ಪ್ರಧಾನ ಸುದ್ದಿ

ಅಡಕೆ ಹಾನಿ 789 ಕೋಟಿ, ಪರಿಹಾರ ಕೇವಲ 35 ಕೋಟಿ!

Published On :

ಕ.ಪ್ರ.ವಾರ್ತೆ, ರಾಮನಗರ, ಸೆ. 18-
ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಗೆ ಕೊಳೆರೋಗ ಆವರಿಸಿ ಅಡಕೆ ಬೆಳೆ ಹಾನಿಯಾಗಿರುವುದರಿಂದ ಆಗಿರುವ ನಷ್ಟ 789 ಕೋಟಿ. ಆದರೆ, ಪರಿಹಾರಕ್ಕಾಗಿ ಬಿಡುಗಡೆಯಾಗಿರುವುದು ಕೇವಲ 35 ಕೋಟಿ.
ಹೌದು ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ ಅವರು ನೀಡಿರುವ ಮಾಹಿತಿ ಇದು.
ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಕೊಳೆರೋಗ ಆವರಿಸಿ ಅಡಕೆ ಬೆಳೆಗೆ ಹಾನಿಯಾಗಿದ್ದರಿಂದ ಉಂಟಾಗಿರುವ ನಷ್ಟ 1500 ಕೋಟಿ ದಾಟಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರವೇ ಈ ನಷ್ಟದ ಮೊತ್ತ 789 ಕೋಟಿ. ಕೇಂದ್ರ ಸರ್ಕಾರದ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ ಇದರ ಪರಿಹಾರಕ್ಕಾಗಿ ಬಿಡುಗಡೆಯಾಗಬೇಕಿದ್ದ ಮೊತ್ತ 73 ಕೋಟಿ. ಈ ಪೈಕಿ 35 ಕೋಟಿ ಬಿಡುಗಡೆ ಮಾಡಲಾಗಿದ್ದು, ಉಳಿದ ಮೊತ್ತ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಜಿಲ್ಲಾಧಿಕಾರಿಗಳಿಂದ ವರದಿ ಬಂದ ತಕ್ಷಣ ಉಳಿದ ಮೊತ್ತ ಬಿಡುಗಡೆ ಮಾಡಲಾಗುತ್ತದೆ ಎಂದು ಶಂಕರಲಿಂಗೇಗೌಡ ಅವರು ಹೇಳಿದರು.

ಹೆಕ್ಟೇರ್‌ಗೆ 12 ಸಾವಿರ ಪರಿಹಾರ: ಎಲ್ಲಾ ವಸ್ತುಗಳ ದರ ಮುಗಿಲೆತ್ತರಕ್ಕೇರಿದರೂ ಅಡಕೆ ಬೆಳೆಹಾನಿ ಪರಿಹಾರ ಮಾತ್ರ ಇನ್ನೂ ಹೆಚ್ಚಾಗಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್‌ಗೆ 12 ಸಾವಿರ ಮಾತ್ರ ಪರಿಹಾರ ನೀಡಲಾಗುತ್ತದೆ. ಆದರೆ, ಈ ಪರಿಹಾರ ಬಿಡುಗಡೆಗೆ ಬೇಕಾದ ಅನುದಾನವೂ ಸರ್ಕಾರದಿಂದ ಇನ್ನೂ ಬಿಡುಗಡೆಯಾಗಿಲ್ಲ.
ದಾಳಿಂಬೆ, ತೆಂಗು ಪರಿಸ್ಥಿತಿ: ಇನ್ನು ದಾಳಿಂಬೆ ಬೆಳೆ ಹಾನಿಯಿಂದ 2008ರಿಂದ ಇದುವರೆಗೆ ರೈತರಿಗೆ ಸುಮಾರು 500 ಕೋಟಿ ನಷ್ಟವಾಗಿದೆ. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 50 ಕೋಟಿಯ ಪ್ಯಾಕೇಜ್ ಪ್ರಕಟಿಸಿದೆ. ಅದರಲ್ಲಿ 25 ಕೋಟಿ ಮಾತ್ರ ಬಿಡುಗಡೆಯಾಗಿದೆ. ಉಳಿದ 25 ಕೋಟಿ ಪೈಕಿ 13 ಕೋಟಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ ಇದಕ್ಕೆ ಪೂರಕವಾಗಿ ಉಳಿದ ಮೊತ್ತವನ್ನು ಭರಿಸಲು ರೈತರು ಸಿದ್ಧರಾಗಬೇಕು. ಆಗ ಮಾತ್ರ ಬಾಕಿ ಹಣ ಸಿಗುತ್ತದೆ.
ಅದೇ ರೀತಿ ತೆಂಗು ಬೆಳೆ ಹಾನಿಗೆ 600 ಕೋಟಿ ಮೊತ್ತದ ಪ್ಯಾಕೇಜ್ ಸಿದ್ಧವಾಗಿದೆ. ಈ ಪೈಕಿ ಅರ್ಧ ಮೊತ್ತವನ್ನು ಕೇಂದ್ರ ಸರ್ಕಾರ ನೀಡಿದರೆ ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕು. ಆದರೆ, ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಪರ್ಯಾಯ ಬೆಳೆಗೆ ನೆರವು ನೀಡುವ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಈ ರೀತಿ ತೊಂದರೆಗೊಳಗಾದ ರೈತರಿಗೆ ಶೀಘ್ರ ಬರಿಹಾರ ನೀಡಿ ಅವರ ನೆರವಿಗೆ ಬರುವ ಬದಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, 'ನೀರಾವರಿ ಪ್ರದೇಶಗಳಲ್ಲಿ ಮಾತ್ರ ತೆಂಗು ಬೆಳೆ ತೆಗೆಯಿರಿ. ಉಳಿದ ಭಾಗದಲ್ಲಿ ಪರ್ಯಾಯ ಬೆಳೆಗೆ ಒತ್ತು ನೀಡಿ. ಒಣಭೂಮಿಯಲ್ಲಿ ಮಾತ್ರ ದಾಳಿಂಬೆ ಬೆಳೆಯಿರಿ. ನೀರಾವರಿ ಪ್ರದೇಶಗಳಲ್ಲಿ ಅದನ್ನು ಬೆಳೆಯಬೇಡಿ' ಎಂಬ ಪುಕ್ಕಟೆ ಸಲಹೆಗಳನ್ನು ರೈತರಿಗೆ ನೀಡುತ್ತಿದೆ.

ಪೌಷ್ಟಿಕಾಂಶದ ಬೆಳೆ: ಇಷ್ಟರ ಮಧ್ಯೆಯೂ ರಾಜ್ಯದಲ್ಲಿ ಸಮುದಾಯಕ್ಕೆ ಸೇರುವ ಪ್ರದೇಶಗಳಲ್ಲಿ ಸುಮಾರು 2.50 ಕೋಟಿ ವೆಚ್ಚದಲ್ಲಿ ಕಿಚನ್ ಗಾರ್ಡನ್ ಯೋಜನೆಯಡಿ ಪೌಷ್ಟಿಕಾಂಶದ ಉತ್ಪನ್ನಗಳನ್ನು ಬೆಳೆಯುವ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಶಾಲೆ ಆವರಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ 11 ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.