ಅಣಶಿಯಲ್ಲಿ ಟೈಗರ್ ಸಂತತಿಗೆ ಮಾರಕ ಪ್ರಾಜೆಕ್ಟ್
ಕಾರವಾರ: ಕರ್ನಾಟಕ ಒಂದೆಡೆ ಹುಲಿ ಗಣತಿ ನಡೆಸಿ 'ಹುಲಿ ರಾಜ್ಯ' ಎಂಬ ಕೀರ್ತಿ ಉಳಿಸಿಕೊಳ್ಳಲು ಪ್ರಯತ್ನಕ್ಕಿಳಿದಿದ್ದರೆ, ಇನ್ನೊಂದೆಡೆ ದಾಂಡೇಲಿ ಅಣಶಿ ಟೈಗರ್ ಪ್ರಾಜೆಕ್ಟ್ನಲ್ಲಿ ಹುಲಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹುಲ್ಲುಗಾವಲುಗಳ ವಿನಾಶಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಹುಲಿಗಳ ಆವಾಸ ಸ್ಥಾನದ ಹುಲ್ಲುಗಾವಲು ನಾಶ ಮಾಡುವ ಮೂಲಕ ಹುಲಿಗಳ ಸಂತತಿಗೆ ಮಾರಕವಾದ ಯೋಜನೆಯನ್ನು ಇಲಾಖೆ ಕೈಗೆತ್ತಿಕೊಂಡಿದೆ.
ಅರಣ್ಯ ಇಲಾಖೆ ಈ ಅವೈಜ್ಞಾನಿಕ ಕ್ರಮದಿಂದ ಕಾರವಾರ, ಜೋಯಿಡಾ ಹಾಗೂ ಹಳಿಯಾಳ ತಾಲೂಕುಗಳನ್ನು ಒಳಗೊಂಡ ಟೈಗರ್ ಪ್ರಾಜೆಕ್ಟ್ನಲ್ಲಿ ಹುಲಿಗಳು ಅಪಾಯದಲ್ಲಿ ಸಿಲುಕಲಿವೆ. ಅರಣ್ಯ ಇಲಾಖೆಯ ಈ ಯೋಜನೆಗೆ ಲಗಾಮು ಹಾಕುವವರೇ ಇಲ್ಲವಾಗಿದ್ದಾರೆ. ಸಸ್ಯಾಹಾರಿ ವನ್ಯಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಹಾರಕ್ಕಾಗಿ ನೈಸರ್ಗಿಕ ಹುಲ್ಲುಗಾವಲುಗಳನ್ನು ಅವಲಂಬಿಸಿರುವುದರಿಂದ ಈ ಪ್ರದೇಶಗಳು ವನ್ಯಜೀವಿ ಸಮೃದ್ಧಿಯ ಸಂಕೇತಗಳಾಗಿವೆ. ಅಲ್ಲದೆ, ಹುಲಿ, ಚಿರತೆ, ಕೆನ್ನಾಯಿ ಮತ್ತಿತರ ಬೇಟೆಗಾರ ಪ್ರಾಣಿಗಳ ಪ್ರಮುಖ ಆಹಾರವಾದ ಜಿಂಕೆ, ಕಡವೆ, ಕಾಟಿ, ಕಾಡು ಹಂದಿ ಮೊದಲಾದ ಪ್ರಾಣಿಗಳಿಗೆ ಈ ಹುಲ್ಲುಗಾವಲುಗಳು ಮುಖ್ಯ ಮೇಯುವ ತಾಣಗಳಾಗಿವೆ. ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ ಹುಲ್ಲುಗಾವಲು ಸದಾ ಹಸಿರಾಗಿದ್ದು, ಬಿರು ಬೇಸಿಗೆಯಲ್ಲೂ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವನ್ನೊದಗಿಸುತ್ತವೆ.
ಸಸಿ ನಾಟಿ: ಇಂಥ ಹುಲ್ಲುಗಾವಲುಗಳು ಸದಾ ಬಾಹ್ಯ ಪ್ರಬೇಧದ ಸಸ್ಯಗಳು, ಕೃಷಿ ಚಟುವಟಿಕೆ ಹಾಗೂ ನೆಡುತೋಪುಗಳಾಗಿ ಪರಿವರ್ತನೆಗೊಳ್ಳುತ್ತವೆ. ಇಂಥ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಅವುಗಳನ್ನು ನಾಶಪಡಿಸುವ ಕೆಲಸಕ್ಕೆ ಕೈಹಾಕಿದೆ. ಹುಲ್ಲುಗಾವಲು ಇರುವಲ್ಲಿ ನೇರಳೆ, ಅರಳಿ, ಪೇರಲ, ಬಿದಿರು, ಆಲ ಮತ್ತಿತರ ಸಸಿಗಳನ್ನು ಬೇಕಾಬಿಟ್ಟಿಯಾಗಿ ನೆಡತೊಡಗಿದೆ. ಅಲ್ಲದೆ, ನೆಡುತೋಪುಗಳ ಸುತ್ತಲೂ ಹಾಕಿರುವ ಬೇಲಿ ವನ್ಯ ಪ್ರಾಣಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡಿದೆ.
174 ಹೆಕ್ಚೇರ್ನಲ್ಲಿ ನಾಟಿ: ಕ್ಯಾಸಲ್ ರಾಕ್ ವನ್ಯಜೀವಿವಲಯದಲ್ಲಿ ಕೈಗೆತ್ತಿಕೊಳ್ಳಲಾದ ಸಸಿಗಳ ನಾಟಿ ಕಾರ್ಯದ ವಿವರ ಹೀಗಿದೆ. ಅನ್ಮೋಡ ಸೆಕ್ಷನ್ ವ್ಯಾಪ್ತಿಯ ವಾರ್ಲೆವಾಡಿ ಬೀಟ್ನಲ್ಲಿ 25 ಹೆಕ್ಟೇರ್, ಮೇಡಾ ಬೀಟ್ನಲ್ಲಿ 25 ಹೆಕ್ಟೇರ್, ರಂಗಾರೂಕ್ ಬೀಟ್ನಲ್ಲಿ 25 ಹೆಕ್ಟೇರ್, ಕರಂಬಳ್ ಸೆಕ್ಷನ್ನ ಕರಂಬಳ್ನಲ್ಲಿ 50 ಹೆಕ್ಟೇರ್, ಬಜಾರಕುಣಂಗ್ನ ಕುವೇಶಿಯಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ನೆಡುತೋಪು ನಿರ್ಮಿಸಲಾಗಿದೆ. 2013 ಜುಲೈ ಹಾಗೂ ಆಗಸ್ಟ್ನಲ್ಲಿ ನೆಡುತೋಪುಗಳು ತಲೆ ಎತ್ತಿವೆ. 2013ರ ಜುಲೈನಿಂದೀಚೆಗೆ ದಾಂಡೇಲಿ ವನ್ಯಜೀವಿಧಾಮದ ಕ್ಯಾಸಲ್ರಾಕ್ ವನ್ಯಜೀವಿ ವಲಯದ ವ್ಯಾಪ್ತಿಗೊಳಪಡುವ ಸುಮಾರು 175 ಹೆಕ್ಟೇರ್ ಹುಲ್ಲುಗಾವಲಿನ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ. ಇದೀಗ ಪುನಃ 80 ಸಾವಿರ ಸಸಿಗಳನ್ನು ನೆಡುವ ಕಾರ್ಯ ಮುಗಿಯುವ ಹಂತದಲ್ಲಿದೆ. ಸಸಿಗಳನ್ನು ನೆಡಲು ಗುಂಡಿಗಳನ್ನು ತೋಡಲಾಗಿದ್ದು, ಗುತ್ತಿಗೆದಾರರಿಗೆ ಹಾಗೂ ದಿನಗೂಲಿ ನೌಕರರಿಗೆ ಹಂತ ಹಂತವಾಗಿ ಹಣವನ್ನೂ ಬಿಡುಗಡೆ ಮಾಡಲಾಗುತ್ತಿದೆ.
ಕಾಯಿದೆ ಉಲ್ಲಂಘನೆ: ವನ್ಯಜೀವಿಗಳ ಆವಾಸಸ್ಥಾನಗಳನ್ನು ಹಾಳುಮಾಡುವುದು ಅಥವಾ ಮಾರ್ಪಾಡು ಮಾಡುವುದು ಭಾರತೀಯ ಅರಣ್ಯ ಕಾಯಿದೆಯ 26ನೇ ಪರಿಚ್ಛೇದ, ಕರ್ನಾಟಕ ಮರ ಸಂರಕ್ಷಣಾ ಕಾಯಿದೆ ಹಾಗೂ ಪ್ರಮುಖವಾಗಿ 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾರವಾರ, ಜೋಯಿಡಾ ಹಾಗೂ ಹಳಿಯಾಳ ತಾಲೂಕುಗಳಲ್ಲಿ ವ್ಯಾಪಿಸಿರುವ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶವು 1300 ಚದರ ಕಿ.ಮೀ.ಗೂ ಹೆಚ್ಚು ವಿಸ್ತಾರ ಹೊಂದಿದ್ದು, ರಾಜ್ಯದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಆದರೂ, ರಾಜ್ಯದ ಇತರೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಹೋಲಿಸಿದಲ್ಲಿ ಇಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ವನ್ಯ ಪ್ರಾಣಿಗಳ ಸಾಂಧ್ರತೆ ಕಡಿಮೆ. ಇದಕ್ಕೆ ಮುಖ್ಯ ಕಾರಣ ಸಸ್ಯಾಹಾರಿ ಪ್ರಾಣಿಗಳ ಬೇಟೆ. ಉತ್ತಮವಾಗಿ ಸಂರಕ್ಷಿಸಿದಲ್ಲಿ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು ನಿಜ. ಆದರೆ, ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಹಾಳು ಮಾಡದೇ ಇರುವುದೂ ಅಷ್ಟೇ ಮುಖ್ಯ. ಅತಿ ಸೂಕ್ಷ್ಮ ಪ್ರದೇಶವಾದ ಹುಲ್ಲುಗಾವಲುಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುವ ಕೆಲಸಗಳನ್ನು ಅರಣ್ಯ ಇಲಾಖೆ ನಿಲ್ಲಿಸಬೇಕಾಗಿದೆ. ಅಲ್ಲದೆ, ಇದರ ಬಗ್ಗೆ ಇಲಾಖೆಯು ನಿಷ್ಪಕ್ಷಪಾತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
- ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

