ವರುಣಾಘಾತ
ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಸತ್ತವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಆಂಧ್ರದಲ್ಲಿ 32 ಮಂದಿ ಸತ್ತಿದ್ದರೆ, ಒಡಿಶಾದಲ್ಲಿ16 ಮಂದಿ..

ಹೈದರಾಬಾದ್/ಭುವನೇಶ್ವರ: ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಸತ್ತವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಆಂಧ್ರದಲ್ಲಿ 32 ಮಂದಿ ಸತ್ತಿದ್ದರೆ, ಒಡಿಶಾದಲ್ಲಿ ಮಳೆ ಸಂಬಂಧಿ ಘಟನೆಗಳಿಂದಾಗಿ 16 ಮಂದಿ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಈ ಎರಡು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನಿಲ್ಲುವ ಲಕ್ಷಣಗಳೇ ಗೋಚರಿಸಿಲ್ಲ. ಅಲ್ಲದೆ ಹವಾಮಾನ ಇಲಾಖೆ ಕೂಡ ಮುಂದಿನ 48 ಗಂಟೆಗಳಲ್ಲಿ ಇನ್ನೂ ಹೆಚ್ಚು ಮಳೆ ಸುರಿಯಬಹುದು ಎಂದು ಹೇಳಿರುವುದರಿಂದ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಮಳೆಯ ಕಾರಣದಿಂದಾಗಿ ಆಂಧ್ರದಲ್ಲಿ 72 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ 6.78 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. 6,597 ಮನೆಗಳು ಮಳೆಯಿಂದಾಗಿ ಕುಸಿದಿವೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರವು 178 ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಿದೆ. ಶ್ರೀಕಾಕುಲಂ ಜಿಲ್ಲೆಯೊಂದರಲ್ಲೇ 36 ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಆಂಧ್ರ ಪ್ರದೇಶದ 100 ಕ್ಕೂ ಹೆಚ್ಚು ಗ್ರಾಮಗಳು ಇನ್ನೂ ಜಲಾವೃತವಾಗಿವೆ. ರಸ್ತೆ ಮತ್ತು ರೈಲು ಮಾರ್ಗ ಮುಳುಗಿ ಹೋಗಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಪ್ರಕಾಶಂ ಜಿಲ್ಲೆಯಲ್ಲಿ 6, ಗುಂಟೂರ್ನಲ್ಲಿ 5, ಮೆಹಬೂಬನಗರದಲ್ಲಿ 4, ಹೈದರಾಬಾದ್, ಕರ್ನೂಲ್ನಲ್ಲಿ 3, ವಿಜಯನಗರಂ, ಪೂರ್ವ ಗೋದಾವರಿ, ನಲ್ಗೊಂಡ, ವಾರಂಗಲ್ನಲ್ಲಿ ತಲಾ 2 ಮಂದಿ ಮೃತಪಟ್ಟಿದ್ದಾರೆ. ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಕೃಷ್ಣಾ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ವಿಜಯವಾಡದ ಪ್ರಕಾಶಂ ಬ್ಯಾರೇಜ್ನಿಂದ ಹೆಚ್ಚುವರಿ ನೀರನ್ನು ಬಂಗಾಳ ಕೊಲ್ಲಿಗೆ ಬಿಡಲಾಗಿದೆ.
ರೈಲು ಸಂಚಾರಕ್ಕೆ ಮಳೆ ಅಡ್ಡಿ ಪಡಿಸಿರುವುದರಿಂದ ಭುವನೇಶ್ವರ - ಬೆಂಗಳೂರು ನಡುವಿನ ಪ್ರಶಾಂತಿ ಎಕ್ಸ್ಪ್ರೆಸ್ ಸಹಿತ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಮಳೆ ಪೀಡಿತ ಸ್ಥಳಗಳ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಒಡಿಶಾದಲ್ಲೂ ಭಾರಿ ಮಳೆ: ಒಡಿಶಾದಲ್ಲೂ ವರುಣನ ಹಾವಳಿ ಮುಂದುವರಿದಿದ್ದು, 16 ಮಂದಿ ಸತ್ತಿದ್ದಾರೆ. ಭದ್ರಕ್, ಜಾಜ್ಪುರ ಮತ್ತು ನಯಾಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಗಂಜಾಂ ಜಿಲ್ಲೆಯಲ್ಲಿ ಹೆಚ್ಚಿನ ಹಾನಿಯಾಗಿದ್ದು, ಇಲ್ಲಿ 6 ಮಂದಿ ಸತ್ತಿದ್ದಾರೆ.
ಪ್ರಮುಖ ನದಿಗಳಾದ ರುಶಿಕಲ್ಯಾ, ಗೋಡಹಾಡ ಮತ್ತು ವಂಶಧಾರಗಳು ಉಕ್ಕಿ ಹರಿಯುತ್ತಿವೆ. ಮಳೆಯಿಂದಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಭಾರಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹೇಳಿದ್ದಾರೆ.
ತೀವ್ರ ಹಾನಿಗೊಳಗಾಗಿರುವ ಗಂಜಾಂ ಜಿಲ್ಲೆಯಲ್ಲಿ ಪರಿಹಾರ ಕಾರ್ಯಕ್ಕಾಗಿ 2 ರಿಂದ 3 ಹೆಲಿಕಾಪ್ಟರ್ ಬಳಸಿಕೊಳ್ಳಲಾಗಿದೆ. ಮಳೆಯ ಪರಿಣಾಮ 5.32 ಲಕ್ಷ ಮಂದಿ ಮತ್ತು 2,276 ಹಳ್ಳಿಗಳ ಮೇಲಾಗಿದ್ದರೆ 1.47 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಗಂಜಾಂ ಜಿಲ್ಲೆಯ 129 ಹಳ್ಳಿಗಳು ದಿಢೀರ್ ಪ್ರವಾಹದಿಂದ ಹಾನಿಗೊಳಗಾಗಿವೆ. 69 ಗ್ರಾಮಗಳು ನೀರಿನಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಅತ್ತ ಪಶ್ಚಿಮ ಬಂಗಾಳದಲ್ಲೂ ವರುಣನ ಆರ್ಭಟ ಜೋರಾಗಿದೆ. ಕೋಲ್ಕತಾದಲ್ಲಿ ಮೂವರು ಮೃತಪಟ್ಟಿದ್ದಾರೆ. ಯಶವಂತಪುರ ತುರಂತೋ ಎಕ್ಸ್ಪ್ರೆಸ್ ಸಂಚಾರವನ್ನು ರದ್ದು ಮಾಡಲಾಗಿದೆ.
ರಾಜ್ಯದಲ್ಲೂ ಮಳೆ ಇಳಕಲ್ನಲ್ಲಿ 5 ಮನೆಗಳು ಕುಸಿತ
ಬೆಂಗಳೂರು: ರಾಜ್ಯದಲ್ಲೂ ಮಳೆ ಅಬ್ಬರ ಜೋರಾಗಿದ್ದು ಶನಿವಾರ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೆಡೆ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ನಲ್ಲಿ ಐದು ಮನೆಗಳು ಕುಸಿದಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಮಖಂಡಿಯಲ್ಲೂ ಭಾರಿ ಮಳೆಯಾಗಿದ್ದು ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲಗಳಲ್ಲಿನ ಬದುವು ಒಡೆದು ಹೋಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಹಲವೆಡೆ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


