ಭಾಷಾಸಕ್ತರ ವಾಸ್ತವ್ಯಕ್ಕೆ ಸರ್ವಸಿದ್ಧತೆ
ಮಡಿಕೇರಿ: ಬೆಚ್ಚನೆ ಹೊದಿಕೆ, ದಿಂಬು, ಬಿಸಿ ನೀರು ವ್ಯವಸ್ಥೆ.. ಮಂಜಿನ ನಗರಿಯಲ್ಲಿ ಬೆಚ್ಚನೆ ಅನುಭವ ಮೂಡಿಸಲು ವಸತಿ ಸಮಿತಿಯಿಂದ ಸರ್ವ ಸಿದ್ಧತೆ..
ಕನ್ನಡ ಸಾಹಿತ್ಯ ಸಮ್ಮೇಳನದಂಥ ಬೃಹತ್ ಕಾರ್ಯಕ್ರಮ ಮಡಿಕೇರಿಯಂಥ ಗಿರಿಕಂದರಗಳ ಊರಿನಲ್ಲಿ ನಡೆಯುವ ಸಂದರ್ಭದಲ್ಲಿ ಸಮ್ಮೇಳನಕ್ಕೆ ಬರುವ ಸಹಸ್ರಾರು ಮಂದಿಗೆ ಮುಖ್ಯವಾಗಿ ವಸತಿ ವ್ಯವಸ್ಥೆಯೇ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಹಾಗಾಗಿ ಮಡಿಕೇರಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಸಮಿತಿ ಎಲ್ಲ ಸಿದ್ಧತೆಗಳನ್ನು ಸಮಾರೋಪಾದಿಯಲ್ಲಿ ಕೈಗೊಳ್ಳುತ್ತಿದೆ.
ಮಡಿಕೇರಿಯಲ್ಲಿ ಮಂಗಳವಾರದಿಂದ ಗುರುವಾರದವರೆಗೆ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅಂದಾಜು 8 ಸಾವಿರ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದ್ದು ಇಷ್ಟೂ ಮಂದಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬಿಸಿ ನೀರಿನ ವ್ಯವಸ್ಥೆ: ಸೋಮವಾರ ರಾತ್ರಿಯಿಂದಲೇ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಚಳಿ ಹೆಚ್ಚಿರುವುದರಿಂದ ಬಿಸಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಅಂತೆಯೇ ಪ್ರತಿನಿಧಿಗಳಿಗೆ ಹಾಸಿಗೆ, ದಿಂಬಿನ ವ್ಯವಸ್ಥೆಯನ್ನೂ ಸಮಿತಿ ವತಿಯಿಂದ ಕಲ್ಪಿಸಲಾಗಿದೆ. ವಸತಿ ಕೇಂದ್ರಗಳಲ್ಲಿ ಸೂಕ್ತ ಶೌಚಾಲಯ, ಸ್ನಾನದ ಮನೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದು, ಶುದ್ಧ ಕುಡಿಯುವ ನೀರನ್ನೇ ಪೂರೈಸಲಾಗುತ್ತದೆ ಎಂದು ವಸತಿ ಸಮಿತಿ ಸಂಚಾಲಕ ಎಂ.ಇ.ಮೊಯ್ದೀನ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಸಹಾಯ ಕೇಂದ್ರ ಸ್ಥಾಪನೆ: ಸಮ್ಮೇಳನದ ವಸತಿ ಕೇಂದ್ರಗಳಲ್ಲೂ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಜತೆಗೆ ಪ್ರತಿ ವಸತಿ ಕೇಂದ್ರದಲ್ಲಿಯೂ ಆರೋಗ್ಯ ಕೇಂದ್ರವನ್ನು ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೆ ಕೊಡಗಿನ ಸಾಹಿತಿಯ ಹೆಸರನ್ನಿಡಲಾಗಿದೆ.
ಪ್ರತಿ ವಸತಿ ಕೇಂದ್ರವನ್ನು ನೋಡಲ್ ಅಧಿಕಾರಿಯೊಬ್ಬರು ನಿರ್ವಹಿಸಲಿದ್ದು, ಗೆಜೆಟೆಡ್ ದರ್ಜೆಯ ಇಬ್ಬರು ಅಧಿಕಾರಿಗಳು, 6 ಪಿಡಿಒಗಳು, 6 ಕ್ಲಸ್ಟರ್ ಅಧಿಕಾರಿಗಳು, 10 ಪೊಲೀಸರು, ಒಬ್ಬರು ಪೊಲೀಸ್ ಇನ್ಸ್‌ಪೆಕ್ಟರ್ ವಸತಿ ಕೇಂದ್ರದ ನಿರ್ವಹಣೆಗೆ ನಿಯೋಜಿತರಾಗಿದ್ದಾರೆ. ಎಲ್ಲ ಕೇಂದ್ರಗಳಲ್ಲೂ ಮಾಹಿತಿ ಕೇಂದ್ರದ ಸಿಬ್ಬಂದಿ ಪ್ರತಿನಿಧಿಗಳ ಮಾರ್ಗಸೂಚಿ ಸಹಾಯಕ್ಕೆ ನಿಲ್ಲಲಿದ್ದಾರೆ. 4,500 ಪ್ರತಿನಿಧಿಗಳಿಗೆ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮಡಿಕೇರಿ ಹೊಟೇಲ್‌ಗಳಲ್ಲಿನ ಶೇ.70ರಷ್ಟು ಕೊಠಡಿಗಳನ್ನು ಸಮ್ಮೇಳನಕ್ಕೆ ಬರುವ ಅತಿಥಿಗಳು, ಮಾಧ್ಯಮದವರು, ಗಣ್ಯರಿಗಾಗಿ ಕಾಯ್ದಿರಿಸಲಾಗಿದ್ದು, ಮಡಿಕೇರಿಯ ಹೋಂಸ್ಟೇಗಳಲ್ಲಿಯೂ ನೂರಾರು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮಡಿಕೇರಿಯಲ್ಲಿ 300 ಕೊಠಡಿಗಳು, ಕುಶಾಲನಗರದಲ್ಲಿಯೂ 170 ಕೊಠಡಿಗಳನ್ನು ಸಾಹಿತಿಗಳು, ಗಣ್ಯರಿಗಾಗಿ ಮೀಸಲಿರಿಸಲಾಗಿದೆ.
ವಸತಿ ಕೇಂದ್ರಗಳಿಗೆ ಹತ್ತಿರದ ಸ್ಥಳದಿಂದ ಸಮ್ಮೇಳನ ಸ್ಥಳಕ್ಕೆ 8 ಸರ್ಕಾರಿ ಬಸ್‌ಗಳು ನಗರ ಪ್ರದಕ್ಷಿಣೆಯಂತೆ ನಿರಂತರ ಸಂಚರಿಸಲಿವೆ. ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣದಲ್ಲಿಯೇ ವಸತಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲು ಕೇಂದ್ರ ತೆರೆಯಲಾಗುತ್ತದೆ.
ಮನೆ ಆತಿಥ್ಯಕ್ಕೆ ದೊರಕದ ಸ್ಪಂದನ
ಸಮ್ಮೇಳನ ಮಡಿಕೇರಿಯಲ್ಲಿ ನಡೆಯುವುದು ನಿರ್ಧರಿತವಾದ ಕೂಡಲೇ ಮಡಿಕೇರಿಯಲ್ಲಿನ ಅನೇಕರು ತಮ್ಮ ಮನೆಗಳಲ್ಲಿ ಸಾಹಿತಿಗಳನ್ನು, ಅತಿಥಿಗಳನ್ನು ಉಳಿಸಿಕೊಳ್ಳಲು ಮುಂದೆ ಬಂದಾರು ಎಂದು ನಿರೀಕ್ಷಿಸಲಾಗಿತ್ತು. ಮನೆ ಆತಿಥ್ಯ ಕಲ್ಪಿಸಲು ಸಿದ್ಧವಿರುವವರು ಹೆಸರು ನೋಂದಾಯಿಸಿ ಎಂದೂ ವಸತಿ ಸಮಿತಿ ಕೋರಿತ್ತು. ಆದರೆ ಗಮನಾರ್ಹ ಎಂಬಂತೆ ಮಡಿಕೇರಿಯಲ್ಲಿ ಅತಿಥಿಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಳ್ಳಲು ಒಬ್ಬರೂ ಮುಂದೆ ಬಂದಿಲ್ಲ. ಇದು ಅತಿಥಿ ಸತ್ಕಾರದ ಮಡಿಕೇರಿ ಈಗ ವಾಣಿಜ್ಯೀಕರಣಗೊಂಡಿರುವುದಕ್ಕೆ ಉತ್ತಮ ಉದಾಹರಣೆ.
ಹೋಂಸ್ಟೇಗಳಿಗೆ ಎಚ್ಚರಿಕೆ
ಪ್ರತಿನಿಧಿಗಳ ತಂಗುವಿಕೆಗೆ ಈ ಮೊದಲು ಹೆಸರು ನೋಂದಾಯಿಸಿದ ಅನೇಕರು ಕೊನೆ ಹಂತದಲ್ಲಿ ಸಬೂಬು ಹೇಳುತ್ತಾ ವಸತಿ ಸೌಕರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂಥ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
- ಕರೀಂ ರಾವ್ತರ್, ಪೊಲೀಸ್ ವೃತ್ತ ನಿರೀಕ್ಷಕ
ಚಳಿ ಇದೆ.. ಹೊದಿಕೆ ತನ್ನಿ
ಮಡಿಕೇರಿಯಲ್ಲಿ ಚಳಿ, ಗಾಳಿ ಹೆಚ್ಚಿದೆ. ಹೀಗಾಗಿ ಹೊರಜಿಲ್ಲೆಯಿಂದ ಬರುವ ಪ್ರತಿನಿಧಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಬೆಚ್ಚನೆಯ ಉಡುಪು ಕೂಡ ತನ್ನಿ. ಸಾಧ್ಯವಿದ್ದಲ್ಲಿ ಸೂಕ್ತ ಹೊದಿಕೆ ತಂದರೆ ಚಳಿಯಿಂದ ತಪ್ಪಿಸಿಕೊಳ್ಳಬಹುದು.
- ಮೊಯ್ದಿನ್, ವಸತಿ ಸಮಿತಿ ಸಂಚಾಲಕ
ಅನಿಲ್ ಎಚ್.ಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

