ಕಾಂಗ್ರೆಸ್ ಬಿಟ್ಹಾಕಿ ಬಿಜೆಪಿಗೆ ಮತ ಹಾಕಿ

ನವದೆಹಲಿ: ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಮಾರ್ಗಸೂಚಿ ಯೋಜನೆಗಳು ಹಾಗೂ ನೀತಿಗಳನ್ನು ಪ್ರಸ್ತಾಪಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಆಳುವವರಿಗೆ (ಕಾಂಗ್ರೆಸ್ಗೆ) 60 ವರ್ಷ ನೀಡಿದ್ದೀರಿ, ಕಾರ್ಯಕರ್ತರಿಗೆ (ಬಿಜೆಪಿಗೆ) 60 ತಿಂಗಳು ಅವಕಾಶ ನೀಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.
ಅಭಿವೃದ್ಧಿ ಮಂತ್ರದ ಜತೆಗೆ ಸಮರ್ಥ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡಿರುವ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. 'ಕಾಂಗ್ರೆಸ್ ಆಡಳಿತ ಅವಧಿ ಈ ರಾಷ್ಟ್ರದ ಅಭಿವೃದ್ಧಿ ಪಾಲಿಗೆ ಕಗ್ಗತ್ತಲು ಎಂದು ಬಣ್ಣಿಸಿದ ಅವರು, ಈಗ ಬಿಜೆಪಿ ಮಾತ್ರವೇ ಪರ್ಯಾಯ ಆಯ್ಕೆ' ಎಂದು ಘೋಷಿಸಿದರು.
ಬರುವ ಚುನಾವಣೆ ಕೇವಲ ಚುನಾವಣೆಯಲ್ಲ. ಈ ದೇಶದ ಜನರ ನಿರೀಕ್ಷೆ ಮತ್ತು ಅಶೋತ್ತರಗಳ ಚುನಾವಣೆ. ರೈತರ ಆತ್ಮಹತ್ಯೆ, ಹಸಿವಿನಿಂದ ಮಕ್ಕಳ ಸಾವು, ಮಹಿಳೆಯರ ಅಸುರಕ್ಷತೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ದೂರದೃಷ್ಟಿ ಇಲ್ಲದ ನೀತಿರಹಿತ ಕಾಂಗ್ರೆಸ್ ನೇತೃತ್ವದ ಆಡಳಿತವೇ ಕಾರಣ ಎಂದು ದೂಷಿಸಿದ ಅವರು, ಬಿಜೆಪಿ ಮಾತ್ರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದರು.
ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ನೇರ ಮತದಾರರನ್ನುದ್ದೇಶಿಸಿಯೇ ಮಾತನಾಡಿದ ಮೋದಿ, ನದಿಗಳ ಜೋಡಣೆ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳ, ಭ್ರಷ್ಚಾಚಾರ ಮುಕ್ತ ಸಮರ್ಥ ಆಡಳಿತದ ಬಗ್ಗೆ ಪ್ರಸ್ತಾಪಿಸಿದರು.
'ಟೀ'ಕೆಗೆ ಲೇವಡಿ!
ತಮ್ಮನ್ನು ಟೀ ಮಾರುವವನು ಎಂದು ಕಾಂಗ್ರೆಸ್ ಟೀಕೆ ಮಾಡಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನರೇಂದ್ರ ಮೋದಿ, ಬಿಜೆಪಿ ಒಬ್ಬ ಟೀ ಮಾರುವವನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುತ್ತದೆ, ಕಾಂಗ್ರೆಸ್ ಟೀ ಮಾರುವವನ ವಿರುದ್ಧ ಸ್ಪರ್ಧಿಸಲು ಹೆದರಿ ಪ್ರಧಾನಿ ಅಭ್ಯರ್ಥಿಯನ್ನೇ ಘೋಷಿಸಿಲ್ಲ ಎಂದರು. ಕಾಂಗ್ರೆಸ್ ಸೋಲಿನ ದವಡೆಗೆ ತಲುಪಿದೆ. ಆ ಕಾರಣಕ್ಕಾಗಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಲು ಒಪ್ಪಿಲ್ಲ. ಯಾವ ತಾಯಿ ತಾನೆ ತನ್ನ ಮಗನನ್ನು ಬಲಿದಾನ ನೀಡುತ್ತಾಳೆ ಎಂದು ಮೋದಿ ಪ್ರಶ್ನಿಸಿದರು. ಶ್ರೀಮಂತ ಕುಟುಂಬಗಳಲ್ಲಿ ಬೆಳೆದವರು(ಗಾಂಧಿ ಕುಟುಂಬದವರು) ಟೀ ಮಾರುವವನ ವಿರುದ್ಧ ಸ್ಪರ್ಧಿಸುವುದು ಅವಮಾನವೆಂದು ಭಾವಿಸಿದ್ದಾರೆಂದರು. ಕಾಂಗ್ರೆಸ್ನವರು ಯಾರ ಹೃದಯದಲ್ಲಿ ಪಕ್ಷ, ನಾಯಕರ ಬಗ್ಗೆ ಗೌರವ ಇದೆಯೋ ಅವರಿಗೆ ಟಿಕೆಟ್ ನೀಡುತ್ತಾರೆ. ಆದರೆ, ಯಾರ ಹೃದಯದಲ್ಲಿ ಭಾರತ ಮಾತೆ ಇದ್ದಾಳೋ ಅಂಥವರಿಗೆ ಬಿಜೆಪಿ ಟಿಕೆಟ್ ನೀಡುತ್ತವೆ ಎಂದರು.
-ರೇಣುಕಾಪ್ರಸಾದ್ ಹಾಡ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


