ಪ್ರಧಾನ ಸುದ್ದಿ

ಏಟು-ಎದಿರೇಟು

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸ್ಥಾನ ಗೌರವ ಅರಿತು ಮಾತಾಡಿ. ನೀವು ಕುರುಬ, ನಾನೂ ಕುರುಬನೇ. ನಿಮ್ಮ ಭಾಷೆ...

Published On :

ಬೆಂಗಳೂರು: ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ನಡುವೆ ಟೀಕಾಸ್ತ್ರಗಳ ವಿನಿಮಯ ಮುಂದುವರಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಮಾಡಿದ ಟೀಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಎದಿರೇಟು ನೀಡಿದ್ದಾಯಿತು. ಅದಕ್ಕೆ ಸಿದ್ದರಾಮಯ್ಯ ಮಂಗಳವಾರವೂ ಪ್ರತ್ಯುತ್ತರ ನೀಡಿದ್ದಾರೆ. ಈ ಮಧ್ಯೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಹ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಮಾತ್ರವಲ್ಲ. ಅವರಂಥ ನೂರು ಮಂದಿ ಬಂದರೂ ನನ್ನನ್ನು ಕುರ್ಚಿಯಿಂದ ಇಳಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. ಯಡಿಯೂರಪ್ಪರಂತೆ ನಾನು ಯಾರ ವಿರುದ್ಧವೂ ಏಕವಚನ ಬಳಕೆ ಮಾಡುವುದಿಲ್ಲ ಎಂದಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸ್ಥಾನ ಗೌರವ ಅರಿತು ಮಾತಾಡಿ. ನೀವು ಕುರುಬ, ನಾನೂ ಕುರುಬನೇ. ನಿಮ್ಮ ಭಾಷೆ ನನಗೂ ಗೊತ್ತು' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯ: ಒಮ್ಮೆ ಮುಖ್ಯಮಂತ್ರಿಯಾದ ಮಾತ್ರಕ್ಕೆ ತಮಗೆ ವಿಶೇಷ ಅಧಿಕಾರ ಬಂದಿದೆ ಎಂದು ಯಡಿಯೂರಪ್ಪ ಭಾವಿಸಿದ್ದಾರೆ. ಅವರಂತೆ ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಯಡಿಯೂರಪ್ಪ ಮಾತನಾಡಿದ 10ಪಟ್ಟು ನಾನೂ ಮಾತನಾಡುತ್ತೇನೆ. ಆದರೆ, ಅದು ನನ್ನ ಸಂಸ್ಕೃತಿಯಲ್ಲ. ಆ ರೀತಿ ಮಾತನಾಡುವುದು ಯಡಿಯೂರಪ್ಪ ಅವರ ಸಂಸ್ಕೃತಿ ಇರಬಹುದು.
ಯಡಿಯೂರಪ್ಪ ಹತಾಶೆಗೊಂಡಿದ್ದು, ಭ್ರಮೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಅವರು ವೀರಾವೇಶದಲ್ಲಿ ಮಾತನಾಡಿದ ಮಾತ್ರಕ್ಕೆ ಜನ ಮತಹಾಕಿ ಗೆಲ್ಲಿಸುವುದಿಲ್ಲ. ಅವರ ಯೋಗ್ಯತೆಗೆ ಕಳೆದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಲು ಆಗಲಿಲ್ಲ. ಬಿಜೆಪಿ ಜತೆ ಕೈಜೋಡಿಸಿದರೂ ಕಣಕ್ಕಿಳಿಯಲಿಲ್ಲ. ಅಂದಮೇಲೆ ಅವರೇನು ಮಾಡುತ್ತಾರೆ.
ನನ್ನನ್ನು ಕುರ್ಚಿಯಿಂದ ಇಳಿಸುವುದಾಗಿ ಹೇಳುತ್ತಿರುವ ಯಡಿಯೂರಪ್ಪ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಆ ಕೆಲಸ ಮತ ಹಾಕಿದ ಜನರಿಂದ ಮಾತ್ರ ಸಾಧ್ಯ.

ಈಶ್ವರಪ್ಪ: ಸಿದ್ದರಾಮಯ್ಯ ಅವರೇ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲೂ ನೀವು ಇದೇ ರೀತಿ ಮಾತನಾಡುತ್ತಿದ್ದಿರಿ. ನಿಮ್ಮದೇ ಭಾಷೆಯಲ್ಲಿ ಮಾತನಾಡುವುದಕ್ಕೆ ನನಗೂ ಗೊತ್ತು. ಆದರೆ ನನ್ನ ಪಕ್ಷ ನನಗೆ ಸುಸಂಸ್ಕೃತ ರೀತಿಯಲ್ಲಿ ಮಾತನಾಡುವುದನ್ನು ಕಲಿಸಿದೆ. ಆದರೆ ನೀವು ಹಾಗಲ್ಲ. ಹಲವು ಪಕ್ಷಕ್ಕೆ ಹೋಗಿ ಬಂದ ಅನುಭವ ಇರುವವರು. ನಿಮ್ಮ ಸ್ಥಾನ ಗೌರವವನ್ನು ಅರಿತು ಮಾತಾಡಿ.
ನೀವು ಬೆಂಗಳೂರಿನಿಂದ ಬಳ್ಳಾರಿಗೆ ಡ್ಯಾನ್ಸ್ ಮಾಡಿಕೊಂಡು ಪಾದಯಾತ್ರೆ ನಡೆಸುವಾಗಲೂ ಇದೇ ರೀತಿ ಹೇಳಿಕೆ ನೀಡುತ್ತಿದ್ದಿರಿ. ಈಗ ಮುಖ್ಯಮಂತ್ರಿಯಾಗಿದ್ದೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಜ ನಿಮ್ಮ ಪಕ್ಷದಲ್ಲಿ ಯಾರು ಜೈಲಿಗೆ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ ಬಿಡಿ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ನೀಡಿರುವ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಅವರೇನು ಸ್ವಯಂ ಪ್ರೇರಣೆಯಿಂದ ಅಂಥ ಹೇಳಿಕೆ ನೀಡಿಲ್ಲ. ಶಿವಮೊಗ್ಗದಲ್ಲಿ ಆದ ಅಭಿವೃದ್ಧಿ ಕಾರ್ಯವನ್ನು ಹೇಳಿದರೆ ಅದನ್ನು ಶ್ಲಾಘಿಸಬೇಕಿತ್ತು. ಅದನ್ನು ಬಿಟ್ಟು ಕಣ್ಣು, ಮೂಗು, ಬಾಯಿ ಬಿಟ್ಟು ಅಧಿಕಾರ ನಡೆಸಿದ್ದರಿಂದಲೇ ಜೈಲಿಗೆ ಹೋಗಬೇಕಾಯಿತು ಎಂದು ಪ್ರಚೋದಿಸಿದ್ದರಿಂದ ಆ ರೀತಿ ಮಾತನಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯಡಿಯೂರಪ್ಪನವರು ನೀಡಿದ ಸವಾಲನ್ನು ಸ್ವೀಕರಿಸಿ ಚಾಮರಾಜನಗರ ಹಾಗೂ ಮೈಸೂರನ್ನು ಶಿವಮೊಗ್ಗ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಅವರು ಮುಂದಾಗಬೇಕಿತ್ತು.
ಸಿದ್ದರಾಮಯ್ಯ ಅವರನ್ನು ಹಿಂದುಳಿದ ಹಾಗೂ ದಲಿತ ವರ್ಗದ ಚಾಂಪಿಯನ್ ಎಂದು ಕರೆಯುತ್ತಾರೆ. ಅವರ ಪರವಾಗಿ ನೀವು ಈ ಹಿಂದೆ ಸಾಕಷ್ಟು ಕೆಲಸ ಮಾಡಿದ್ದೀರಿ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಈಗ ನಿಮ್ಮ ಮಾತಿಗೂ ಕೃತಿಗೂ ತುಂಬಾ ವ್ಯತ್ಯಾಸವಿದೆ. ಅಷ್ಟು ಮಾತ್ರವಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿತ್ತು ಎಂದು ಕೇಂದ್ರ ಯೋಜನಾ ಆಯೋಗದ ಅಧ್ಯಕ್ಷರಾದ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಶಿಫಾರಸು ನೀಡಿದ್ದಾರೆ. ಮಾತ್ರವಲ್ಲ ನಮ್ಮ ಆಡಳಿತಾವಧಿಯಲ್ಲಿ ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ನಿಮ್ಮೆಲ್ಲರಿಗಿಂತ ಹೆಚ್ಚು ಅನುದಾನ ನೀಡಿದ್ದೇವೆ. ಈ ಮಾತು ಸುಳ್ಳಾದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ.

ಮಠಗಳಿಗೆ ನೀಡಿದ ಅನುದಾನ ಕಡಿತ : ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠ, ಕೋಡಿಹಳ್ಳಿ ಆದಿ ಜಾಂಬವ ಗುರು ಪೀಠ, ಚಿತ್ರದುರ್ಗದ ಶಿವಯೋಗಿ ಸಿದ್ದರಾಮೇಶ್ವರ ಗುರುಪೀಠ, ಛಲವಾದಿ ಮಹಾಸಂಸ್ಥಾನ ಸೇರಿದಂತೆ ಹಲವು ಸಂಸ್ಥೆಗಳಿಗೆ ರು. 11 ಕೋಟಿ, ಹಿಂದುಳಿದ ವರ್ಗಕ್ಕೆ ಸೇರಿದ ಗೋಸಾಯಿಮಠ, ಮಾಚಿದೇವ ಮಹಾಸಂಸ್ಥಾನ, ತಿಗಳರ ಮಠ, ಕಾಗಿನೆಲೆ ಮಹಾಸಂಸ್ಥಾನ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸೇರಿದಂತೆ ಹಲವು ಮಠ ಹಾಗೂ ಸಂಘ ಸಂಸ್ಥೆಗಳಿಗೆ ರು. 43 ಕೋಟಿ ನೀಡಲಾಗಿತ್ತು. ಈ ಹಣ ಈಗ ಜಿಲ್ಲಾಧಿಕಾರಿಗಳ ಕೈ ಸೇರಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ಬಿಡುಗಡೆ ಮಾಡುವುದಕ್ಕೆ ಅಡ್ಡಿಪಡಿಸಿದೆ. ಜತೆಗೆ ಬಿಡುಗಡೆಯಾದ ಹಣ ಬಳಕೆಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಸಿದ್ದರಾಮಯ್ಯನವರು ಮಠ-ಮಾನ್ಯಗಳಿಗೆ ಬಜೆಟ್‌ನಲ್ಲಿ ಅನುದಾನ ನೀಡದೇ ಇರುವ ನಿರ್ಧಾರ ತೆಗೆದುಕೊಂಡುರಬಹುದು. ಆದರೆ ಹಿಂದಿನ ಸರ್ಕಾರ ಮಾಡಿದ ಆದೇಶಕ್ಕೆ ಅಡ್ಡಿ ಮಾಡುವುದು ಸರಿಯೇ ? ಈ ಸಮುದಾಯಕ್ಕೆ ಸೇರಿದ ಮಠ, ಸಂಘ-ಸಂಸ್ಥೆಗಳು ನಮಗೆ ದೂರವಾಣಿ ಕರೆ ಮಾಡಿ ಸರ್ಕಾರದ ನೀತಿ ಬಗ್ಗೆ ಅಳಲು ತೋಡಿಕೊಂಡಿವೆ. ಈಗಲಾದರೂ ಅವರ ಕಷ್ಟ ಅರ್ಥ ಮಾಡಿಕೊಂಡು ಹಣ ಬಿಡುಗಡೆ ಮಾಡಿ ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

ಅವರಿಗಿಂತ ನಾನೂ 10 ಪಟ್ಟು  ಮಾತನಾಡುತ್ತೇನೆ. ಅದು ನನ್ನ ಸಂಸ್ಕೃತಿ ಅಲ್ಲ. ಯಡಿಯೂರಪ್ಪ ಅಲ್ಲ, ಅವರಂಥ ನೂರು ಮಂದಿ ಬಂದರೂ ನನ್ನನ್ನು ಕುರ್ಚಿಯಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾನೂ ಕುರುಬ, ನೀವೂ ಕುರುಬನೇ. ನಿಮ್ಮ ಭಾಷೆಯಲ್ಲಿ ನನಗೂ ಮಾತನಾಡುವುದಕ್ಕೆ ಗೊತ್ತು. ಆದರೆ ನನ್ನ ಪಕ್ಷ ಸುಸಂಸ್ಕೃತ ರೀತಿಯಲ್ಲಿ ಮಾತನಾಡಲು ಕಲಿಸಿದೆ. ನಿಮ್ಮ ಸ್ಥಾನದ ಗೌರವ ಅರಿತು ಮಾತನಾಡಿ.
- ಈಶ್ವರಪ್ಪ, ಮಾಜಿ ಡಿಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.