ಪ್ರಧಾನ ಸುದ್ದಿ

ಮಂತ್ರಾಲಯ ಮಠಕ್ಕೆ ಹೊಸ ಉತ್ತರಾಧಿಕಾರಿ

ಮಂತ್ರಾಲಯ ಮಠಕ್ಕೆ ಹೊಸ ಉತ್ತರಾಧಿಕಾರಿ
Published On :

ಕ.ಪ್ರ.ವಾರ್ತೆ ಹುಬ್ಬಳ್ಳಿ ಮೇ 25
ಮಂತ್ರಾಲಯ ರಾಘವೇಂದ್ರ ಮಠದ ಉತ್ತರಾಧಿಕಾರಿಯಾಗಿ ಸುಬುದೇಂದ್ರ ತೀರ್ಥರನ್ನು ಹಾವೇರಿ ಜಿಲ್ಲೆ ಹೊಸರಿತ್ತಿಯ ಶಾಖಾಮಠದಲ್ಲಿ ಶನಿವಾರ ಧಾರ್ಮಿಕ ವಿಧಿ-ವಿಧಾನಗಳ ನಡುವೆ ನೇಮಕ ಮಾಡಲಾಯಿತು. ತನ್ಮೂಲಕ ಉತ್ತರಾಧಿಕಾರಿ ನೇಮಕ ವಿಷಯವಾಗಿ ಉಂಟಾಗಿದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
ಮಂತ್ರಾಲಯ ರಾಘವೇಂದ್ರ ಮಠದ ಉತ್ತರಾಧಿಕಾರಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬ ವಿಷಯವಾಗಿ ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿತ್ತು. ಉತ್ತರಾಧಿಕಾರಿ ನೇಮಕ ಮಾಡುವ ವಿಷಯದಲ್ಲಿ ಮೂವರ ಹೆಸರು ಚಾಲ್ತಿಯಲ್ಲಿತ್ತಾದರೂ ಇದೀಗ ನೇಮಕಗೊಂಡಿರುವ ಸುಬುದೇಂದ್ರ ತೀರ್ಥರ ಹೆಸರೇ ಪ್ರಮುಖವಾಗಿ ಕೇಳಿ ಬಂದಿತ್ತು. ಸುಬುದೇಂದ್ರತೀರ್ಥರ ಪೂರ್ವಾಶ್ರಮದ ಹೆಸರು ರಾಜಾ ಪವಮಾನಾಚಾರ್ಯ.
ಏತನ್ಮಧ್ಯೆ, ಪೂರ್ವ ಘೋಷಣೆ ಹಾಗೂ ಪ್ರಚಾರವಿಲ್ಲದೇ ಹೊಸರಿತ್ತಿ ಮಠದಲ್ಲಿ ಶನಿವಾರ ಬೆಳಗ್ಗೆಯೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆಯಿತು. ಮಠದ ಪಕ್ಕದಲ್ಲಿ ಹರಿಯುತ್ತಿರುವ ವರದಾ ನದಿಯಲ್ಲಿ ಪವಮಾನಾಚಾರ್ಯರು ಸ್ನಾನ, ಸಂಧ್ಯಾ ವಂದನೆ ಮುಗಿಸಿ ಕಾಷಾಯ ವಸ್ತ್ರ ಸಂಸ್ಕಾರದೊಂದಿಗೆ ಮಠಕ್ಕೆ ಆಗಮಿಸಿದರು. ಮಂತ್ರಾಲಯ ರಾಘವೇಂದ್ರ ಮಠದ ಹಿರಿಯ ಮಠಾಧಿಪತಿ ಸುಯತೀಂದ್ರ ತೀರ್ಥರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ, ಬಳಿಕ ನೂತನ ಉತ್ತರಾಧಿಕಾರಿ ರಾಜ್ ಎಸ್. ಪವಮಾನಾಚಾರ್ಯರಿಗೆ ತೆಂಗಿನಕಾಯಿ ಹಸ್ತಾಂತರಿಸುವ ಮೂಲಕ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದರು.  ಇದೇ ವೇಳೆ ಉತ್ತರಾಧಿಕಾರಿಯಾಗಿ ನೇಮಕಗೊಂಡ ಪವಮಾನಾಚಾರ್ಯರಿಗೆ ಸುಬುದೇಂದ್ರತೀರ್ಥ ಪಾದಂಗಳು ಎಂದು ಮರು ನಾಮಕರಣ ಮಾಡಲಾಯಿತು. ಈ ಸಂದರ್ಭದಲ್ಲಿ ಸುಯತೀಂದ್ರ ತೀರ್ಥರು ಮಾತನಾಡಿ, 'ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಪವಮಾನಾಚಾರ್ಯರು ಅಪಾರ ಪಾಂಡಿತ್ಯ ಹೊಂದಿದ್ದಾರೆ. ಮಂತ್ರಾಲಯ ಮಠ ನಡೆಸಿಕೊಂಡು ಹೋಗಲು ಇವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ನೇಮಕ ನಿರ್ಣಯ ಕೈಗೊಳ್ಳಲಾಗಿದೆ' ಎಂದರು.

ಹೊಸರಿತ್ತಿಯಲ್ಲೇಕೆ ಉತ್ತರಾಧಿಕಾರಿ ನೇಮಕ?
ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ರಾಯರ ಶಾಖಾಮಠವಿದೆ. ಸುಯತೀಂದ್ರ ತೀರ್ಥರ ಹತ್ತಿರದ ಬಂಧುಗಳು ಈ ಭಾಗದಲ್ಲಿ ನೆಲೆಸಿದ್ದಾರೆ. ಜತೆಗೆ ಸುಯತೀಂದ್ರ ತೀರ್ಥರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದವರು. ಈ ಕಾರಣಕ್ಕೆ ಹೊಸರಿತ್ತಿ ಆಯ್ದುಕೊಳ್ಳಲಾಗಿದೆ. ಇದೇ ವೇಳೆ ಉತ್ತರಾಧಿಕಾರಿ ನೇಮಕ ವಿಷಯವಾಗಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡುವುದು ಬೇಡ ಎಂಬ ಕಾರಣಕ್ಕೂ ಮಂತ್ರಾಲಯದಿಂದ ದೂರದಲ್ಲಿರುವ ಹೊಸರಿತ್ತಿ ಆಯ್ದುಕೊಳ್ಳಲಾಗಿದೆ ಎಂದೂ ಹೇಳಲಾಗುತ್ತಿದೆ. ವಯೋ ಸಹಜದಿಂದಾಗಿ ಸುಯತೀಂದ್ರ ತೀರ್ಥರ ಆರೋಗ್ಯ ಸ್ಥಿತಿಯೂ ಮೊದಲಿನಂತೆ ಉಳಿದಿಲ್ಲ ಎಂಬ ಕಾರಣಕ್ಕೂ ಅಬ್ಬರ, ಪ್ರಚಾರವಿಲ್ಲದೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯ ಸರಳ, ಸುಂದರವಾಗಿ ನೆರವೇರಿಸಲಾಗಿದೆ.

ಸುಬುದೇಂದ್ರ ತೀರ್ಥರ ಪರಿಚಯ
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ನೂತನ ಉತ್ತರಾಧಿಕಾರಿಯಾಗಿ ಸುಬುದೇಂದ್ರ ತೀರ್ಥರು ನೇಮಕಗೊಂಡಿದ್ದು, ಅವರ ಪೂರ್ವಾಶ್ರಮದ ಸಂಕ್ಷಿಪ್ತ ಮಾಹಿತಿ....
ಪೂರ್ವಾಶ್ರಮದ ಹೆಸರು: ರಾಜಾ ಪವಮಾನಾಚಾರ್ಯರು.
ಪೂರ್ವಾಶ್ರಮದ ತಂದೆ: ರಾಜಾ ಗಿರಿಯಾಚಾರ್ಯರು. ವಯಸ್ಸು: 42 ವರ್ಷ
ಪೂರ್ವಾಶ್ರಮದ ಪತ್ನಿ: ಶ್ರೀಮತಿ ಭಾರತಿ
ಪೂರ್ವಾಶ್ರಮದ ಪುತ್ರಿಯರು ಮತ್ತು ಪುತ್ರ: ಅಪರ್ಣಾ, ಅಭಿಘ್ನಾ, ಅನಘಾ, ಅಪ್ರಮೇಯ.

ಅಧ್ಯಯನ: ಪ್ರಾರಂಭಿಕ ಅಧ್ಯಯನವನ್ನು ಶ್ರೀಮಠದ ಪೀಠಾಧಿಪತಿಗಳಾಗಿದ್ದ ತಮ್ಮ ತಾತ ಶ್ರೀಸುಜಯೀಂದ್ರ ತೀರ್ಥರ ಬಳಿ ನಡೆಸಿದರು. ನಂತರದಲ್ಲಿ ಪೂರ್ವಾಶ್ರಮದ ತಂದೆ ರಾಜಾ ಗಿರಿಯಾಚಾರ್ಯರಲ್ಲಿ ವೇದ ವೇದಾಂತ ಅಧ್ಯಯನ, ಶಾಸ್ತ್ರಾಧ್ಯಯನ, ಶ್ರೀಮನ್ನ್ಯಾಯ ಸುಧಾ ಮಂಗಳ ಪದವಿ ಪಡೆದಿದ್ದಾರೆ. ಮಂತ್ರಾಲಯದಲ್ಲಿ ವ್ಯಾಸದಾಸ ಸಾಹಿತ್ಯ ಸಮನ್ವಯ ಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಗ್ರಂಥಗಳ ಮುದ್ರಣ ಹಾಗೂ ಪ್ರಸಾರ ಕಾರ್ಯ ಮಾಡಿದ್ದಾರೆ. ಶ್ರೀಮಠದೊಂದಿಗೆ ಕಳೆದ ಅನೇಕ ದಶಕಗಳ ಸಂಬಂಧ ಹೊಂದಿದ್ದು, ತಾತ ಶ್ರೀಸುಜಯೀಂದ್ರತೀರ್ಥರ ಕಾಲದಿಂದಲೂ ಶ್ರೀಮಠದೊಂದಿಗೆ ಒಡನಾಟವಿದೆ.
ಶ್ರೀಮಠದಲ್ಲಿ ನಡೆಯುವ ಪ್ರತಿಯೊಂದೂ ವಿಶೇಷ ಸಮಾರಂಭ, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ. ಜತೆಗೆ ಕಳೆದೊಂದು ವರ್ಷಕ್ಕೂ ಹೆಚ್ಚಿನ ಕಾಲದಿಂದ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ದಿವಾನರಾಗಿ ಕಾರ್ಯನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.