ಪ್ರಧಾನ ಸುದ್ದಿ

ಮಾದರಿ ಮತಗಟ್ಟೆ ಮತದಾರರ ಭಾಗ್ಯ

ಮಾದರಿ ಮತಗಟ್ಟೆ ಮತದಾರರ ಭಾಗ್ಯ
Published On :

-ಸೋಮರಡ್ಡಿ ಅಳವಂಡಿ
ಕೊಪ್ಪಳ:
ಇಲ್ಲಿ ಅಚ್ಚುಕಟ್ಟಾದ ಕೊಠಡಿ ನಿಮ್ಮನ್ನು ಸೆಳೆಯುತ್ತದೆ. ಏರ್ ಕೂಲರ್ ವ್ಯವಸ್ಥೆ ಆಹ್ಲಾದ ತರುತ್ತದೆ. ಬಾಗಿಲಲ್ಲೇ ಅಲಂಕಾರ, ಸ್ವಾಗತ, ಕುಡಿಯಲು ತಂಪು ಪಾನೀಯ ಸಿಗುತ್ತವೆ. ವಾಪಸ್ ಧನ್ಯವಾದ ಹೇಳಿ, ಅಭಿನಂದನ ಪತ್ರವನ್ನೂ ಕೊಡುತ್ತಾರೆ.
ಇದೇನೂ ಕಲ್ಯಾಣ ಮಂಟಪದ ವರ್ಣನೆಯಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲೋಕಸಭೆ ಚುನಾವಣೆಗೆ ಸಿದ್ಧಗೊಂಡಿರುವ ಮಾದರಿ ಮತಗಟ್ಟೆಯ ಸೌಲಭ್ಯಗಳಿವು. ಮತಗಟ್ಟೆ ಎಂದರೆ ಹೀಗಿರಬೇಕು ಎನ್ನುವ ಕಲ್ಪನೆಯನ್ನೇ ಸಾಕಾರ ಮಾಡಿರುವ ಜಿಲ್ಲಾಡಳಿತದ ಶ್ರಮವಿದು. ಕೊಪ್ಪಳ ಸಮೀಪದ ಭಾಗ್ಯನಗರ ಗ್ರಾಪಂನಲ್ಲಿರುವ ಮಾದರಿ ಮತಗಟ್ಟೆಯ ಸ್ವರೂಪ ಹೀಗಿದೆ.
ಗ್ರಾಪಂ ಇಚ್ಛಾಶಕ್ತಿಯಿಂದ ಇಂಥ ಮಾದರಿ ಮತಗಟ್ಟೆ ನಿರ್ಮಿಸಲಾಗಿದೆ. ಇದರ ಉಸ್ತುವಾರಿಯನ್ನು ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ನೋಡಿಕೊಳ್ಳುತ್ತಿದೆ. ಹೀಗೆ ಮಾಡಬೇಕು ಎನ್ನುವ ನಿರ್ದೇಶನ ಇಲ್ಲದೇ ಇದ್ದರೂ ಮತದಾರರು ನೆಮ್ಮದಿಯಿಂದ ಮತ ಚಲಾಯಿಸುವಂತಾಗಬೇಕು ಎಂದು ಈ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯ ಮತಗಟ್ಟೆ ಹೀಗೂ ಇರಬಹುದು ಎನ್ನುವ ಯೋಚನೆ ರೋಮಾಂಚನ ಮೂಡಿಸುವಂತಿದೆ.
ಇಲ್ಲಿ ಎಲ್ಲವೂ ಶಿಸ್ತುಬದ್ಧ. ಉರಿಬಿಸಿಲಿನ ಪರಿತಾಪ ಕಮ್ಮಿ ಮಾಡಲು ಏರ್ ಕೂಲರ್ ಇದೆ. ಸಿಬ್ಬಂದಿಯೂ ಬೆವರಿಳಿಸುತ್ತಾ ಕೆಲಸ ಮಾಡುವ ಸಂಭವ ಇಲ್ಲ. ದೇಶದ ಇತಿಹಾಸದಲ್ಲೇ ಇಂಥ ಮತಗಟ್ಟೆ ಇದೇ ಮೊದಲಿರಬೇಕು.
ಮತದಾನ ಮಾಡಲು ಬಂದವರು ಬಿಸಿಲಿನಲ್ಲಿ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಪೆಂಡಾಲ್ ಹಾಕಲಾಗಿದೆ. ಸರದಿಯಲ್ಲಿ ನಿಂತು ಸುಸ್ತಾದವರಿಗೆ ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಇದೆ. ಹಿರಿಯ ಅಧಿಕಾರಿ ಹೇಳುವ ಪ್ರಕಾರ, ಗ್ರಾಪಂ ಮಟ್ಟದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಇಂಥ ಮಾದರಿ ಮತಗಟ್ಟೆ ನಿರ್ಮಿಸಲಾಗಿದೆ. ಇಂಥ ಅಚ್ಚುಕಟ್ಟಾದ ವ್ಯವಸ್ಥೆ ನೋಡುತ್ತಿರುವುದೂ ಇದೇ ಮೊದಲಂತೆ.

ಮದುವೆ ಮನೆ ಮತಗಟ್ಟೆ
ಗುಳೇದಗುಡ್ಡ:
ಕಾಲೇಜಿನ ಕೋಣೆಯ ಎದುರು ಭರ್ಜರಿ ಪೆಂಡಾಲ್, ನೆಲಹಾಸಿಗೆ ಹೊಚ್ಚ ಹೊಸ ಮ್ಯಾಟು, ಸೊಗಸಾದ ಆಸನದ ವ್ಯವಸ್ಥೆ. ಹವಾನಿಯಂತ್ರಿತ ಸೌಲಭ್ಯ, ಎತ್ತರದ ಫ್ಯಾನ್ (ಪೆಡಸ್ಟ್ರಿಯಲ್), ಶುದ್ಧ ನೀರಿನ ಸೌಲಭ್ಯ. ರಂಗೋಲಿಯ ಸ್ವಾಗತ. ನೋಡಿದರೆ ಮದುವೆ ಮನೆಯಂತೆ ಕಾಣುತ್ತೆ. ಆದರೆ ಅದು ಮತಗಟ್ಟೆ ಎಂದು. ಹೀಗೆ ಮಾಡಿದ್ದು ಇಲ್ಲಿನ ಬಂಡಾರಿ ಕಾಲೇಜಿನಲ್ಲಿ. ಜೊತೆಯಲ್ಲಿ ಶೌಚಾಲಯ, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ, ನೆರಳಿನ ಸೌಲಭ್ಯ ಎಲ್ಲವೂ ಇದೆ. ಎಲ್ಲರೂ ಮತದಾನ ಮಾಡಬೇಕೆಂಬ ಉದ್ದೇ ಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದು ಮಾದರಿ ಮತಗಟ್ಟೆಯಾಗಿದೆ ಎಂದು ಮುಖ್ಯಾಧಿಕಾರಿ ವಿ.ಎಂ. ರಾಯ್ಕರ್ ತಿಳಿಸಿದ್ದಾರೆ.

ಪ್ರೇರಣೆಯಾಗಲಿ...
ಮತಗಟ್ಟೆಗಳು ಅಚ್ಚುಕಟ್ಟಾಗಿ ಇರಲಿ. ಇದನ್ನು ಮಾದರಿ ಮತಗಟ್ಟೆಯನ್ನಾಗಿ ಮಾಡಿದರೆ ಮುಂದೆ ಇತರರಿಗೂ ಪ್ರೇರಣೆ ಆಗುತ್ತದೆ ಎಂದು ಹೀಗೆ ಮಾಡಿದ್ದೇವೆ. ಇಲ್ಲಿ ನಮಗೆ ಅಷ್ಟಾಗಿ ಹಣ ಖರ್ಚಾಗಿಲ್ಲ. ಗ್ರಾಪಂನನಲ್ಲಿರುವ ಸೌಕರ್ಯಗಳಲ್ಲೇ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮತದಾನ ಮಾಡಿದವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಭಿನಂದನಾ ಪತ್ರ ನೀಡುತ್ತಿದ್ದೇವೆ.
-ಜಂಬಣ್ಣ ನಂದ್ಯಾಪುರಪಿಡಿಒ, ಭಾಗ್ಯನಗರ ಗ್ರಾಪಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.