ಗಣಿ ಕಡತ ಮುಟ್ಟಲು ಭಯ!
ಕ.ಪ್ರ.ವಾರ್ತೆ , ಬಳ್ಳಾರಿ , ಸೆ. 12
ಗಣಿಗಾರಿಕೆ ಎಂದಾಕ್ಷಣ ಗಣಿ ಉದ್ಯಮಿಗಳಲ್ಲಿ ಮಾತ್ರವಲ್ಲ, ಬದಲಾಗಿ ಗಣಿಗಾರಿಕೆಗೆ ಸಂಬಂಧಿಸಿದ ಕಡತಗಳನ್ನು ಮುಟ್ಟಲು ಐಎಎಸ್, ಐಎಫ್‌ಎಸ್ ಅಧಿಕಾರಿಗಳು ಹೆದರುತ್ತಿದ್ದಾರೆ!
ಹೌದು. ಅಕ್ರಮ ಗಣಿಗಾರಿಕೆ ಸೃಷ್ಟಿಸಿದ ಅವಾಂತರಕ್ಕೆ ಇಬ್ಬರು ನಿವೃತ್ತ ಹಿರಿಯ ಐಎಎಸ್ ಅಧಿಕಾರಿಗಳು ಬಂಧನಕ್ಕೆ ಗುರಿಯಾದ ಬೆನ್ನಲ್ಲೇ ಗಣಿಗಾರಿಕೆ ಸಂಬಂಧಿಸಿದ ಕಡತಗಳಿಗೆ ಐಎಎಸ್ ಅಧಿಕಾರಿಗಳು ಸಹಿ ಮಾಡಲು ಹೆದರುತ್ತಿದ್ದಾರೆ. ಗಣಿಗಾರಿಕೆ ನವೀಕರಣ, ಪರವಾನಗಿ ಕಡತಗಳು ತಮ್ಮ ಮುಂದೆ ಬಂದರೆ, ಮುಟ್ಟಲು ಹಿಂದೇಟು ಹಾಕುವಂತೆ ಮಾಡಿದೆ ಅಕ್ರಮ ಗಣಿಗಾರಿಕೆ.
25 ವರ್ಷಗಳ ನಂತರ ತನಿಖೆ, ಜೈಲು: ನಿವೃತ್ತ ಐಎಎಸ್ ಅಧಿಕಾರಿ ಶಮೀಮ್ ಬಾನು ತಮ್ಮ ವೃತ್ತಿ ಅವಧಿಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಆದರೂ ಅವರು ಕಾನೂನಿನಡಿ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಾಗ ಯಾಮಾರಿದ್ದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 1,232 ಕೋಟಿ ನಷ್ಟವಾಗಿತ್ತು. ಶಮೀಮ್ ಬಾನು ಹಾಗೂ ವಿಶ್ವನಾಥನ್ 1995ರಿಂದ 1999ರ ಅವಧಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಕಡತ ವಿಲೇವಾರಿ ಮಾಡಿದ್ದರೆ, ಇದೀಗ 25 ವರ್ಷಗಳ ನಂತರ ತನಿಖೆ ನಡೆದು, ನಿವೃತ್ತ ಅಧಿಕಾರಿಗಳು ಬಂಧನವಾಗಿರುವುದು ಇತರೆ ಅಧಿಕಾರಿಗಳನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.
ಇನ್ನು ಗಣಿಗಾರಿಕೆ ಕುರಿತು ಗಂಧಗಾಳಿ ಗೊತ್ತಿಲ್ಲದ ಅಧಿಕಾರಿಗಳು ಗಣಿಗಾರಿಕೆ ಪರವಾನಗಿ, ನವೀಕರಣ ಸೇರಿದಂತೆ ಇತರೆ ಪರವಾನಗಿಗಳನ್ನು ನೀಡಲು ಭಯಪಡುತ್ತಿದ್ದಾರೆ. ಯಾವ ಕಡತಗಳಲ್ಲಿ ಯಾವ ಮಾಹಿತಿ ಅಡಗಿದೆಯೋ ಯಾವನಿಗೆ ಗೊತ್ತು?
50ಕ್ಕೂ ಹೆಚ್ಚು ಗಣಿ ಗುತ್ತಿಗೆ ನವೀಕರಣ: ಸಿಇಸಿ ಗಣಿಗಾರಿಕೆಯನ್ನುಎ, ಬಿ, ಸಿ ಕೆಟಗರಿ ಎಂದು ವಿಭಾಗಿಸಿದ್ದು, 'ಎ' ಕೆಟಗರಿಯಲ್ಲಿ 45, 'ಬಿ' ಕೆಟಗರಿಯಲ್ಲಿ 65 ಕಂಪನಿಗಳಗಣಿಗಾರಿಕೆ ಪುನಾರಂಭಕ್ಕೆ ಹಸಿರು ನಿಶಾನೆ ತೋರಿದೆ. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ಗಣಿ ಕಂಪನಿಗಳನ್ನು ನವೀಕರಿಸಬೇಕಿದೆ. ಕಾನೂನಿನಡಿ ಗಣಿ ಕಂಪನಿಗಳ ನವೀಕರಣ ಹಾಗೂ ಪರವಾನಗಿ ನೀಡಬೇಕೆಂದು ಸಿಇಸಿ ಸೂಚಿಸಿದ್ದರಿಂದ ನವೀಕರಣಕ್ಕಾಗಿ ಫಾರೆಸ್ಟ್ ಕ್ಲಿಯರೆನ್ಸ್, ಗಣಿ ಗುತ್ತಿಗೆ ನವೀಕರಣ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಗಿ, ಐಬಿಎಂ ಅನುಮೋದನೆ ಸೇರಿದಂತೆ ಗಣಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಲು ಐಎಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಹಿಂಜರಿಕೆಗೆ ಗೊಂದಲ ಕಾರಣ: ಕೇವಲ ಹಿರಿಯ, ನಿವೃತ್ತ ಐಎಎಸ್ ಅಧಿಕಾರಿಗಳ ಬಂಧನವೊಂದೇ ಈ ಹಿಂದೇಟಿಗೆ ಕಾರಣವಲ್ಲ. ಈ ಹಿಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಶ್ರೀನಿವಾಸ್ ಬಳ್ಳಾರಿ ಗಣಿ ವಲಯದಲ್ಲಿ ಅತಿದೊಡ್ಡ ಗಣಿ ಕಂಪನಿಗಳಾದ 'ಎ' ಕೆಟಗರಿಯ ಆರ್‌ಎಂಎಂಪಿಎಲ್ (ಎಂ.ಎಲ್. ನಂ. 0210) ಹಾಗೂ ಎಸ್‌ಕೆಎಂಇ ಗಣಿಗಾರಿಕೆಗೆ ನವೀಕರಣ ಮಾಡಬಾರದು ಎಂದು ತಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಕಂಪನಿಗಳು ಬೇರೆ ಗಣಿ ಕಂಪನಿಗಳಿಂದ ವರ್ಗಾವಣೆಯಾಗುವಾಗ ಕಾನೂನಾತ್ಮಕ, ತಾರ್ಕಿಕವಾಗಿ ಅಂತ್ಯವಾಗುವ ಮುನ್ನವೇ ಸರ್ಕಾರ ನೋಟಿಫಿಕೇಷನ್ ಮಾಡಿದ್ದರಿಂದ ವರ್ಗಾವಣೆ ಕಾನೂನು ಸರಿಯಾಗಿ ಪಾಲನೆಯಾಗಿಲ್ಲ. ಅಲ್ಲದೇ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ಗಣಿ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸುತ್ತಿರುವುದು, ಬಳ್ಳಾರಿ ಡಿಸಿ ಸಿಇಸಿಯ 'ಎ' ಕೆಟಗರಿಯಲ್ಲಿರುವ ಎರಡು ಗಣಿ ಕಂಪನಿಗಳ 'ಸಿ' ಕೆಟಗರಿ ಎಂದು ಶಿಫಾರಸು ಮಾಡಿರುವುದು ಸೇರಿದಂತೆ ಇತರ ವಿಷಯಗಳ ಗೊಂದಲಗಳ ಹಿನ್ನೆಲೆಯಲ್ಲಿ 'ನಮಗ್ಯಾಕೆ ಗಣಿಗಾರಿಕೆ ಉಸಾಬರಿ?' ಎಂದು ಕಡತಗಳ ವಿಲೇವಾರಿಯನ್ನು ಅಧಿಕಾರಿಗಳು ಮುಂದೂಡುತ್ತಿದ್ದಾರೆ.
ಇದರಿಂದ ಗಣಿಗಾರಿಕೆಗೆ ಪರವಾನಗಿ ಮಾತ್ರವಲ್ಲದೆ, ಗ್ರಾನೈಟ್ ಹಾಗೂ ಜಲ್ಲಿ ಕಲ್ಲು, ಕ್ರಷರ್‌ಗಳ ಕಡತಗಳಿಗೂ ಸಹಿ ಹಾಕಲು ಈ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಕಾನೂನು ಸಲಹೆ ಪಡೆಯಲು ಮುಂದಾಗುತ್ತಿದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

