ಪ್ರಧಾನ ಸುದ್ದಿ

ಬಿಜೆಪಿಗೆ ಮೋದಿ ಬಲ; ಬೇಕು ಇನ್ನಷ್ಟು ಬೆಂಬಲ

ಬಿಜೆಪಿಗೆ ಮೋದಿ ಬಲ; ಬೇಕು ಇನ್ನಷ್ಟು ಬೆಂಬಲ
Published On :

ಪಿಟಿಐ ನವದೆಹಲಿ ಅ.16-
ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಹಿನ್ನಡೆಯಾಗಲಿದೆ. ಪ್ರತಿಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಗಳಿಸಲಿದೆ. ಆದರೆ ಸರ್ಕಾರ ರಚಿಸಬೇಕಾಗಿದ್ದರೆ, ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿ, ತಕ್ಷಣ ಚುನಾವಣೆ ನಡೆದರೆ ಅತಂತ್ರ ಲೋಕಸಭೆ ರಚನೆಯಾಗಲಿದೆ ಎಂದು ಇಂಡಿಯಾ ಟಿ.ವಿ- ಟೈಮ್ಸ್ ನೌ ಮತ್ತು ಸಿ ವೋಟರ್ ರಾಷ್ಟ್ರವ್ಯಾಪಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಮೊದಲು ಮತ್ತು ನಂತರ ಸಮೀಕ್ಷೆ ನಡೆಸಲಾಗಿದೆ. ಅಂದರೆ ಆ.16 ಮತ್ತು ಅ.15ರ ನಡುವೆ ಈ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಕಾಂಗ್ರೆಸ್‌ಗೆ ಹಿನ್ನಡೆ: ಕಾಂಗ್ರೆಸ್‌ಗೆ ಆಂಧ್ರಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಕೇರಳ ರಾಜ್ಯಗಳಲ್ಲಿ ಭಾರಿ ನಷ್ಟ ಉಂಟಾಗಲಿದೆ. ಈ ಬಾರಿಯ ಪ್ರಮುಖ ಅಂಶವೆಂದರೆ ನರೇಂದ್ರ ಮೋದಿ ಅವರ ಪರಮಾಪ್ತ ಅಮಿತ್ ಶಾ ನೇತೃತ್ವ ವಹಿಸಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.                        
ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಛತ್ತೀಸ್‌ಗಡದಲ್ಲಿ ಮಾತ್ರ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಎನ್‌ಡಿಎಗೆ 186 ಸ್ಥಾನ: ಬಿಜೆಪಿ, ಶಿವಸೇನೆ, ಅಕಾಲಿದಳ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ), ಮೇಘಾಲಯದ ಎನ್‌ಸಿಪಿ ಘಟಕ ಮತ್ತು ಹರ್ಯಾಣದಲ್ಲಿ ಕುಲದೀಪ್ ಬಿಷ್ಣೋಯ್ ನೇತೃತ್ವದ ಜನಹಿತ ಕಾಂಗ್ರೆಸ್ ಪಕ್ಷಗಳಿರುವ ಎನ್‌ಡಿಎಗೆ 186 ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್ ನೇತೃತ್ವದ ಯುಪಿಎಗೆ 117 ಸ್ಥಾನಗಳು ದೊರಕಲಿವೆ. ಹೀಗಾಗಿ, ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಬೇಕಾದರೆ  ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ಇತರ ಪಕ್ಷಗಳ ಪಟ್ಟಿಯಲ್ಲಿ ಅಣ್ಣಾಡಿಎಂಕೆ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಎಸ್‌ಆರ್ ಜತೆಯಾಗಿ 240 ಸ್ಥಾನಗಳನ್ನು ಹೊಂದಲಿವೆ. ಎನ್‌ಡಿಎ ಶೇ.35ರಷ್ಟು ಮತಗಳನ್ನು ಪಡೆಯುವ ಮೂಲಕ ಶೇ.27ರಷ್ಟು ಮತ ಪಡೆಯುವ ಮೂಲಕ ಅಲ್ಪಪ್ರಮಾಣದ ಮುನ್ನಡೆ ಪಡೆದುಕೊಳ್ಳಲಿದೆ. ಕಾಂಗ್ರೆಸ್‌ಗೆ 102, ಬಿಜೆಪಿಗೆ 162 ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.

ಕಳೆದ ಬಾರಿ ಎಷ್ಟಿತ್ತು?: 2009ರಲ್ಲಿ ನಡೆದಿದ್ದ ಮಹಾಚುನಾವಣೆಯಲ್ಲಿ ಕಾಂಗ್ರೆಸ್ 206, ಬಿಜೆಪಿ 116 ಸ್ಥಾನಗಳನ್ನು ಪಡೆದುಕೊಂಡಿದ್ದವು. ಹೀಗಾಗಿ ಕಾಂಗ್ರೆಸ್ ಶೇ.50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. 2009ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಶೇ.40ರಷ್ಟು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದೆ. ಈ ಬಾರಿ ಎಡಪಕ್ಷಗಳು ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ಮೂಲಕ ಇತರ ಪಕ್ಷಗಳಲ್ಲಿ 'ನಾಯಕ'ನ ಪಾತ್ರ ವಹಿಸಲಿವೆ. ಕೇರಳದಲ್ಲಿ ಎಡಪಕ್ಷಗಳು 13 ಸ್ಥಾನಗಳನ್ನು ಗೆಲ್ಲಲಿವೆ. ಸೌರ ಫಲಕ ಹಗರಣದಿಂದ ಕಂಗೆಟ್ಟಿರುವ ಕಾಂಗ್ರೆಸ್ ಕೇವಲ 4 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗಿದೆ.

ಗುಜರಾತ್‌ನಲ್ಲಿ ಬಿಜೆಪಿಗೇ ಗೆಲವು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ 26 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ.

ಬಿಹಾರದಲ್ಲಿ ಜೆಡಿಯುಗೆ ನಷ್ಟ: ಬಿಜೆಪಿ ಜತೆ ಸಖ್ಯ ಕಡಿದುಕೊಂಡ ಜೆಡಿಯುಗೆ ಬಿಹಾರದಲ್ಲಿ ಬಾರಿ ನಷ್ಟ ಉಂಟಾಗಲಿದೆ. ಜೆಡಿಯುಗೆ 9 ಸ್ಥಾನ ದೊರೆಯಲಿದ್ದು, ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಲಾಲು ಯಾದವ್ ನೇತೃತ್ವದ ಆರ್‌ಜೆಡಿ 14 ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ ಜೆಡಿಯು 20 ಸ್ಥಾನಗಳನ್ನು ಗೆದ್ದಿತ್ತು.

ಉತ್ತರಪ್ರದೇಶ: ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ 25, ಬಿಜೆಪಿ 10, ಕಾಂಗ್ರೆಸ್ 5, ಬಹುಜನ ಸಮಾಜ ಪಕ್ಷ 31 ಸ್ಥಾನ ಗಳಿಸಲಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟಕ್ಕಿಂತ ಉತ್ತಮ ಸಾಧನೆ ಮಾಡಲಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 23, ಎಡಪಕ್ಷಗಳು 16 ಮತ್ತು ಕಾಂಗ್ರೆಸ್ ಕೇವಲ 3 ಸ್ಥಾನ ಪಡೆಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ 5 ಸ್ಥಾನ ಪಡೆಯಲಿದೆ.

ಬಿಜೆಪಿಗೆ ಅನುಕೂಲ: ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಗೇ ಅನುಕೂಲವಾಗಲಿದೆ. ರಾಜಸ್ಥಾನದಲ್ಲಿ ಬಿಜೆಪಿಗೆ 19, ಕಾಂಗ್ರೆಸ್‌ಗೆ ಕೇವಲ 5 ಕ್ಷೇತ್ರಗಳು ಬಗಲಿಗೆ ಬೀಳಲಿದೆ. ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂದರೆ 23 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಕಾಂಗ್ರೆಸ್ 6ಕ್ಕೆ ತೃಪ್ತಿಪಡಲಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಒಟ್ಟು 7 ಸ್ಥಾನಗಳ ಪೈಕಿ ಬಿಜೆಪಿಗೆ 4 ಕಾಂಗ್ರೆಸ್ ತೆಕ್ಕೆಗೆ 3 ಸ್ಥಾನಗಳು ದಕ್ಕಲಿವೆ.

ಲಾಭ ತರದ ತೆಲಂಗಾಣ: ತೆಲಂಗಾಣ ರಾಜ್ಯ ರಚನೆ ಮೂಲಕ ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್‌ನ ಹವಣಿಕೆ ತಪ್ಪಾಗುವುದು ಖಚಿತ. ಆಂಧ್ರಪ್ರದೇಶದ 42 ಸ್ಥಾನಗಳ ಪೈಕಿ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ತಲಾ 13 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿವೆ. ಟಿಡಿಪಿ 8 ಸ್ಥಾನ ಬಗಲಿಗೆ ಹಾಕಿಕೊಳ್ಳಲಿದೆ.

ಕರ್ನಾಟಕದಲ್ಲಿ ಹೇಗೆ?

ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಕಾಂಗ್ರೆಸ್‌ಗೆ ಈ ಚುನಾವಣೆ ಪ್ರಮುಖವಾಗಿ ಪರಿಣಮಿಸಲಿದೆ. ರಾಜ್ಯದಲ್ಲಿರುವ ಒಟ್ಟು 28 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 13 ಮತ್ತು ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ 12 ಸ್ಥಾನ ಲಭಿಸಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇನ್ನುಳಿದ ಮೂರು ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿದೆ. ಅಂದರೆ ಉಳಿದ ಮೂರು ಸ್ಥಾನಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.