ಇಂದು ಫೈಲಿನ್ ದಾಳಿ

ನವದೆಹಲಿ: ಪೂರ್ವ ಕರಾವಳಿಯಲ್ಲೀಗ ಫೈಲಿನ್ ಚಂಡಮಾರುತದ ಭೀತಿ ಶುರುವಾಗಿದೆ. ಇಡೀ ಅಮೆರಿಕವನ್ನು ತರಗೆಲೆಯಂತೆ ಆಡಿಸಿದ್ದ 'ಕತ್ರಿನಾ'ಕ್ಕಿಂತಲೂ ತೀವ್ರ ಚಂಡಮಾರುತ 'ಫೈಲಿನ್' ಶನಿವಾರ ಸಂಜೆ 5.30ಕ್ಕೆ ಪೂರ್ವ ಕರಾವಳಿಯನ್ನು ಅಪ್ಪಳಿಸಲಿದೆ.
ಪ್ರಚಂಡ ಚಂಡಮಾರುತಗಳ ವರ್ಗಕ್ಕೆ ಸೇರಿದ ಫೈಲಿನ್ ಬಂಗಾಳಕೊಲ್ಲಿಯಿಂದ ಗಂಟೆಗೆ 220 ಕಿ.ಮೀ. ವೇಗದಲ್ಲಿ ಪೂರ್ವ ಕರಾವಳಿಯತ್ತ ಮುನ್ನುಗ್ಗುತ್ತಿದೆ. ಪರದೀಪ್ ಮತ್ತು ಆಂಧ್ರದ ಕಳಿಂಗಪಟ್ಟಣಂ ಮೂಲಕ ಸಾಗಿ ಅಂತಿಮವಾಗಿ ಒಡಿಶಾದ ಗಂಜಂ ಜಿಲ್ಲೆಯ ಗೋಪಾಲಪುರವನ್ನು ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಹಾಗೂ ಆಂಧ್ರದ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಒಡಿಶಾ ಮತ್ತು ಆಂಧ್ರದಿಂದ 1.70 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ.
220 ಕಿ.ಮೀ. ವೇಗದಲ್ಲಿ ಸಾಗುವ ಈ ಚಂಡಮಾರುತದ ತೀವ್ರತೆಗೆ ಒಡಿಶಾದಲ್ಲಿ ಮುಂದಿನ 24 ಗಂಟೆಗಳಲ್ಲಿ 25 ಸೆ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಾಮೂಲಿಗಿಂತ ಮೂರು ಮೀ.ನಷ್ಟು ಎತ್ತರದ ಅಲೆಗಳು ಸಮುದ್ರದಲ್ಲಿ ಏಳಲಿವೆ ಎಂದೂ ಎಚ್ಚರಿಸಿದೆ.
ಭಿನ್ನವೇನೂ ಅಲ್ಲ: ಫೈಲಿನ್ ಪ್ರಚಂಡ ಚಂಡಮಾರುತ. ಆದರೆ, ಇದು ಸೂಪರ್ ಸೈಕ್ಲೋನ್ ಆಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಎಲ್.ಎಸ್. ರಾಥೋಡ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಅಮೆರಿಕದ ನೌಕಾ ಸೇನೆಯ ಪ್ರಕಾರ ಫೈಲಿನ್ ವೇಗ 240 ಕಿ.ಮೀ. ಅನ್ನೂ ಮೀರಲಿದೆ. ಹಾಗಾಗಿ ಇದು ಮಾಡುವ ಅನಾಹುತ ಸೂಪರ್ ಸೈಕ್ಲೋನ್ಗಿಂತ ವಿಭಿನ್ನವಾಗಿಯೇನೂ ಇರಲ್ಲ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಮಹಾಪಾತ್ರ ಹೇಳಿದ್ದಾರೆ. ತಜ್ಞರು ಕೂಡ ಹವಾಮಾನ ಇಲಾಖೆಯ ಅಂದಾಜಿಗಿಂತ ಫೈಲಿನ್ನ ಅಬ್ಬರ ತೀವ್ರವಾಗಿರಲಿದೆ. ಇತ್ತೀಚೆಗೆ ನಡೆಸಿದ ಉಪಗ್ರಹ ಸಮೀಕ್ಷೆಯು 2005ರಲ್ಲಿ ಅಮೆರಿಕವನ್ನು ನಡುಗಿಸಿದ್ದ ಕತ್ರಿನಾ ಚಂಡಮಾರುತಕ್ಕಿಂತ ಫೈಲಿನ್ ಹೆಚ್ಚಿನ ಅನಾಹುತ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಿಂದು
- ಗೋಪಾಲಪುರದ ಆಗ್ನೇಯದಿಂದ 450 ಕಿ.ಮೀ. ದೂರ.
ಪರಿಣಾಮ
- 24 ಗಂಟೆಗಳಲ್ಲಿ 25 ಸೆ.ಮೀ. ನಷ್ಟು ಭಾರಿ ಮಳೆ ಸಾಧ್ಯತೆ
- ಸಮುದ್ರದಲ್ಲಿ ಮಾಮೂಲಿಗಿಂತ 3 ಮೀ. ಎತ್ತರದ ಅಲೆಗಳು ಸೃಷ್ಟಿ
1999ರ ಚಂಡಮಾರುತ ನೆನಪಿಸಲಿದೆಯೇ?
1999ರಲ್ಲಿ ಒಡಿಶಾ ಕರಾವಳಿಯನ್ನು ಅಪ್ಪಳಿಸಿದ್ದ ಚಂಡಮಾರುತ ಸೃಷ್ಟಿಸಿದ ಅನಾಹುತದ ನೆನಪು ಪೂರ್ವ ಕರಾವಳಿಯ ಜನ ಇನ್ನೂ ಮರೆತಿಲ್ಲ. ಅಂದು ಅಪ್ಪಳಿಸಿದ್ದ ಸೂಪರ್ ಸೈಕ್ಲೋನ್ 10 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಗಂಟೆಗೆ 220 ಕಿ.ಮೀ. ವೇಗದಲ್ಲಿ ಆ ಚಂಡಮಾರುತ ಅಪ್ಪಳಿಸಿತ್ತು. ಈಗ ಒಡಿಶಾದತ್ತ ಮುನ್ನುಗ್ಗುತ್ತಿರುವ ಚಂಡಮಾರುತದ ವೇಗ ಕೂಡ ಸರಿಸುಮಾರು ಅಷ್ಟೇ ಆಗಿರಲಿದೆ. ಈಗಾಗಲೇ ಕರಾವಳಿಯಲ್ಲಿ
ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.
ಪರದೀಪ್ ಬಂದರು ಬಂದ್
ಫೈಲಿನ್ ಭೀತಿಯಿಂದ ಒಡಿಶಾದ ಸರಕು ಸಾಗಣೆ ಬಂದರು ಪರದೀಪ್ನ ಕಾರ್ಯಾಚರಣೆಯನ್ನು ಶುಕ್ರವಾರದಿಂದಲೇ ಸ್ಥಗಿತಗೊಳಿಸಲಾಗಿದೆ. ಪರದೀಪ್ ಬಂದರು ದೇಶದ 12 ಪ್ರಮುಖ ಬಂದರುಗಳಲ್ಲಿ ಒಂದಾಗಿದೆ.
500 ಎನ್ಡಿಆರ್ಎಫ್ ತಂಡ
ಮಹಾ ಚಂಡಮಾರುತದ ಭೀತಿಯಲ್ಲಿರುವ ಒಡಿಶಾ ಹಾಗೂ ಆಂಧ್ರಪ್ರದೇಶಕ್ಕೆ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. 500 ಮಂದಿಯ ವಿಪತ್ತು ಪ್ರತಿಕ್ರಿಯೆ ಪಡೆಯನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಿಕೊಟ್ಟಿದೆ.
ಪ್ರಭಾವಕ್ಕೊಳಗಾಗುವ ರಾಜ್ಯಗಳು
ಒಡಿಶಾ, ಆಂಧ್ರ ಮಾತ್ರವಲ್ಲದೆ ಬಿಹಾರ, ಛತ್ತೀಸ್ಗಡ, ಮತ್ತು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳೂ ಫೈಲಿನ್ ಪ್ರಭಾವಕ್ಕೊಳಗಾಗಲಿವೆ. ಸುಮಾರು 1.2 ಕೋಟಿ ಮಂದಿ ಫೈಲಿನ್ ಚಂಡ ಮಾರುತದಿಂದ ತೊಂದರೆ ಅನುಭವಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಯಾವ ರೀತಿ ಸಿದ್ಧತೆ?
-ಐಎಎಫ್ ಐಎಲ್- 76 ವಿಮಾನಗಳ ಮೂಲಕ ಈಗಾಗಲೇ ಎನ್ಡಿಆರ್ಎಫ್ ತಂಡಗಳು ಹಾಗೂ ಸಲಕರಣೆಗಳನ್ನು ಭುವನೇಶ್ವರಕ್ಕೆ ರವಾನೆ
- ರಾಯ್ಪುರ, ನಾಗ್ಪುರ, ಜಗದಾಲ್ಪುರ, ಬರಾಕ್ಪುರ್, ರಾಂಚಿ ಮತ್ತು ಗ್ವಾಲಿಯರ್ನ ಐಎಎಫ್ ಸಿಬ್ಬಂದಿಗೆ ಸನ್ನದ್ಧವಾಗಿರಲು ಆದೇಶ
- ಐಎಎಫ್ನ 24 ಏರ್ಕ್ರಾಫ್ಟ್ಗಳನ್ನು ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಐಲ್ಯುಷಿನ್- 76, ಸಿ- 130ಜೆ ಸೂಪರ್ ಹರ್ಕ್ಯುಲೆಸ್ ಮತ್ತು ಆಂಟೊವ್- 32 ಹೆಲಿಕಾಪ್ಟರ್ಗಳಿವೆ
- ಭೂಸೇನೆಗೆ ಹೈ ಅಲರ್ಟ್ ಸೂಚನೆ
- ವಿಶಾಖಪಟ್ಟಣದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಪೂರ್ವನೌಕಾ ಸೇನೆಯ ಡೈವರ್ಗಳ ತಂಡ, ನೌಕೆಗಳು, ಚೇತಕ್ ಹಾಗೂ ಯುಎಚ್- 2ಎಚ್ ಹೆಲಿಕಾಪ್ಟರ್ಗಳಿಗೂ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


