ಸಚಿವರ ಮೌಲ್ಯಮಾಪನ, ವೈರುಧ್ಯದ ರಿಂಗಣ
ಬೆಂಗಳೂರು: ಸಚಿವರು ಮತ್ತು ಶಾಸಕರ ಕಾರ್ಯವೈಖರಿ ಮೌಲ್ಯಮಾಪನವಾಗಬೇಕೆಂಬ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಸರ್ಕಾರ ಮತ್ತು ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿ ಮಾಡಿದೆ.
ಏಕೆಂದರೆ, ಮೌಲ್ಯಮಾಪನದ ಪರ- ವಿರುದ್ಧ ಹೇಳಿಕೆಗಳು ಹೊರಬೀಳುತ್ತಿದ್ದು, ಈ ವಿಚಾರ ಸೋಮವಾರ ಭರ್ಜರಿ ಸದ್ದು ಮಾಡಿತು.
ಸಚಿವರು ಮತ್ತು ಶಾಸಕರ ಕಾರ್ಯ ವೈಖರಿ ಬಗ್ಗೆ ಮೌಲ್ಯಮಾಪನ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಹೇಳುತ್ತಿದ್ದರೆ, ಅದರ ಅಗತ್ಯವಿಲ್ಲ ಎಂಬುದು ಸಚಿವರ ಅನಿಸಿಕೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒಂದು ವರ್ಷದವರೆಗೆ ಮೌಲ್ಯಮಾಪನ ನಡೆಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಸಹ ಇದಕ್ಕೆ ಧ್ವನಿಗೂಡಿಸಿದ್ದಾರೆ.
ಆದರೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮೌಲ್ಯಮಾಪನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಮೌಲ್ಯಮಾಪನ ಕುರಿತಾದ ವಿಷಯ ಸೋಮವಾರ ಸಾಯಂಕಾಲದ ಹೊತ್ತಿಗೆ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ವರ್ಷದವರೆಗೆ ಬೇಡ: ಪರಮೇಶ್ವರ ಜತೆ ಚರ್ಚೆ ಆರಂಭಿಸುವುದಕ್ಕೆ ಮುನ್ನವೇ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ ಸಚಿವರು ಮತ್ತು ಶಾಸಕರ ಕಾರ್ಯವೈಖರಿ ಮೌಲ್ಯಮಾಪನವನ್ನು ಒಂದು ವರ್ಷದವರೆಗೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಆರಂಭದಲ್ಲಿ ಮೌಲ್ಯಮಾಪನದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ ಅವರು, ನಂತರ ಸದ್ಯಕ್ಕೆ ಅಂಥ ಯಾವುದೇ ಪರೀಕ್ಷೆಗಳ ಅಗತ್ಯವಿಲ್ಲ ಎಂದು ತಿಳಿಸಿದರು. ಸಚಿವರ ಮೌಲ್ಯಮಾಪನ ಮಾಡುವುದಕ್ಕೆ ಇದು ಅಕಾಲ. ಮೂರು ತಿಂಗಳು ಕಳೆಯುವಷ್ಟರಲ್ಲೇ ಇಂಥ ಪ್ರಕ್ರಿಯೆಗಳ ಅಗತ್ಯವಿಲ್ಲ. ಮೂರು ತಿಂಗಳಲ್ಲಿ ಅಳತೆ ಮಾಡುವುದು ಅವಸರದಂತೆ ಕಾಣುತ್ತದೆ. ಹೀಗಾಗಿ ಒಂದುವರ್ಷ ಕಳೆಯುವವರೆಗೆ ಮೌಲ್ಯಮಾಪನ ಬೇಡ ಎಂದು ಖಡಾಖಂಡಿತವಾಗಿ ಹೇಳಿದರು. ಇದಕ್ಕೆ ಮುನ್ನ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮೌಲ್ಯಮಾಪನ ವಿಚಾರದ ಬಗ್ಗೆ ನನಗೇನೂ ತಿಳಿದಿಲ್ಲ. ಆ ಕುರಿತು ಕೆಪಿಸಿಸಿ ಅಧ್ಯಕ್ಷರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ಪತ್ರಿಕೆಯಲ್ಲಿ ಈ ಬಗ್ಗೆ ನಾನು ಓದಿ ತಿಳಿದುಕೊಂಡಿದ್ದೇನೆ. ಇದರ ಅಗತ್ಯ- ಅನಗತ್ಯದ ಬಗ್ಗೆ ಈಗಲೇ ಮಾತನಾಡುವುದಿಲ್ಲ ಎಂದರು. ಆದರೆ ಸಚಿವರ ಕಾರ್ಯವೈಖರಿ ಮೌಲ್ಯಮಾಪನಕ್ಕೆ ಕೆಪಿಸಿಸಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದಾಗ, ಸರ್ಕಾರ ನಮ್ಮದು, ಪಕ್ಷ ಅವರದು. ಪಕ್ಷ ಇದ್ದರೆ ಮಾತ್ರ ಸರ್ಕಾರ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಜತೆ ಮಾತುಕತೆ ನಡೆಸುತ್ತೇನೆ ಎಂದರು.
ಮೌಲ್ಯಮಾಪನ ಕಾಂಗ್ರೆಸ್ನಲ್ಲಿ ಸಾಮಾನ್ಯ. ಹಿಂದೆಯೂ ಈ ಪ್ರಕ್ರಿಯೆ ನಡೆದಿತ್ತು. ಎಐಸಿಸಿ ನನಗೆ ಹೇಳಿದ್ದನ್ನು ಮುಖ್ಯಮಂತ್ರಿಗೆ ಮತ್ತು ಸಚಿವರಿಗೆ ತಿಳಿಸಿದ್ದೇನೆ. ಯಾರೂ ಆತಂಕ ಪಡಬೇಕಾಗಿಲ್ಲ. ಹಿಂದೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಗುಲಾಂ ನಬೀ ಆಜಾದ್ ನಮ್ಮೆಲ್ಲರ ಮೌಲ್ಯಮಾಪನ ಮಾಡಿದ್ದರು.
- ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ
ಸಚಿವರ ಮೌಲ್ಯಮಾಪನ ಸ್ವಾಗತಾರ್ಹ. ಇದೊಂದು ಒಳ್ಳೆಯ ಬೆಳವಣಿಗೆ. ಇದರಿಂದ ಸಚಿವರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವುದಕ್ಕೆ ಸಾಧ್ಯ.
-ಆಸ್ಕರ್ ಫರ್ನಾಂಡಿಸ್, ಕೇಂದ್ರ ಭೂಸಾರಿಗೆ ಸಚಿವ
ಸಚಿವರ ಪರೀಕ್ಷೆ, ಮೌಲ್ಯಮಾಪನ ನಡೆಸುವುದು ಜನರ ಹಕ್ಕು. ರಾಜ್ಯದ ಜನರು ಪ್ರತಿದಿನ ಪರೀಕ್ಷಿಸುತ್ತಾರೆ. ಕಾಂಗ್ರೆಸ್ ಅಧ್ಯಕ್ಷರು ಮೂರು ತಿಂಗಳಿಗೊಮ್ಮೆ ಸಚಿವರ ರೇಟಿಂಗ್ ಪರೀಕ್ಷೆ ನಡೆಸಿದರೆ ಓದುವವನಿಗೆ ತ್ರಾಸ.
-ಎಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

