ಪ್ರಧಾನ ಸುದ್ದಿ

ಬಚಾವಾಯ್ತು ಸಿಬಿಐ

ಬಚಾವಾಯ್ತು ಸಿಬಿಐ
Published On :

ನವದೆಹಲಿ: ಸಿಬಿಐ ಸಂಸ್ಥೆಯೇ ಅಸಾಂವಿಧಾನಿಕ ಎಂಬ ಗೌಹಾತಿ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಮೂಲಕ ಕೇಂದ್ರ ಸರ್ಕಾರ ಮತ್ತು ಕೇಂದ್ರ ತನಿಖಾ ಸಂಸ್ಥೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ, ಖುಷಿಯಾಗಿದ್ದ ಭ್ರಷ್ಟರಿಗೆ ನಿರಾಸೆಯ ನಿಟ್ಟುಸಿರು ಕವಿದಿದೆ.
ಗುರುವಾರವಷ್ಟೇ ಗೌಹಾತಿ ಹೈಕೋರ್ಟ್ ಸಿಬಿಐ ಸಂಸ್ಥೆಯನ್ನು ಸಂವಿಧಾನ ಬದ್ಧವಾಗಿ ರಚನೆ ಮಾಡಿಲ್ಲ. ಹೀಗಾಗಿ ಈ ಸಂಸ್ಥೆ ರಚಿಸುವ ಸಲುವಾಗಿ 1963ರಲ್ಲಿ ಅಂಗೀಕರಿಸಲಾಗಿದ್ದ ನಿರ್ಣಯ ಅಸಿಂಧು ಎಂದಿತ್ತು.
ಶುಕ್ರವಾರ ಸಿಬ್ಬಂದಿ ಮತ್ತು ತರಬೇತಿ ಖಾತೆ ಸಚಿವ ವಿ. ನಾರಾಯಣಸ್ವಾಮಿ ಅವರು, ಪ್ರಧಾನಿ ಮನಮೋಹನ್ ಸಿಂಗ್, ಕಾನೂನು ಸಚಿವ ಕಪಿಲ್ ಸಿಬಲ್, ಅಟಾರ್ನಿ ಜನರಲ್ ಜಿ.ಇ. ವಾಹನ್ವತಿ, ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರೊಂದಿಗೆ ಬಿಡುವಿಲ್ಲದ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಶನಿವಾರ ಬೆಳಗ್ಗೆಯೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸುಪ್ರೀಂಕೋರ್ಟ್‌ಗೆ ವಿಶೇಷ ಅನುಮತಿ ಅರ್ಜಿ ದಾಖಲಿಸಿತ್ತು.
ಈ ಸಂಬಂಧ ಶನಿವಾರ ಸಂಜೆ 4.30ಕ್ಕೆ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನ್ಯಾ. ರಂಜನ್ ದೇಸಾಯಿ ಅವರು, ಗೌಹಾತಿ ಹೈಕೋರ್ಟ್‌ನ ತೀರ್ಪಿಗೆ ತಡೆಯಾಜ್ಞೆ ನೀಡಿದರು. ಅಲ್ಲದೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ಈ ಸಂಬಂಧ ಮೇಲ್ಮನವಿ ಅರ್ಜಿ ಸಲ್ಲಿಸುವ ಅಧಿಕಾರವಿಲ್ಲ ಎಂಬ   ಪ್ರತಿವಾದಿ ನವೇಂದ್ರ ಕುಮಾರ್ ಅವರ ಆಕ್ಷೇಪಣೆಯನ್ನು ಅವರು ತಳ್ಳಿಹಾಕಿದರು. ಈ ಸಚಿವಾಲಯದ ಅಡಿಯಲ್ಲೇ ಸಿಬಿಐ ಕಾರ್ಯನಿರ್ವಹಿಸುತ್ತಿರುವುದರಿಂದ ಮೇಲ್ಮನವಿ ಸಲ್ಲಿಸಲು ಎಲ್ಲಾ ಅಧಿಕಾರ ಇದೆ. ಹೀಗಾಗಿ ಹೈಕೋರ್ಟ್‌ನ ತೀರ್ಪು ಸಿಬಿಐ ನಡೆಸುತ್ತಿರುವ ಪ್ರಕರಣಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ತಡೆಯಾಜ್ಞೆ ನೀಡಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿತು. ಕೇಂದ್ರ ಗೃಹ ಇಲಾಖೆ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ದ್ವಿಸದಸ್ಯ ಪೀಠ, ಹೈಕೋರ್ಟ್ ತೀರ್ಪಿನ ಬಗ್ಗೆ ಅಭಿಪ್ರಾಯ ನೀಡುವಂತೆ ಹೇಳಿತು. ಡಿ.6 ರಂದು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.


ಕೇಂದ್ರದ ಅರಿಕೆ
-   ಗೌಹಾತಿ ಹೈಕೋರ್ಟ್‌ನ ತೀರ್ಪು ತಪ್ಪುಗಳಿಂದ ಕೂಡಿದೆ. ಸಿಬಿಐ ಅನ್ನು 1963ರಲ್ಲಿ ದೆಹಲಿ ವಿಶೇಷ ಪೊಲೀಸ್ ಕಾಯ್ದೆಯಡಿಯಲ್ಲೇ ರಚಿಸಲಾಗಿದೆ.
-   ಗೌಹಾತಿ ಹೈಕೋರ್ಟ್‌ನ ತೀರ್ಪು ಹಲವಾರು ಪರಿಣಾಮಗಳಿಗೆ ಕಾರಣವಾಗಿದೆ. ಇದರಿಂದಾಗಿ 9000 ವಿಚಾರಣೆ, 1000 ತನಿಖೆಗಳ ಮೇಲೆ ಅಡ್ಡ ಪರಿಣಾಮ ಬೀರಲಿದೆ.
-   ಸದ್ಯ ಸಿಬಿಐನಲ್ಲಿ 6000 ಮಂದಿ ನೌಕರರಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇವರು ಹಲವಾರು ಪ್ರಕರಣಗಳ ವಿಚಾರಣೆ, ತನಿಖೆಯಲ್ಲಿ ನಿರತರಾಗಿದ್ದಾರೆ.
-   ಹೀಗಾಗಿ ಸುಪ್ರೀಂಕೋರ್ಟ್ ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಗೌಹಾತಿ ಹೈಕೋರ್ಟ್‌ನ ತೀರ್ಪಿಗೆ ತಡೆಯಾಜ್ಞೆ ನೀಡಬೇಕು.

ಸಿಬಿಐ ಅನ್ನು ಅಸಾಂವಿಧಾನಿಕ ಎಂದು ಕರೆಯುವ ಸಂದರ್ಭದಲ್ಲಿ ಡಿಎಸ್‌ಪಿಇ ಕಾಯ್ದೆಯಡಿ ಇದು ಸ್ಥಾಪಿತವಾಗಿಲ್ಲ ಎಂದು ಹೈಕೋರ್ಟ್ ಹೇಳಿರುವುದು ಸಂಕೀರ್ಣವಾದ ತರ್ಕದಿಂದ ಕೂಡಿದೆ. ಹೈಕೋರ್ಟ್‌ನ ತೀರ್ಪಿನಿಂದಾಗಿ ಹಲವಾರು ಮಂದಿ ಲಾಭ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಾವು ತುರ್ತಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು.
-ಜಿ.ಇ. ವಾಹನ್ವತಿ, ಅಟಾರ್ನಿ ಜನರಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.