ಪ್ರಧಾನ ಸುದ್ದಿ

ಇಟಲಿ ಸಿಬ್ಬಂದಿ ವಾಪಸ್: ಒತ್ತಡ ಫಲ

ಇಟಲಿ ನೌಕಾ ಸಿಬ್ಬಂದಿ ವಿವಾದ ಕೊನೆಗೂ ಸುಖಾಂತ್ಯಗೊಂಡಿದೆ. ಕೇರಳದ ಮೀನುಗಾರರಿಬ್ಬರ ಹತ್ಯೆ ಆರೋಪ ಎದುರಿಸುತ್ತಿರುವ ತನ್ನಿಬ್ಬರು ನೌಕಾ...

ಇಟಲಿ ಸಿಬ್ಬಂದಿ ವಾಪಸ್: ಒತ್ತಡ ಫಲ
Published On :

ರೋಮ್: ಇಟಲಿ ನೌಕಾ ಸಿಬ್ಬಂದಿ ವಿವಾದ ಕೊನೆಗೂ ಸುಖಾಂತ್ಯಗೊಂಡಿದೆ. ಕೇರಳದ ಮೀನುಗಾರರಿಬ್ಬರ ಹತ್ಯೆ ಆರೋಪ ಎದುರಿಸುತ್ತಿರುವ ತನ್ನಿಬ್ಬರು ನೌಕಾ ಸಿಬ್ಬಂದಿಯನ್ನು ಇಟಲಿ ಸರ್ಕಾರ ಕೊನೆಗೂ ಭಾರತಕ್ಕೆ ವಾಪಸ್ ಕಳುಹಿಸಿಕೊಟ್ಟಿದೆ.
ಸುಪ್ರೀಂಕೋರ್ಟ್ ನೀಡಿದ ಗಡುವಿನೊಳಗೆ ನೌಕಾಸಿಬ್ಬಂದಿ ಭಾರತಕ್ಕೆ ಹಿಂತಿರುಗಿದರೆ ಅವರನ್ನು ಬಂಧಿಸುವುದಿಲ್ಲ ಹಾಗೂ ಮರಣದಂಡನೆ ಪ್ರಕರಣದಡಿ ವಿಚಾರಣೆ ನಡೆಸುವುದಿಲ್ಲ ಎಂದು ಭಾರತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಟಲಿ ಈ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಇಟಲಿಯ ಉಪವಿದೇಶಾಂಗ ಸಚಿವ ಸ್ಟೆಫನ್ ಡೆ ಮಿಸ್ತುರಾ ಅವರೊಂದಿಗೆ ನೌಕಾ ಸಿಬ್ಬಂದಿಗಳಾದ ಮಾಸ್ಸಿಮಿಲಿಯಾನೊ ಲಾಟೋರ್ ಮತ್ತು ಸಾವ್ವೆಟೋರ್ ಗಿರೋನೆ ಶುಕ್ರವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಎರಡೂ ದೇಶಗಳ ನಡುವೆ ಸೃಷ್ಟಿಯಾಗಿದ್ದ 11 ದಿನಗಳ ರಾಜತಾಂತ್ರಿಕ ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದೆ.
4 ವಾರಗಳ ಗಡವು: ಮತದಾನದಲ್ಲಿ ಪಾಲ್ಗೊಳ್ಳುವ ಸಂಬಂಧ ಸುಪ್ರೀಂಕೋರ್ಟ್ ನೌಕಾ ಸಿಬ್ಬಂದಿಗೆ ಇಟಲಿಗೆ ತೆರಳಲು ಅನುಮತಿ ನೀಡಿತ್ತು. ನಾಲ್ಕು ವಾರಗಳೊಳಗೆ ಭಾರತಕ್ಕೆ ಹಿಂತಿರುಗುವಂತೆ ಸೂಚಿಸಿತ್ತು. ಆದರೆ, ನೌಕಾ ಸಿಬ್ಬಂದಿ ದೇಶಕ್ಕೆ ಹಿಂತಿರುಗಿದ ಬಳಿಕ ಯಾವುದೇ ಕಾರಣಕ್ಕೂ ಅವರನ್ನು ಮತ್ತೆ ಭಾರತಕ್ಕೆ ಕಳುಹಿಸಿಕೊಡುವುದಿಲ್ಲ ಎಂದು ಇಟಲಿ ಪಟ್ಟು ಹಿಡಿದಿತ್ತು.         
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಭಾರತದಲ್ಲಿರುವ ಇಟಲಿ ರಾಯಭಾರಿಯನ್ನು ದೇಶಬಿಟ್ಟು ತೆರಳದಂತೆ ಸೂಚಿಸಿತ್ತು. ಇದು ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಜತೆಗೆ, ಭಾರತ ಕೂಡ ಇಟಲಿ ಜತೆಗಿನ ದ್ವಿಪಕ್ಷೀಯ ಒಪ್ಪಂದವನ್ನು ಪುನರ್ ಪರಿಶೀಲಿಸುವುದಾಗಿ ತಿಳಿಸಿತ್ತು.
ಟಿ ಯಾರಿಗೆ ಕ್ರೆಡಿಟ್? ಸರ್ಕಾರ, ಪ್ರತಿಪಕ್ಷಗಳ ನಡುವೆ ವಾಕ್ಸಮರ: ತನ್ನಿಬ್ಬರು ನೌಕಾಸಿಬ್ಬಂದಿಯನ್ನು ಭಾರತಕ್ಕೆ ವಾಪಸ್ ಕಳುಹಿಸಿಕೊಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದರ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎನ್ನುವ ವಿಚಾರವಾಗಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ಯುದ್ಧ ಶುರುವಾಗಿದೆ. ಇಟಲಿ ನೌಕಾ ಸಿಬ್ಬಂದಿ ವಿವಾದ ಸುಖಾಂತ್ಯ ಕಂಡದ್ದು ರಾಜತಾಂತ್ರಿಕ ನಿಲುವಿಗೆ ಸಿಕ್ಕ ಗೆಲುವಾಗಿದೆ ಎಂದು ಸರ್ಕಾರ ಹೇಳಿಕೊಂಡರೆ, ಪ್ರತಿಪಕ್ಷ ಬಿಜೆಪಿ ಇದನ್ನು ತಳ್ಳಿಹಾಕಿದೆ.
ಸುಪ್ರೀಂನ ಕಠಿಣ ನಿಲುವು ಹಾಗೂ ಪ್ರತಿಪಕ್ಷಗಳ ಒಗ್ಗಟ್ಟಿನ ಒತ್ತಡದ ಕ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಈ ಪ್ರಕರಣದ ಮೂಲಕ ಯುಪಿಎ ಸರ್ಕಾರ ತನ್ನ 'ತುಷ್ಟೀಕರಣ ರಾಜಕಾರಣ'ವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿದೆ ಎಂದು ಹೇಳಿದೆ.
ಇಟಲಿ ಪ್ರಕರಣದಲ್ಲಿ ಸಲ್ಮಾನ್ ಖುರ್ಷಿದ್ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದ್ದಾರೆ. ಹಾಗಿದ್ದರೆ ಪಾಕ್‌ನಲ್ಲಿರುವ ಮುಂಬೈ ದಾಳಿ ರೂವಾರಿ ದಾವೂದ್ ಇಬ್ರಾಹಿಂ, ಉಗ್ರ ಸಯೀದ್‌ರನ್ನು ಯಾಕೆ ಪಾಕ್‌ನಿಂದ ವಾಪಸ್ ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ವಕ್ತಾರ ಶಹನವಾಜ್ ಹುಸೇನ್ ಪ್ರಶ್ನಿಸಿದ್ದಾರೆ. ಹುಸೇನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಖುರ್ಷಿದ್, ಪ್ರತಿಪಕ್ಷಗಳಿಗೆ ಕ್ರೆಡಿಟ್ ಸಲ್ಲುವುದಿಲ್ಲ ಎಂದಿದ್ದಾರೆ.

ಪ್ರಧಾನಿ ಸ್ವಾಗತ
ನೌಕಾ ಸಿಬ್ಬಂದಿಯನ್ನು ಭಾರತಕ್ಕೆ ವಾಪಸ್ ಕಳುಹಿಸಿಕೊಡುವ ಇಟಲಿ ಸರ್ಕಾರದ ನಿರ್ಧಾರವನ್ನು ಪ್ರಧಾನಿ ಮನಮೋಹನ ಸಿಂಗ್ ಸ್ವಾಗತಿಸಿದ್ದಾರೆ. ಈ ಮೂಲಕ ಭಾರತೀಯ ನ್ಯಾಯಾಂಗ ಪ್ರಕ್ರಿಯೆಯ ಏಕತೆ ಮತ್ತು ಗೌರವವನ್ನು ಎತ್ತಿ ಹಿಡಿದಂತಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಭರವಸೆ ಏನು?
 ಸುಪ್ರೀಂಕೋರ್ಟ್ ಗಡುವಿನೊಳಗೆ ನೌಕಾ ಸಿಬ್ಬಂದಿಗಳು ಹಿಂತಿರುಗಿದರೆ ಅವರನ್ನು ಬಂಧಿಸುವುದಿಲ್ಲ. ಅವರು ಇಟಲಿಯ ರಾಯಭಾರಿ ಕಚೇರಿಯಲ್ಲೇ ಉಳಿಯಲಿದ್ದಾರೆ.
 ಒಂದು ವೇಳೆ ಸಿಬ್ಬಂದಿಗಳಿಬ್ಬರು ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಮರದಂಡನೆಗೆ ಗುರಿಪಡಿಸುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.