'ಸಕಾಲ'ಕ್ಕೆ ಇನ್ನೂ 240 ಸೇವೆ: ಜಯಚಂದ್ರ
ಕ.ಪ್ರ.ವಾರ್ತೆ, ಬೆಂಗಳೂರು, ಸೆ. 16-
ಸಕಾಲ ಯೋಜನೆಯಡಿ ದೇಶದಲ್ಲೇ ಅತಿ ಹೆಚ್ಚು ಅಂದರೆ 375 ಸರ್ಕಾರಿ ಸೇವೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ಇದೀಗ ಮತ್ತೆ 240 ಸೇವೆಗಳನ್ನು ಈ ವ್ಯಾಪ್ತಿಗೆ ತರಲು ನಿರ್ಧರಿಸಿದೆ.
ವಿವಿಧ ಇಲಾಖೆಗಳ ಇನ್ನೂ 240 ಸೇವೆಗಳನ್ನು ಸಕಾಲ ಯೋಜನೆಯಡಿ ತರಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಇಲಾಖೆಗಳೂ ಸಮ್ಮತಿಸಿವೆ. ಈ ಸೇವೆಗಳಿಗೆ ಎಷ್ಟು ಕಾಲಾವಕಾಶ ಬೇಕು ಎಂಬುದನ್ನು ಪರಿಶೀಲಿಸಿ ಶೀಘ್ರದಲ್ಲೇ ಸಕಾಲ ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಸಕಾಲ ಯೋಜನೆಯ ಆಗಸ್ಟ್ ತಿಂಗಳ ವರದಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಆಗಸ್ಟ್ ತಿಂಗಳಲ್ಲಿ ವಿವಿಧ ಇಲಾಖೆಗಳ ಸಕಾಲ ಯೋಜನೆಯಡಿ 69 ಸೇವೆಗಳನ್ನು ಆನ್ಲೈನ್ ವ್ಯಾಪ್ತಿಗೆ ತರಲಾಗಿತ್ತು. ಈ ಆನ್ಲೈನ್ ವ್ಯವಸ್ಥೆಯಡಿ 15,500 ಅರ್ಜಿಗಳು ಬಂದಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಸಕಾಲ ಸೇವೆಯಲ್ಲಿ ಸುಧಾರಣೆಯಾಗಿರುವುದರಿಂದ ದೂರುಗಳ ಸಂಖ್ಯೆಯೂ ಕಡಿಮೆಯಾಗಿದೆ. ಜೂನ್ ತಿಂಗಳಲ್ಲಿ 316ರಷ್ಟಿದ್ದ ದೂರುಗಳ ಪ್ರಮಾಣ ಆಗಸ್ಟ್ನಲ್ಲಿ 98ಕ್ಕೆ ಇಳಿದಿದೆ ಎಂದು ಅವರು ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ಸಕಾಲ ಯೋಜನೆಯಡಿ 22.19 ಲಕ್ಷ ಅರ್ಜಿಗಳು ಬಂದಿದ್ದು, ಹಿಂದಿನ ಬಾಕಿ ಸೇರಿದಂತೆ 24.28 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಕೊನೇ ಸ್ಥಾನ ಪಡೆದಿದ್ದ ಕೋಲಾರ ಜಿಲ್ಲೆ ಆಗಸ್ಟ್ನಲ್ಲಿ 2ನೇ ಸ್ಥಾನಕ್ಕೆ ಏರಿದೆ ಎಂದು ಹೇಳಿದರು.
ಹೆಲ್ಪ್ ಡೆಸ್ಕ್ಗಳಲ್ಲಿ ಆನ್ಲೈನ್ ಸೇವೆ: ಸಕಾಲ ಯೋಜನೆಯಡಿ ರಾಜ್ಯದ ಎಲ್ಲಾ 177 ತಾಲೂಕುಗಳು ಮತ್ತು 30 ಜಿಲ್ಲೆಗಳಲ್ಲಿ ಒಟ್ಟು 207 ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಲಾಗುತ್ತಿದೆ. ಅಕ್ಟೋಬರ್ ವೇಳೆಗೆ ಇವು ಪೂರ್ಣ ಪ್ರಮಾಣದಲ್ಲಿ ಕಾರ್ಯ ಆರಂಭಿಸಲಿವೆ. ಈ ಹೆಲ್ಪ್ಡೆಸ್ಕ್ಗಳಲ್ಲಿ ಆನ್ಲೈನ್ ಸೇವೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಹೆಲ್ಪ್ಡೆಸ್ಕ್ನಲ್ಲಿ ಇರುವವರೇ ಸಾರ್ವಜನಿಕರಿಗೆ ನೇರವಾಗಲಿದ್ದಾರೆ ಎಂದರು.
ಆರಂಭದ ಕೆಲ ತಿಂಗಳು ಸರ್ಕಾರದಿಂದ ಹೆಲ್ಪ್ಡೆಸ್ಕ್ನಲ್ಲಿರುವವರಿಗೆ ನೆರವು ನೀಡಲಾಗುತ್ತದೆ. ನಂತರದಲ್ಲಿ ಪ್ರತಿ ಅರ್ಜಿದಾರರಿಂದ ಒಂದು ಅರ್ಜಿಗೆ 10 ಶುಲ್ಕ ಸಂಗ್ರಹಿಸಲು ಅವಕಾಶ ನೀಡಿ ಅವರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಸೈಬರ್ ಸೆಂಟರ್ಗೆ ನೆರವು: ಅದೇ ರೀತಿ ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ ಮೂಲಕ ಸಕಾಲ ಸೈಬರ್ ಸೆಂಟರ್ಗಳನ್ನು ಆರಂಭಿಸಲು ತರಬೇತಿ ಮತ್ತು ಹಣಕಾಸು ನೆರವು ನೀಡಲಾಗುತ್ತದೆ. ಸೈಬರ್ ಸೆಂಟರ್ ಆರಂಭಿಸುವವರಿಗೆ 1 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಎಲ್ಲೆಲ್ಲಿ ಸೈಬರ್ ಸೆಟರ್ಗಳನ್ನು ಆರಂಭಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಸೈಬರ್ ಸೆಂಟರ್ ಸ್ಥಾಪನೆ ಬಗ್ಗೆ ಆಸಕ್ತಿ ಇರುವವರು ವೆಬ್ ವಿಳಾಸ http://rdpr.kar.nic.in ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿಕೊಂಡರು.
ಗುಡಿಬಂಡೆ ತಾಲೂಕು ಪ್ರಥಮ: ಸಕಾಲ ಯೋಜನೆಯಡಿ ತಾಲೂಕುವಾರು ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಕಳೆದ ಮೂರು ತಿಂಗಳಿನಿಂದ ಪ್ರಥಮ ಸ್ಥಾನದಲ್ಲಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಗುಡಿಬಂಡೆ ತಹಸೀಲ್ದಾರ್ ಶೆಲ್ಜಾ ಮತ್ತು ಉಪ ತಹಸೀಲ್ದಾರ್ ಅವರನ್ನು ಸಚಿವರು ಸಕಾಲ ಗಡಿಯಾರ ಮತ್ತು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು. ಅಲ್ಲದೆ, 4455 ಕಾಲ್ಸೆಂಟರ್ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಐವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಆಗಸ್ಟ್ ತಿಂಗಳಲ್ಲಿ ಸಕಾಲ ಯೋಜನೆಯಡಿ 22.19 ಲಕ್ಷ ಅರ್ಜಿಗಳು ಬಂದಿದ್ದು, ಹಿಂದಿನ ಬಾಕಿ ಸೇರಿದಂತೆ 24.28 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಕೊನೇ ಸ್ಥಾನ ಪಡೆದಿದ್ದ ಕೋಲಾರ ಜಿಲ್ಲೆ ಆಗಸ್ಟ್ನಲ್ಲಿ 2ನೇ ಸ್ಥಾನಕ್ಕೆ ಏರಿದೆ.
- ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

