ಪ್ರಧಾನ ಸುದ್ದಿ

ಭಾರತದ 'ಬುಲೆಟ್‌' ರೈಲಿಗೆ ಜಪಾನ್ ಬಂಡವಾಳ

ಭಾರತದ 'ಬುಲೆಟ್‌' ರೈಲಿಗೆ ಜಪಾನ್ ಬಂಡವಾಳ
Published On :

ಸ್ಮಾರ್ಟ್‌ಸಿಟಿ ನಿರ್ಮಾಣ ಯೋಜನೆಗೆ ಜಪಾನ್ ಆರ್ಥಿಕ ಮತ್ತು ತಾಂತ್ರಿಕ ನೆರವು
ಭಾರತದಲ್ಲಿ 2 ಲಕ್ಷ ಕೋಟಿ ಹೂಡಿಕೆಗೆ ಜಪಾನ್ ಅಸ್ತು
ಟೋಕಿಯೋ:
ಸ್ಮಾರ್ಟ್ ಸಿಟಿ ಮತ್ತು ಬುಲೆಟ್ ರೈಲು ಯೊಜನೆಗಳು ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಭಾರತದಲ್ಲಿ 2 ಲಕ್ಷ ಕೋಟಿ ಹೂಡಿಕೆ ಮಾಡಲು ಜಪಾನ್ ಸರ್ಕಾರ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 5 ದಿನಗಳ ಜಪಾನ್ ಪ್ರವಾಸ ಬಹುತೇಕ ಯಶಸ್ಸು ಕಂಡಿದ್ದು, ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಬುಲೆಟ್ ರೈಲು ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಜಪಾನ್ ಸರ್ಕಾರ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ.

ಸುಮಾರು 2 ಲಕ್ಷ ಕೋಟಿ ಬಂಡವಾಳ ಹೂಡಲು ಜಪಾನ್ ಸರ್ಕಾರ ಒಪ್ಪಿಗೆ ನೀಡಿದ್ದು, ಸ್ಮಾರ್ಟ್ ಸಿಟಿ ನಿರ್ಮಾಣ, ಬುಲೆಟ್ ರೈಲು ಯೋಜನೆ ಸೇರಿದಂತೆ ವಿವಿಧ ಮೂಲಸೌಕರ್ಯಗಳಿಗೆ ಒತ್ತು ನೀಡಲು ಬಂಡವಾಳ ಹೂಡಲು ಜಪಾನ್ ನಿರ್ಧರಿಸಿದೆ.

ಸಾರ್ವಜನಿಕ ಸಹಭಾಗಿತ್ವದಲ್ಲಿ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ಬಂಡವಾಳ ಹೂಡುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಜಪಾನ್ ದೇಶಗಳು ಸಹಿ ಹಾಕಿವೆ. ಇವಿಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಬಂಡವಾಳ ಹೂಡಲು ತಾವು ಉತ್ಸುಕವಾಗಿರುವುದಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ತಿಳಿಸಿದ್ದಾರೆ.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಜಪಾನ್ ದೇಶದೊಂದಿಗೆ ಉತ್ತಮ ಬಾಂಧ್ಯವ್ಯ ಬೆಳೆಸಲು ಭಾರತ ಬಯಸುತ್ತದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ನಾನು ಮೊದಲಿನಿಂದಲೂ ಚೆನ್ನಾಗಿ ಬಲ್ಲೆ. ನನ್ನ ಮತ್ತು ಶಿಂಜೋ ಅಬೆ ಸಂಬಂಧ ತುಂಬಾ ಹಳೆಯದು. ಶಿಂಜೋ ಅಬೆ ನನ್ನ ಸ್ನೇಹಿತ. ನಾವು ವಿಶ್ವದಲ್ಲೇ ಪ್ರಭಾವಶಾಲಿ ಸಂಬಂಧ ನಿಭಾಯಿಸುತ್ತೇವೆ' ಎಂದು ಹೇಳಿದರು.

ಬಳಿಕ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, 'ಭಾರತದೊಂದಿಗಿನ ಬಾಂಧವ್ಯ ವೃದ್ಧಿಗೆ ಜಪಾನ್ ಸದಾ ಸಿದ್ದವಿದೆ. ಜಪಾನ್ ದೇಶದೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದು ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆ. ನಾವು ಕೂಡ ಅದಕ್ಕೆ ಸಿದ್ಧರಿದ್ದೇವೆ. ನಮ್ಮ ಈ ಚರ್ಚೆಯಲ್ಲಿ ರಾಜಕೀಯ, ಆರ್ಥಿಕತೆ, ವಾಣಿಜ್ಯ, ಉಧ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಮೂಲಸೌಕರ್ಯ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಬುಲೆಟ್ ರೈಲು ಓಡಿಸುವ ಸಲುವಾಗಿ ಭಾರತಕ್ಕೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ನಾವು ಸಿದ್ಧರಿದ್ದೇವೆ' ಎಂದು ಅವರು ತಿಳಿಸಿದರು.

ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರ 5 ದಿನಗಳ ಜಪಾನ್ ಪ್ರವಾಸ ಬಹುತೇಕ ಯಶಸ್ವಿಯಾಗಿದ್ದು, ಭಾರತದಲ್ಲಿ ಬಂಡವಾಳ ಹೂಡುವಂತೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಒಲಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದಾರೆ.

ಕೇವಲ ಸ್ಮಾರ್ಟ್ ಸಿಟಿ ಮತ್ತು ಬುಲೆಟ್ ರೈಲು ಯೋಜನೆಗಳಷ್ಟೇ ಅಲ್ಲದೆ ರಕ್ಷಣಾ ಕ್ಷೇತ್ರದಲ್ಲಿ ಕೊಡುಕೊಳ್ಳುವಿಕೆ, ಮೂಲಕ ಸೌಕರ್ಯ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನಗಳ ತಾಂತ್ರಿಕ ಮಾಹಿತಿ ವಿನಿಮಯಗಳಂತಹ ಪ್ರಮುಖ ಒಪ್ಪಂದಕ್ಕೆ ಉಭಯ ದೇಶದ ಪ್ರಧಾನಿಗಳು ಪರಸ್ಪರ ಒಪ್ಪಿಗೆ ಮೇರೆಗೆ ಸಹಿ ಹಾಕಿದ್ದಾರೆ.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಗಂಗಾನದಿ ಶುದ್ದೀಕರಣ ಯೋಜನೆಗೂ ಜಪಾನ್ ನೆರವು ಪಡೆಯುವಲ್ಲಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದು, ಗಂಗಾನದಿ ಶುದ್ದೀಕರಣಕ್ಕೆ ಜಪಾನ್ ಸಕಲ ನೆರವು ನೀಡಲು ಮುಂದೆ ಬಂದಿದೆ.

ಆದರೆ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದ ನಾಗರೀಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಪ್ರಧಾನಿಗಳು ಕೈಗೊಂಡಿರಬಹುದಾದ ನಿರ್ಣಯಗಳ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳ ಪ್ರಕಾರ ನಾಗರೀಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಪ್ರತಿನಿಧಿಗಳ ಮಾತುಕತೆ ಚುರುಕುಗೊಂಡಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.