

ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿನ ಸೇನಾ ಶಾಲೆಯೊಳಗೆ ಒತ್ತೆಯಾಳುಗಳಾಗಿದ್ದ ಮಕ್ಕಳ ರಕ್ಷಣೆಗಾಗಿ ನಡೆಸಿದ ಸೇನಾ ಕಾರ್ಯಾಚರಣೆ ಇದೀಗ ಅಂತ್ಯಗೊಂಡಿದೆ.
ಪ್ರಸ್ತುತ ಶಾಲೆಯಲ್ಲಿ ಸೇನೆ 7 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಒತ್ತೆಯಾಳುಗಳಾಗಿದ್ದ ಮಕ್ಕಳನ್ನು ಮತ್ತು ಶಿಕ್ಷಕರನ್ನು ರಕ್ಷಿಸಲಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ
ಮಂಗಳವಾರ ಮಧ್ಯಾಹ್ನ ಶಾಲೆಗೆ ನುಗ್ಗಿದ ತೆಹ್ರೀಕ್ ಎ ತಾಲೀಬಾನ್ ಸಂಘಟನೆಯ ಉಗ್ರರು ನಡೆಸಿದ ದಾಳಿಯಲ್ಲಿ ಒಟ್ಟು 132 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 124ಕ್ಕೇರಿದ್ದು, 250 ಮಂದಿಗೆ ಗಾಯಗಳಾಗಿವೆ.
ಶಾಲೆಗೆ ನುಗ್ಗಿದ 6 ಉಗ್ರರು 1,500ಕ್ಕಿಂತಲೂ ಹೆಚ್ಚು ಮಕ್ಕಳು ಮತ್ತು ಶಿಕ್ಷರನ್ನು ಒತ್ತೆಯಾಳುಗಳಾಗಿರಿಸಿದ್ದರು. ಮಕ್ಕಳ ಮೇಲೆ ಉಗ್ರಾವತಾರ ತೋರಿದ ಇವರು ಶಾಲೆಯಲ್ಲಿ ಮಕ್ಕಳ ಮಾರಣಹೋಮ ಮಾಡಿ ಮೆರೆದಿದ್ದಾರೆ. ಯಾವುದೇ ಕನಿಕರವಿಲ್ಲದೆ ಮಕ್ಕಳ ಮೇಲೆ ಗುಂಡು ಹಾರಿಸಿದ ಉಗ್ರರು 12-16ರ ವಯಸ್ಸಿನ ಮಕ್ಕಳ ಮೇಲೆಯೇ ಗುಂಡಿನ ಸುರಿಮಳೆಗೆರೆದಿದ್ದಾರೆ. ಮಕ್ಕಳ ಎದೆ ಹಾಗೂ ತಲೆಗೆ ಗುಂಡು ಹಾರಿಸಿ, ಓಡುತ್ತಿದ್ದ ಮಕ್ಕಳನ್ನೂ ಬಿಡದೆ ತಮ್ಮ ಪೈಶಾಚಿಕ ಅವತಾರವನ್ನು ತೋರಿದ್ದು, ಮಕ್ಕಳ ಎದುರಲ್ಲೇ ಶಿಕ್ಷಕರನ್ನು ಹತ್ಯೆಗೈದಿದ್ದಾರೆ.
ಪಾಕ್ ಸೇನಾಪಡೆ ನಡೆಸಿದ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ 6ನೇ ಉಗ್ರನನ್ನು ಸೈನಿಕರು ಸದೆಬಡಿದಿದ್ದಾರೆ. ಓರ್ವ ಉಗ್ರ ತನ್ನನ್ನು ತಾನೇ ಸ್ಫೋಟಿಸಿಕೊಂಡು ಹತನಾಗಿದ್ದಾನೆ.
ಪೇಶಾವರದಲ್ಲಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ 3 ದಿನದ ಶೋಕಾಚರಣೆ ಆಚರಿಸಲಾಗುವುದು. ಅದೇ ವೇಳೆ ಪಾಕ್ ಪ್ರಧಾನಿ ನಾಳೆ ಬೆಳಗ್ಗೆ 11ಗಂಟೆಗೆ ಸಂಸದೀಯ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.