ಪ್ರಧಾನ ಸುದ್ದಿ

ಮಂಡ್ಯ ಕಾಂಗ್ರೆಸ್ ದಡ ಸೇರಿಸಲು ಬಂದ ಅಂಬಿಗ

ಮಂಡ್ಯ ಕಾಂಗ್ರೆಸ್ ದಡ ಸೇರಿಸಲು ಬಂದ ಅಂಬಿಗ
Published On :

ರಮ್ಯಾ ಇನ್ನೂ ಚಿಕ್ಕ ಹುಡುಗಿ. ಒಂದ್ಚೂರೂ ಕಷ್ಟ ಇಲ್ಲದೇ, ವೋಟ್ ಕೇಳದೇ ಎಂಪಿ ಆಗಿದ್ದೀಯಾ, ಹೋಗಿ ಊರೂರು ಅಲೆದು, ಜನರ ಕಷ್ಟ ತಿಳ್ಕೊಂಡು ಬಾ ಒಳ್ಳೇದಾಗ್ತದೆ ಅಂದ್ರೆ, ಅದೇನೋ ಟ್ವಿಟರ್ರು, ಫೇಸ್‌ಬುಕ್ಕು, ವಾಟ್ಸ್‌ಆ್ಯಪ್ ಅಂತಾಳೆ. ಇವೆಲ್ಲ ಮಂಡ್ಯದಲ್ಲಿ ನಡೆಯಾಕ್ಕಿಲ್ಲ...!

ಕನ್ನಡಪ್ರಭ ವಾರ್ತೆ ಬೆಂಗಳೂರು ಏ. 11
ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು, ಮಲೇಷ್ಯಾದಲ್ಲಿ ಸುದೀರ್ಘ ವಿಶ್ರಾಂತಿಯೊಂದಿಗೆ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಂತೆ ವಸತಿ ಸಚಿವ ಅಂಬರೀಷ್ ಮಂಡ್ಯ ಜಿಲ್ಲಾ ರಾಜಕೀಯಕ್ಕೆ ಸಂಬಂಧಿಸಿದಂತೆ ರೆಬೆಲ್ ಆಗಿದ್ದಾರೆ.
ಶುಕ್ರವಾರ ಬೆಳಗ್ಗೆ ಮಲೇಷ್ಯಾದಿಂದ ವಾಪಸ್ ಆದ ನಂತರ, ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ವರದಿಗಾರರ ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯ ಸಂಸದೆ ರಮ್ಯಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ತಿಳಿ ಹಾಸ್ಯದಲ್ಲೇ ರಮ್ಯಾ ಅವರ ಕಾರ್ಯವೈಖರಿ ಟೀಕಿಸಿರುವ ಅವರು, 'ನಾನು ಮಂಡ್ಯದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತೇನೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳಿಂದ ನಾವು ಗೆಲ್ಲುತ್ತೇವೆ' ಎಂದು ಹೇಳಿದರು.

-ಮಂಡ್ಯದಲ್ಲಿ ಇರುವುದು ಒಂದೇ ಕಾಂಗ್ರೆಸ್. ಮೋದಿ ಕಾಂಗ್ರೆಸ್, ಸೋನಿಯಾ ಕಾಂಗ್ರೆಸ್ ಎಂಬುದಿಲ್ಲ. ಇರುವುದು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್. ಯಾರೋ ಒಬ್ಬರೋ, ಇಬ್ಬರೋ ಅಪಸ್ವರ ತೆಗೆದ ಮಾತ್ರಕ್ಕೆ ಏನೂ ಆಗಲ್ಲ.
-ರಾಹುಲ್ ಗಾಂಧಿ ನೇರ ಪರಿಚಯ ಇದೆ. ಸ್ಥಳೀಯರ ಸಹಕಾರ ಬೇಡ ಎಂದು ರಮ್ಯಾ ಎಲ್ಲೂ ಹೇಳಿಲ್ಲ. ಒಂದೊಮ್ಮೆ ಇದ್ರೆ ತಪ್ಪೇನು?  ಆದರೆ ಇಲ್ಲಿ ಗೆದ್ದರೆ ಅಲ್ಲಿ ನಡೆಯುತ್ತದೆ. ಇಲ್ದೇ ಇದ್ರೆ ಅಲ್ಲೇನು?
-ನನ್ನ ನಿರ್ಲಕ್ಷ್ಯದಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಅನಾರೋಗ್ಯ ಕಾಡಿತು. ಆದರೆ ಅಭಿಮಾನಿಗಳು, ಸ್ನೇಹಿತರ ಪ್ರೀತಿ, ಆಶೀರ್ವಾದ, ಸುಮಲತಾಳ ಧೈರ್ಯ,ವೈದ್ಯರ ನೆರವಿನಿಂದ ಹುಷಾರಾಗಿದ್ದೇನೆ. ಕನ್ನಡ ನಾಡಿನ ಸಮಸ್ತ ಬಂಧುಗಳಿಗೆ ನನ್ನ ನಮಸ್ಕಾರ.
-ನಾನೇ ಎಂಪಿ ಆಗ್ಬೇಕು. ನನ್ನ ನಂತರ ಸುಮಲತಾ ಆಗ್ಬೇಕು, ಆ ನಂತರ ನನ್ನ ಮಗ ಇದ್ದಾನೆ ಅವ್ನಾಗಲಿ ಎನ್ನುವ ಜಾಯಮಾನದವನಲ್ಲ. ಬೇರೆಯವರ ಮಕ್ಕಳು ಎಂಪಿಯಾಗಲಿ ತಪ್ಪೇನು?
-ನನ್ನನ್ನು ರಾಜಕಾರಣಕ್ಕೆ ತಂದವರು ನನ್ನ ತಂದೆ ಎಂದು ರಮ್ಯಾ  ಹೇಳಿಕೆ ನೀಡಿದ್ದಾರೆ ಎಂದು ನೀವು ಪ್ರಶ್ನೆ ಕೇಳಿದ್ದೀರಿ. ಪಾಪ ಅವಳಿಗೆ ಗೊತ್ತೇ ಇಲ್ಲ. ನಾನು ದೇವರಾಜ ಅರಸು ಅವರ ಕಾಲದಲ್ಲೇ ರಾಜಕಾರಣಕ್ಕೆ ಬಂದಿದ್ದೇನೆ. ಆಗ ಅವರು ಹುಟ್ಟೇ ಇರಲಿಲ್ಲ. ರಾಜಕಾರಣದಲ್ಲಿ ಆತುರ ಪಡಬಾರದು. ನಾಮಪತ್ರ ಸಲ್ಲಿಸುವಾಗ ಪಕ್ಷದ ಮುಖಂಡರನ್ನು ಕಡೆಗಣಿಸಿದ್ದು ಸರಿಯಲ್ಲ. ಅವಳಿಗೆ ಅನುಭವ ಇಲ್ಲ. ನಮ್ಮಂತ ಹಿರಿಯರು ಇದ್ದಿದ್ದರೆ ಈ ತರ ಮಾಡಬಾರದಮ್ಮ ಎಂದು ಬುದ್ಧಿ ಹೇಳುತ್ತಿದ್ದೆವು.
-ಯಾವುದೇ ಅನುಭವ ಇಲ್ಲದೇ ಮೊದಲ ಸಲ ಎಂಪಿಯಾದಾಗಲೇ ನಾನು ಆ ಹುಡುಗಿಗೆ ಹೇಳಿದೆ, ಯು ಆರ್ ಟೂ ಯಂಗ್ (ನೀನಿನ್ನೂ ತುಂಬಾ ಚಿಕ್ಕವಳು). ಒಂದು ಚೂರು ಕಷ್ಟ ಇಲ್ಲದೇ, ವೋಟ್ ಕೇಳದೆ ಸಂಸದೆಯಾಗಿದ್ದೀಯ. ಹೋಗಿ ಊರುರು ಅಲೆದು ಜನರ ಕಷ್ಟಗಳನ್ನು ಕೇಳು. ಏನು ಮಾಡುವುದಕ್ಕೆ ಆಗದೇ ಇದ್ದರು. ಅವರ ಸಮಸ್ಯೆ ತಿಳ್ಕೊಂಡು ಬಾ ಎಂದಿದ್ದೆ. ಆದರೆ ಇವಳು, ಪೇಸ್‌ಬುಕ್ಕು, ಟ್ವೀಟರ್ರು, ವಾಟ್ಸ್‌ಅಪ್ ಅಂತಾಳೆ. ಮಂಡ್ಯದ ಜನತೆಗೆ ಇದೆಲ್ಲ ಗೊತ್ತಾಗುವುದಿಲ್ಲ. ನಡೆಯುವುದೂ ಇಲ್ಲ. ಎಲ್ಲಿ ಯಾವ ಅಪ್ಲಿಕೇಶನ್ ಹಾಕಬೇಕೋ ಅಲ್ಲೆ ಹಾಕಬೇಕು. ಇವಳು ಮಂಡ್ಯಕ್ಕೆ ಬಂದು 'ಹಿ ಹ್ಯಾಸ್ ಪುಟ್ ಲೈಕ್ ದಿಸ್ ಎಂದರೆ, ನೋ ನೋ ಯು ಗೋ ಆಂಡ್ ಪುಟ್‌' ಅಂತಾರೆ.
-ಅವಳಿಗೆ ಐದು ಭಾಷೆಯಲ್ಲ, ಇನ್ನೂ ಐವತ್ತು ಭಾಷೆ ಬರಲಿ ಒಳ್ಳೇದೆ. ನನಗೆ ಗೊತ್ತಿರೋ ಮಟ್ಟಿಗೆ ಅವಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆ ಬರೋದು. ಆದರೆ ಜನರ ಸಮಸ್ಯೆ ಮೊದ್ಲು ತಿಳ್ಕೋಬೇಕು. ಆದರೂ ನಾನು ಮಂಡ್ಯದಲ್ಲಿ ರಮ್ಯಾ ಅವರ ಪರವಾಗಿ ಪ್ರಚಾರ ನಡೆಸುತ್ತೇನೆ. ಶನಿವಾರ ಪ್ರಚಾರ ಮಾಡ್ತೇನೆ. ಅವಳನ್ನು ಗೆಲ್ಲಿಸುವುದು ನನ್ನ ಕರ್ತವ್ಯ.
-ಗೀತಾ ಶಿವರಾಜ್‌ಕುಮಾರ್ ರಾಜಕುಮಾರ್ ಕುಟುಂಬದವರಾಗುವುದಕ್ಕೆ ಮೊದಲು ಬಂಗಾರಪ್ಪನವರ ಮಗಳು. ಆ ಕ್ಷೇತ್ರದ ವಿಚಾರ ನನಗೆ ಗೊತ್ತಿಲ್ಲ.
-ರಮ್ಯಾನ ಎಂಪಿ ಮಾಡಿದ್ದೇ ನಾನು. ಕಳೆದ ಬಾರಿ ರಮ್ಯಾ ಬದಲು ಶ್ರೀರಂಗಪಟ್ಟಣದ ಸಚ್ಚಿದಾನಂದನನ್ನು ನಿಲ್ಲಿಸಿದ್ದರೂ ಗೆಲ್ಲುತ್ತಿದ್ದ. ಆತನಿಗೆ ಎಲ್ಲ ರೀತಿಯ ಸಾಮರ್ಥ್ಯ ಇದೆ. ಆದರೆ ಈ ಬಾರಿ ನಾಮಪತ್ರ ಸಲ್ಲಿಸುವಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೇ ಆಮಂತ್ರಿಸಿಲ್ಲ. ಕೆಲವರಿಗೆ ಇದೆಲ್ಲ ಗೊತ್ತಾಗುವುದಿಲ್ಲ.
-ನನಗೆ ಎಲ್ಲ ಪಕ್ಷದ ರಾಜಕಾರಣಿಗಳ ಜತೆ ಸಂಬಂಧ ಚೆನ್ನಾಗಿದೆ. ಕ್ಯಾಪ್ಟನ್ ಗೋಪಿನಾಥ್ ಜತೆ ಇದ್ದಾಗ ಒಮ್ಮೆ, ನಾನು ಹದಿನೈದು ಮುಖ್ಯಮಂತ್ರಿಗಳ ಬೆಡ್ ರೂಂನಲ್ಲಿ ಕಾಫಿ ಕುಡಿದಿದ್ದೇನೆ. ಆದರೆ ನನಗೆ ಸಿಎಂ ಆಗುವ ಆಸೆ ಇಲ್ಲ ಎಂದಿದ್ದೆ.
-ನನಗೆ ಬೇರೆಯವರ ಒಳ್ಳೆಯ-ಕೆಟ್ಟ ವಿಚಾರ ಎರಡೂ ಗೊತ್ತು. ಆದರೆ ನಾನು ಒಳ್ಳೆ ವಿಚಾರ ಮಾತ್ರ ಮಾತನಾಡುತ್ತೇನೆ. ಕೆಟ್ಟದು ಮಾತನಾಡಬೇಕು ಅಂತ ನಿರ್ಧಾರ ಮಾಡಿದರೆ ಒಂದು ವರ್ಷ ಮಾತನಾಡಬಲ್ಲೆ.
-ಚಿಕ್ಕ ಖಳನಾಯಕನಾಗಿ ಸಿನಿಮಾಕ್ಕೆ ಬಂದ ನಾನು ಅಭಿಮಾನಿಗಳ ಪ್ರೀತಿ-ವಿಶ್ವಾಸದಿಂದ ಈ ಮಟ್ಟಕ್ಕೆ ಬೆಳೆದೆ. ಕಾಂಗ್ರೆಸ್‌ನ ಆಶೀರ್ವಾದದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವನಾಗಿದ್ದೇನೆ. ನಾನು ವಸತಿ ಸಚಿವ ಆದರೆ ರಿಯಲ್ ಎಸ್ಟೇಟ್ ಬಗ್ಗೆ ಗೊತ್ತಿಲ್ಲ.

ನನ್ನ ಹೆಂಡ್ತಿ ಬರ್ಲಿ, ಇರಿ...
ನನ್ನ ಹೆಂಡ್ತಿ ಬರ್ಲಿ ಒಂದ್ ನಿಮಿಷ. ಪಾಪ ಅವಳು (ಸುಮಲತಾ ), ಎಷ್ಟೆಲ್ಲ ಕಷ್ಟ ಪಟ್ಟಿದ್ದಾಳೆ. ಸಾಮಾನ್ಯವಾಗಿ ನಾನೇ ಲೇಟು. ಆದರೆ ಈ ಬಾರಿ ಅವಳೇ ಲೇಟ್. ಈಗ್ಲೇ ಒಂದು ಮಾತು ಹೇಳ್ತಿನಿ. ಇಲ್ಲ ಅಂದರೆ ನೀವು ನನ್ನ ಬಗ್ಗೆ ಹೇಳೇ ಇಲ್ಲ ಅಂತಾಳೆ ಎಂದು ಅಂಬರೀಷ್, ಪತ್ನಿ ಸುಮಲತಾ ಅವರನ್ನು ನೆನಸಿಕೊಂಡರು. ಪತ್ರಿಕಾಗೋಷ್ಠಿ ಮಧ್ಯದಲ್ಲಿ ಸುಮಲತಾ ಆಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.