ಪ್ರಧಾನ ಸುದ್ದಿ

ಡೆಂಘೀ: ಸಾಲುಂಡಿಯಲ್ಲಿ ಸಾಲು ಸಾಲು ಸಾವು

ಡೆಂಘೀ: ಸಾಲುಂಡಿಯಲ್ಲಿ ಸಾಲು ಸಾಲು ಸಾವು
Published On :

ಕನ್ನಡಪ್ರಭ ವಾರ್ತೆ ಮೈಸೂರು ಮೇ 24
ರಾಜ್ಯದ ಎಲ್ಲೆಡೆ ವ್ಯಾಪಕವಾಗಿರುವ ಮಹಾಮಾರಿ ಡೆಂಘೀ ಜ್ವರ ಮೈಸೂರು ತಾಲೂಕಿನ ಡಿ.ಸಾಲುಂಡಿಯಲ್ಲಿ ನಾಲ್ವರು ಮಕ್ಕಳನ್ನು ಬಲಿ ತೆಗೆದುಕೊಂಡಿದ್ದು, ಜನತೆಯಲ್ಲಿ ಭೀತಿ ಹುಟ್ಟಿಸಿದೆ.
ಮೈಸೂರು ತಾಲೂಕಿನ ಡಿ.ಸಾಲುಂಡಿಯಲ್ಲಿ ಡೆಂಘೀ ಜ್ವರಕ್ಕೆ ನಾಲ್ಕು ಮಕ್ಕಳು ಗುರುವಾರ ಮಧ್ಯರಾತ್ರಿಯೇ ಅಸುನೀಗಿದ್ದರು. ಅಷ್ಟೇ ಅಲ್ಲ, ತೀವ್ರ ಜ್ವರಬಾಧೆಯಿಂದ ಬಳಲುತ್ತಿದ್ದ 15 ಮಕ್ಕಳನ್ನು ಡೆಂಘೀ ಎಂದು ಶಂಕಿಸಲ್ಪಟ್ಟು ಶುಕ್ರವಾರ ಮೈಸೂರಿನ ಚೆಲುವಾಂಬ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಆರು ದಿನಗಳಿಂದ ಈ ಗ್ರಾಮದಲ್ಲಿ ಡೆಂಘೀ ಜ್ವರ ಜನರನ್ನು ಬಾಧಿಸುತ್ತಲೇ ಇತ್ತು. ನಾಲ್ಕು ಮಕ್ಕಳು ಡೆಂಘೀಯಿಂದಲೇ ಮೃತಪಟ್ಟಿರುವುದು ಎಂದು ವೈದ್ಯರು ದೃಢಪಡಿಸಿದ ಹಿನ್ನೆಲೆಯಲ್ಲಿ ಈಗ ಡಿ.ಸಾಲುಂಡಿ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ.
ಮಕ್ಕಳು ಡೆಂಘೀಯಿಂದ ಅಸುನೀಗಲು ಗ್ರಾಮದಲ್ಲಿ ತಾಂಡವವಾಡುತ್ತಿದ್ದ ಅನೈರ್ಮಲ್ಯ ಹಾಗೂ ಅಶುದ್ಧ ನೀರಿನ ಬಳಕೆಯೇ ಕಾರಣ ಎಂಬುದು ಖಚಿತವಾಗಿದೆ. ಈ ನಡುವೆ ಸಾವಿಗೀಡಾಗಿರುವ ಮಕ್ಕಳ ಕುಟುಂಬಗಳ ರೋದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ವಾರದ ಹಿಂದೆ ತೀವ್ರ ಜ್ವರ ಬಾಧೆಯಿಂದ ಬಳಲುತ್ತಿದ್ದ ನಿಂಗರಾಜಾಚಾರಿ- ಜಯಮ್ಮ ದಂಪತಿ ಪುತ್ರ ಪ್ರೀತಂ (6)ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಕಳೆದ ಶನಿವಾರ ಮೃತಪಟ್ಟಿದ್ದ. ಇನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಗ್ರಾಮದ ನಾಗರಾಜ- ಸುಧಾಮಣಿ ಎಂಬವರ ಪುತ್ರಿ ಯಶಸ್ವಿನಿ (7), ಆಟೋ ಚಾಲಕ ಪ್ರಕಾಶ್- ಮಹಾದೇವಿ ದಂಪತಿ ಪುತ್ರ ರವಿಚಂದ್ರ (5) ಹಾಗೂ ಕೂಲಿಕಾರ ಬೀರಪ್ಪ- ಮೀನಾಕ್ಷಿ ದಂಪತಿಯ ಸುಶ್ಮಿತಾ (ಒಂದೂವರೆ ವರ್ಷ) ಕೂಡ ಡೆಂಘೀಗೆ ಬಲಿಯಾಗಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಜಿಲ್ಲಾಡಳಿತ ಅಲ್ಲಿ ತಾಂಡವವಾಡುತ್ತಿದ್ದ ಅನೈರ್ಮಲ್ಯದ ಬಗ್ಗೆ ಪರಿಶೀಲಿಸಿ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾಧಿಕಾರಿ ಸಿ.ಶಿಖಾ ಅವರ ಆದೇಶದ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ತಾಪಂ ಇಒ ಡಾ.ಎಸ್. ಪ್ರೇಮ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಡೆಂಘೀ ತಡೆಗಟ್ಟಲು ಅನುಸರಿಸಬಹುದಾದ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ.
ಗ್ರಾಮದ ಚರಂಡಿ ಶುಚಿಗೊಳಿಸಲು, ತಿಪ್ಪೇಗುಂಡಿಗಳನ್ನು ತೆರವುಗೊಳಿಸಲು ಸ್ವಚ್ಛತಾ ಸಿಬ್ಬಂದಿ ನೇಮಿಸಲಾಗಿದೆ.
ಇತ್ತೀಚೆಗೆ ಬಿದ್ದ ಮಳೆಯಿಂದ ಹಳ್ಳ- ಕೊಳ್ಳಗಳಲ್ಲಿ ತುಂಬಿದ್ದ ನೀರಿನಲ್ಲಿ ಲಾರ್ವಾ, ಸೊಳ್ಳೆಗಳ ಮೂಲೋತ್ಪಾಟನೆಗೆ ಥೆಮೋಫಾಸ್ ಲಿಕ್ವಿಡ್ ಸಿಂಪಡಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಯಂತ್ರಗಳ ಮೂಲಕ ಧೂಮೀಕರಣ (ಫಾಗಿಂಗ್) ಮಾಡಲಾಗಿದೆ.

ತಾತ್ಕಾಲಿಕ ಆಸ್ಪತ್ರೆ ವ್ಯವಸ್ಥೆ
ಗ್ರಾಮದ ಬಹುತೇಕ ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚರವಾಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದೆ. ಅಲ್ಲಿಗೆ ಒಬ್ಬ ವೈದ್ಯರು, ಆರು ಮಂದಿ ಶುಶ್ರೂಷಕಿಯರು, ಒಬ್ಬ ಪ್ರಯೋಗಾಲಯ ಸಿಬ್ಬಂದಿ ನಿಯೋಜಿಸಿದೆ. ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ತಪಾಸಣೆ ಮಾಡಿ, ರಕ್ತದ ಮಾದರಿ ಸಂಗ್ರಹಿಸಲಾಯಿತು. ಕೆಲವರಿಗೆ ಸ್ಥಳದಲ್ಲಿಯೇ ಗ್ಲೂಕೋಸ್ ನೀಡಲಾಯಿತು. ಉಳಿದಂತೆ ತುರ್ತು ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ನಗರದ ಚೆಲುವಾಂಬ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರಲ್ಲಿ ಧನಗಳ್ಳಿ ಗ್ರಾಮದ ಬಿ. ಕಾವ್ಯ (9), ಗುಣವತಿ (13), ಕೆಂಚಲಗೂಡಿನ ದೀಪು (8), ಡಿ. ಸಾಲುಂಡಿಯ ರಮ್ಯ (6), ಲೋಕೇಶ್ (10) ಅವರನ್ನು ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ 5 , ಜೆಎಸ್‌ಎಸ್ ಆಸ್ಪತ್ರೆಗೆ 4, ವಾತ್ಸಲ್ಯ ಆಸ್ಪತ್ರೆಗೆ 4, ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ 2 ಸೇರಿದಂತೆ ಒಟ್ಟು 15 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವ ಖಾದರ್ ಭೇಟಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಡೆಂಘೀ ಜ್ವರದಿಂದ ಬಳಲಿ ರೋಗಿಗಳು ಆಸ್ಪತ್ರೆಗೆ ಬಂದಾಗ ಹಣಕಾಸಿನ ವಿಚಾರದಲ್ಲಿ ಹಿಂದೆ ಮುಂದೆ ನೋಡದೆ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳ ಜತೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ.
- ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಡೆಂಘೀ ಜ್ವರ ಪ್ರಕರಣ ಕುರಿತು ದೂರವಾಣಿ ಕರೆ ಬಂದ ಕೂಡಲೇ ವೈದ್ಯಾಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಭೇಟಿ ನೀಡಿ ಸಮೀಕ್ಷೆ ನಡೆಸಲಾಯಿತು. ಗ್ರಾಮದ ಪ್ರತಿ ಮನೆಯಲ್ಲಿ ಡ್ರಮ್ಮುಗಳಲ್ಲಿ ಸಂಗ್ರಹಿಸಿಟ್ಟುಕೊಂಡ ನೀರೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.
-ಡಾ.ಎಸ್.ಎಂ. ಮಾಲೇಗೌಡ ಜಿಲ್ಲಾ ಆರೋಗ್ಯಾಧಿಕಾರಿ

ಸದ್ಯಕ್ಕೆ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ. ಡೆಂಘೀಗೆ ತುತ್ತಾಗಿ ಮೃತಪಟ್ಟವರಿಗೆ ಸರ್ಕಾರ 1 ಲಕ್ಷ ಪರಿಹಾರ ನೀಡಬೇಕು. ಹಾಗೆ ಕೆಆರ್ ಆಸ್ಪತ್ರೆಯಲ್ಲಿ ವಿಶೇಷ ಘಟಕ ತೆರೆಯಬೇಕು.
- ಜಿ.ಟಿ. ದೇವೇಗೌಡ, ಶಾಸಕ

ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಮನವಿ ಮಾಡಲಾಗಿದೆ. ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗುವುದು. ಗ್ರಾಮದಲ್ಲಿ ಸಂಗ್ರಹಿಸಿರುವ ನೀರನ್ನು ಬದಲಾಯಿಸುವಂತೆ ಸೂಚಿಸಲಾಗಿದೆ.
-ಸಿ. ಶಿಖಾ, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.