ಪ್ರಧಾನ ಸುದ್ದಿ

ಡಿಕೆಶಿ ವಜಾಕ್ಕೆ ಆಗ್ರಹ

ಡಿಕೆಶಿ ವಜಾಕ್ಕೆ ಆಗ್ರಹ
Published On :

ಕನ್ನಡಪ್ರಭ ವಾರ್ತೆ  ಹುಬ್ಬಳ್ಳಿ  ಜ.6
ಎಸ್.ಎಂ.ಕೃಷ್ಣ ಆಡಳಿತಾವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ನಷ್ಟ ಮಾಡಿ 10.80 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಡಿಮೆ ದರದಲ್ಲಿ ಖರೀದಿಸಿರುವ ಹಾಗೂ 4.20 ಎಕರೆ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿರುವ ಆರೋಪಗಳು ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಹಾಗಾಗಿ ತಕ್ಷಣವೇ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಸಚಿವ ಶಿವಕುಮಾರ್ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಶಿವಕುಮಾರ್ ಅಕ್ರಮ ಗಣಿಗಾರಿಕೆಯ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಸುಪ್ರೀಂ ಕೋರ್ಟ್‌ನ ಅರಣ್ಯ ಪೀಠ ಹಾಗೂ ರಾಜ್ಯ ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣಗಳಿವೆ.
ಭ್ರಷ್ಟಾಚಾರಿಗಳನ್ನು ಹಾಗೂ ಕಳಂಕಿತರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸರ್ಕಾರ ರಚಿಸುವಾಗ ಹೇಳಿದ್ದರು.          
ಈಗ ಅಕ್ರಮ ಗಣಿಗಾರಿಕೆ ಹಾಗೂ ಭೂವಶ ಪ್ರಕರಣದಲ್ಲಿ ಡಿಕೆಶಿ ಅವ್ಯವಹಾರ ಕಾಂಗ್ರೆಸ್‌ಗೆ ಕಾಣಲಿಲ್ಲವೇ?' ಎಂದು ಪ್ರಶ್ನಿಸಿದರು. ಸಚಿವ ಡಿ.ಕೆ. ಶಿವಕುಮಾರ ಅವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವ ಇನ್ನಿತರ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಏನು ಅಕ್ರಮ?: ಮೆ. ವಿಕ್ಟರಿ ಎಕ್ಸ್‌ಪೋರ್ಟ್ಸ್, ಮೆ. ಇಂಡಿಯನ್ ರಾಕ್ಸ್, ಮೆ. ವಲ್ಲಿಶ್, ಮೆ. ಸುವಿ ಗ್ರಾನೈಟ್ಸ್, ಮೆ. ಸ್ಕಂದಾ ಎಂಟರ್‌ಪ್ರೈಸೆಸ್, ಮೆ. ಸಾಯಿ ಟ್ರೇಡಿಂಗ್ ಕಂಪನಿ, ಮೆ. ನೆಟ್ ಪ್ರೊಜೆಕ್ಟ್ ಸಲ್ಯೂಷನ್ಸ್ ಹಾಗೂ ಮೆ. ಎಸ್. ಪ್ರದೀಪ್ ಎಕ್ಸ್‌ಪೋರ್ಟ್ಸ್ ಕಂಪನಿಗಳಿಗೆ ಕಡಿಮೆ ದರದಲ್ಲಿ ಅದಿರು ನೀಡುವಂತೆ ಮೇ 14, 2005ರಲ್ಲಿ ಡಿಕೆಶಿ ಅಂದಿನ ಮುಖ್ಯಮಂತ್ರಿಗೆ ಶಿಫಾರಸು ಮಾಡಿದ್ದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಂತೆಯೇ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೂ ಡಿಕೆಶಿ ಅಕ್ರಮಗಳಿಗೆ ಸಹಕರಿಸಿದ್ದರು ಎಂದು ಆರೋಪಿಸಿದರು.  

ಡಿ.ಕೆ.ಶಿವಕುಮಾರ್ ಹಾಗೂ ರೋಶನ್ ಬೇಗ್ ವಿರುದ್ಧ ಇರುವ ಆರೋಪಗಳ ದಾಖಲೆ ಪರಿಶೀಲಿಸಿದ ನಂತರವೇ ಹೈಕಮಾಂಡ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದೆ. ಸಂಪುಟಕ್ಕೆ ಸೇರ್ಪಡೆಗೊಂಡ ಯಾರ ವಿರುದ್ಧವೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಾಗಿಲ್ಲ. ಇವರಿಬ್ಬರ ವಿರುದ್ಧ ಗಂಭೀರ ಆರೋಪಗಳೂ ಇಲ್ಲ. ಆದರೆ ಬಿಜೆಪಿ ಮುಖಂಡರು ಈ ಬಗ್ಗೆ ಅನಗತ್ಯ ಹುಯಿಲೆಬ್ಬಿಸುತ್ತಿದ್ದಾರೆ.
ಟಿದಿಗ್ವಿಜಯ್ ಸಿಂಗ್,
ಎಐಸಿಸಿ ಪ್ರಧಾನ ಕಾರ್ಯದರ್ಶಿ


 ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಅವರನ್ನು ಕಳಂಕಿತರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಸಂಪುಟಕ್ಕೆ ತೆಗೆದುಕೊಂಡಿದ್ದೇವೆ. ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡುವವರೆಗೆ, ಪ್ರತಿಯೊಬ್ಬರು ತಾವು ನಿರಪರಾಧಿ, ಮುಗ್ಧ ಎಂದು ಭಾವಿಸಿಕೊಳ್ಳಬಹುದು.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಿರೇಮಠ್‌ಗೆ ದಾಖಲೆಗಳನ್ನು ಪ್ರದರ್ಶಿಸುವುದು ಸ್ವಾಭಾವಿಕ ಗುಣ. ನನ್ನ ಮತ್ತು ಸಹೋದರ ಶಿವಕುಮಾರ್ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ.  ಎಲ್ಲ ಪ್ರಕರಣಗಳು ಕೋರ್ಟಲ್ಲಿವೆ. ನಾವು ಆರೋಪಮುಕ್ತರಾಗಿ ಹೊರ ಬರುತ್ತೇವೆ.         - ಡಿ.ಕೆ.ಸುರೇಶ್, ಶಿವಕುಮಾರ್ ಸಹೋದರ

ಅಕ್ರಮ ಭೂ ಖರೀದಿ
ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬಿ.ಕೆ. ಶ್ರೀನಿವಾಸ್ ಎಂಬುವವರ 4.20 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಕರ್ನಾಟಕ ಲ್ಯಾಂಡ್ ರೆವಿನ್ಯೂ ಆ್ಯಕ್ಟ್ 1991ನ್ನು ಉಲ್ಲಂಘಿಸಿ ಈ ಭೂಮಿಯನ್ನು ಅಕ್ರಮವಾಗಿ ಮಾರಲು 2003 ಡಿಸೆಂಬರ್ 18 ರಂದು ಒಪ್ಪಂದ ನಡೆದಿತ್ತು.
2004 ಫೆಬ್ರವರಿ 17ರಂದು ಅಂದಿನ ವಿಶೇಷ ಜಿಲ್ಲಾಧಿಕಾರಿ ಅವರು ಡಿಕೆಶಿ ಪರವಾಗಿ ಕೈಗಾರಿಕೆಗೆ ಮೀಸಲಿಟ್ಟ ಭೂಮಿಯನ್ನು ವಸತಿಗಾಗಿ ಬದಲಾವಣೆ ಮಾಡಿದ್ದಾರೆ. ಈ ಆದೇಶ ಬಂದ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭೂಮಿಯನ್ನು ಡಿನೋಟಿಪಿಕೇಷನ್ ಮಾಡಲಾಗಿದೆ ಎಂದು ಹಿರೇಮಠ್ ಆರೋಪಿಸಿದರು.

ಮುನಿಯಪ್ಪರಿಂದ ಅಕ್ರಮ ಗಣಿಗಾರಿಕೆ!
ಕೇಂದ್ರ ಸಚಿವ ಮುನಿಯಪ್ಪ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಹಲವಾರು ಮುಖಂಡರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ ಎಂದು ಹಿರೇಮಠ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.