'ಮನಸ್ವಿನಿ' ಮೇಲೆದ್ದಿಲ್ಲ; 'ಮೈತ್ರಿ' ಮಾತಿಲ್ಲ
ಬೆಂಗಳೂರು: ಸರ್ಕಾರದ ಪ್ರಥಮ ಪ್ರಯೋಗದ 2 ಯೋಜನೆಗಳು ಆರಂಭದಲ್ಲೇ ಮೆಲೇಳಲಾರದೆ ಮಲಗಿವೆ.
ಅವಿವಾಹಿತ ಮಹಿಳೆಯರಿಗೆ ಪಿಂಚಣಿ ನೀಡುವ 'ಮನಸ್ವಿನಿ' ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಇನ್ನೂ ಮನಸ್ಸು ಮಾಡಿಲ್ಲ. ಲೈಂಗಿಕ ಅಲ್ಪಸಂಖ್ಯಾತರಿಗೆ ನೆರವು ನೀಡುವ 'ಮೈತ್ರಿ' ಇನ್ನೂ ಮಾತನ್ನೇ ಆರಂಭಿಸಿಲ್ಲ. ಮೊದಲ ಬಾರಿಗೆ ಅವಿವಾಹಿತ ಮಹಿಳೆ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ತಿಂಗಳಿಗೆ 500 ಪಿಂಚಣಿ ನೀಡುವುದಾಗಿ ಸರ್ಕಾರ ಬಜೆಟ್ನಲ್ಲಿ ಪ್ರಸ್ತಾಪಿತು. ಇದು ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸರ್ಕಾರ ಆಗಸ್ಟ್ನಲ್ಲಿ ಆದೇಶವನ್ನೂ ಮಾಡಿತ್ತು. ಅಷ್ಟೇ ಅಲ್ಲ. ವ್ಯಾಪಾಕ ಪ್ರಚಾರವನ್ನೂ ನೀಡಿ ಶೀಘ್ರವೇ ಫಲಾನುಭವಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿತು. ಇದೆಲ್ಲಾ ಕಳೆದು ತಿಂಗಳೇ ಆಗಿದೆ. ಆದರೆ, ಈತನಕ ಫಲಾನುಭವಿಗಳು ಅರ್ಜಿ ಸಲ್ಲಿಸುವುದಕ್ಕೇ ಆಗಿಲ್ಲ. ಕಾರಣ ಕಂದಾಯ ಇಲಾಖೆ ವಿಳಂಬ ಧೋರಣೆ. ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಇನ್ನೂ ಸಾಫ್ಟ್ವೇರ್ಗಳನ್ನೇ ಅಳವಡಿಸಿಲ್ಲ.
ಎರಡು ಬಾರಿ ಅರ್ಜಿ ಸಲ್ಲಿಸಬೇಕೇ?: ಹೀಗಾಗಿ ಪಿಂಚಣಿಗಾಗಿ ಅರ್ಜಿ ಸಲ್ಲಿಸುವವರು ನಿತ್ಯ ನಾಡ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅನೇಕ ಕಡೆ ಗ್ರಾಮಗಳ ನಾಡಕಚೇರಿಗಳಲ್ಲಿ ಅರ್ಜಿದಾರರ ಒತ್ತಾಯದ ಮೇರೆಗೆ ಕೈ ಬರಹದ ಅರ್ಜಿಗಳನ್ನೇ ಪಡೆಯಲಾಗುತ್ತಿದೆ. ಆನಂತರ ಅದನ್ನು ಆನ್ಲೈನ್ನಲ್ಲಿ ಹಾಕುವುದಾಗಿ ಹೇಳುತ್ತಿದ್ದಾರೆ. ಕೆಲವು ಕಡೆ ಆನ್ಲೈನ್ ವ್ಯವಸ್ಥೆ ಬಂದ ನಂತರ ಮತ್ತೊಂದು ಬಾರಿ ಅನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಜನ ಅರ್ಜಿ ಸಲ್ಲಿಸುವಂತೆಯೂ ಇಲ್ಲ. ಬಿಡುವಂತೆಯೂ ಇಲ್ಲದಂತಾಗಿದೆ. ವಿಚಿತ್ರವೆಂದರೆ, ಈ ಯೋಜನೆಗಳ ಫಲಾನುಭವಿಗಳಿಂದ ಅರ್ಜಿ ಪಡೆಯಲು ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಮಟ್ಟದಲ್ಲಿರುವ ಅಟಲ್ಜಿ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸುವಂತೆ ಕಂದಾಯ ಇಲಾಖೆಯೇನೋ ಸೂಚನೆ ನೀಡಿದೆ. ಆದರೆ, ಅಲ್ಲಿ ಆನ್ಲೈನ್ ವ್ಯವಸ್ಥೆಯೇ ಇಲ್ಲ.
ಏನಿದು ಯೋಜನೆ?
ಸರ್ಕಾರಿ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ 11,000ಕ್ಕೂ ಹೆಚ್ಚು ಅವಿವಾಹಿತ ಮಹಿಳೆಯರಿದ್ದಾರೆ. 8,000 ವಿಚ್ಛೇದಿತ ಮಹಿಳೆಯರಿದ್ದಾರೆ. ಇದರೊಂದಿಗೆ 1,150 ಗುರುತಿಸಿಕೊಂಡ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಇವರಿಗೆ ರು. 500 ಮಾಸಾಶನ ನೀಡಲು ಸರ್ಕಾರ ನಿರ್ಧರಿಸಿತು. ಇದರಲ್ಲಿ 45ರಿಂದ 65ವರ್ಷ ವಯಸ್ಸಿನ 12,000-17,000 ಆದಾಯ ಹೊಂದಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ 500 ಮಾಸಾಸನ ನೀಡಲಾಗುತ್ತದೆ. ಇನ್ನು ಮೈತ್ರಿ ಯೋಜನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 500 ಪಿಂಚಣಿ ನೀಡಲಾಗುತ್ತದೆ. ಇವರು ಮತದಾರರ ಗುರುತಿನ ಚೀಟಿ, ಲೈಂಗಿತ ಅಲ್ಪಸಂಖ್ಯಾತರು ಎನ್ನುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಲಾಖೆಯಿಂದ ದೃಢೀಕರಣ ಪತ್ರ. ಲೈಂಗಿಕ ಅಲ್ಪಸಂಖ್ಯಾತರ ಸಂಸ್ಥೆಯಲ್ಲಿ ನೋಂದಣೆಯಾಗಿರಬೇಕು.
ಇನ್ನೂ ಏನೆಲ್ಲಾ ಆಗಬೇಕಿದೆ?
ಈ ಯೋಜನೆಗಳಡಿ ಅರ್ಜಿ ಸಲ್ಲಿಸುವವರಿಗೆ ಆನ್ಲೈನ್ ವ್ಯವಸ್ಥೆ ಕಲ್ಪಿಸಲು ಕಂದಾಯ ಇಲಾಖೆಯ ಸಾಮಾಜಿಕ ಬದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಮುಂಚಿತವಾಗಿ ಸಿದ್ಧತೆ ನಡೆಸಬೇಕಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರದ ಎನ್ಐಸಿ ಮೂಲಕ ಸಾಫ್ಟ್ವೇರ್ ಸಿದ್ಧಪಡಿಸಲು ಕ್ರಮಕೈಗೊಳ್ಳಬೇಕಿತ್ತು. ಆದರೆ, ಯೋಜನೆಗಳ ಸರ್ಕಾರ ಆದೇಶ ಹೊರಬಿದ್ದರೂ ನಿರ್ದೇಶನಾಲಯ ಅಧಿಕಾರಿಗಳು ಕ್ರಮಕೈಗೊಳ್ಳಲಿಲ್ಲ. ಹೀಗಾಗಿ ಆನ್ಲೈನ್ಮೂಲಕ ಅರ್ಜಿ ಸಲ್ಲಿಕೆ ಇನ್ನೂ ಸಾಧ್ಯವಾಗಿಲ್ಲ. ಎನ್ಐಸಿ ಸಂಸ್ಥೆ ಈಗಷ್ಟೇ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಬೇಕಿದ್ದು, ಅದು ಪ್ರೊಡಕ್ಷನ್ ಮತ್ತು ಟೆಸ್ಟಿಂಗ್ ವಿಭಾಗಗಳನ್ನು ದಾಟಿ ಬರಬೇಕಿದೆ. ಆನಂತರ ಸಿದ್ಧವಾದ ಸಾಫ್ಟ್ವೇರ್ಗೆ ಸೂಕ್ತ ಭದ್ರತಾ ವ್ಯವಸ್ಥೆ ಆಗಬೇಕಿದೆ. ಆನಂತರವಷ್ಟೇ ಎನ್ಐಸಿ ರಾಜ್ಯ ಸರ್ಕಾರಕ್ಕೆ ಸಾಫ್ಟ್ವೇರ್ ಬಳಕೆಗೆ ನೀಡುತ್ತದೆ. ಹೀಗಾಗಿ ಇದೆಲ್ಲಾ ಸದ್ಯಕ್ಕೆ ಆಗುವಂತೆ ಕಾಣುತ್ತಿಲ್ಲ ಎಂದು ಇಲಾಖೆಯವರೇ ಹೇಳುತ್ತಾರೆ.
ಎನ್ಐಸಿಯಿಂದ ಸಾಫ್ಟ್ವೇರ್ ಸಿದ್ಧಪಡಿಸುವುದು ತಡವಾಗಿದ್ದರಿಂದ ಅರ್ಜಿ ಸ್ವೀಕಾರವೂ ವಿಳಂಬವಾಗಿದೆ. ಅಕ್ಟೋಬರ್ ಪ್ರಥಮ ವಾರದಲ್ಲಿ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
-ಶಿವಪ್ರಸಾದ್, ಸಾಮಾಜಿಕ ಬದ್ರತೆ ಮತ್ತು ಪಿಂಚಣಿಗಳ ನಿರ್ದೇಶಕ
- ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

