ಪ್ರಧಾನ ಸುದ್ದಿ

ಅಂಬಿ ಆರೋಗ್ಯ ಸ್ಥಿರ

ಅಂಬಿ ಆರೋಗ್ಯ ಸ್ಥಿರ
Published On :

ಬೆಂಗಳೂರು: ಹಿರಿಯ ನಟ, ವಸತಿ ಸಚಿವ ಅಂಬರೀಷ್ ಆರೋಗ್ಯ ಸ್ಥಿರವಾಗಿದ್ದು, ಅವರು ಆರೋಗ್ಯದ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪತ್ನಿ ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ.
ಅಂಬರೀಷ್ ಆರೋಗ್ಯದ ಬಗ್ಗೆ ಯಾವುದೇ ಗೊಂದಲ ಇಲ್ಲ. ಯಾರೂ ಆತಂಕ ಪಡುವ ಅಗತ್ಯವೂ ಇಲ್ಲ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಬೇಗ ಗುಣಮುಖರಾಗಲಿದ್ದಾರೆ. ಆದರೆ ಯಾರೂ ಸಾರ್ವಜನಿಕವಾಗಿಇಲ್ಲಸಲ್ಲದ ವದಂತಿ ಹರಡುವ ಕೆಲಸ ಮಾಡಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ವಿನಂತಿಸಿದರು.
ಅಂಬರೀಷ್ ಆರೋಗ್ಯದ ಬಗ್ಗೆ ಭಿನ್ನಭಿನ್ನವಾಗಿ ಮಾಹಿತಿ ರವಾನೆಯಾಗುತ್ತಿದೆ. ಇದರಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚುತ್ತಿದೆ. ಇದರಿಂದ ಎಲ್ಲರೂ ಗಾಬರಿ ಹೆಚ್ಚಾಗುತ್ತದೆ. ಆದ್ದರಿಂದ ವದಂತಿಯನ್ನು ಹರಡಬಾರದು. ಹಾಗೆಯೇ ಜನತೆ ಕೂಡ ವದಂತಿಗಳಿಗೆ ಕಿವಿಗೊಡಬಾರದು ಎಂದು ಸುಮಲತಾ ಮನವಿ ಮಾಡಿಕೊಂಡರು.      

ಅಂಬರೀಷ್ ಅವರು ಹಿಂದಿಗಿಂತಲೂ ಸುಧಾರಣೆಯಾಗುತ್ತಿದ್ದು, ವೈದ್ಯರು ಕೂಡ ಅಷ್ಟೇ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಅಪಾರ ಅಭಿಮಾನಿಗಳ ಆಶೀರ್ವಾದ ಅವರ ಮೇಲಿರುವುದರಿಂದ ಅವರು ಶೀಘ್ರವೇ ಗುಣಮುಖವಾಗಲಿದ್ದಾರೆ ಎಂದು ಹೇಳಿದರು.
ಡಾ. ಸತೀಶ್ ಹೇಳೋದೇನು ?: ಅಂಬರೀಷ್ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ನೀಡಲಾಗಿರುವ ಕೃತ ಉಸಿರಾಟದ ವ್ಯವಸ್ಥೆಯನ್ನು ಕಡಿಮೆಗೊಳಿಸುವ ಬಗ್ಗೆ ಸೋಮವಾರ ತೀರ್ಮಾನಿಸಲಾಗುವುದು ಎಂದು ವಿಕ್ರಂ ಆಸ್ಪತ್ರೆ ಹಿರಿಯ ವೈದ್ಯ ಡಾ.ಕೆ.ಎಸ್.ಸತೀಶ್ ತಿಳಿಸಿದ್ದಾರೆ.
ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರನ್ನು 10 ಮಂದಿ ತಜ್ಞ ವೈದ್ಯರು ಉಪಚರಿಸುತ್ತಿದ್ದು, ಕಾಲಕಾಲಕ್ಕೆ ಎಲ್ಲಾ ರೀತೀಯ ಔಷಧಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಅಂಬರೀಷ್ ಕೂಡ ಸ್ಪಂದಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ವಾರ್ಡ್‌ಗೆ ವರ್ಗಾಯಿಸುವ ಬಗ್ಗೆ ಚಿಂತಿಸಲಾಗುವುದು. ಆನಂತರ ಅವರು ವಾರ್ಡ್‌ನಲ್ಲಿ ಸುಧಾರಿಸಿಕೊಂಡರೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಕೈಗೊಳ್ಳಬಹುದು ಎಂದು ಅವರು ಪ್ರತಿಕ್ರಿಯಿಸಿದರು.
ಶ್ವಾಸಕೋಶದ ಸೋಂಕಿನಿಂದ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಾದ ಅವರಿಗೆ ತಕ್ಷಣ ಚಿಕಿತ್ಸೆ ಆರಂಭಿಸಲಾಗಿತ್ತು. ಕೃತಕ ಉಸಿರಾಟ ಕಲ್ಪಿಸಿ ಚಿಕಿತ್ಸೆ ನೀಡುತ್ತಿದ್ದಂತೆ ಅವರು ಸ್ಪಂದಿಸಿದರು. ಇದರಿಂದಾಗಿ ಕಳೆದ 24ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅಂಬರೀಷ್ ಅವರ ದೇಹದ ಎಲ್ಲ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದು, ಶ್ವಾಸಕೋಶಕ್ಕೆ ಮಾತ್ರ ಸೋಂಕು ತಗುಲಿದೆ. ಅಂದರೆ ಇದನ್ನು ಸ್ಲೀಪ್ ಅಮ್ನಿನಿಯಾ ಎನ್ನಲಾಗುತ್ತದೆ. ಇದು ಸಾಮಾನ್ಯ ಎಲ್ಲರಿಗೂ ಬರುವಂತ ಸಮಸ್ಯೆಯಾಗಿದ್ದು, ಹವಾಮಾನ ಬದಲಾಗುತ್ತಿದ್ದಂತೆ ಆರೋಗ್ಯ ಏರುಪೇರಾಗುತ್ತದೆ ಎಂದು ಡಾ.ಸತೀಶ್ ವಿವರಿಸಿದರು.
ಸಾಕಷ್ಟು ಸುಧಾರಣೆ ಆಗಿದೆ : ಅಂಬರೀಷ್ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಕಿಡ್ನಿ ಕಾರ್ಯ ಸಾಮರ್ಥ್ಯ 0.5ರಿಂದ 1.4ರ ಮಟ್ಟದಲ್ಲಿ ಇರಬೇಕಿತ್ತು. ಆದರೆ 2.4ಕ್ಕೆ ಏರಿತ್ತು. ಆದರೆ ಈಗ 1.8ಕ್ಕೆ ಇಳಿದಿದೆ. ಅಂದರೆ ಅವರ ಆರೋಗ್ಯ ಸುಧಾರಿಸುತ್ತಿದೆ. ಇದೇರೀತಿ ಅವರ ಹಿಮೋಗ್ಲೋಬಿನ್ ಪ್ರಮಾಣ ಮತ್ತು ಹೃದಯ ಬಡಿತ, ರಕ್ತದೊತ್ತಡ ಎಲ್ಲವೂ ಸಾಧಾರಣ ಸ್ಥಿತಿಯಲ್ಲಿದೆ ಎಂದು ಡಾ.ಸತೀಶ್ ತಿಳಿಸಿದರು. ಅಂಬರೀಷ್ ಅವರಿಗೆ ಈ ಚಿಕಿತ್ಸೆಯನ್ನು ಮನೆಯಲ್ಲೇ ನೀಡಬಹುದಿತ್ತು. ಆದರೆ, ಬೊಜ್ಜು ಇರುವ ಹಾಗೂ ಅಧಿಕ ತೂಕ ಇರುವವರಿಗೆ ಆ ಕಾಯಿಲೆ ಉಸಿರಾಟ ಸಮಸ್ಯೆ ಉಂಟು ಮಾಡುತ್ತದೆ. ಇಂಥ ಸಂದರ್ಭದಲ್ಲಿ ಮನೆಯಲ್ಲಿ ಕೃತಕ ಉಸಿರಾಟ ಕಲ್ಪಿಸಲು ಕಷ್ಟ ಎನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಅಂಬರೀಷ್ ಅವರೇನೂ ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಇಲ್ಲ. ಅವರು ಚೆನ್ನಾಗಿಯೇ ಇದ್ದಾರೆ. ಆದರೆ ವಿಶ್ರಾಂತಿ ಕಲ್ಪಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಆಸ್ಪತ್ರೆ ವೈದ್ಯರಾದ ಡಾ.ಸುಧೀರ್, ಡಾ.ರಘುನಂದನ್, ಡಾ.ರವೀಶ್, ಡಾ.ವಿಕ್ರಂ ಹಾಗೂ ಡಾ.ರಂಗನಾಥ ನಾಯಕ್ ಹಾಜರಿದ್ದರು.

ಆಸ್ಪತ್ರೆ ಬಳಿ ಜಾತ್ರೆ
ಅಂಬರೀಷ್ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಆತಂಕ ನಗರದ ವಿಕ್ರಂ ಆಸ್ಪತ್ರೆ ಬಳಿ ಜನಜಾತ್ರೆ ಸೃಷ್ಟಿಸಿದೆ. ಗಣ್ಯರು, ಕಲಾವಿದರು, ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ಅಂಬಿಯ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದಾರೆ. ಅವರ ಕುಟುಂಬದವರನ್ನೂ ವಿಚಾರಿಸಿ ಆತಂಕ ನಿವಾರಿಸಿಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಆಸ್ಪತ್ರೆ ಭೇಟಿ ನೀಡಿದರು. ನಂತರ ಹೊರಗೆ ಜಮಾಯಿಸಿದ್ದ ಮಾಧ್ಯಮಗಳ ಮುಂದೆ ಬಂದು ಆಸ್ಪತ್ರೆ ಒಳಗಿನ ಪರಿಸ್ಥಿತಿ ಹಂಚಿಕೊಂಡರು. ಅಲ್ಲದೆ, ಅಂಬರೀಷ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.ಹಾಗೆಯೇ ರಾಜಕೀಯ ನಾಯಕರಾದ ಪಿ.ಜಿ.ಆರ್.ಸಿಂಧ್ಯ, ಶಂಕರ ಬಿದರಿ, ಶೆಟ್ಟರ್, ಮಾಜಿ ಸಚಿವ ವಿ.ಸೋಮಣ್ಣ, ಬಿಎಸ್‌ಆರ್ ಪಕ್ಷದ ನಾಯಕ ಬಿ.ಶ್ರೀರಾಮಲು, ಬಸವರಾಜ ಬೊಮ್ಮಾಯಿ, ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಮಂದಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ತೆಲುಗು ಚಿತ್ರ ನಟ ಮೋಹನ್ ಬಾಬು, ಅವರ ಪುತ್ರ ವಿಷ್ಣು, ಕನ್ನಡ ಚಿತ್ರರಂಗದ ಕಲಾವಿದರಾದ ಉಪೇಂದ್ರ, ಶಶಿಕುಮಾರ್, ದರ್ಶನ್, ಕೆ.ಎಸ್.ಎಲ್.ಸ್ವಾಮಿ, ಸಾ.ರಾ.ಗೋವಿಂದು ಹಾಗೂ ನೂರಾರು ಕಿರುತೆರೆ ಕಲಾವಿದರು ಆಸ್ಪತ್ರೆಗೆ ತೆರಳಿ ಅಂಬರೀಷ್ ಆರೋಗ್ಯ ವಿಚಾರಿಸಿದರು.
ಅಂಬಿಗೆ ಹತ್ತು ಹಲವು ಹಾರೈಕೆ
ಅಂಬರೀಷ್ ಶೀಘ್ರ ಗುಣಮುಖರಾಗಲಿ ಎಂದು ಸಹಸ್ರಾರು ಅಭಿಮಾನಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ನಡೆಸುತ್ತಿರುವ ಪ್ರಾರ್ಥನೆ, ಹಾರೈಕೆ ಕೂಗು ಮುಗಿಲು ಮುಟ್ಟಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಅಂಬರೀಷ್ ಭಾವಚಿತ್ರದ ಫ್ಲೆಕ್ಸ್‌ಗಳನ್ನು ಹಾಕಿ ಪ್ರಾರ್ಥಿಸುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಕನ್ನಡ ಹೋರಾಟಗಾರರು ಮತ್ತು ಅಂಬಿ ಅಭಿಮಾನಿಗಳು ಸೇರಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಉರುಳು ಸೇವೆ ಮತ್ತು ಪ್ರಾರ್ಥನೆ ಮಾಡಿದರು.  ಬಸವನಗುಡಿ, ಮಲ್ಲೇಶ್ವರದ ಅನೇಕ ರಸ್ತೆಗಳಲ್ಲಿ ಅಂಬರೀಷ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಹಾರೈಸಿದರು. ಹಾಗೆಯೆ ವಿವಿಧ ದೇವಾಲಯಗಳಲ್ಲಿ ಅಭಿಮಾನಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಕೆಲವು ಕಡೆ ಹೋಮ ನಡೆಸಿದ್ದಾರೆ.
ನಗರಕ್ಕೆ ಅಭಿಷೇಕ್
ಅಂಬರೀಷ್ ಆರೋಗ್ಯ ಏರುಪೇರಾಗಿರುವ ಹಿನ್ನೆಲೆಯಲ್ಲಿ ಪುತ್ರ ಅಭಿಷೇಕ್ ಗೌಡ ಅವರು ನಗರದತ್ತ ಪ್ರಯಾಣ ಬೆಳೆಸಿದ್ದಾರೆ. ಲಂಡನ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಭಿಷೇಕ್ ತಂದೆ ಆರೋಗ್ಯದ ಮಾಹಿತಿ ನೀಡಲಾಗಿದ್ದು, ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ಬಂದು, ಆಸ್ಪತ್ರೆಗೆ ಆಗಮಿಸಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.