ಪ್ರಧಾನ ಸುದ್ದಿ

ಕೈಗೆ ಸಿಗುತ್ತಾ ಚಿದು ಬಜೆಟ್ ಮತ ಲಾಭ?

ಕೈಗೆ ಸಿಗುತ್ತಾ ಚಿದು ಬಜೆಟ್ ಮತ ಲಾಭ?
Published On :

-ರೇಣುಕಾಪ್ರಸಾದ್ ಹಾಡ್ಯ
ನವದೆಹಲಿ:
ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಗಳ ಸಂಕೋಲೆಯಲ್ಲಿ ಸಿಲುಕಿರುವ ವಿತ್ತ ಸಚಿವ ಪಿ. ಚಿದಂಬರಂ ಸೋಮವಾರ ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ (ಲೇಖಾನುದಾನ) ಮಂಡಿಸಲಿದ್ದಾರೆ.
ಇದುವರೆಗೆ ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳು ನುಡಿದಿರುವ, ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ಹೀನಾಯ ಸೋಲು ಅನುಭವಿಸಲಿದೆ ಎಂಬ ಭವಿಷ್ಯವನ್ನು ಅದಲು ಬದಲು ಮಾಡುವ ಯಾವ ಮಂತ್ರದಂಡವೂ ಚಿದಂಬರಂ ಅವರ ಬಳಿ ಇಲ್ಲ. ಆದರೆ, ನೇರ ಮತದಾರರ ಜೇಬಿಗೆ ಅನುಕೂಲ ಆಗಬಹುದಾದ ಕೆಲವು ಜನಪರ ಘೋಷಣೆಗಳನ್ನು ಚಿದಂಬರಂ ಮಾಡುವ, ಆ ಮೂಲಕ ಮತ ಲಾಭ ನಿರೀಕ್ಷಿಸುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಗಳಲ್ಲಿ ಸೋಲು, ಭ್ರಷ್ಟಾಚಾರ, ಹಗರಣ, ದಿಕ್ಕೆಟ್ಟ ಆರ್ಥಿಕ ಸ್ಥಿತಿ, ಕೈ ಮೀರಿ ಹೋಗುತ್ತಿರುವ ಹಣದುಬ್ಬರ, ಕುಸಿದಿರುವ ರುಪಾಯಿ ಮೌಲ್ಯ, ಚೇತರಿಸಿಕೊಳ್ಳದ ಆರ್ಥಿಕತೆ, ದಶಕದಲ್ಲೇ ಅತಿ ಕೆಳಮಟ್ಟಕ್ಕೆ ಇಳಿದ ಅಭಿವೃದ್ಧಿ- ಈ ಎಲ್ಲಾ ಹೊರೆಗಳಿಂದ ನಲುಗಿ ಹೋಗಿರುವ ಯುಪಿಎ ಸರ್ಕಾರಕ್ಕೆ,  ಮುಖ್ಯವಾಗಿ ಕಾಂಗ್ರೆಸ್‌ಗೆ ಚಿದಂಬರಂ ಅವರು ಮಂಡಿಸಲಿರುವ ಮಧ್ಯಂತರ ಬಜೆಟ್ ನಿರ್ಣಾಯಕ. ಮತ ಲಾಭ ಪಡೆಯಲು ಈ ಮಧ್ಯಂತರ ಬಜೆಟ್ ಅನ್ನು ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದಂತಿದೆ.

ಮೇಲ್ನೋಟಕ್ಕೆ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಘೋಷಣೆಗಳಿರುವುದಿಲ್ಲ. ಅದು ಅನೂಚಾನವಾಗಿ ನಡೆದು ಬಂದಿರುವ ಸಂಪ್ರದಾಯ. ಆದರೆ, ಅಧಿಕಾರದ ಹಾಗೂ ಪಕ್ಷದ ಅಸ್ತಿತ್ವದ ಅಳಿವು- ಉಳಿವಿನ ಹಂತಕ್ಕೆ ತಲುಪಿರುವ ಕಾಂಗ್ರೆಸ್‌ನ ಒಳಿತಿಗಾಗಿ ಚಿದಂಬರಂ ಸಂಪ್ರದಾಯ ಮುರಿದರೆ ಅಚ್ಚರಿ ಏನಿಲ್ಲ. ಏಕೆಂದರೆ ಚುನಾವಣಾ ರಾಜಕೀಯದಲ್ಲಿ ಎಲ್ಲವೂ ಸಮ್ಮತವೇ.
ಕೈ ಹಿಡಿದ 2ಜಿ ಸ್ಪೆಕ್ಟ್ರಂ: ಚಿದಂಬರಂ ಅದೃಷ್ಟಕ್ಕೆ 2ಜಿ ಸ್ಪೆಕ್ಟ್ರಂ ಮಾರಾಟದಿಂದ ನಿರೀಕ್ಷೆ ಮೀರಿ ಆದಾಯ ಬಂದಿದೆ. ಸಾರ್ವಜನಿಕ ವಲಯದ ಕಂಪನಿಗಳು ನೀಡಿರುವ ಲಾಭಾಂಶ ಪ್ರಮಾಣವೂ ಹಿಗ್ಗಿದೆ. ಹೀಗಾಗಿ ವಿತ್ತೀಯ ಕೊರತೆ ಘೋಷಿತ ಪ್ರಮಾಣಕ್ಕಿಂತ ತಗ್ಗಲಿದೆ. ಚಿನ್ನದ ಮೇಲೆ ಹೇರಿದ ನಿಯಂತ್ರಣದಿಂದಾಗ ಚಾಲ್ತಿ ಖಾತೆ ಕೊರತೆಯ ಪ್ರಮಾಣವೂ ನಿಯಂತ್ರಣಕ್ಕೆ ಬಂದಿದೆ. ಇವುಗಳ ಜತೆಗೆ ಚಿದಂಬರಂ ಬಜೆಟ್ ಮಂಡನೆಯನ್ನು ದಶಕಗಳ ಸಾಧನೆಯನ್ನು ರಾಷ್ಟ್ರಕ್ಕೆ ವಿವರಿಸಲು ವೇದಿಕೆಯನ್ನಾಗಿ ಬಳಸಿಕೊಳ್ಳಬಹುದು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೈಗಾರಿಕಾ ಉತ್ಪನ್ನ ಕುಸಿತ ಕಂಡಿದೆ. ಇದೇ ಮೊದಲ ಬಾರಿಗೆ ಕಾರುಗಳ ಮಾರಾಟ ಶೇ.5ರಷ್ಟು ಕುಸಿದಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಮುನ್ನ ಶೇ.9ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸಿದ್ದ ರಾಷ್ಟ್ರ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.4.9ರಷ್ಟು ಮಾತ್ರ ಅಭಿವೃದ್ಧಿ ದಾಖಲಿಸುವ ಅಂದಾಜು ಇದೆ. ಚಿದಂಬರಂ ಆಶಾವಾದಿ. 2014-15ರ ವಿತ್ತೀಯ ವರ್ಷದಲ್ಲಿ ರಾಷ್ಟ್ರೀಯ ಒಟ್ಟು ಉತ್ಪನ್ನ (ಜಿಡಿಪಿ) ಬೆಳವಣಿಗೆಯನ್ನು ಶೇ.6ರಷ್ಟು, ವಿತ್ತೀಯ ಕೊರತೆಯನ್ನು ಶೇ.4.2ಕ್ಕೆ ಇಳಿಸುವ ಗುರಿಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ.

ಹಿಂದಿನ ಮಧ್ಯಾಂತರ ಬಜೆಟ್
2004-05
ಎನ್‌ಡಿಎ ಸರ್ಕಾರ
ವಿತ್ತ ಸಚಿವ- ಜಸ್ವಂತ್ ಸಿಂಗ್
ವಿತ್ತೀಯ ಕೊರತೆ ಅಂದಾಜು    ಶೇ.4.4
ವಾಸ್ತವಿಕ ಕೊರತೆ    ಶೇ.3.88
2009-10
ಯುಪಿಎ ಸರ್ಕಾರ
ವಿತ್ತ ಸಚಿವ- ಪ್ರಣಬ್ ಮುಖರ್ಜಿ
ವಿತ್ತೀಯ ಕೊರತೆ ಅಂದಾಜು    ಶೇ.5.5
ವಾಸ್ತವಿಕ ಕೊರತೆ     ಶೇ.6.46

ನಿರೀಕ್ಷೆ ಏನು?
ಮಧ್ಯಂತರ ಬಜೆಟ್ ಮಂಡಿಸುವವರು ತೆರಿಗೆಗಳ ತಂಟೆಗೆ ಹೋಗುವುದಿಲ್ಲ. ನೀತಿ ನಿಯಮ ಘೋಷಣೆಗೂ ಕೈ ಹಾಕುವುದಿಲ್ಲ. 3-4 ತಿಂಗಳುಗಳ ಯೋಜನಾ ವೆಚ್ಚಕ್ಕೆ ಸಂಸತ್ತಿನ ಅನುಮೋದನೆ ಪಡೆಯಲಾಗುತ್ತದೆ. ಉಳಿದ ಜವಾಬ್ದಾರಿಯನ್ನು ಹೊಸ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಆದರೆ, ಚಿದು ಈ ಎರಡನ್ನೂ ಮಾಡುವ ನಿರೀಕ್ಷೆ ಇದೆ. ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು. ಜತೆಗೆ ಘೋಷಿತ ಜನೋಪಯೋಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬಹುದು. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪಡಿತರ ಸಬ್ಸಿಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು. ಜತೆಗೆ ಚುನಾವಣೆಗೆ ಹೋಗುವ ಮುನ್ನ ದೇಶದ ಆರ್ಥಿಕ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ತೋರಿಸಿಕೊಳ್ಳಲು ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಪ್ರಮಾಣವನ್ನು ತಗ್ಗಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.