ಆಯ್ಕೆ ಕಸರತ್ತು
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಸರತ್ತು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ...

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.23
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಸರತ್ತು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಎಡೆಬಿಡದೆ ನಡೆಯುತ್ತಿದೆ.
ನಾಮಪತ್ರ ಸಲ್ಲಿಸುವ ಅವಧಿ ಕೊನೆಗೊಳ್ಳುವ ಸಮಯದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ಕಾಂಗ್ರೆಸ್ ಈ ವರೆಗೆ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಅದರೆ, ಈ ಬಾರಿ ಬೇಗ ಪಟ್ಟಿ ಪ್ರಕಟಿಸಬೇಕು ಎಂಬುದು ಆ ಪಕ್ಷದ ನಾಯಕರ ನಿರ್ಧಾರ. ಹೀಗಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಪಟ್ಟಿ ತಯಾರಿಸುವ ಕಸರತ್ತು ಮುಂದುವರಿದಿದೆ.
ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಒಂದು ವಾರದೊಳಗೆ ಆಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿವೆ. ಹೀಗಾಗಿ ಉಭಯ ಪಕ್ಷಗಳ ರಾಜ್ಯ ನಾಯಕರು ಪಟ್ಟಿಯನ್ನು ಅಂತಿಮಗೊಳಿಸಿ ದೆಹಲಿ ವರಿಷ್ಠರಿಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತೊಂದು ಸುತ್ತಿನ ಪರಿಶೀಲನೆ ನಂತರ, ದೆಹಲಿ ನಾಯಕರು ಪಟ್ಟಿಗೆ ಅಂಕಿತ ಹಾಕಬೇಕಿದೆ. ಹೀಗಾಗಿ, ಈ ಎರಡು ಪಕ್ಷಗಳ ಪ್ರಥಮ ಪಟ್ಟಿ ಈ ವಾರದ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟವಾಗಲಿವೆ.
ವಿಧಾನಸಭೆ ಚುನಾವಣೆಗೆ ಪ್ರಥಮ ಪಕ್ಷವಾಗಿ ಕೆಜೆಪಿ 69 ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿ ವಾರಾಂತ್ಯಕ್ಕೆ ಪ್ರಕಟಿಸುವ ನಿರೀಕ್ಷೆ ಇದೆ. ಇನ್ನು ಜೆಡಿಎಸ್ ಕಾದುನೋಡುವ ತಂತ್ರಕ್ಕೇ ಶರಣಾಗಿದೆ. ಬಿಎಸ್ಆರ್ ಕಾಂಗ್ರೆಸ್ ಬಳ್ಳಾರಿ ಪ್ರತಿಭಟನೆಯ ಬಿಸಿಯಲ್ಲಿದ್ದು, ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸುವ ಬಗ್ಗೆ ತೀರ್ಮಾನಿಸಿಲ್ಲ.
ಬಿಜೆಪಿಯಲ್ಲಿ ಹಾಲಿ ಶಾಸಕರು ಸೇರಿದಂತೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿರುವ ಪ್ರಥಮ ಪಟ್ಟಿಯನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಅಂತಿಮಗೊಳಿಸಿದೆ. ಹೊಸ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸಲಾಗಿದ್ದು, ಇದರಲ್ಲಿ ಹಾಲಿ ಶಾಸಕರ ಹೆಸರೇ ಪ್ರಮುಖವಾಗಿವೆ. ಬಿಜೆಪಿ ಬಿಡುವ ಅನುಮಾನವಿರುವ ಸಚಿವರು-ಶಾಸಕರ ಕ್ಷೇತ್ರವನ್ನು ಖಾಲಿ ಉಳಿಸಿಕೊಳ್ಳಲಾಗಿದೆ. ಹಾಲಿ ಶಾಸಕರಲ್ಲಿ ಸುಮಾರು 50 ಶಾಸಕರ ಹೆಸರಷ್ಟೇ ಪ್ರಥಮ ಪಟ್ಟಿಯಲ್ಲಿವೆ.
ಬಿಜೆಪಿ ಶಾಸಕರಿಲ್ಲದ ಕಡೆ ಅಭ್ಯರ್ಥಿಗಳನ್ನು ಹೆಚ್ಚಾಗಿ ಅಖೈರುಗೊಳಿಸಲಾಗಿದೆ. ಹೀಗಾಗಿ, ಬಿಜೆಪಿ ಪ್ರಥಮ ಪಟ್ಟಿ 100ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಒಳಗೊಂಡಿರುವುದಿಲ್ಲ. ಇಷ್ಟಾದರೂ, ಶಿಸ್ತುಬದ್ಧ ಬಿಜೆಪಿ ಕೂಡ, ಈ ಬಾರಿ ಅಂತಿಮಗಳಿಗೆಯಲ್ಲೇ ಸಾಕಷ್ಟು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವಲ್ಲಿ ಒಂದು ಹೆಜ್ಜೆ ಮುಂದಿದೆ. ನಗರ ಸ್ಥಳೀಯ ಸಂಸ್ಥೆ ಯಶಸ್ಸಿನಿಂದ ಬೀಗುತ್ತಿರುವ ಆ ಪಕ್ಷ, ಹಾಲಿ ಶಾಸಕರನ್ನು ಒಳಗೊಂಡಂತೆ ಮೊದಲ ಪಟ್ಟಿಗೆ ಅಂತಿಮ ರೂಪುರೇಷೆ ನೀಡುತ್ತಿದೆ.
ಸುಮಾರು 110 ಅಭ್ಯರ್ಥಿಗಳು ಈ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯ ಬಗ್ಗೆಯೇ ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚೆಯೂ ನಡೆದಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ಮುಗಿದಿದ್ದು, ರಾಜ್ಯ ನಾಯಕರು ನಗರಕ್ಕೆ ವಾಪಸ್ ಆಗಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ರಾಜ್ಯ ನಾಯಕರು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಲಿದ್ದಾರೆ. ಮಾ.25ರಿಂದ 27ರವರೆಗೆ ಅಲ್ಲಿ ಚುನಾವಣಾ ಪರಿಶೀಲನಾ ಸಮಿತಿ ಸಭೆ ನಡೆಯಲಿದ್ದು, ಪಟ್ಟಿ ಮತ್ತೊಮ್ಮೆ ತಪಾಸಣೆಯಾಗಲಿದೆ. ಇದಾದ ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಮ್ಮತಿ ಪಡೆಯಲಾಗುತ್ತದೆ. ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಕಾಂಗ್ರೆಸ್ ಪ್ರಥಮ ಪಟ್ಟಿ ಬಿಡುಗಡೆಯಾಗುವ ಲಕ್ಷಣಗಳಿವೆ.
ಯಡಿಯೂರಪ್ಪ ಎರಡನೇ ಪಟ್ಟಿ ಸಿದ್ಧತೆಯಲ್ಲಿದ್ದಾರೆ. ಇಲ್ಲಿ ಹೆಚ್ಚು ಆಕಾಂಕ್ಷಿಗಳಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳನ್ನೇ ಪ್ರಕಟಿಸಲಿದ್ದಾರೆ. ಏಕೆಂದರೆ, ಹೋಳಿ ನಂತರ ಬಿಜೆಪಿಯಿಂದ ಕೆಲವು ಸಚಿವರು, ಶಾಸಕರು ಕೆಜೆಪಿಗೆ ಸೇರಲಿದ್ದಾರೆ. ಅವರೆಲ್ಲರಿಗೂ ಅವರು ಬಂದ ಮೇಲೆ ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಿದ್ದಾರೆ.
ಇನ್ನು ಜೆಡಿಎಸ್ ತನ್ನ ಮೂಲ ಯೋಜನೆಯಂತೆ ನಡೆದಿದ್ದರೆ ಈ ವೇಳೆಗಾಗಲೇ ಪ್ರಥಮ ಪಟ್ಟಿಯನ್ನು ಪ್ರಕಟಿಸಬೇಕಿತ್ತು. ಆದರೆ, ಆಕಾಂಕ್ಷಿಗಳ ಪ್ರಬಲ ಪೈಪೋಟಿ ಹಾಗೂ ಬೇರೆ ಪಕ್ಷಗಳ ನಿರಾಶ್ರಿತರ ಆಗಮನದ ನಿರೀಕ್ಷೆ ಇರುವುದರಿಂದ ಪಟ್ಟಿಯನ್ನು ಸದ್ಯ ಪ್ರಕಟಿಸುವ ಯಾವ ಲಕ್ಷಣಗಳೂ ಇಲ್ಲ. ಏಪ್ರಿಲ್ ಮೊದಲ ವಾರವಷ್ಟೇ ಪ್ರಥಮ ಪಟ್ಟಿ ಬಿಡುಗಡೆಯಾಗುವ ಸಂಭವವಿದೆ.
ಒಟ್ಟಿನಲ್ಲಿ ಏ.10ರಿಂದ ನಾಮಪತ್ರ ಸಲ್ಲಿಕೆ ಆರಂಭವಾದರೂ ಈ ಎಲ್ಲ ಪ್ರಮುಖ ಪಕ್ಷಗಳು ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸುವುದು ಅನುಮಾನ. ಎಲ್ಲ ಪಕ್ಷಗಳೂ ಕಾದುನೋಡುವ ತಂತ್ರದಲ್ಲೇ ನಿರತವಾಗಿರುವುದರಿಂದ ನಾಮಪತ್ರ ಸಲ್ಲಿಸುವ ಕಡೆ ದಿನ ಹತ್ತಿರವಾದಂತೆ, ಕೆಲವು ಕ್ಷೇತ್ರಗಳಲ್ಲಿ ಕೊನೆಯ ದಿನ ಅಭ್ಯರ್ಥಿಗೆ ಬಿ ಫಾರಂ ನೀಡುವ ಸಂಭವಗಳೇ ಹೆಚ್ಚಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


