ಪ್ರಧಾನ ಸುದ್ದಿ

ಕಾಂಗ್ರೆಸ್ ಗೂಡಿನತ್ತ ಜೆಡಿಎಸ್ ಜೇನುಗಳು

ಕಾಂಗ್ರೆಸ್ ಗೂಡಿನತ್ತ ಜೆಡಿಎಸ್ ಜೇನುಗಳು
Published On :

ಬೆಂಗಳೂರು: ಜೆಡಿಎಸ್ ನ 15ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ಸಿನತ್ತ ಬಿರುಸಿನ ಹೆಜ್ಜಿ ಹಾಕಿರುವ ಅನುಮಾನ ದೃಢಪಟ್ಟಿದೆ.ಪಕ್ಷದ ನಿಷ್ಠಾವಂತರ ಸಮಾವೇಶದಲ್ಲಿಯೂ ಸಾಕಷ್ಟು ಶಾಸಕರು ಗೈರುಹಾಜರಾಗಿರುವುದನ್ನು ಗಮನಿಸಿದರೆ ಪಕ್ಷಕ್ಕೆ ನಿಷ್ಠೆ ಎಷ್ಟಿದೆ ಎಂಬುದು ಅರಿವಾಗುತ್ತದೆ.ಪಕ್ಷದ ಉಪಚುನಾವಣೆಯ ಕಾವು ಮುಗಿದ ಕೂಡಲೇ, ಜೆಡಿಎಸ್ ಶಾಸಕರ ಸ್ವಾಗತಕ್ಕೆ ಸೂಕ್ತ ವೇದಿಕೆಯೂ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಂ ಶಾಸಕರು, ಮುಖಂಡರು ಸಮಾವೇಶದಿಂದಲೇ ದೂರು ಉಳಿದು ಬಹಿರಂಗವಾಗಿಯೇ ತಮ್ಮ ನಿಲುವು ಸ್ವಷ್ಟಪಡಿಸಿದ್ದರು. ಇದರ ಬೆನ್ನಲ್ಲೇ, ಒಂದು ಕಾಲು ಕಾಂಗ್ರೆಸ್‌ನೆಡೆಗೆ ಇರಿಸಿದ್ದ ಮತ್ತಷ್ಟು ಶಾಸಕರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ. ಶಾಸಕರಾದ ಜಮೀರ್ ಅಹ್ಮದ್ ಹಾಗೂ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಈ ಬಗ್ಗೆ ಮಾತುಕತೆ ಆರಂಭವಾಗಿದೆ.

ಕಾಂಗ್ರೆಸ್ ಸೇರುವ ಬಗ್ಗೆ ಹಾಗೂ ಬರುವ ಶಾಸಕರಿಗೆ ಅಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಮತ್ತೆ ಚುನಾವಣೆ ಎದುರಾದರೆ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆಗಳೂ ಎದುರಾಗಿವೆ. ಇದಕ್ಕೆ ಪಕ್ಷವನ್ನೇ ವಿಲೀನಗೊಳಿಸಿದರೆ ಹೇಗೆ ಎಂಬ ಯೋಚನೆಯೂ ನಡೆಯುತ್ತಿದೆ. 40 ಶಾಸಕರಲ್ಲಿ 27 ಮಂದಿ ಕಾಂಗ್ರೆಸ್‌ಗೆ ಹೋದರೆ ಪಕ್ಷಾಂತರ ನಿಷೇಧಕಾಯಿದೆಯೂ ಅನ್ವಯವಾಗುದಿಲ್ಲ. ರಾಷ್ಟ್ರಾಧ್ಯಕ್ಷರು, ರಾಜ್ಯಧ್ಯಕ್ಷರೂ ಏನೂ ಮಾಡಲಾಗದು. ಇಂತಹ ಲೆಕ್ಕಾಚಾರದೊಂದಿಗೆ ಜೆಡಿಎಸ್‌ನ 10ಕ್ಕೂ ಹೆಚ್ಚು ಶಾಸಕರು ಇಬ್ಬರು ಮುಸ್ಲಿಂ ಶಾಸಕರೊಂದಿಗೆ ಗಹನ ಚರ್ಚೆ ನಡೆಸಿದ್ದಾರೆ. ಈ ಹಿಂದೆ 2006ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಬೇಡ ಎಂದು ದೇವೇಗೌಡರು ಹೇಳಿದಾಗ ಬಹುತೇಕ ಎಲ್ಲ ಶಾಸಕರೂ ಒಮ್ಮೆಲೆ ಒಂದೇ ನಿಲುವು ತೆಗೆದುಕೊಂಡು ಮೈತ್ರಿ ಮಾಡಿಕೊಂಡಿಯೇ ಬಿಟ್ಟರು.

ಆಗ ಇವರೆನ್ನಲ್ಲ ಪಕ್ಷ ವಿರೋಧಿ ಚಟುವಟಿಕೆ ಆಧಾರದಲ್ಲಿ ಆಚೆ ಹಾಕಲೂ ಸಾಧ್ಯವಾಗದೆ, ಶಾಸಕತ್ವ ಅಸಿಂಧುಗೊಳಿಸುವ ನಿರ್ಣಯವನ್ನೂ ತೆಗೆದುಕೊಳ್ಳಲು ಸಾಧ್ಯವಾಗದೇ ಗೌಡರು ಮೂಕರಾಗಿದ್ದರು. ಅದೇ ದಾಳವನ್ನು ಈ ಬಾರಿ ಅಪ್ಪ ದೇವೇಗೌಡ, ಮಗ ಕುಮಾರಸ್ವಾಮಿ ಇಬ್ಬರ ಮೇಲೆ ಉರುಳಿಸಲು ಜೆಡಿಎಸ್ ಶಾಸಕರು ಸಜ್ಜಾಗಿದ್ದಾರೆ. ಬಿಜೆಪಿ  ಮೈತ್ರಿ ಸಂದರ್ಭದಲ್ಲಿ  ಪ್ರಮುಖ ಪಾತ್ರವಹಿಸಿದ್ದ ಎಚ್.ಡಿ.ಕೆಯ ಒಂದು ಕಾಲದ ಆತ್ಮೀಯ ಸ್ನೇಹಿತರಾದ ಜಮೀರ್ ಅಹಮದ್ ಹಾಗೂ ಚೆಲುವರಾಯಸ್ವಾಮಿ ಅವರೇ ಈ ಬಾರಿ ಲೀಡ್ ತೆಗೆದುಕೊಂಡಿದ್ದಾರೆ. ಅದಕ್ಕೇ ಈಗಾಗಲೇ ಹಲವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕ್ಷೇತ್ರಗಳಿಗಾಗಿ ಶಾಸಕರು, ಸಿಎಂ ಭೇಟಿ ಮಾಡುವುದು ಸಹಜ ಎಂದರೂ ಅದರ ಹಿಂದಿನ ಸಂಚೇ ಬೇರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಎಲ್ಲದಕ್ಕೂ ಪುಷ್ಟಿಯೆಂಬಂತೆ ಸಿದ್ದರಾಮಯ್ಯ ಕೂಡ ಜಮೀರ್ ಹಾಗೂ ಚೆಲುವರಾಯಸ್ವಾಮಿ ಭೇಟಿ ಮಾಡಿದ್ದು ನಿಜ. ಆದರೆ ಪಕ್ಷ ಒಡೆಯಲ್ಲ ಎಂದಿದ್ದಾರೆ. ಕೆಲವು ಶಾಸಕರು ದೇವೇಗೌಡರ ದಾಕ್ಷೀಣ್ಯಕ್ಕಾಗಿ ಪಕ್ಷದಲ್ಲೇ ಉಳಿಯುವ ಮಾತನಾಡುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರವಾಗುತ್ತಿದ್ದಂತೆಯೇ ಯಾವ ದಾಕ್ಷೀಣ್ಯವೂ ಉಳಿಯುವುದಿಲ್ಲ. ದೇವೇಗೌಡರ ದತ್ತುಪುತ್ರ ಎಂದೇ ಬಿಂಬಿತವಾಗಿದ್ದ ವೈಎಸ್‌ವಿ ದತ್ತ ಕೂಡ ಪಕ್ಷದ ಇತ್ತೀಚಿನ ನಿಲುವುಗಳ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕುಮಾರಸ್ವಾಮಿ ಏಕ ವ್ಯಕ್ತಿಯಾಗಿ ತಮಗೇ ಅನುಕೂಲವಾಗುವ ರೀತಿಯಲ್ಲಿ ಪಕ್ಷ ತೀರ್ಮಾನ ತೆಗೆದುಕೊಳ್ಳುವುದು ದತ್ತ ಸೇರಿದಂತೆ ಬಹುತೇಕ ಶಾಸಕರಿಗೆ ಬೇಸರ ತರಿಸಿದೆ. ಎಚ್.ಡಿ.ರೇವಣ್ಣ ಕೂಡ ಈ ವಿಷಯದಲ್ಲಿ ಕುಮಾರಸ್ವಾಮಿ ವಿರುದ್ಧ ಅಪ್ಪನ ಬಳಿ ದೂರು ನೀಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಜೆಡಿಎಸ್‌ನಿಂದ ಹೊರಗೋಗಲು ಸುಮಾರು 15 ಶಾಸಕರು ತಯಾರಾಗಿ ನಿಂತಿದ್ದಾರೆ. ಇದರೆ ಸಂಖ್ಯೆ ಹೆಚ್ಚಿದ್ದರೂ ಅಚ್ಚರಿಯಿಲ್ಲ.

ಪಕ್ಷದಲ್ಲಿ ಏಕತೆ ಇಲ್ಲದೆ ಗೌಡರ ಹತಾಶೆ
ಬೆಂಗಳೂರು:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹತಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ಗೌಡರು ಆರೋಪಿಸಿದ ರೀತಿ ಜೆಡಿಎಸ್ ಒಡೆಯುವ ಕೆಲಸ ಮಾಡುತ್ತಿಲ್ಲ. ಶಾಸಕರಾದ ಜಮೀರ್ ಅಹ್ಮದ್ ಹಾಗೂ ಚೆಲುವರಾಯಸ್ವಾಮಿ ನನ್ನನ್ನು ಭೇಟಿ ಮಾಡಿದ್ದು ನಿಜ. ಅವರು ತಮ್ಮ ಕ್ಷೇತ್ರದ ಕೆಲಸದ ಬಗ್ಗೆ ಮಾತನಾಡಲು ಬಂದಿದ್ದರು. ಶಾಸಕರು ಮುಖ್ಯಮಂತ್ರಿ ಭೇಟಿಯಾದರೆ ಅದು ಪಕ್ಷ ಒಡೆಯುವ ಕೆಲಸವಾಗುತ್ತದೆಯೇ? ಎಂದರು.

ಪಕ್ಷದ ಸಮಾವೇಶದಲ್ಲಿ ಗೌಡರು ಹೇಳಿದ ಮಾತಿನಿಂದ ಅವರ ಪಕ್ಷದಲ್ಲಿ ಎಲ್ಲ ಸರಿ ಇಲ್ಲ ಎಂಬುಗು ಸ್ಪಷ್ಟವಾಗಿದೆ. ಇದರಿಂದ ಹತಾಶರಾಗಿರುವ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್‌ನ ಯಾವೊಬ್ಬ ಶಾಸಕನೂ ನನ್ನ ಬಳಿ ಬಂದು  ಪಕ್ಷ ಸೇರುತ್ತೇನೆ ಎಂದು ಹೇಳಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಲು ಬಂದಿದ್ದರು. ನಾನು ಮೊದಲಿನಿಂದಲೂ ಯಾವುದೇ ಪಕ್ಷ ಒಡೆಯಬಾರದೆಂಬ ಧೋರಣೆಯ ವ್ಯಕ್ತಿ ಎಂದರು.

ಉಪಚುನಾವಣೆಯಲ್ಲಿ ಸಹಾಯ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕರು ನನ್ನ ಬಳಿ ಬಂದಿರಲಿಲ್ಲ. ನಾನೂ ಯಾರನ್ನೂ ಪಕ್ಷ ಸೇರಿ ಎಂದು ಕೇಳಿಲ್ಲ. ಗೌಡರ ಮಾತಿನ ಹಿಂದೆ ಹತಾಶೆ ಎದ್ದು ಕಾಣುತ್ತಿದೆ. ಪಕ್ಷದಲ್ಲಿ ಒಗ್ಗಟ್ಟಿಲ್ಲದ್ದರಿಂದ ಭಯಗೊಂಡು ಇಂಥ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.