ಪ್ರಧಾನ ಸುದ್ದಿ

ಮೋದಿ-ಅನಂತಮೂರ್ತಿ: ದೇಶ ಬಿಡಲಿಲ್ಲ, ದೇಹ ಬಿಟ್ಟರು

ಮೋದಿ-ಅನಂತಮೂರ್ತಿ: ದೇಶ ಬಿಡಲಿಲ್ಲ, ದೇಹ ಬಿಟ್ಟರು
Published On :

ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿರಲು ಇಚ್ಛಿಸುವುದಿಲ್ಲ ಎಂದು ಹೇಳಿದ 342 ದಿನಗಳ ನಂತರ ಅನಂತಮೂರ್ತಿಯವರು ಲೋಕವನ್ನೆ ಅಗಲಿ ಹೋಗಿದ್ದು ದುರಂತ, 2013ರ ಸೆ.15 ರಂದು ಬರಗೂರು ರಾಮಚಂದ್ರಪ್ಪ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ಬಳಿಕ ಸಾಕಷ್ಟು ಸ್ಪಷ್ಟನೆ ನೀಡಿದರೂ ವಿವಾದ ತಾರಕಕ್ಕೇರಿದಾಗ ಮತ್ತೆ ಸಮರ್ಥಿಸಿಕೊಳ್ಳು ಪ್ರಯತ್ನ ಮಾಡಿದ್ದರು.

ನಮೋ ಬ್ರಿಗೇಡ್‌ನಿಂದ ವಿಮಾನ ಟಿಕೆಟ್
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್‌ನಿಂದ ಕರಾಚಿಗೆ ವಿಮಾನ ಟಿಕೆಟ್ ಕಳುಹಿಸಿ ಕೊಡಲಾಗಿತ್ತು. ಆದರೆ ಮೋದಿ ಪ್ರಧಾನಿಯಾದ ಬಳಿಕ ಶುಭ ಹಾರೈಸಿ, ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಈ ಸಾಧನೆ ಖುಷಿ ನೀಡಿದೆ ಎಂದಿದ್ದರು. ಮನೆಯಲ್ಲಿ ಕಿರಿಯರ ಮೇಲ ಸಿಟ್ಟು ಬಂದಾಗ ಹಿರಿಯಜ್ಞ 'ನಾನು ಮನೆಬಿಟ್ಟು ಹೋಗುತ್ತೇನೆ' ಎಂದು ಎದ್ದು ಹೋಗುವುದು ಸಹಜ. ಅದರರ್ಥ ಆತ ಮನೆ ಬಿಟ್ಟು ಹೋಗುತ್ತಾನೆ ಎಂದಲ್ಲ. ನನ್ನ ಹೇಳಿಕೆಯೂ ಇದೆ ಅರ್ಥದಲ್ಲಿತ್ತು ಎಂದಿದ್ದರು.

ಮನೆ ಮಾರಿ ಮೇಲೂ ನೀರಿನ ಬಿಲ್ ಬಂದಿತ್ತು!
ಅನಂತಮೂರ್ತಿ ಅವರು ಮೈಸೂರಿನ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿದ್ದ ಮನೆ ಮಾರಾಟ ಮಾಡಿದ್ದರು. ಆದರೆ, ಅದನ್ನು ಖರೀದಿಸಿದ್ದವರು ನೀರಿನ ಕಂದಾಯ ಪಾವತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರಲಿಲ್ಲ. ಹೀಗಾಗಿ ಅನಂತಮೂರ್ತಿ ಅವರ ಹೆಸರಿಗೆ ಬಾರೀ ಮೊತ್ತದ ಬಿಲ್ ಬಂದಿತ್ತು. ಆಗ ಅವರು ಪಾಲಿಕೆಯ ಕಾರ್ಯ ವೈಖರಿ ಬಗ್ಗೆ ತಮಾಷೆ ಮಾಡಿದ್ದರು.

ತೋಟದ ಮೇಲಿನ ಪ್ರೀತಿ
ಪ್ರೊ.ಯು.ಆರ್.ಅನಂತಮೂರ್ತಿ ಅವರಿಗೆ ತೋಟದ ಮೇಲೆ ಹೆಚ್ಚು ಪ್ರೀತಿ, ಮೈಸೂರಿನಿಂದ 25ಕಿ.ಮೀ. ದೂರದ ಆಲನಹಳ್ಳಿ ಬಳಿಯ ಜಾಲಪ್ಪನ ಕೆರೆ ಏರಿಯ ಮೇಲಿನ ತೋಟದ ಮೇಲೆ ಬಲು ಪ್ರೀತಿ. ಮೈಸೂರಿನಿಂದ ಗದ್ದಿಗೆಗೆ ತೆರಳುವ ಮಾರ್ಗದಲ್ಲಿ ಸಿಗುವ ಆಲನಹಳ್ಳಿಗೂ ಒಂದು ಫರ್ಲಾಂಗ್‌ಗೂ ಮುನ್ನ ಸಿಗುವ ಜಾಲಪ್ಪನ ಕೆರೆಯ ಎದುರಿನ ತೋಟದ ಮನೆಯ ಗೇಟಿನಲ್ಲಿ ಈಗಲೂ ಯು.ಆರ್.ಅನಂತಮೂರ್ತಿ ಎಂಬ ಬೋರ್ಡ್ ಇದೆ. ಪ್ರಕೃತಿ ಪ್ರೇಮ ಮತ್ತು ಏಕಾಂತ ಬಯಸಿದಾಗಲೆಲ್ಲ ಅನಂತಮೂರ್ತಿ ತೆರಳುತ್ತಿದ್ದದ್ದು ಆಲನಹಳ್ಳಿಗೆ. ಮೈಸೂರಿನಲ್ಲಿದ್ದ ಅನಂತಮೂರ್ತಿ ಅವರ ನಿವಾಸ ಈಗ ಮಾರಾಟವಾಗಿದೆ. ಅಲ್ಲಿ ವಾಣಿಜ್ಯ ಸಂಕೀರ್ಣ ತಲೆ ಎತ್ತಿದೆ. ಆದರೆ, ಅವರು ಇಟ್ಟಿದ್ದ ಅನಂತ ಹೆಜ್ಜೆಗಳು ಜೀವಂತವಾಗಿವೆ.

ಸ್ನೇಹಿತರ ವಲಯ
ಪ್ರೋ.ವಿ.ಕೆ.ನಟರಾಜ್, ಪ್ರೊ.ಕೆ.ಎಂ. ಚಂದರ್, ಪ್ರೊ.ದಾಮೋದರ್. ಪ್ರೊ.ಕೆ.ಸಿ.ಬೆಳ್ಳಿಯಪ್ಪ ಹಾಗೂ ಅನಂತಮೂರ್ತಿ ಜೊತೆಗೋದಿದವರು. ಈ ಪೈಕಿ ಪ್ರೊ.ಬೆಳ್ಳಿಯಪ್ಪ ರಾಜೀವ್‌ಗಾಂಧಿ ಕೇಂದ್ರೀಯ ವಿವಿಯ ಕುಲಪತಿಯಾಗಿದ್ದರು. ಪ್ರೋ.ವಿ.ಕೆ.ನಟರಾಜ್ ಮದ್ರಾಸ್ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿದ್ದರು.

ಆಧುನಿಕ ಮನಸ್ಸಿನ ಅಪ್ಪ
ಅನಂತಮೂರ್ತಿಯ ಅಪ್ಪ ರಾಜಗೋಪಾಲಚಾರ್ ಆಧುನಿಕತೆಯನ್ನು ಮೈಗೂಡಿಸಿಕೊಂಡವರು. ಸದಾ ಇಂಗ್ಲಿಷ್‌ನಲ್ಲಿಯೇ ಸಹಿ ಮಾಡುತ್ತಿದ್ದ ಅವರು ತಮ್ಮ ಹೆಸರನ್ನು 'ಯು.ಪಿ.ರಾಜಗೋಪಾಲಚಾರ್‌' ಎಂದು ಬರೆಯುತ್ತದ್ದರೇ ಹೊರತು ರಾಜಗೋಪಾಲಾಚಾರ್ಯವೆಂದರಲ್ಲ. ಸಂಪ್ರದಾಯದಂತೆ ಯುಆರ್‌ಎ ಹೆಸರು ಅನಂತಮೂರ್ತಿ ಆಚಾರ್ಯ ಎಂದಾಗ ಬೇಕಿತ್ತು. ಆದರೆ ಅವರಪ್ಪ ಅದನ್ನು ಬೇಡವೆಂದಿದ್ದರು. ಶಾಲೆಗೆ ಹೋಗದೇ ಜ್ಞಾನ ಸಂಪಾದಿಸಿದ್ದ ತಂದೆಯಿಂದ ಇಂಗ್ಲಿಷ್ ಸಾಹಿತ್ಯ ಮೂರ್ತಿಗೆ ಹೆಚ್ಚು ಆಪ್ತವಾಯಿತು. ಅವರು ಶಾನುಭೋಗರಾಗಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಮೂರ್ತಿ ಬಾಲ್ಯವನ್ನು ವಿವಿಧ ಹಳ್ಳಿಗಳಲ್ಲಿ ಕಳೆದರು.

ಅವರಪ್ಪನ ಆಸೆಯಂತೆ ಅನಂತಮೂರ್ತಿ ಗಣಿತ ಕಲಿಯಬೇಕಿತ್ತು. ಆದರೆ, ಸಾಹಿತ್ಯ ಓದುತ್ತೇನೆಂದಾಗ ಬೇಡವೆನ್ನದೆ ಬೆನ್ನು ತಟ್ಟಿದವರು ತಂದೆಯೇ. ಅವರಪ್ಪ ಸತ್ತಾಗಿನ ವಿವರಣೆಯನ್ನು ಒಂದು ಡೈರಿಯಲ್ಲಿ ಬರೆದಿಟ್ಟಿದ್ದು ಹೀಗೆ.....'ಅಪ್ಪನ ತೆರೆದುಕೊಂಡಿದ್ದ ಬಾಯಿಂದ ಸಡಿಲವಾಗಿ ಹೊರಬಂದ ಕೃತಕ ಹಲ್ಲುಗಳನ್ನು ಕಳಚಿಟ್ಟೆ. ಅಮ್ಮ ಚೀರಿದಳು, ತಲೆ ಚಚ್ಚಿಕೊಂಡಳು, ಬಾವಿಗೆ ಹಾರಲು ಓಡಿದಳು. ನೆಲದ ಮೇಲೆ ಮಲಗಿಸಿ, ತುದಿಬುಡಗಳಲ್ಲಿ ಕಾಯಿಹೋಳುಗಳಲ್ಲಿ ದೀಪ ಹತ್ತಿಸಿ, ಪುರೋಹಿತರಿಗಾಗಿ ಕಾದೆವು. ಅಳುತ್ತಿದ್ದ ಅಮ್ಮ ನಾನು ಜನಿವಾರ ಹಾಕಿಕೊಂಡಿದ್ದೇನೋ ಇಲ್ಲವೋ ಎಂದು ಗುಟ್ಟಾಗಿ ಅಕ್ಕಯ್ಯನನ್ನು ಕೇಳಿದಳಂತೆ.

ಪುರೋಹಿತರು ಬರುವ ಮುಂಚೆ ನಾನು ಬಚ್ಚಲಿಗೆ ಹೋಗಿ ಯಾರೋ ಒಬ್ಬರ ಹಳೆ ಜನಿವಾರವನ್ನು ಹಾಕಿಕೊಂಡೆ. ಅಕ್ಕಯ್ಯ ಗುಟ್ಟಾಗಿ ನನ್ನನ್ನು ಕೊಟ್ಟಿಗೆಗೆ ಕರೆದು 'ಜನಿವಾರ ಇದೆಯೇನೋ ಅನಂತು' ಎಂದು ಕೇಳಿ, ನಾನು 'ಇಲ್ಲ' ಅಂದ ಮೇಲೆ ಮನೆಯಿಂದ ಹೊಸ ಜನಿವಾರ ತಂದು ಅದನ್ನು ಮಣ್ಣಲ್ಲಿ ಅದ್ದಿ ಒರೆಸಿ ಹಿಂಡಿ ನಾನು ಹಾಕಿಕೊಂಡದ್ದು, ಆದರೆ ನಮ್ಮ ಕುಲಪುರೋಹಿತರು ನಾನು ಅಪ್ಪನ ಸಂಸ್ಕಾರ ಮಾಡುವುದೆಂದು ತಿಳಿದು ಬರಲಿಲ್ಲ. ಇನ್ನೊಬ್ಬರನ್ನು ನನ್ನಮ್ಮ ಅವರ ಸಮಯಪ್ರಜ್ಞೆಯಿಂದ ಕರೆಸಿದರು'.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.