ಆಂಧ್ರದಲ್ಲೂ ಮಹಿಳೆ ಕೊಲೆ ಮಾಡಿದ್ದ ಪಾತಕಿ

ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.24-
ದೇಶಾದ್ಯಂತ ಸಂಚಲನ ಮೂಡಿಸಿದ್ದ ಬೆಂಗಳೂರಿನ ಎನ್ ಆರ್. ಚೌಕದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ, ಆಂಧ್ರ ಪ್ರದೇಶದಲ್ಲೂ ಇಂತಹದ್ದೇ ಕೃತ್ಯ ಎಸಗಿದ್ದ.
ಧರ್ಮಾವರಂನಲ್ಲಿ ನ.10ರಂದು ಧರ್ಮಾವರಂನ ಬ್ಯಾಂಕ್ವೊಂದರ ಬಳಿ ಪ್ರಮೀಳಮ್ಮ ಎಂಬುವರನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಅವರ ಬಳಿ ಇದ್ದ ಎರಡು ಎಟಿಎಂ ಕಾರ್ಡ್ ದೋಚಿದ್ದಾನೆ. ನ.11ರಂದು ಅನಂತಪುರ ಜಿಲ್ಲೆ ಕದಿರಿ ಪಟ್ಟಣದಲ್ಲಿರುವ ಎಸ್ಬಿಐ ಎಟಿಎಂ ಕೇಂದ್ರದಲ್ಲಿ ರು. 4 ಸಾವಿರ ಹಾಗೂ ಮತ್ತೊಂದು ಎಟಿಎಂನಲ್ಲಿ ರು. 15 ಸಾವಿರ ಡ್ರಾ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಖಾತೆಯಿಂದ ಹಣ ಡ್ರಾ ಆಗುತ್ತಿರುವ ಮಾಹಿತಿ ಸಂಗ್ರಹಿಸಿದ ಪ್ರಮೀಳಮ್ಮ ಅವರ ಪುತ್ರ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದ್ದರು.
ಸಿಸಿಟಿವಿಯಲ್ಲಿ ಸೆರೆ: ಜ್ಯೋತಿ ಅವರಿಂದ ಕಿತ್ತುಕೊಂಡಿದ್ದ ಮೊಬೈಲ್ ಫೋನನ್ನು ದುಷ್ಕರ್ಮಿ ಹಿಂದೂಪುರದಲ್ಲಿ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಆತ ಆಂಧ್ರಪ್ರದೇಶ ಮೂಲದವನು ಎನ್ನುವ ಅನುಮಾನದ ಮೇಲೆ ಬೆಂಗಳೂರಿನ ಐದು ವಿಶೇಷ ಪೊಲೀಸ್ ತಂಡಗಳು ಆಂಧ್ರಪ್ರದೇಶದಲ್ಲಿ ಬೀಡು ಬಿಟ್ಟಿವೆ.
ಬೆಂಗಳೂರಿನ ಮಾದರಿಯಲ್ಲೇ ಆಂಧ್ರದಲ್ಲಿ ಅಪರಾಧ ಕೃತ್ಯಗಳು ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದ ವೇಳೆ ಇದೇ ವ್ಯಕ್ತಿ ಧರ್ಮಾವರಂನಲ್ಲಿ ಪ್ರಮೀಳಮ್ಮ ಎಂಬುವರ ಕೊಲೆ ಮಾಡಿರುವ ವಿಚಾರ ಗೊತ್ತಾಗಿದೆ.
ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಕೃತ್ಯ ಎಸಗುವ ವೇಳೆ ಧರಿಸಿದ್ದ ಬಿಳಿ ಪಟ್ಟಿ ತಿಳಿ ನೀಲಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್, ಚಪ್ಪಲಿ, ಹೆಗಲಿಗೆ ಒಂದು ಬ್ಯಾಗ್ ಹಾಕಿಕೊಂಡಿದ್ದಾನೆ. ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಒಬ್ಬ ವ್ಯಕ್ತಿಯದ್ದೇ ಕೃತ್ಯ ಎನ್ನುವುದು ಬಯಲಾಗಿದೆ.
1000 ಎಟಿಎಂಗೆ ಬೀಗ
ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ನೀಡಿದ್ದ ಗಡುವು ಭಾನುವಾರ ಸಂಜೆ 4 ಗಂಟೆಗೆ ಮುಗಿದ ಹಿನ್ನೆಲೆಯಲ್ಲಿ ನಾನಾ ಬ್ಯಾಂಕ್ಗಳ ಸುಮಾರು 1000 ಎಟಿಎಂ ಕೇಂದ್ರಗಳ ವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದೆ.
ಕಾರ್ಪೊರೇಷನ್ ಬ್ಯಾಂಕ್ನಲ್ಲಿ ಜ್ಯೋತಿ ಎಂಬುವರ ಮೇಲೆ ನಡೆದ ಹಲ್ಲೆ ಬಳಿಕ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬ್ಯಾಂಕ್ಗಳಿಗೆ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ಹಾಗೂ ಎಚ್ಚರಿಕೆ ಅಲಾರಂ ಅಳವಡಿಸಿಕೊಳ್ಳಲು ಆದೇಶಿಸಲಾಗಿತ್ತು. ಬ್ಯಾಂಕ್ಗಳು ಆದೇಶ ಪಾಲಿಸದ ಕಾರಣ ನಗರ ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ಮುಚ್ಚಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ನಿಯೋಜಿಸಿಕೊಂಡಲ್ಲಿ ಕೂಡಲೇ ಎಟಿಎಂ ಬಾಗಿಲು ತೆಗೆಯಲು ಅವಕಾಶ ನೀಡಲಾಗುವುದು ಎಂದು ಪಂತ್ ತಿಳಿಸಿದ್ದಾರೆ.
ದುಷ್ಕರ್ಮಿ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ವಿಶೇಷ ತಂಡಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು ಶೀಘ್ರ ಬಂಧಿಸುತ್ತೇವೆ.
-ರಾಘವೇಂದ್ರ ಔರಾದ್ಕರ್, ಬೆಂಗಳೂರು ಪೊಲೀಸ್ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


