ಪ್ರಧಾನ ಸುದ್ದಿ

ಚುನಾವಣೆ ಬೆನ್ನತ್ತುವ ಜನಪ್ರಿಯ ಬಜೆಟ್

ಚುನಾವಣೆ ಬೆನ್ನತ್ತುವ ಜನಪ್ರಿಯ ಬಜೆಟ್
Published On :

ಇಂದು ಮಧ್ಯಾಹ್ನ 12.30ಕ್ಕೆ ರಾಜ್ಯ ಬಜೆಟ್ ಮಂಡನೆ
ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗಿ 2ನೇ ಒಟ್ಟಾರೆ 9ನೇ ಮುಂಗಡಪತ್ರ

ಬಜೆಟ್ ಭಾಷಣದಲ್ಲಿ ಅಂಕಿ-ಅಂಶಗಳ ಜತೆಗೆ ಕಾವ್ಯ- ವಚನಗಳ ತುಣುಕು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್  ನಿರೀಕ್ಷೆ

ಬೆಂಗಳೂರು: ಸಂಪನ್ಮೂಲ ಸಂಗ್ರಹಣೆಗೆ ಇಂಬು ನೀಡುವ ಅಂಶಗಳನ್ನು ಒಳಗೊಂಡ ಚುನಾವಣೆ ಪೂರ್ವ ಜನಪ್ರಿಯ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ನದ್ಧರಾಗಿದ್ದಾರೆ.
ಪ್ರೇಮಿಗಳ ದಿನದಂದು (ಫೆಬ್ರವರಿ 14) ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ತಮ್ಮ ಬಜೆಟ್ ಮಂಡಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಇದು ಅವರಿಗೆ ಎರಡನೇಯ, ಒಟ್ಟಾರೆಯಾಗಿ ಒಂಬತ್ತನೇಯ ಮುಂಗಡಪತ್ರ. ಈ ಮೂಲಕ ರಾಜ್ಯದ ಅತಿ ಹೆಚ್ಚು ಬಜೆಟ್ ಮಂಡಿಸಿದ ವ್ಯಕ್ತಿ ಎಂಬ ದಾಖಲೆಯನ್ನೂ ಅವರು ಬರೆಯಲಿದ್ದಾರೆ.
ರೇಸ್‌ಕೋರ್ಸ್ ರಸ್ತೆಯಲ್ಲಿರುವ 'ಶಕ್ತಿ ಭವನ'ದಲ್ಲಿ ಕಳೆದ ಹದಿನೈದು ದಿನಗಳಿಂದ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದ ಅವರು, ಚಿಂತನ-ಮಂಥನ ಪ್ರಕ್ರಿಯೆಯನ್ನು ಬುಧವಾರ ಮಧ್ಯಾಹ್ನ ಅಂತಿಮಗೊಳಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಗಳಲ್ಲಿ ಪ್ರಕಟವಾಗುವ ಬಜೆಟ್ ಪುಸ್ತಕದ ಕರಡು ತಿದ್ದುವಿಕೆ, ವಾಕ್ಯ ಮತ್ತು ವ್ಯಾಕರಣ ದೋಷಗಳಾದಿಯಾಗಿ ಪ್ರತಿಯೊಂದು ವಿಚಾರಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ಅಂಕಿ-ಅಂಶಗಳ ಜತೆಗೆ ಕಾವ್ಯ- ವಚನಗಳ ತುಣುಕು ಮೇಳೈಸಲಿದೆ ಎಂದು ಮುಖ್ಯಮಂತ್ರಿಗಳ ಬಜೆಟ್ ಸಿದ್ಧತಾ ತಂಡದ ಮೂಲಗಳು ತಿಳಿಸಿವೆ.
ಉಭಯ ಆದ್ಯತೆ: ಸಿದ್ದರಾಮಯ್ಯನವರಿಗೆ ಈ ಬಾರಿಯ ಬಜೆಟ್ ಎರಡು ದೃಷ್ಟಿಯಿಂದ ಸವಾಲು. ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ನೀಡಲೇಬೇಕಾದ ಅನಿವಾರ್ಯವಿದೆ. ಆದರೆ ಕಳೆದ ಆಯವ್ಯಯದಲ್ಲಿ ಅಹಿಂದ ವರ್ಗಕ್ಕೆ ಹೆಚ್ಚು ಆದ್ಯತೆ ನೀಡಿದ್ದರು ಎಂಬ ಆರೋಪವಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಜತೆಗೆ ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ ನೀಡುವ ಸವಾಲೂ ಇದೆ. ಓಲೈಕೆ ಮತ್ತು ಸಮಾಧಾನ ಪಡಿಸುವ ಕೆಲಸವನ್ನು ಅವರು ಮಾಡಬೇಕಿದೆ. ಇದರ ಜತೆಗೆ ತೆರಿಗೆ ಸಂಗ್ರಹಣೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಬೇಕಿದೆ.

ಡಿಸೆಂಬರ್‌ವರೆಗಿನ ಅವಧಿಯಲ್ಲಿ ತೆರಿಗೆ ಸಂಗ್ರಹ ದರ ಕಳೆದ ಸರ್ಕಾರದ ಅವಧಿಗಿಂತ ಹೆಚ್ಚಿದೆಯಾದರೂ ಯೋಜನೇತರ ವೆಚ್ಚ ಹೆಚ್ಚಾಗಿರುವುದರಿಂದ ಕೆಲ ಕ್ಷೇತ್ರಗಳಲ್ಲಿ ಶೇ. 50ಕ್ಕಿಂತ ಕಡಿಮೆ ಇದೆ ಎಂದು ಸಿಎಜಿ ವರದಿ ಹೇಳಿದೆ. ಇದರಿಂದಾಗಿ ತೆರಿಗೆ ಸಂಗ್ರಹ-ಸಂಪನ್ಮೂಲ ಕ್ರೋಢೀಕರಣ ಹಾಗೂ ಜನಪ್ರಿಯತೆ ಎಂಬ 'ಉಭಯ ಆದ್ಯತೆ'ಗಳಿಗೆ ಒತ್ತು ನೀಡಬೇಕಾಗಿದೆ.
ಮೂಲಗಳ ಪ್ರಕಾರ ಈ ಬಾರಿ ಮೂಲಸೌಕರ್ಯ, ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಸಿಎಂ ಒತ್ತು ನೀಡಲು ನಿರ್ಧರಿಸಿದ್ದಾರೆ. ಕಳೆದ ಬಾರಿ ಔದ್ಯಮಿಕ ವಲಯಕ್ಕೆ ಹೆಚ್ಚು ಕರಭಾರದ ಬಿಸಿ ತಟ್ಟಿರುವುದರಿಂದ ಈ ಬಾರಿ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರಕರ್ತರಿಗೆ ಆರೋಗ್ಯ ವಿಮೆ: ಪತ್ರಕರ್ತರ ಪಿಂಚಣಿ ಮೊತ್ತವನ್ನು ರು. 3000 ದಿಂದ ರು. 6000 ಕ್ಕೆ ಹೆಚ್ಚಿಸಲು ಅವರು ನಿರ್ಧರಿಸಿದ್ದಾರೆ. ಜತೆಗೆ ಆರೋಗ್ಯ ವಿಮಾ ಸೌಲಭ್ಯವನ್ನು ಪತ್ರಕರ್ತರಿಗೆ ವಿಸ್ತರಿಸಲು ನಿರ್ಧರಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ 'ಭಾಗ್ಯ ಸರಣಿ'ಯ ಇನ್ನಷ್ಟು ಕಾರ್ಯಕ್ರಮಗಳು ಈ ಬಾರಿಯೂ ಘೋಷಣೆಯಾಗುವ ಸಾಧ್ಯತೆಯಿದೆ. ಎಲ್ಲ ಬಡವರಿಗೂ 'ಶಾದಿಭಾಗ್ಯ' ವಿಸ್ತರಣೆ, ಹನಿನೀರಾವರಿ, ಸೋಲಾರ್ ಪಂಪ್‌ಸೆಟ್‌ಗಳಿಗೆ ಶೇ.18ರಷ್ಟು ಸಬ್ಸಿಡಿ ಮುಂತಾದ ಕೊಡುಗೆಗಳು ಸಿಗುವ ನಿರೀಕ್ಷೆಯಿದೆ. ಇದರ ಜತೆಗೆ ವ್ಯಾಟ್ ಸಂಗ್ರಹದಲ್ಲಿ ಕೊಂಚ ಉದಾರತೆ ಕಾಣಿಸಬಹುದು. ಪಂಚಾಯತ್ ರಾಜ್ ಇಲಾಖೆ ಆಶ್ರಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ-ಸ್ನಾನಗೃಹ ಹಾಗೂ ಬಟ್ಟೆ ಒಗೆಯುವುದಕ್ಕೆ ಕಟ್ಟಡ ನಿರ್ಮಿಸಿ ಕೊಡಲು ವಿಶೇಷ ಅನುದಾನ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ರೈತರ ಒಲೈಕೆಗೂ ಒತ್ತು: ರೈತರ ಒಲೈಕೆಗೂ ಒತ್ತು ನೀಡಲಿದ್ದು, ಬಡ್ಡಿ ರಹಿತ ಸಾಲದ ಪ್ರಮಾಣವನ್ನು ರು. 1ಲಕ್ಷದಿಂದ ರು. 3ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆಯನ್ನು ಪರಿಷ್ಕರಿಸುವುದಕ್ಕೆ ನಿರ್ಧರಿಸಿದ್ದು, ಹಿಂದೆ ಈ ಯೋಜನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಬಾಂಡ್ ಸೌಲಭ್ಯ ದೊರಕುತಿತ್ತು. ಆದರೆ ಅವಳಿ ಹೆಣ್ಣು ಮಕ್ಕಳಾದರೆ ಮೂರನೇ ಮಗುವಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಮೊದಲನೆಯ ಹೆಣ್ಣು ಮಗುವಿನ ಜತೆಗೆ ಅವಳಿ ಹೆಣ್ಣು ಜನಿಸಿದರೂ ಈ ಸೌಲಭ್ಯ ದೊರಕಲಿದೆ. ಮಾತ್ರವಲ್ಲ 2007ರಲ್ಲಿ ಯೋಜನೆ ಆರಂಭವಾದಾಗ ನೋಂದಣಿಯಾಗಿ ಈಗ ಶಾಲೆಗೆ ಸೇರಿರುವ ಮಕ್ಕಳ ಬಾಂಡ್ ನಂಬರ್‌ನ್ನು ಸಂಬಂಧಪಟ್ಟ ಶಾಲೆಗಳಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.
ವಿಶುಕುಮಾರ್‌ಗೆ 14ನೇ ಬಜೆಟ್: ಮುಖ್ಯಮಂತ್ರಿಗಳ ಬಜೆಟ್ ಸಿದ್ಧತೆಯ ಅಂತಿಮ ಕಾರ್ಯದಲ್ಲಿ ಸರ್ಕಾರದ 220 ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದರೆ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ 14ನೇ ಬಾರಿಗೆ ಬಜೆಟ್ ಸಿದ್ಧತೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಸಾಮಾನ್ಯವಾಗಿ ಪೂರ್ಣಗೊಂಡ ಬಜೆಟ್ ಕಡತವನ್ನು ಮಂಡನೆಯ ಹಿಂದಿನ ದಿನ ರಾತ್ರಿ 12 ಗಂಟೆ ನಂತರ ಮುದ್ರಣಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಮಧ್ಯಾಹ್ನವೇ ರಹಸ್ಯ ಸ್ಥಳಕ್ಕೆ ಮುದ್ರಣಕ್ಕಾಗಿ ಕಳುಹಿಸಲಾಗಿದೆ. ಕನ್ನಡ-ಇಂಗ್ಲಿಷ್ ಸೇರಿ 5000 ಪ್ರತಿಗಳು ಮುದ್ರಣಗೊಳ್ಳಲಿವೆ.

ಆರ್ಥಿಕ ಸಮೀಕ್ಷೆ ವರದಿಯೂ ಮಂಡನೆ
ಸಾಮಾನ್ಯವಾಗಿ ಬಜೆಟ್ ಮಂಡನೆಯ ಮೊದಲ ದಿನ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಕಟಿಸಲಾಗುತ್ತಿತ್ತು. ಆದರೆ ಈ ಬಾರಿ ಬಜೆಟ್ ದಿನವೇ ಪ್ರಕಟಿಸಲು ನಿರ್ಧರಿಸಲಾಗಿದೆ. ಗುರುವಾರ ಸಾಯಂಕಾಲದವರೆಗೂ ವರದಿ ಪ್ರಕಟವಾಗಿರಲಿಲ್ಲ. ಆದರೆ ಸಚಿವಾಲಯ ಮೂಲಗಳ ಪ್ರಕಾರ ಶುಕ್ರವಾರವೇ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.