ಪ್ರಧಾನ ಸುದ್ದಿ

ಬೆಂಗಳೂರಲ್ಲಿ ಇಂದು ನರೇಂದ್ರ 'ಮೋಡಿ'ಯಾಟ

ಬೆಂಗಳೂರಲ್ಲಿ ಇಂದು ನರೇಂದ್ರ 'ಮೋಡಿ'ಯಾಟ
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ನ.16-
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಳೆ ಭೀತಿ ನಡುವೆಯೂ ರ್ಯಾಲಿಯನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ಅರಮನೆ ಮೈದಾನದಲ್ಲಿ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಇಡೀ ಅರಮನೆ ಮೈದಾನ ಹಾಗೂ ಸುತ್ತಲಿನ ಪ್ರದೇಶ ಪೊಲೀಸರ ಹದ್ದಿನಕಣ್ಣಿನಡಿ ರ್ಯಾಲಿಗೆ ಸಿದ್ಧವಾಗಿ ನಿಂತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ತಣ್ಣಗಾಗಿದ್ದ ರಾಜ್ಯ ಬಿಜೆಪಿಯನ್ನು ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸಲು ನಡೆಸಲಾಗುತ್ತಿರುವ ಈ ರ್ಯಾಲಿಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.
ರ್ಯಾಲಿಗಾಗಿ ಅರಮನೆ ಮೈದಾನದ ಸುಮಾರು 60 ಎಕರೆ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದ್ದು, ಮೋದಿ ಅವರ ಭಾಷಣಕ್ಕಾಗಿ 80-40 ಅಡಿ ವಿಶಾಲವಾದ ಬೃಹತ್ ವೇದಿಕೆ ಸಿದ್ಧವಾಗಿದೆ.
ಮೋದಿ ಅವರ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯ ಉಸ್ತುವಾರಿ ಥಾವರ್‌ಚಂದ್ ಗೆಹ್ಲೋಟ್, ರಾಷ್ಟ್ರೀಯ ನಾಯಕರಾದ ವೆಂಕಯ್ಯ ನಾಯ್ಡು, ಅನುರಾಗ್ ಸಿಂಗ್ ಠಾಕೂರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ, ಸಂಸದರು ಸೇರಿದಂತೆ 36ರಿಂದ 40 ಮಂದಿ ಪ್ರಧಾನ ವೇದಿಕೆಯಲ್ಲಿರುತ್ತಾರೆ.
ಇದರ ಪಕ್ಕದಲ್ಲೇ ಮತ್ತೊಂದು ವೇದಿಕೆ ಸಿದ್ಧಪಡಿಸಲಾಗಿದ್ದು, ಶಾಸಕರು, ಮಾಜಿ ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 250 ಮಂದಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಹಾರದ ವ್ಯವಸ್ಥೆ: ರ್ಯಾಲಿಗೆ ಬರುವ ಎಲ್ಲರಿಗೂ ಬೆಳಗ್ಗೆ, ಮಧ್ಯಾಹ್ನ ಮತ್ತು ರ್ಯಾಲಿ ಮುಗಿಸಿಕೊಡು ಹೋಗುವ ಸಂದರ್ಭದಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಸಿದ್ಧತೆಗಾಗಿ ಆರು ಅಡುಗೆ ಮನೆಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿ ಅಡುಗೆಮನೆಯಲ್ಲಿ 1000-1200 ಅಡುಗೆ ಭಟ್ಟರು ಆಹಾರ ಸಿದ್ಧಪಡಿಸಲಿದ್ದಾರೆ. ಇದನ್ನು ವಿತರಿಸಲು 300 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 500 ತಾತ್ಕಾಲಿಕ ಶೌಚಾಲಯಗಳನ್ನು ಕೂಡ ಮೈದಾನದಲ್ಲಿ ತೆರೆಯಲಾಗುತ್ತಿದೆ.

ರ್ಯಾಲಿಗೇ ಸೀಮಿತ
ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕೇವಲ ಭಾರತ ಗೆಲ್ಲಿಸಿ ರ್ಯಾಲಿಯಲ್ಲಿ ಮಾತ್ರ ಭಾಗವಹಿಸಿ ವಾಪಸಾಗಲಿದ್ದಾರೆ.
ಬೆಳಗ್ಗೆ 11.15ಕ್ಕೆ ಅಹಮದಾಬಾದ್‌ನಿಂದ ವಿಶೇಷ ವಿಮಾನದ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ 11.30ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಅರಮನೆ ಮೈದಾನ ಪ್ರವೇಶಿಸಲಿದ್ದಾರೆ. ರ್ಯಾಲಿ ಮುಗಿದ ಬಳಿಕ ಅರಮನೆ ಮೈದಾನದಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.