ಹೆಂಗಿರುತ್ತೆ ನೋಡಿ ಕರೆಂಟ್ ಶಾಕ್
ಬರಗಾಲ, ಬಿರು ಬೇಸಿಗೆ, ಅನಿಯಮಿತ ಲೋಡ್‌ಶೆಡ್ಡಿಂಗ್, ಚುನಾವಣೆಯ ಕಾವು ಮತ್ತು ಆರ್ಥಿಕ ಹಿಂಜರಿತದ ಮಧ್ಯೆಯೂ ವಿದ್ಯುತ್ ದರ ಏರಿಕೆಯ ಬರೆಗೆ...

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.27
ಬರಗಾಲ, ಬಿರು ಬೇಸಿಗೆ, ಅನಿಯಮಿತ ಲೋಡ್‌ಶೆಡ್ಡಿಂಗ್, ಚುನಾವಣೆಯ ಕಾವು ಮತ್ತು ಆರ್ಥಿಕ ಹಿಂಜರಿತದ ಮಧ್ಯೆಯೂ ವಿದ್ಯುತ್ ದರ ಏರಿಕೆಯ ಬರೆಗೆ ರಾಜ್ಯದ ಜನ ಸಿದ್ಧರಾಗಬೇಕಿದೆ.
ದರ ಹೆಚ್ಚಿಸಬೇಕು ಎಂಬ ವಿದ್ಯುತ್ ಕಂಪನಿಗಳ ಬೇಡಿಕೆಯನ್ನು ಪರಿಶೀಲಿಸಿರುವ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ತನ್ನ ಆದೇಶ ಹೊರಡಿಸಲಿದ್ದು, ಅಲ್ಪ ಪ್ರಮಾಣದಲ್ಲಿ ದರ ಏರಿಕೆಗೆ ಸಮ್ಮತಿಸುವ ಸಾಧ್ಯತೆ ಇದೆ.
ಕೆಪಿಟಿಸಿಎಲ್‌ಗೆ ನೀಡಬೇಕಾದ ವಿದ್ಯುತ್ ಸರಬರಾಜು ವೆಚ್ಚ ಸೇರಿದಂತೆ ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಿಸಬೇಕು ಎಂದು ರಾಜ್ಯದ ಐದು ಎಸ್ಕಾಂಗಳು ಕೆಇಆರ್‌ಸಿ ಮುಂದೆ ಪ್ರಸ್ತಾವ ಇಟ್ಟಿದ್ದವು. ಆದರೆ, ಅಷ್ಟೊಂದು ಪ್ರಮಾಣದಲ್ಲಿ ದರ ಏರಿಕೆಗೆ ಕೆಇಆರ್‌ಸಿ ಒಪ್ಪಿಗೆ ನೀಡದೇ ಇದ್ದರೂ ಪ್ರತಿ ಯೂನಿಟ್‌ಗೆ 10ರಿಂದ 20 ಪೈಸೆಯಷ್ಟು ದರ ಹೆಚ್ಚಿಸಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಕಳೆದ ವರ್ಷದ ಏ. 30ರಂದು ವಿದ್ಯುತ್ ದರ ಏರಿಕೆಯಾಗಿದ್ದು, ಪ್ರತಿ ಯೂನಿಟ್ ಗೃಹ ಬಳಕೆ ವಿದ್ಯುತ್‌ಗೆ 10 ಪೈಸೆ, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆ 20 ಪೈಸೆಯಷ್ಟು ಏರಿಕೆ ಮಾಡಲಾಗಿತ್ತು.
ಕಳೆದ ನವೆಂಬರ್‌ನಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ವಿದ್ಯುತ್ ದರ ಏರಿಕೆ ಕುರಿತಂತೆ ಕೆಇಆರ್‌ಸಿ ಮುಂದೆ ಪ್ರಸ್ತಾವ ಸಲ್ಲಿಸಿದ್ದವು. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಿಗೆ ಸೇರಿ ಪ್ರತಿ ಯೂನಿಟ್‌ಗೆ 70 ಪೈಸೆ ದರ ಹೆಚ್ಚಳ ಮಾಡಬೇಕು ಎಂಬ ಕೋರಿಕೆ ಮುಂದಿಟ್ಟಿದ್ದವು. ಈ ಕುರಿತಂತೆ ಸಾರ್ವಜನಿಕ ವಿಚಾರಣೆ ಪೂರ್ಣಗೊಳಿಸಿದ್ದ ಕೆಇಆರ್‌ಸಿ ತನ್ನ ಆದೇಶವನ್ನು ಕಾಯ್ದಿರಿಸಿದ್ದು, ಗುರುವಾರ ಅದನ್ನು ಪ್ರಕಟಿಸಲಿದೆ.
ಮೂರೂವರೆ ವರ್ಷಕ್ಕೆ ಐದನೇ ಬಾರಿ: ಒಂದು ವೇಳೆ ದರ ಹೆಚ್ಚಳಕ್ಕೆ ಕೆಇಆರ್‌ಸಿ ಗುರುವಾರ ಒಪ್ಪಿಗೆ ನೀಡಿದರೆ ದರ ಏರಿಕೆಗೆ ಸಂಬಂಧಿಸಿದಂತೆ ಹೊಸ ದಾಖಲೆ ಸೃಷ್ಟಿಯಾಗಲಿದೆ. ಅಂದರೆ, ಮೂರೂವರೆ ವರ್ಷದಲ್ಲಿ ಒಟ್ಟು 5 ಬಾರಿ ದರ ಏರಿಕೆ ಆದಂತಾಗುತ್ತದೆ. ರಾಜ್ಯದ ಇತಿಹಾಸದಲ್ಲೇ ಇಷ್ಟು ಕಡಿಮೆ ಅವಧಿಯಲ್ಲಿ ಅಷ್ಟೊಂದು ಬಾರಿ ದರ ಏರಿಕೆಯಾದ ಉದಾಹರಣೆ ಇಲ್ಲ.
ವಿದ್ಯುತ್ ಕೊರತೆ, ಪೂರೈಕೆ ವೆಚ್ಚ ಹೆಚ್ಚಳ ಸೇರಿದಂತೆ ಕಳೆದ ಮೂರೂವರೆ ವರ್ಷದಲ್ಲಿ ನಾಲ್ಕು ಬಾರಿ ದರ ಏರಿಕೆಯಾಗಿದ್ದು, ಈಗಾಗಲೇ ಗ್ರಾಹಕರ ಮೇಲೆ ಹೊರೆ ಹೆಚ್ಚಾಗಿದೆ. ಇದೀಗ ಮತ್ತೊಮ್ಮೆ ದರ ಹೆಚ್ಚಳವಾದರೆ ರಾಜ್ಯದ ವಿದ್ಯುತ್ ಬಳಕೆದಾರರ, ಅದರಲ್ಲೂ ಮುಖ್ಯವಾಗಿ ಜನ ಸಾಮಾನ್ಯರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ.
ಬರಗಾಲ, ಚುನಾವಣೆ ಮುಂತಾದ ಕಾರಣಗಳಿಂದ ದರ ಏರಿಕೆ ಇಲ್ಲ ಎಂಬ ಮಾತುಗಳು ಕೆಲವೆಡೆ ಕೇಳಿಬರುತ್ತಿದೆಯಾದರೂ ವರ್ಷಕ್ಕೆ ಒಂದೇ ಬಾರಿ, ಅದು ಏಪ್ರಿಲ್‌ನಲ್ಲಿ ಮಾತ್ರ ದರ ಏರಿಕೆ ಮಾಡಬೇಕು ಎಂದು ಕೇಂದ್ರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನ ಇರುವುದರಿಂದ ದರ ಏರಿಕೆ ಖಚಿತ ಎಂದು ಹೇಳಲಾಗುತ್ತಿದೆ.
ಸಂಕಷ್ಟ ಹೆಚ್ಚಳ: ವಿದ್ಯುತ್ ದರ ಏರಿಕೆಯಾದರೂ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ಹೆಚ್ಚಳ ಆಗುವ ಸಾಧ್ಯತೆಗಳು ಇಲ್ಲ. ಬದಲಾಗಿ ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆಯಾಗಲಿದೆ. ಆದರೆ, ಅದಕ್ಕೆ ತಕ್ಕಂತೆ ಪೂರೈಕೆಗೆ ಬೇಕಾದ ಸಿದ್ಧತೆಗಳು ಆಗಿಲ್ಲ. ಹೀಗಾಗಿ ದರ ಏರಿಕೆಯ ಜತೆಗೆ ವಿದ್ಯುತ್ ಸಮಸ್ಯೆಯ ಬರೆಯೂ ಜನರ ಮೇಲೆ ಬೀಳಲಿದೆ.
ಕಳೆದ ಎರಡು ವರ್ಷಗಳಿಂದ ರಾಜ್ಯ ಬರದಿಂದ ತತ್ತರಿಸುತ್ತಿದೆ. ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆಯೂ ಉಂಟಾಗಿ ಬರ ಪರಿಸ್ಥಿತಿ ಇನ್ನಷ್ಟು ಹೆಚ್ಚಿದ್ದು, ರೈತರು ಹಾಗೂ ಜನಸಾಮಾನ್ಯರು ಇನ್ನೂ ಅದರಿಂದ ಚೇತರಿಸಿಕೊಂಡಿಲ್ಲ.
ಅಷ್ಟೇ ಅಲ್ಲ, ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೈಗಾರಿಕಾ ಕ್ಷೇತ್ರವೂ ಸಂಕಷ್ಟದಲ್ಲಿದೆ.
ಹೀಗಾಗಿ ಎಲ್ಲಾ ವರ್ಗದ ಜನ ದರ ಏರಿಕೆಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಅದರಿಂದ ಯಾವುದೇ ಉಪಯೋಗವಾಗುವ ಸಾಧ್ಯತೆ ಇಲ್ಲ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಸರ್ಕಾರ ಈ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಲು ಸಾಧ್ಯವಿಲ್ಲದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


