ಪ್ರಧಾನ ಸುದ್ದಿ

ಹಾರ್ಡ್‌ವೇರ್; ರಾಜ್ಯಕ್ಕೆ ಕಬ್ಬಿಣದ ಕಡಲೆ

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.16-
ಸಾಫ್ಟ್‌ವೇರ್‌ನಲ್ಲಿ ಗಳಿಸಿದ್ದು, ಹಾರ್ಡ್‌ವೇರ್‌ನಲ್ಲಿ ಹೋಯ್ತು! ಅಂದಹಾಗೆ ಇದನ್ನು ಐಟಿಬಿಟಿಯ ಹೊಸ ಗಾದೆ ಎಂದು ತಿಳಿಯಬೇಡಿ. ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಎದುರಿಸುತ್ತಿರುವ ವಿಚಿತ್ರ ಸಮಸ್ಯೆಯಿದು. ಸಾಫ್ಟ್‌ವೇರ್ ತಯಾರಿಕೆಯಲ್ಲಿ ವಿಶ್ವದಲ್ಲೇ ಎರಡನೇ ರಾಜ್ಯವಾಗಿರುವ ಕರ್ನಾಟಕ ಹಾರ್ಡ್‌ವೇರ್ ಅಭಾವ ಎದುರಿಸುತ್ತಿದೆ. ಕಾರಣ. ಮೂರು ವರ್ಷಗಳ ಹಿಂದೆ ರೂಪಿಸಿರುವ ಸೆಮಿಕಂಡಕ್ಟರ್ ನೀತಿಯನ್ನು ಜಾರಿಗೊಳಿಸದೆ ಅಲಕ್ಷ್ಯಿಸಿರುವುದು.
ಬಳಕೆಯಲ್ಲಿರುವ ಬಹುತೇಕ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿರುವ ಸೆಮಿಕಂಡಕ್ಟರ್ ಚಿಪ್‌ಗಳನ್ನು ರಾಜ್ಯ ಆಮದು ಮಾಡಿಕೊಳ್ಳುತ್ತಿದೆ. ಅಂದರೆ, ಟೆಪ್‌ರೆಕಾರ್ಡ್‌ರ್‌ಗಳಿಂದ ಹಿಡಿದು ಅತ್ಯಾಧುನಿಕ ಕಂಪ್ಯೂಟರ್, ಮೊಬೈಲ್‌ಗಳ ತನಕ ಸೆಮಿಕಂಡಕ್ಟರ್ ಚಿಪ್ ಬಳಕೆ ಇದ್ದೇ ಇರುತ್ತದೆ. ಇದನ್ನು ಚೀನಾ, ಕೋರಿಯಾ ಮತ್ತು ತೈವಾನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಅಚ್ಚರಿ ಎಂದರೆ ಈ ಮಾದರಿಯ ಚಿಪ್‌ಗಳನ್ನು ತಯಾರಿಸುವ ಘಟಕಗಳು ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಅನೇಕ ಮುಂದುವರಿದ ರಾಷ್ಟ್ರಗಳಲ್ಲೇ ಇಲ್ಲ. ಇಂಥ ಘಟಕವನ್ನು ರಾಜ್ಯದಲ್ಲಿ ಆರಂಭಿಸಲು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಸ್ತಾಪಿಸಲಾಗಿತ್ತು. ಅಷ್ಟೇ ಅಲ್ಲ. ಅದಕ್ಕೊಂದು ನೀತಿಯನ್ನೂ ('ಇಎಸ್‌ಡಿಎಂ'-ಎಲೆಕ್ಟ್ರಾನಿಕ್ ಸಿಸ್ಟ್‌ಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್) ರೂಪಿಸಿತ್ತು. ಈ ಮೂಲಕ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಿಲು ನೀತಿ ರೂಪಿಸಿದ ದೇಶದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿತ್ತು. ಆದರೆ, ಆ ನೀತಿ ಜಾರಿಯಾಗಲೇ ಇಲ್ಲ.

ಚಿಪ್ ತಯಾರಿಕೆ ಬೇಕು ಭಾರೀ ನೀರು: ಸೆಮಿಕಂಡಕ್ಟರ್ ಘಟಕಕ್ಕೆ ಭಾರೀ ಪ್ರಮಾಣದ ನೀರಿನ ಅಗತ್ಯವಿದ್ದು, ಇದಕ್ಕಾಗಿ ಹಿಂದಿನ ಸರ್ಕಾರ ಮೈಸೂರಿನ ವರುಣಾ ನಾಲೆ ಬಳಿ ಜಾಗ ಗುರುತಿಸಿತ್ತು. ಅಲ್ಲಿ ಕುಡಿಯುವ ನೀರಿಗೇ ಅಭಾವ ಇರುವುದರಿಂದ ಸ್ಥಳೀಯ ವಿರೋಧ ವ್ಯಕ್ತವಾಗಿ ಯೋಜನೆ ನೆನಗುದಿಗೆ ಬಿದ್ದಿತು.
ನಂತರ ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಿ, ಆಲಮಟ್ಟಿ ಜಲಾಶಯದಿಂದ ನೀರು ಪಡೆಯಲು ಯತ್ನಿಸಲಾಗಿತ್ತು. ಆದರೆ, ಈ ನದಿಯಿಂದ ಕೈಗಾರಿಕೆಗೆ ನೀಡುವ ನೀರಿನ ಪ್ರಮಾಣದ ಕೋಟಾ ಮುಗಿದಿದ್ದರಿಂದ ಹೆಚ್ಚುವರಿ ನೀರು ಬಳಸಲಾಗಲಿಲ್ಲ. ಇದಕ್ಕೆ ಬಚಾವತ್ ಆಯೋಗದ ಶಿಫಾರಸು ಅವಕಾಶ ನೀಡಲಿಲ್ಲ. ಹೀಗಾಗಿ ಉತ್ತರದಲ್ಲೂ ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಕಷ್ಟವಾಯಿತು.

ಲಾಭ ನುಂಗುವ ಹಾರ್ಡ್‌ವೇರ್: ಐಟಿ ಸಿಟಿ ಬೆಂಗಳೂರು, ಗುಲ್ಬರ್ಗ, ಶಿವಮೊಗ್ಗ ಹಾಗೂ ಧಾರವಾಡ ಸೇರಿದಂತೆ ರಾಜ್ಯದಲ್ಲಿರುವ 2,300 ಕಂಪನಿಗಳು ವರ್ಷಕ್ಕೆ 1.35ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್‌ಗಳನ್ನು ಸಿದ್ಧಪಡಿಸಿ ಕರ್ನಾಟಕ ವಿಶ್ವದ ಅನೇಕ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ.
ಇದಕ್ಕಾಗಿ 8 ಲಕ್ಷ ಮಂದಿ ಪ್ರತ್ಯಕ್ಷವಾಗಿ, 25ಲಕ್ಷ ಮಂದಿ ಪರೋಕ್ಷವಾಗಿ ಸಾಫ್ಟ್‌ವೇರ್ ತಯಾರಿಕೆಯಲ್ಲಿ ದುಡಿಯುತ್ತಿದ್ದಾರೆ. ಇದರಿಂದ ಬರುವ ಒಟ್ಟಾರೆ ಫಲವನ್ನು ರಾಜ್ಯ ಹಾರ್ಡ್‌ವೇರ್‌ನಲ್ಲಿ ಕಳೆದುಕೊಳ್ಳುತ್ತಿದೆ. ಆದರೆ, ರಾಜ್ಯ ಬಳಸುವ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೂ ಶೇ.80ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಂದರೆ, ಸಾಫ್ಟ್‌ವೇರ್‌ನಿಂದ ರಾಜ್ಯ ಗಳಿಸುವ ಆದಾಯದಲ್ಲಿ ಶೇ.50ರಷ್ಟು ಆದಾಯವನ್ನು ಹಾರ್ಡ್‌ವೇರ್ ಆಮದು ಮಾಡಿಕೊಳ್ಳುವುದಕ್ಕೇ ಬಳಸಲಾಗುತ್ತಿದೆ.

ಅವಕಾಶ ಕೈ ತಪ್ಪುವ ಅಪಾಯವಿದೆ

ಇಎಸ್‌ಡಿಎಂ ಅಂದರೆ ಎಲೆಕ್ಟ್ರಾನಿಕ್ ಸಿಸ್ಟ್‌ಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ನೀತಿ. ಅಂದರೆ, ಸೆಮಿಕಂಡಕ್ಟರ್ ನೀತಿ ಇರುವುದು ಸದ್ಯಕ್ಕೆ ಕರ್ನಾಟಕದಲ್ಲಿ ಮಾತ್ರ. ಇದನ್ನು ಜಾರಿಗೊಳಿಸಿದರೆ ರಾಜ್ಯ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡರಲ್ಲೂ ಅಗ್ರಸ್ಥಾನ ಗಳಿಸಬಹುದು.ಏಕೆಂದರೆ, ಎಲೆಕ್ಟಾನಿಕ್ ಉಪಕರಣಗಳಿಗೆ  ಅಗತ್ಯವಾದ ಚಿಪ್ ಡಿಸೈನಿಂಗ್ ಮಾಡುವುದು ಮತ್ತು ಸಿದ್ಧಪಡಿಸಿ ರಫ್ತು ಮಾಡುವುದು. ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೂ ಅವಕಾಶ ನೀಡುವುದೇ ಸೆಮಿಕಂಡಕ್ಟರ್ ನೀತಿಯ ಮುಖ್ಯ ಧೇಯ.ಈಗ ಏನಾದರೂ ಮಾಡಿ ಸರ್ಕಾರ ಸೆಮಿಕಂಡಕ್ಟರ್ ಘಟಕ ಸ್ಥಾಪಿಸದಿದ್ದರೆ ಇದು ನೆರೆ ರಾಜ್ಯಗಳ ಪಾಲಾಗುವ ಸಂಭವಿದೆ. ಹೀಗಾಗಿಯೇ ಐಟಿಬಿಟಿ ಸಚಿವ ಎಸ್.ಆರ್. ಪಾಟೀಲ್ ಈ ಬಗ್ಗೆ ಮೂರು ಬಾರಿ ಸಭೆಯನ್ನೂ ನಡೆಸಿದ್ದಾರೆ. ಹೇಗಾದರೂ ಮಾಡಿ ಉತ್ತರ ಕರ್ನಾಟಕದ ಎಲ್ಲಾದರೂ ಘಟಕ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಆದರೆ, ಘಟಕ ಸ್ಥಾಪನೆಗೆ  ನೀರು ಎಲ್ಲಿಂದ ಪಡೆಯುವುದು ಎನ್ನುವುದು ಮಾತ್ರ ಇನ್ನೂ ಅಸ್ಪಷ್ಟ.

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.