ನಕಲಿ ವಿಡಿಯೋಗೆ ಬೇಸ್ತುಬಿದ್ದ ಚಾನೆಲ್ಗಳು
ಕನ್ನಡಪ್ರಭ ವಾರ್ತೆ, ಬೀದರ್, ಅ.4-
ರಾಜ್ಯಾದ್ಯಂತ ಶುಕ್ರವಾರ ಟಿ.ವಿ. ಚಾನೆಲ್ಗಳಲ್ಲಿ ಬಿತ್ತರಗೊಂಡು ಬಿಸಿಬಿಸಿ ಚರ್ಚೆಗೆ ಕಾರಣವಾದ 'ನಂಗಾನಾಚ್' ವಿಡಿಯೋ 4 ವರ್ಷಗಳ ಹಿಂದೆಯೇ ಅಂರ್ಜಾಲಕ್ಕೆ ಸೇರ್ಪಡೆಗೊಂಡಿತ್ತು! ಈ ವಿಡಿಯೋ ಭಾರತದ್ದೇ ಅಲ್ಲ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
4 ವರ್ಷದ ಹಿಂದೆ ಅಪ್ಲೋಡ್ ಆಗಿದ್ದ ವಿಡಿಯೋವನ್ನು ಕೆಲವು ರಾಜಕಾರಣಿಗಳ ತೇಜೋವಧೆಗೆ ಬಳಸಿಕೊಳ್ಳುವ ಹುನ್ನಾರ ನಡೆಸಿದ ದುರುಳರು ಇದಕ್ಕಾಗಿ ಚಾನೆಲ್ಗಳನ್ನು ಬಳಸಿಕೊಂಡರೇ ಎಂಬ ಅನುಮಾನಗಳು ಈಗ ಕಾಡಲಾರಂಭಿಸಿವೆ. ಸಾಲದ್ದಕ್ಕೆ ಈ ನೃತ್ಯವನ್ನು ಚಿತ್ರೀಕರಿಸಿರುವುದಾಗಿ ಹೇಳಿಕೊಂಡಿರುವ ಯುವತಿಯೊಬ್ಬಳು ಚಾನೆಲ್ಗಳಿಗೆ ಹೇಳಿಕೆ ನೀಡಿದ್ದು- 'ಸದರಿ ರಾಜಕೀಯ ಮುಖಂಡರು ಹೈದರಾಬಾದ್ಗೆ ಈ ಕ್ಯಾಬರೆ ಕಾರ್ಯಕ್ರಮಕ್ಕೆ ಆಗಾಗ್ಗೆ ಬರ್ತಿರ್ತಾರೆ. ಆದರೆ ಬಾಬು ವಾಲಿ ಎಂಬುವರು ನೃತ್ಯದ ಸಂದರ್ಭದಲ್ಲಿ ಯುವತಿಯರಿಗೆ ಅಸಹ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಕಿರುಕುಳ ನೀಡುವುದನ್ನು ಸಹಿಸದೇ ಅವರ ಬಣ್ಣ ಬಯಲು ಮಾಡಲು ಈ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಚಾನೆಲ್ಗಳಿಗೆ ಬಿಡುಗಡೆ ಮಾಡಿದ್ದೇವೆ' ಎಂದಿದ್ದಳು. ಬೀದರ್ ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಕುದರೆ ಹಾಗೂ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಅವರನ್ನು ಗುರಿಯಾಗಿಸಿ ಈ ಸಿ.ಡಿ. ಬಿಡುಗಡೆ ಮಾಡಲಾಗಿತ್ತು.
ಇದನ್ನೇ ಶುಕ್ರವಾರ ಬಿತ್ತರಿಸಿದ್ದವು. ಇದರ ಪ್ರಸಾರ ನೋಡಿದ ಮೂವರೂ ಪತ್ರಿಕಾಗೋಷ್ಠಿ ನಡೆಸಿ, 'ಇದೊಂದು ಷಡ್ಯಂತ್ರ ನಮ್ಮ ಏಳ್ಗೆ ಸಹಿಸದವರು ನಮ್ಮ ತೇಜೋವಧೆಗೆ ನಕಲಿ ಸೀಡಿ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಚಿತ್ರೀಕರಣವಾಗಿದ್ದರಲ್ಲಿ ನಾವ್ಯಾರೂ ಇಲ್ಲ. ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಮ್ಮ ಮುಖವನ್ನು ವಿಡಿಯೋದಲ್ಲಿ ಇರುವ ವ್ಯಕ್ತಿಯೊಬ್ಬರಿಗೆ ಅಳವಡಿಸಲಾಗಿದೆ. ಈ ಕುರಿತಂತೆ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ತನಿಖೆ ನಡೆಸಿ ಸಂತ್ಯಾಂಶ ಬಯಲಿಗೆಳೆಯಬೇಕು' ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ತೆಯಾದ ಸತ್ಯ
ಚಾನೆಲ್ಗಳಲ್ಲಿ ಅಶ್ಲೀಲ ದೃಶ್ಯಗಳು ಪ್ರಸಾರವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಬಿಜೆಪಿಯ ಐವರ ತಂಡ ಇದರ ಸತ್ಯಾಸತ್ಯತೆ ಪರಿಶೀಲಿಸಲು ಮುಂದಾಯಿತು. ಅಪ್ಲೋಡ್ ಆದ ಅಶ್ಲೀಲ ವೀಡಿಯೋಗಳನ್ನು ಪರಿಶೀಲಿಸಿ ಕೊನೆಗೂ ಮೂಲ ವೀಡಿಯೋವನ್ನು ಪತ್ತೆಹಚ್ಚಿತು.
ಆತ್ಮಹತ್ಯೆ ಚಿಂತೆ ಮಾಡುತ್ತಿದ್ದೆ: ವಾಲಿ
ಪಾಕಿಸ್ತಾನದ ಅಶ್ಲೀಲ ವಿಡಿಯೋ ತುಣುಕನ್ನು ನನ್ನೊಂದಿಗೆ ಥಳಕು ಹಾಕಿ ಆತ್ಮಹತ್ಯೆಗೆ ಮುಂದಾಗುವಂಥ ಸನ್ನಿವೇಶಕ್ಕೆ ತಳ್ಳಿದ್ದ ಖಾಸಗಿ ಚಾನೆಲ್ಗಳೆರಡು ಹಾಗೂ ಅದರ ವರದಿಗಾರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಲ್ಲದೆ, ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮೊರೆ ಹೋಗಿದ್ದಾಗಿ ಬಿಜೆಪಿ ಮುಖಂಡ ಬಾಬು ವಾಲಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಳೆದ 2009ರಲ್ಲಿ ಪಾಕಿಸ್ತಾನದ ವೆಬ್ಸೈಟೊಂದರಲ್ಲಿ ಹಾಕಲಾಗಿದ್ದ ಅಶ್ಲೀಲ ವಿಡಿಯೋ ತುಣುಕಿನಲ್ಲಿ ನನ್ನಂತೆ ಹೋಲುವ ವ್ಯಕ್ತಿ, ಬಿ.ಎಸ್. ಕುದರೆ ಅವರಂತೆ ಕಾಣುವಂಥವರೊಬ್ಬರನ್ನು ತೋರಿಸಲಾಯಿತು. ವಿಡಿಯೋದಲ್ಲಿರೋದು ನಾನಲ್ಲ ಎಂದು ಎಷ್ಟು ಗೋಗರೆದರೂ ಚಾನೆಲ್ಗಳಲ್ಲಿ ನನ್ನನ್ನು ಪದೇ ಪದೇ ಪ್ರಶ್ನೆ ಮಾಡಿ ನನ್ನನ್ನು ಮಾನಸಿಕವಾಗಿ ಜರ್ಝರಿತಗೊಳಿಸಿದವು' ಎಂದರು.
ನನ್ನ ವಿರುದ್ಧ ಪಿತೂರಿ: ಈ ಹಿಂದೆ ಪಕ್ಷದ ನಗರ ಘಟಕದ ಅಧ್ಯಕ್ಷರಾಗಿದ್ದ ರವಿಸ್ವಾಮಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ರವಿಸ್ವಾಮಿ ಅವರನ್ನು ನಾನು ಉಚ್ಚಾಟಿಸಿದ್ದೆ. ಈ ಹಿನ್ನೆಲೆಯಲ್ಲಿ ಅವರು ಚಾನೆಲ್ಗಳ ಜತೆ ಸೇರಿ ನನ್ನ ಮಾನ ಹರಾಜು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಸಮರ ಸಾರುತ್ತೇನೆ ಎಂದಿದ್ದಾರೆ.
ತನಿಖೆಗೆ ಸಚಿವೆ ಉಮಾಶ್ರೀ ಸೂಚನೆ
ಬೆಂಗಳೂರು: ಬೀದರ್ನ ರಾಜಕಾರಣಿಗಳು ನಂಗಾನಾಚ್ನಲ್ಲಿ ತೊಡಗಿರುವ ಕುರಿತ ವೀಡಿಯೋ ದೃಶ್ಯಗಳ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಆದೇಶಿಸಿದ್ದಾರೆ. ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಮಾಶ್ರೀ ಅವರು ಈ ಕುರಿತು ಆದೇಶ ನೀಡಿದ್ದು, ವಿಡಿಯೋ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಅದೇ ರೀತಿ ಅಶ್ಲೀಲ ವಿಡಿಯೋ ಇರುವ ಸಿಡಿಯನ್ನು ಚಾನೆಲ್ಗಳಿಗೆ ನೀಡಿದ ಯುವತಿಯನ್ನು ಪತ್ತೆಹಚ್ಚಿ ಆಕೆಯಿಂದ ಹೇಳಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.
4 ವರ್ಷ ಹಿಂದಿನ ಕ್ಲಿಪಿಂಗ್
ರಾಜ್ಯಾದ್ಯಂತ ಶುಕ್ರವಾರ ಬಿಸಿ ಬಿಸಿ ಚರ್ಚೆಗೀಡಾದ ವಿಡಿಯೋ ಇಂಟರ್ನೆಟ್ನಲ್ಲಿ ಹಳಸಲು! ಈ ವೀಡಿಯೋವನ್ನು ರಾಜ್ಯದ ಚಾನಲ್ಗಳು ಬಿತ್ತರಿಸುವ ಮೊದಲೇ 6,24,329 ಜನ ನೋಡಿಯಾಗಿತ್ತು! ಈ ವಿಡಿಯೋವನ್ನು ಅಂತರ್ಜಾಲದಲ್ಲಿ ಡೇಲಿ ಮೋಷನ್ ಎಂಬ ವೆಬ್ಸೈಟ್ನಲ್ಲಿ 2009ರ ಆ.27ರಂದೇ ಅಪ್ಲೋಡ್ ಮಾಡಲಾಗಿತ್ತು. ಅದಕ್ಕೆ ಪಾಕಿಸ್ತಾನಿ ಮನೆಯೊಂದರಲ್ಲಿ ನಡೆದ ಮುಜರಾ ಎಂಬ ಹೆಸರನ್ನೂ ನೀಡಲಾಗಿತ್ತು.
ನಂಗಾನಾಚ್ ಪ್ರಕರಣದ ವಿಡಿಯೋ ಚಿತ್ರೀಕರಣದ ಮೂಲ ಸೀಡಿ ಮತ್ತು ಅದನ್ನು ನೀಡಿದವರ ಮಾಹಿತಿ ಕೋರಿ ಚಾನೆಲ್ಗಳಿಗೆ ಪತ್ರ ಬರೆಯುತ್ತಿದ್ದೇವೆ. ನಂತರ ಸೀಡಿ, ಅದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ಭಾವಚಿತ್ರಗಳನ್ನೂ ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಿ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯುತ್ತೇವೆ. ಚಾನೆಲ್ಗಳ ಮುಂದೆ ಹೇಳಿಕೆ ನೀಡಿರುವ ಮಹಿಳೆಯು ಪೊಲೀಸರ ಎದುರು ಹಾಜರಾಗಿ ಹೇಳಿಕೆ ನೀಡುವುದು ಬಹು ಮುಖ್ಯ.
-ಡಾ. ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಅಶ್ಲೀಲ ವಿಡಿಯೋದಲ್ಲಿ ನನ್ನಂತೆ ಹೋಲುವವರನ್ನು ಬಿಂಬಿಸಿ ನನ್ನ ತೇಜೋವಧೆಗೆ ಯತ್ನಿಸಲಾಗಿದೆ. ಇದರಿಂದ ನನ್ನ ಮನಸ್ಸಿಗೆ ಭಾರಿ ಆಘಾತವಾಗಿದೆ. ಈ ಬಗ್ಗೆ ಎಸ್ಪಿ ಅವರಿಗೆ ದೂರು ನೀಡಿದ್ದೇವೆ.
- ಬಿ.ಎಸ್.ಕುದುರೆ, ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ.
ನನ್ನ ತೇಜೋವಧೆಗೆ ಯತ್ನಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲೇಬೇಕು. ಅಶ್ಲೀಲ ವಿಡಿಯೋ ಪ್ರಕರಣದ ಜತೆ ನನ್ನ ಹೆಸರನ್ನು ಯುವತಿಯೊಬ್ಬಳಿಂದ ಹೇಳಿಸಿರುವ ಕುತಂತ್ರದ ತನಿಖೆಯಾಗಬೇಕು. ಈ ಕುರಿತು ಸದನ ಸಮಿತಿಗೆ ದೂರು ನೀಡುತ್ತೇನೆ. ಒಂದು ವೇಳೆ ತಪ್ಪು ಸಾಬೀತಾದರೆ ವಿಧಾನಸೌಧ ಮುಂದೆ ಗಲ್ಲಿಗೇರಿಸಿ.
- ರಾಜಶೇಖರ್ ಪಾಟೀಲ್, ಹುಮನಾಬಾದ್ ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

