ರೇಪ್ ಕಾನೂನಿಗೆ ಬರಲಿ ತಿದ್ದುಪಡಿ

ತ್ವರಿತಗತಿ ನ್ಯಾಯಾಲಯ ಮಾತ್ರ ಸಾಲದು. ಶೀಘ್ರ ವಿಚಾರಣೆ ಬೇಕು, ಅತ್ಯಾಚಾರಕ್ಕೆ ಒಳಗಾದವರಿಂದ ಪದೇ ಪದೆ ಹೇಳಿಕೆ ಪಡೆಯುವುದು ಸಲ್ಲ
ನವದೆಹಲಿ: ಅತ್ಯಾಚಾರಕ್ಕೊಳಗಾದವರಿಗೆ ಶೀಘ್ರ ನ್ಯಾಯ ಒದಗಿಸಲು ಕಾನೂನಿಗೆ ವ್ಯಾಪಕ ತಿದ್ದುಪಡಿ ತರಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಈ ಸಂಬಂಧ ವಿವರಣೆ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಅತ್ಯಾಚಾರಕ್ಕೊಳಗಾದವರಿಗೆ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಯಿಂದಷ್ಟೇ ಶೀಘ್ರ ನ್ಯಾಯ ಒದಗಿಸಲು ಸಾಧ್ಯವಾಗದು. ಈ ರೀತಿಯ ಹೀನಾಯ ಕೃತ್ಯಗಳನ್ನು ತಡೆಯಲು ತ್ವರಿತಗತಿ ವಿಚಾರಣಾ ಪ್ರಕ್ರಿಯೆಯನ್ನೂ ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ, ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಪದೇ ಪದೆ ನಡೆಯುತ್ತಿದ್ದರೂ ನಮ್ಮಲ್ಲಿ ಈ ರೀತಿಯ ತ್ವರಿತಗತಿ ವಿಚಾರಣಾ ಪ್ರಕ್ರಿಯೆ ಅಸ್ತಿತ್ವದಲ್ಲಿರದ ಕುರಿತು ನ್ಯಾ. ಜ್ಞಾನ್ ಸುಧಾ ಮಿಶ್ರಾ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿದೆ.
ಜತೆಗೆ, ಕಾನೂನು ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿರುವುದಕ್ಕೆ ಕಳವಳವನ್ನೂ ವ್ಯಕ್ತಪಡಿಸಿದೆ.
ಪ್ರತ್ಯಕ್ಷದರ್ಶಿಗಳು ಮತ್ತು ಅತ್ಯಾಚಾರಕ್ಕೊಳಗಾದವರ ಹೇಳಿಕೆಯನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಯಾಕೆ ದಾಖಲಿಸಿಕೊಳ್ಳುವಂತಿಲ್ಲ ಎಂದೂ ಪ್ರಶ್ನಿಸಿರುವ ಪೀಠ, ಈ ಸಂಬಂಧ ಸರ್ಕಾರದಿಂದ ವಿವರಣೆ ಕೋರಿದೆ.
ಪ್ರತ್ಯಕ್ಷದರ್ಶಿಗಳು ಹಾಗೂ ಅತ್ಯಾಚಾರಕ್ಕೊಳಗಾದವರ ಹೇಳಿಕೆಯನ್ನು ಪದೇ ಪದೆ ದಾಖಲಿಸುವ ಪ್ರಕ್ರಿಯೆಯಿಂದಲೇ ಅತ್ಯಾಚಾರ ಪ್ರಕರಣದ ವಿಚಾರಣೆ ವಿಳಂಬಗೊಳ್ಳುತ್ತಿದೆ. ಇದಕ್ಕೆ ಅಂತ್ಯ ಹಾಡುವ ಅಗತ್ಯ ಇದೆ ಎಂದಿದೆ ನ್ಯಾಯಾಲಯ. ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎದುರು ಸಿಆರ್ಪಿಸಿ ಸೆಕ್ಷನ್ 164ರಡಿ ಮೊದಲು ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ಇದನ್ನು ಮೊಹರು ಮಾಡಿದ ಲಕೋಟೆಯಲ್ಲಿಡಬೇಕು. ಇದನ್ನೇ ಸಾಕ್ಷಿಗಳ ಹೇಳಿಕೆಯನ್ನಾಗಿ ಪರಿಗಣಿಸಬೇಕು. ವಿಚಾರಣೆ ವೇಳೆ ಪ್ರತಿವಾದಿಗಳಿಗೆ ಪಾಟಿ ಸವಾಲು ಮಾಡುವ ಅವಕಾಶ ಇರುವುದರಿಂದ ಪದೇ ಪದೆ ಹೇಳಿಕೆ ದಾಖಲಿಸಿಕೊಳ್ಳುವುದರಿಂದ ಆಗುವ ಅವವಶ್ಯಕ ವಿಳಂಬವನ್ನು ತಡೆಯಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಸಂಬಂಧ ಕಾನೂನು ಪಂಡಿತರ ಜತೆ ವಿಸ್ತೃತ ಚರ್ಚೆ ನಡೆಸಿ ಅಗತ್ಯ ಕಾನೂನು ತಿದ್ದುಪಡಿ ತರಲು ಇದು ಸೂಕ್ತ ಕಾಲ ಎಂದೂ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಅತ್ಯಾಚಾರ ಆರೋಪಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕಿಳಿಸಿರುವ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ಸೋನಿಯಾ ಭೇಟಿಗೆ ನಿರ್ಧಾರ
ಬಲಿಯಾ(ಉ.ಪ್ರ.): ಬಾಲನ್ಯಾಯ ಮಂಡಳಿ ತೀರ್ಪಿನಿಂದ ಅಸಮಾಧಾನಗೊಂಡಿರುವ ಡಿ.16ರ ಗ್ಯಾಂಗ್ರೇಪ್ನಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಕುಟುಂಬ ಈಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ರನ್ನು ಭೇಟಿಯಾಗಲು ನಿರ್ಧರಿಸಿದೆ.
ಈ ವೇಳೆ, ಎಲ್ಲ ದೋಷಿಗಳಿಗೂ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸುವುದಾಗಿ ತಿಳಿಸಿದೆ. ಬಾಲ ನ್ಯಾಯ ಮಂಡಳಿ ತೀರ್ಪಿನ ಬಳಿಕ ನಾವು ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾ ಜತೆ ಮಾತುಕತೆ ನಡೆಸಿದ್ದೇವೆ. ಅವರು 10 ದಿನದೊಳಗೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ. ಅವಕಾಶ ಸಿಕ್ಕರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಗೂ ಪ್ರಯತ್ನಿಸುತ್ತೇವೆ ಎಂದು ಯುವತಿಯ ತಂದೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


