ಪ್ರಧಾನ ಸುದ್ದಿ

ಪ್ರತ್ಯೇಕ ಘಟನೆ; ಎಂಟು ಮಂದಿ ಜಲಸಮಾಧಿ

Published On :

ಮಂಡ್ಯ/ಕೊಡಗು/ಹಾಸನ: ಸೋಮವಾರ ಸಂಭವಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಎಂಟು ಮಂದಿ ನೀರುಪಾಲಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ಏಳು ವಿದ್ಯಾರ್ಥಿಗಳ ಪೈಕಿ ನಾಲ್ವರು ಈಜಲು ಹೋಗಿ ಗಂಜಾಂ ಕಾವೇರಿ ನದಿ ನೀರು ಪಾಲಾಗಿದ್ದಾರೆ.
ಮೂಲತಃ ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಕೊಪ್ಪಲು ಗ್ರಾಮದವರಾದ ಮೈಸೂರು ಮೇಟಗಳ್ಳಿ ಬಿಎಂಶ್ರೀ ನಗರದ ಮದನ್ (22), ಹುಣಸೂರು ತಾಲೂಕು ಧರ್ಮಾಪುರಿ ಗ್ರಾಮದ ಪ್ರಸನ್ನ (21), ಮೈಸೂರು ತಾಲೂಕು ತಿ.ನರಸೀಪುರದ ಹರೀಶ್ (21) ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆಯ ಸುಂದರೇಶ್ (21) ಮೃತಪಟ್ಟವರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಎರಡು ಶವಗಳು ಪತ್ತೆಯಾಗಿದ್ದು, ಉಳಿದವುಗಳಿಗೆ ಶೋಧ ಕಾರ್ಯ ಮುಂದುವರಿದಿದೆ. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಗೆ ಜಾರಿ ಮಕ್ಕಳ ಸಾವು: ಮಕ್ಕಳಿಬ್ಬರು ಕೆರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹೊಸಕೋಟೆ ತೊಂಡೂರು ಗ್ರಾಮದಲ್ಲಿ ಸಂಭವಿಸಿದೆ.
ತೊಂಡೂರಿನ ಸಂದೀಪ್ ಎಂಬವರ ಮಕ್ಕಳಾದ ಶ್ರೀಲೇಶ್ (4) ಮತ್ತು ಶ್ರೀಷ್ಮಾ (3) ಮೃತಪಟ್ಟವರು.  ಮಕ್ಕಳಿಬ್ಬರು ಅಂಗನವಾಡಿಗೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಗದ್ದೆ ಬಳಿ ಇರುವ ಕೆರೆಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಪ್ಪ ಮಗುಚಿ ಯುವಕರಿಬ್ಬರ ಸಾವು: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಮಣಿಪುರ ಗ್ರಾಮದಲ್ಲಿ ಹೇಮಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮಣಿಪುರ ಗ್ರಾಮದ ಯೋಗೀಶ್ (30) ಹಾಗೂ ಹುಲುಕುಂದ ಗ್ರಾಮದ ಮಧು (28) ಮೃತಪಟ್ಟವರು. ಆರಾಧನಾ ಮಹೋತ್ಸವವಿದ್ದ ಕಾರಣ ಹಿನ್ನೀರಿನ ಒಂದು ಬದಿಯಿಂದ ಇನ್ನೊಂದು ಬದಿಗೆ ತೆಪ್ಪದಲ್ಲಿ ಸಾಮಾನುಗಳನ್ನು ಸಾಗಿಸುತ್ತಿರುವಾಗ ಈ ದುರಂತ ಸಂಭವಿಸಿದೆ. ಆಲೂರು ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಸಂಜೆಯಾದರೂ ಮೃತ ದೇಹಗಳು ಪತ್ತೆಯಾಗಿರಲಿಲ್ಲ. ಪರಿಣತ ಮುಳುಗು ತಜ್ಞರನ್ನು ಕರೆಯಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.