ಲಗಾಮು ಸಮಿತಿ ರಚನೆ
ನವದೆಹಲಿ: ಪಕ್ಷ ಮತ್ತು ಸರ್ಕಾರದ ನಡುವೆ ಸಾಮರಸ್ಯ ಕಾಯ್ದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿ ರಚಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಸಂಚಾಲಕರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸದಸ್ಯರು. ಸರ್ಕಾರದ ಪ್ರತಿನಿಧಿಯಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ಇದ್ದರೆ, ಕೆಪಿಸಿಸಿ ಪ್ರತಿನಿಧಿಯಾಗಿ ಡಿ.ಕೆ. ಶಿವಕುಮಾರ್ ಇದ್ದಾರೆ. ಎಐಸಿಸಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಪಕ್ಷದ ಹೈಕಮಾಂಡ್ ಪ್ರತಿನಿಧಿಯಾಗಿದ್ದಾರೆ.
ಆರು ಸದಸ್ಯರ ಸಮನ್ವಯ ಸಮಿತಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಕಾಯ್ದುಕೊಳ್ಳಲಿದೆ. ಸರ್ಕಾರದ ಯೋಜನೆಗಳ ಜಾರಿ ಮತ್ತು ಅದನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪಕ್ಷ ಪೂರಕವಾಗಿ ಕಾರ್ಯ ನಿರ್ವಹಿಸಬೇಕು.
ಅದೇ ವೇಳೆ ಸರ್ಕಾರ ಕೂಡ ಕಾಂಗ್ರೆಸ್ ತತ್ವ ನೀತಿಗಳಿಗೆ ಅನುಸಾರವಾಗಿ ತನ್ನ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ಈ ಹಂತದಲ್ಲಿ ಸರ್ಕಾರದ ಮುಖ್ಯಸ್ಥರಾಗಲೀ, ಪಕ್ಷದ ಸಾಂಸ್ಥಿಕ ಮುಖ್ಯಸ್ಥರಾಗಲಿ ವೈಯಕ್ತಿಕ ಹಿತಾಸಕ್ತಿ, ಪ್ರತಿಷ್ಠೆ ಮತ್ತು ದ್ವೇಷಾಸೂಯೆಗಳಿಂದ ಮುಕ್ತವಾಗಿರಬೇಕು ಎಂಬುದು ಸಮನ್ವಯ ಸಮಿತಿ ರಚನೆಯ ಒಟ್ಟಾರೆ ಆಶಯ.
ಸಿದ್ದರಾಮಯ್ಯಗೆ ಬ್ರೇಕ್?: ಆದರೆ, ಪಕ್ಷದ ಅಣತಿಗೂ ಕಾಯದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆಂಬ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಗಲೋಟಕ್ಕೆ ಕಡಿವಾಣ ಹಾಕುವ ಉದ್ದೇಶ ಸಮನ್ವಯ ಸಮಿತಿಯದ್ದಾಗಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ವಿತ್ವಕ್ಕೆ ಬಂದ ಕೆಲವು ದಿನಗಳಲ್ಲೇ ಸಮನ್ವಯ ಸಮಿತಿ ಪ್ರಸ್ತಾಪ ಬಂದಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅವರು ಬಜೆಟ್ ಘೋಷಿತ ಅರ್ಧ ಡಜನ್ ಯೋಜನೆಗಳ ಜಾರಿಗೆ ಆದೇಶ ಹೊರಡಿಸಿದರು. ಸಂಪುಟ ರಚಿಸದೇ ಇಂತಹ ಪ್ರಮುಖ ನಿರ್ಧಾರ ಕೈಗೊಂಡಾಗ ಬಹುತೇಕ ಕಾಂಗ್ರೆಸ್ ನಾಯಕರು ಹುಬ್ಬೇರಸಿದ್ದರು!
ನಂತರ ಸಂಪುಟ ವಿಸ್ತರಣೆ ವೇಳೆ ಅಸಮಾಧಾನಗೊಂಡವರು, ವಲಸಿಗ ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಆದ್ಯತೆ ನೀಡುತ್ತಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷಿಸುತ್ತಿದ್ದಾರೆಂಬ ಅಸಮಾಧಾನಗಳ ಫಲಶೃತಿಯಾಗಿ ಎಂ.ವಿ. ರಾಜಶೇಖರನ್ ನೇತೃತ್ವದ ಕಾಂಗ್ರೆಸ್ ನಾಯಕರು ಹೈಮಾಂಡ್ಗೆ ದೂರು ನೀಡಿ, ಸಮನ್ವಯ ಸಮಿತಿ ರಚನೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು.
ಕಾಂಗ್ರೆಸ್ ಸರ್ಕಾರಕ್ಕೆ ನೂರು ದಿನಗಳಾದ ಸಮಯದಲ್ಲೇ ಸಮನ್ವಯ ಸಮಿತಿ ಘೋಷಣೆ ಆಗಬೇಕಿತ್ತು. ಆದರೆ, ಸೋನಿಯಾ ಗಾಂಧಿ ಅವರ ಅನಾರೋಗ್ಯದಿಂದಾಗಿ ಘೋಷಣೆ ಆಗಿರಲಿಲ್ಲ. ಸಚಿವರ ಮೌಲ್ಯಮಾಪನ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಹೊತ್ತಿಗೆ ಹೈಕಮಾಂಡ್ ಸಮನ್ವಯ ಸಮಿತಿ ರಚಿಸಿದೆ. 2014ರ ಚುನಾವಣೆ ವೇಳೆಗೆ ಪಕ್ಷ ಹಾಗೂ ಸರ್ಕಾರ ಹೆಚ್ಚು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಹೆಚ್ಚು ಸ್ಥಾನ ದಕ್ಕಿಸಿಕೊಳ್ಳುವ ಗುರಿ ಹೈಕಮಾಂಡ್ನದ್ದಾಗಿದೆ.
ಯಾರಿದ್ದಾರೆ?
ಅಧ್ಯಕ್ಷ: ದಿಗ್ವಿಜಯ್ ಸಿಂಗ್
ಸಂಚಾಲಕ: ಡಾ.ಜಿ.ಪರಮೇಶ್ವರ
ಸದಸ್ಯ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಸರ್ಕಾರದ ಪ್ರತಿನಿಧಿ: ಕೆ.ಜೆ.ಜಾರ್ಜ್
ಕೆಪಿಸಿಸಿ ಪ್ರತಿನಿಧಿ: ಡಿ.ಕೆ.ಶಿವಕುಮಾರ್
ಹೈಕಮಾಂಡ್ ಪ್ರತಿನಿಧಿ: ಸೆಲ್ವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

