ಪ್ರಧಾನ ಸುದ್ದಿ

ಡೇಂಜರ್ ಡೆಂಘೀ ಬಗ್ಗೆ ಎಚ್ಚರವಿರಲಿ...

ಡೇಂಜರ್ ಡೆಂಘೀ ಬಗ್ಗೆ ಎಚ್ಚರವಿರಲಿ...
Published On :

ನಾಲ್ವರನ್ನು ಬಲಿ ತೆಗೆದುಕೊಂಡು ಸಾವಿನ ಖಾತೆ ತೆರೆದ ಮಹಾಮಾರಿ
2289 ಜ.1ರಿಂದ ರಾಜ್ಯದಲ್ಲಿ ಡೆಂಘೀ ಪೀಡಿತರೆಂಬ ಶಂಕೆ
506 ಜನರಿಗೆ ಡೆಂಘೀ ಜ್ವರ ಎಂದು ವರದಿ ಮೂಲಕ ದೃಢ

-ರವಿಕಾಂತ ಕುಂದಾಪುರ
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 26


ಎಚ್ಚರಿಕೆ, ಮಹಾಮಾರಿ ಡೆಂಘೀ ಮತ್ತೆ ವಕ್ಕರಿಸಿದೆ..!
ಕಳೆದ ವರ್ಷವೊಂದರಲ್ಲೇ ರಾಜ್ಯಾದ್ಯಂತ ಆಕ್ಟೋಪಸ್‌ನಂತೆ ಆವರಿಸಿಕೊಂಡು ಸಾವಿರಾರು ಸಾರ್ವಜನಿಕರನ್ನು ಜ್ವರಪೀಡಿತಗೊಳಿಸಿ, 21 ಜನರನ್ನು ಬಲಿ ತೆಗೆದುಕೊಂಡಿದ್ದ ಡೆಂಘೀ ಜ್ವರ ಈ ವರ್ಷ ಮತ್ತೆ ತನ್ನ ಕಬಂಧ ಬಾಹು ಚಾಚಿದೆ. ಅಲ್ಲದೆ, ಈಗಾಗಲೇ 506 ಜನರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ.
ಜತೆಗೆ, ಮೈಸೂರಿನ ಸಾಲುಂಡಿಯಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಳ್ಳುವ ಮೂಲಕ, ಡೆಂಘೀ ಈ ವರ್ಷದ ಸಾವಿನ ಖಾತೆ ತೆರೆದಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಈ ವರ್ಷದ ಜ.1ರಿಂದ ಮೇ 25ರ ವರೆಗೆ 2289 ಮಂದಿಯನ್ನು ಡೆಂಘೀ ಪೀಡಿತರು ಎಂದು ಶಂಕಿಸಲಾಗಿದೆ.
ಅವರಲ್ಲಿ ತೀರಾ ಸಂಶಯಾಸ್ಪದ ಎನಿಸಿರುವ 1833 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪ್ರಕಾರ 506 ಜನರಿಗೆ ಬಂದಿರುವುದು ಡೆಂಘೀ ಜ್ವರವೇ ಎಂಬುದು ದೃಢಪಟ್ಟಿದೆ. ಅಷ್ಟೇ ಅಲ್ಲ, 2011ರಲ್ಲಿ 405 ಜನ ಡೆಂಘೀ ಜ್ವರಕ್ಕೀಡಾಗಿದ್ದು, ಅವರಲ್ಲಿ ಐವರು ಜ್ವರಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷ ಇನ್ನೂ ಹೆಚ್ಚು ಅಂದರೆ, 3924 ಮಂದಿ ಡೆಂಘೀ ಪೀಡಿತರಾಗಿದ್ದು, ಅವರಲ್ಲಿ 21 ಮಂದಿ ಜೀವ ತೆತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಅಂತಹ ಆತಂಕಕಾರಿ ಪರಿಸ್ಥಿತಿ ಇಲ್ಲ.              

ಆದರೂ ಮಾರಕ ರೋಗ ಡೆಂಘೀ ಬರದಂತೆ ಹಾಗೂ ಅದರ ನಿಯಂತ್ರಣಕ್ಕೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆದರೆ, ಡೆಂಘೀ ಬರದಂತೆ ಕೇವಲ ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಇತರ ವಿಭಾಗಗಳಷ್ಟೇ ಮುನ್ನೆಚ್ಚರಿಕೆ ಕ್ರಮಕೈಗೊಂಡರೆ ಸಾಲದು. ತಮ್ಮ ಆರೋಗ್ಯದ ಸುರಕ್ಷತೆಗೋಸ್ಕರ ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಕಾಳಜಿ ವಹಿಸುತ್ತಿರುವ 'ಕನ್ನಡಪ್ರಭ', ಡೆಂಘೀ ಸಂಬಂಧ ಸಾರ್ವಜನಿಕರು ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆ ಕ್ರಮ ಸೇರಿದಂತೆ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದು, ಅವು ಇಂತಿವೆ.
ಏನಿದು ಡೆಂಘೀ?: ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಗಳಿಂದ ಮನುಷ್ಯರಿಗೆ ಬರುವ ಈ ರೋಗ ಮಾರಕವಾದದ್ದು. ಸಾಮಾನ್ಯ ಡೆಂಘೀ ಜ್ವರ, ಡೆಂಘೀ ರಕ್ತಸ್ರಾವ ಜ್ವರ ಹಾಗೂ ಡೆಂಘೀ ಶಾಕ್ ಸಿಂಡ್ರೋಮ್ ಇದು ಇದರಲ್ಲಿ ಮೂರು ವಿಧಗಳಿದ್ದು, ಕೊನೆಯ 2 ವಿಧದ ಜ್ವರ ಅತ್ಯಂತ ಮಾರಕವಾದದ್ದು. ದುರಾದೃಷ್ಟವೆಂದರೆ, ಈ ರೋಗ ನಿವಾರಣೆಗೆ ನಿರ್ದಿಷ್ಟ ಔಷಧ ಇಲ್ಲ. ಆದರೆ, ರೋಗಲಕ್ಷಣಗಳಿಗೆ ಅನುಗುಣವಾಗಿ ಸಾಂದರ್ಭಿಕ ಚಿಕಿತ್ಸೆ ನೀಡುವ ಮೂಲಕ ರೋಗಬಾಧೆ ತಗ್ಗಿಸಿ ಗುಣಪಡಿಸುವ ಜತೆಗೆ, ಮಾರಣಾಂತಿಕ ಅಪಾಯ ತಡೆಯಬಹುದು.

ಪಪ್ಪಾಯ ಉಪಾಯ

ಡೆಂಘೀ ಜ್ವರ ಬಂದಾಗ ಜ್ವರ ಪೀಡಿತ ವ್ಯಕ್ತಿಯ ರಕ್ತದಲ್ಲಿನ ಪ್ಲೇಟ್‌ಲೆಟ್ ಸಂಖ್ಯೆ ಕುಸಿಯುತ್ತದೆ. ಪ್ಲೇಟ್‌ಲೆಟ್ ಪ್ರಮಾಣ ತೀರಾ ಕುಸಿದಾಗ ರಕ್ತಸ್ರಾವ ಆಗುತ್ತದೆ. ಹೀಗೆ ಡೆಂಘೀ ಜ್ವರ ಪೀಡಿತರಾಗಿ ಪ್ಲೇಟ್‌ಲೆಟ್ ಕಡಿಮೆಯಾಗಿರುವವರು ಪಪ್ಪಾಯ ಎಲೆಯ ರಸವನ್ನು ಕುಡಿದಲ್ಲಿ ಪ್ಲೇಟ್‌ಲೆಟ್ ಹೆಚ್ಚಾಗುತ್ತದೆ. ಪಪ್ಪಾಯ ಎಲೆಯನ್ನು ಚೆನ್ನಾಗಿ ತೊಳೆದು ಜಜ್ಜಿ ಅಥವಾ ಮಿಕ್ಸರ್‌ಗೆ ಹಾಕಿ ಬಂದ ರಸಕ್ಕೆ ಏನನ್ನೂ ಬೆರೆಸದೆ ಡೆಂಘೀ ಪೀಡಿತರಿಗೆ ಕುಡಿಸಿದಲ್ಲಿ ಕೆಲವೇ ಗಂಟೆಗಳಲ್ಲಿ ಪ್ಲೇಟ್‌ಲೆಟ್ ಪ್ರಮಾಣ ಏರುತ್ತದೆ. ಪ್ಲೇಟ್‌ಲೆಟ್ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಸುಮಾರು 10 ಎಂ.ಎಲ್.ನಂತೆ ದಿನಕ್ಕೆರಡು ಬಾರಿ ಪಪ್ಪಾಯ ಎಲೆಯ ರಸ ಕುಡಿಸಬಹುದು.

ರೋಗ ಲಕ್ಷಣ
ಸಾಮಾನ್ಯ ಡೆಂಘೀ ಜ್ವರ

ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ವಿಪರೀತ ಜ್ವರ
ಹಣೆಯ ಭಾಗ ಸೇರಿದಂತೆ ತಲೆಯನ್ನು ಬಾಧಿಸುವ ತೀವ್ರತರ ನೋವು
ಕಣ್ಣಿನ ಹಿಂಭಾಗದಲ್ಲಿ ನೋವು ಕಾಣಿಸುವುದು ಮಾತ್ರವಲ್ಲದೆ, ಕಣ್ಣಿನ ಚಲನೆ ವೇಳೆ ನೋವು ಹೆಚ್ಚಾಗುವುದು.
ಮೈ- ಕೈ ಹಾಗೂ ಕೀಲು ನೋವು ಮತ್ತು ವಾಂತಿ

ಡೆಂಘೀ ರಕ್ತಸ್ರಾವ ಜ್ವರ

ಒಂದೇ ಸಮನೆ ಹೊಟ್ಟೆ ನೋವು
ವಿಪರೀತ ಬಾಯಾರಿಕೆ
ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ. ಜತೆಗೆ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ
ಪದೇಪದೆ ರಕ್ತಸಹಿತ ಅಥವಾ ರಕ್ತರಹಿತ ವಾಂತಿ
ತಣ್ಣನೆಯ ಬಿಳಿಚಿದ ಚರ್ಮ

ಮುನ್ನೆಚ್ಚರಿಕೆ ಕ್ರಮ
1 ಸಾಮಾನ್ಯವಾಗಿ ಈ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದು ಹೆಚ್ಚು. ಹಾಗಾಗಿ ಹಗಲು ಹೊತ್ತಿನಲ್ಲಿ ಮಲಗಿರುವ ಮಕ್ಕಳು, ವೃದ್ಧರು ಹಾಗೂ ರೋಗಿಗಳು ಸೊಳ್ಳೆ ಪರದೆ ಬಳಸುವುದು ಒಳಿತು.
2 ಡೆಂಘೀಗೆ ಮೂಲವಾದ ಈಡಿಸ್ ಈಜಿಪ್ಟೈ ಸೊಳ್ಳೆ ವಾರಗಟ್ಟಲೆ ನಿಂತ ನೀರಿನಲ್ಲಿ ಹೆಚ್ಚು ಉತ್ಪತ್ತಿಯಾಗುವುದರಿಂದ ನೀರು ನೆಲೆ ನಿಲ್ಲಲು ಅವಕಾಶ ಕೊಡಬಾರದು.
3 ಮನೆಯಲ್ಲಿನ ಸಿಮೆಂಟ್ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಪಾತ್ರೆಗಳಲ್ಲಿ ನೀರು ಶೇಖರಣೆಯಾಗಿ ವಾರ ಕಳೆದಿದ್ದರೆ ಅವನ್ನು ಖಾಲಿ ಮಾಡಿ ಶುದ್ಧವಾಗಿರಿಸಿಕೊಳ್ಳಬೇಕು.
4 ಏರ್ ಕೂಲರ್, ಮನೆಯ ಚಾವಣಿ, ಬಳಸಿ ಬಿಸಾಡಿದ ಟಯರ್, ತ್ಯಾಜ್ಯದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.

ಡೆಂಘೀ ಶಾಕ್ ಸಿಂಡ್ರೋಮ್

ಸಾಮಾನ್ಯ ರೋಗ ಲಕ್ಷಣಗಳ ಜೊತೆಗೆ ನಾಡಿ ಮಿಡಿತ ಹಾಗೂ ರಕ್ತದೊತ್ತಡ ಕುಸಿಯುತ್ತದೆ. ಅಲ್ಲದೆ ಪ್ರಜ್ಞೆ ತಪ್ಪುವ ಸಂಭವ ಕೂಡ ಇರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.