ಧ್ರುವೀಕರಣ ಕಷ್ಟ ಅಸ್ಪಷ್ಟ
ಕ.ಪ್ರ.ವಾರ್ತೆ| ಚಾಮರಾಜನಗರ|ಏ.23
10 ವರ್ಷಗಳ ಹಿಂದೆ 2004ರ ಸಂತೇಮರಹಳ್ಳಿ ವಿಧಾನಸಭೆ ಚುನಾವಣೆಯಲ್ಲಿ ಒಂದು ಮತದ ಅಂತರದ ದಾಖಲೆ ಬರೆದ ಧ್ರುವನಾರಾಯಣ ಮತ್ತು ಎ.ಆರ್. ಕೃಷ್ಣಮೂರ್ತಿ ಜೋಡಿ ನಡುವೆ ಗಡಿ ಚಾಮರಾಜನಗರ ಮೀಸಲು ಕ್ಷೇತ್ರದ ಗದ್ದುಗೆಗಾಗಿ ಮತ್ತೆ ತೀವ್ರ ಪೈಪೋಟಿ ನಡೆದಿದೆ.
ಕಳೆದ 2008ರ ವಿಧಾನಸಬೆ ಚುನಾವಣೆ ಬಳಿಕ ಚಾಮರಾಜನಗರ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತ ಬಂದಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಸಚಿವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ ಲೀಡ್ನಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತ ಬಂದಿದ್ದರು. ಚುನಾವಣೆ ಕಾವು ಏರುತ್ತಲೇ ಬಿಜೆಪಿ ಚೇತರಿಸಿಕೊಳ್ಳುತ್ತ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಧ್ರುವನಾರಾಯಣ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ಅವರನ್ನು ಕೇವಲ 4002 ಮತಗಳ ಅಂತರದಿಂದ ಸೋಲಿಸಿದ್ದರು. ಆಗ 8ಕ್ಕೆ 8 ಕಾಂಗ್ರೆಸ್ ಶಾಸಕರೇ ಇದ್ದರೂ, ಅವರ ಕೈ ಹಿಡಿದಿದ್ದು ವರುಣಾ, ಟಿ. ನರಸೀಪುರ, ಹನೂರು, ಎಚ್.ಡಿ. ಕೋಟೆ ಮಾತ್ರ. ಈ ಬಾರಿ ಟಿ. ನರಸೀಪುರ ಕೈ ಕೊಡುವ ಸಾಧ್ಯತೆ ಇದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಪೂರಕವಾಗಿವೆ.
ಅದರಲ್ಲೂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ಅತಿ ಹೆಚ್ಚು ಲೀಡ್ ತಂದು ಕೊಡುತ್ತದೆ ಎಂಬ ನಿರೀಕ್ಷೆಯಿದೆ. ಕುರುಬ, ಉಪ್ಪಾರ, ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಾಲಾಗಿವೆ. ಧ್ರುವನಾರಾಯಣ ಉತ್ತಮ ಸಂಸದ ಎಂದು ಹೆಸರು ಪಡೆದಿರುವುದರ ಜೊತೆಗೆ ಎಂಟು ವಿಧಾನಸಭೆ ಕ್ಷೇತ್ರಗಳ ಪರಿಚಯ ಹೊಂದಿರುವುದು. ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ, ಮೂವರು ಸಚಿವರು ಹಾಗೂ ಮೂವರು ಕಾಂಗ್ರೆಸ್ ಶಾಸಕರಿರುವುದು ಅವರ ಗೆಲವಿಗೆ ಪ್ಲಸ್ ಪಾಯಿಂಟ್ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಈ ಬಾರಿ ಕೊನೆಯ ಸ್ಪರ್ಧೆ ಎಂದು ಘೋಷಣೆ ಮಾಡಿರುವುದು ಹಾಗೂ ಮಾಜಿ ರಾಜ್ಯಪಾಲ ಬಿ. ರಾಚಯ್ಯ ಅವರ ಕುಟುಂಬ ಉಳಿಸಿಕೊಳ್ಳೋಣ ಎಂಬ ಭಾವನೆ ದಲಿತರಲ್ಲಿ ಬಂದಿರುವುದರಿಂದ ಹಾಗೂ ದಲಿತರಿಗೆ ಕಾಂಗ್ರೆಸ್ ಸಿಎಂ ಪಟ್ಟ ನೀಡಿಲ್ಲ ಎಂಬ ಆರೋಪ ಇಲ್ಲಿ ಸ್ವಲ್ಪ ಮಟ್ಟಿಗೆ ಕೆಲಸ ಮಾಡಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ದಲಿತ ಮತಗಳು ಬರುವ ಸಾಧ್ಯತೆ ಇದೆ.
ಇನ್ನೂ ಈ ಭಾಗದ ವೀರಶೈವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಾ ಬಂದಿರುವದು, ಶ್ರೀರಾಮುಲು ಸ್ವಲ್ಪ ಮಟ್ಟಿಗೆ ಪ್ರಭಾವ ಹೊಂದಿರುವುದರಿಂದ ವೀರಶೈವರು ಮತ್ತು ನಾಯಕರ ಜೊತೆಗೆ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ದಲಿತರ ಮತಗಳು ಸೇರಿದಂತೆ ಇತರೆ ವರ್ಗದ ಮತಗಳ ಜೊತೆ ಮೋದಿ ಅಲೆ ಹಾಗೂ ಶೇ.72.81ರಷ್ಟು ಮತದಾನ ಆಗಿರುವುದು ಜಯ ತಂದು ಕೊಡುತ್ತದೆ ಎಂಬ ಲೆಕ್ಕಾಚಾರ ನಡೆದಿದೆ.
ಕಳೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರಿಗೆ ಹೆಚ್ಚಿನ ಲೀಡ್ ತಂದುಕೊಟ್ಟಿದ್ದ ಚಾಮರಾಜನಗರ ಜೊತೆಗೆ ಕೊಳ್ಳೇಗಾಲದಲ್ಲಿ ಬಿಜೆಪಿಗೆ ಲೀಡ್ ಬರುವ ಸಾಧ್ಯತೆ ಇದೆ.
ನಂಜನಗೂಡು, ಗುಂಡ್ಲುಪೇಟೆ, ಟಿ. ನರಸೀಪುರ ಸಮ ಬಲ ಅಥವಾ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಲೀಡ್ ತಂದು ಕೊಡಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಒಂದು ವೇಳೆ ಲೆಕ್ಕಾಚಾರ ಸರಿಯಾಗಿ, ವರುಣಾದಲ್ಲಿ ಕಾಂಗ್ರೆಸ್ಗೆ ಬರುವಷ್ಟೇ ಲೀಡ್ ಚಾಮರಾಜನಗರದಲ್ಲಿ ಬಿಜೆಪಿಗೆ ಬಂದರೆ ಮಾತ್ರ ಬಿಜೆಪಿ ಲೆಕ್ಕ ಪಕ್ಕ ಆಗುತ್ತದೆ.
ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

