರದೇಶದಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಕ್ಕಾಗಿ ಅಬಕಾರಿ ಸಚಿವರಿಗೆ ಖುದ್ದು ಅಬಕಾರಿ ಆಯುಕ್ತರೇ ನೋಟಿಸ್ ಜಾರಿ ಮಾಡಿ ಸ್ಪಷ್ಟೀಕರಣ ಕೇಳಿದ್ದಾರೆ.
ಪ್ರಭಾವ ಬೀರಿದ ಆರೋಪ: ಬೆಳಗಾವಿ ಜಿಲ್ಲೆಯ ಅಥಣಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರು 3 ಮಹಡಿಯ ಸಂತೋಷ್ ಡಿಲಕ್ಸ್ ಲಾಡ್ಜಿಂಗ್ ಅಂಡ್ ಬೋರ್ಡಿಂಗ್, ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು 2013ರ ಮಾ.20 ರಂದು ಕಾನೂನು ಬಾಹಿರವಾಗಿ ಪರವಾನಗಿ ನೀಡಿದ ಹಾಗೂ ಈ ಸಂಬಂಧ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ ಆರೋಪ ಎದುರಿಸುತ್ತಿದ್ದಾರೆ.
ಅಬಕಾರಿ ನಿರೀಕ್ಷಕರಿಗೂ ನೋಟಿಸ್: ಇದೇ ದೂರಿಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತರು, ಅಬಕಾರಿ ನಿರೀಕ್ಷಕರಿಗೆ ಕೂಡ ನೋಟಿಸ್ ಜಾರಿಯಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬಹು ಮಹಡಿಯ ಮದ್ಯದಂಗಡಿ ಆರಂಭಿಸಲು ಅನುಮತಿ ಕಲ್ಪಿಸಲಾಗಿದೆ ಎಂದು ಆರೋಪಿಸಿ ಡಾ.ಗೌತಮ್ ಚಿದಾನಂದ ಎನಸೋಡೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ, ಸಂಬಂಧಿಸಿದ ಇಲಾಖೆ ಮುಂದೆ ಅರ್ಜಿ ಸಲ್ಲಿಸುವಂತೆ ಆದೇಶಿಸಿತ್ತು. ಅದರಂತೆ, ವಕೀಲ ಅಮೃತೇಶ್ ಶನಿವಾರ ಅಬಕಾರಿ ಆಯುಕ್ತರ ಮುಂದೆ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ಆಯುಕ್ತರು, ಸಚಿವರು ಹಾಗೂ ಇತರ ಅಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ಪತ್ರ: ಜನನಿಬಿಡ ಪ್ರದೇಶದಲ್ಲಿ ಮದ್ಯದಂಗಡಿಗೆ ಅವಕಾಶ ಕಲ್ಪಿಸಬಾರದು ಎಂದು ಕೋರಿ ತಾವು ಸಾಕಷ್ಟು ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಥಣಿ ಒಂದು ಪ್ರವಾಸಿ ತಾಣವಾಗಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರ. ಆದರೆ, ಅಚ್ಚರಿಯ ಸಂಗತಿಯೆಂದರೆ, ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಗೆ ಖುದ್ದು ಪ್ರವಾಸೋದ್ಯಮ ಇಲಾಖೆ 2013ರ ಜನವರಿ 21ರಂದು ನಿರಾಕ್ಷೇಪಣಾ ಪತ್ರ ನೀಡಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗಗೊಂಡಿದೆ. ಇದರಿಂದ ಸರ್ಕಾರಿ ಅಧಿಕಾರಿಗಳು ಕೂಡ ಈ ಲಾಭಿಯಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ.
ಸಚಿವರ ಆಪ್ತರು: ರೆಸ್ಟೋರೆಂಟ್‌ನ ಮಾಲೀಕರಾದ ರಮೇಶ್ ಬಿ.ಸಿಂದಗಿ, ಪ್ರಕಾಶ್ ಬಿ. ಸಿಂದಗಿ ಅವರು ಅಬಕಾರಿ ಸಚಿವರಿಗೆ ಆತ್ಮೀಯರಾಗಿರುವ ಹಿನ್ನೆಲೆಯಲ್ಲಿ ಅಬಕಾರಿ ಆಯುಕ್ತರ ಮೇಲೆ ಕೂಡ ಪ್ರಭಾವ ಬೀರಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸಚಿವರು ಉತ್ತರಿಸುವುದು ಅನಿವಾರ್ಯ
ಸಚಿವರ ಮೇಲೆ ಅವ್ಯವಹಾರ ಇಲ್ಲವೇ ಅಕ್ರಮ ಎಸಗಿದ ಆರೋಪಗಳು ಬಂದಲ್ಲಿ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟೀಕರಣ ನೀಡುವ ಅಧಿಕಾರವಿದೆ. ಇದಕ್ಕೆ ಸಚಿವರು ಉತ್ತರಿಸುವುದು ಅನಿವಾರ್ಯ.
-ಅಮೃತೇಶ್, ವಕೀಲರು
ಕಾಯ್ದೆ ಪ್ರಕಾರ...
1965ರ ಕರ್ನಾಟಕ ಅಬಕಾರಿ ಕಾಯ್ದೆ, 1967ರಲ್ಲಿ ರೂಪಿಸಿರುವ ಸಾಮಾನ್ಯ ನಿಯಮಗಳ ಪ್ರಕಾರ, ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು, ವಸತಿ ಪ್ರದೇಶಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳಿಗೆ ಅವಕಾಶ ನೀಡುವಂತಿಲ್ಲ. ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಸತಿ ಪ್ರದೇಶದಿಂದ 220 ಮೀಟರ್ ವ್ಯಾಪ್ತಿಯಲ್ಲಿ ಪರವಾನಗಿ ನೀಡುವಂತಿಲ್ಲ.
ನಿಯಮ ಉಲ್ಲಂಘನೆ
ಬೆಳಗಾವಿ ಜಿಲ್ಲೆ ಅಥಣಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರಿನಲ್ಲೇ ಮದ್ಯದಂಗಡಿ ಸ್ಥಾಪಿಸಲು ನಿಯಮ ಬಾಹಿರವಾಗಿ ಅವಕಾಶ ಕಲ್ಪಿಸಲಾಗಿದೆ. ಇದರ 100 ಮೀಟರ್ ವ್ಯಾಪ್ತಿಯಲ್ಲಿ ಕೆಎಲ್‌ಇ ಪ್ರಾಥಮಿಕ ಶಾಲೆ, ಎ.ಕೆ.ಹೈಸ್ಕೂಲ್, ಪಿಯುಸಿ ಹಾಗೂ ಡಿಎಡ್ ಕಾಲೇಜುಗಳಿವೆ. ಬಸ್‌ನಿಲ್ದಾಣದ ಪಕ್ಕದಲ್ಲೇ ರೇಣುಕ ಎಲ್ಲಮ್ಮ ದೇಗುಲವಿದೆ. ಅಲ್ಲದೆ, ಬಸ್‌ನಿಲ್ದಾಣದ ಸುತ್ತಮುತ್ತ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಾಲೋನಿಗಳಿವೆ. ಇದೆಲ್ಲವನ್ನೂ ಗಮನಿಸಿದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬಾರ್‌ಗೆ ಪರವಾನಗಿ ನೀಡಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಲಾಗಿದೆ.
ಕಾನೂನು ಪ್ರಕಾರ ಇಲಾಖೆಯ ಆಯುಕ್ತರಿಗೆ ಕೆಲವು ಅಧಿಕಾರವಿರುತ್ತದೆ. ಅದರಂತೆ ನಾವು ಕ್ರಮ ಕೈಗೊಂಡಿದ್ದೇವೆ. ಸದ್ಯದ ಸಂದರ್ಭದಲ್ಲಿ ಅದರ ಕುರಿತು ಹೆಚ್ಚಿನ ವಿವರಣೆ ನೀಡಲು ಸಾಧ್ಯವಿಲ್ಲ.
-ಶಂಭುದಯಾಳ್ ಮೀನಾ, ಅಬಕಾರಿ ಇಲಾಖೆ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


