ಪರಭಾಷಾ ಚಿತ್ರಗಳಿಂದಲೇ ಕನ್ನಡಕ್ಕೆ ಹೊಡೆತ
ಇಲ್ಲಿ ಎಲ್ಲರೂ ಸ್ನೇಹಿತರೇ. ಹಾಗಾಗಿ ವೈಯಕ್ತಿಕವಾದ್ದೇನೂ ಇಲ್ಲಿಲ್ಲ. ಯಾರನ್ನು ನೋಯಿಸುವ ಉದ್ದೇಶವೂ ನನಗಿಲ್ಲ. ಇದು ಡಬ್ಬಿಂಗ್ ಪರ- ವಿರೋಧ ಕುರಿತ ವಾದ ಮಾತ್ರ. ಹಾಗೆನ್ನುತ್ತಲೇ ಡಬ್ಬಿಂಗ್ ಏಕೆ ಬೇಕು ಎನ್ನುತ್ತಾ, ಅಂತ, ಬಂಧನ, ಮುತ್ತಿನಹಾರದಂಥ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿವು. ಸಂದರ್ಶನದ ಸಾರಾಂಶ ಹೀಗಿದೆ.
ಟ ನೀವು ಡಬ್ಬಿಂಗ್ ಬೆಂಬಲಿಸಲು ಕಾರಣ?
- ಕಾರಣಗಳು ಅನೇಕ. ಆದರೆ, ವಿಶ್ವಾದ್ಯಂತ ಇರುವ ಕ್ಲಾಸಿಕ್ ಕಲಾಕೃತಿಗಳು ಕನ್ನಡಕ್ಕೆ ಬರಬೇಕು ಎಂಬುದೇ ಡಬ್ಬಿಂಗ್ ಬೆಂಬಲಿಸಲು ಪ್ರಮುಖ ಕಾರಣ.
ಟ ಕರ್ನಾಟಕದಲ್ಲಿ ಡಬ್ಬಿಂಗ್ ಅನಿವಾರ್ಯನಾ?
- ಅಲ್ಲ. ಆದರೆ ಅದು ಬೇಕು- ಬೇಡ ಎಂಬ ಹಕ್ಕು ಎಲ್ಲರಿಗೂ ಇದೆ. ಬೇಕೇ ಬೇಡವೇ ಎಂದು ನಿರ್ಧರಿಸುವುದು ಕಾನೂನು ಹಾಗೂ ಜನರಿಗೆ ಬಿಟ್ಟಿದ್ದು. ಅವರ ತೀರ್ಪಿಗೆ ನಾವು ಬದ್ಧ.
ಟ ಡಬ್ಬಿಂಗ್ ಮಾಡದಿದ್ದರೆ ಕನ್ನಡ ಚಿತ್ರರಂಗಕ್ಕೆ ಆಗುವ ನಷ್ಟವಾದರೂ ಏನು?
- ನಷ್ಟ ಏನು ಎಂಬುದಕ್ಕಿಂತ ಇದು ಕನ್ನಡ ಚಿತ್ರರಂಗದ ಬೆಳವಣಿಗೆ ಪ್ರಶ್ನೆ. ಡಬ್ಬಿಂಗ್ ಇದ್ದರೂ ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಚಿತ್ರರಂಗ ಬೆಳೆದಿದ್ದು, ನೂರಾರು ಕೋಟಿಯ ಚಿತ್ರ ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಕೆಲವರ ಕೆಲವೇ ಚಿತ್ರಗಳನ್ನು ಹೊರತುಪಡಿಸಿದರೆ ಸರಾಸರಿ ಬಜೆಟ್ 10 ಕೋಟಿ ದಾಟಿಲ್ಲ.
ಟ ಡಬ್ಬಿಂಗ್ ಬಂದರೆ ಕನ್ನಡ ಚಲನಚಿತ್ರ ಕಲಾವಿದರ ಬದುಕು ಬೀದಿಪಾಲಾಗುತ್ತದೆ ಎಂಬ ಬಗ್ಗೆ ಏನಂತೀರಿ?
- ಇದೊಂಥರ ರೇಸ್ ಇದ್ದ ಹಾಗೆ, ಓಡುತ್ತಲೇ ಇರಬೇಕು. ಶಕ್ತಿ ಇದ್ದ ಕಲಾವಿದ ಗೆಲ್ಲುತ್ತಾನೆ. ಮೇಲಾಗಿ ಶಿವರಾಜ್ಕುಮಾರ್, ಸುದೀಪ್, ದರ್ಶನ್ ಚಿತ್ರಗಳನ್ನು ಜನ ನೋಡುವ ರೂಢಿ ಮಾಡಿಕೊಂಡಿದ್ದಾರೆ ಮತ್ತು ನೋಡಿಯೇ ನೋಡುತ್ತಾರೆ.
ಡಬ್ಬಿಂಗ್ನಿಂದ ಕಲಾವಿದರು ಬೀದಿ ಪಾಲಾಗುವುದಿದ್ದರೆ ತಮಿಳು, ತೆಲುಗು ಕಲಾವಿದರು ಇಷ್ಟೊತ್ತಿಗೆ ಬೀದಿಪಾಲಾಗಿರಬೇಕಿತ್ತು.
ಟ ಡಬ್ಬಿಂಗ್ನಿಂದಾಗಿ ಚಿತ್ರರಂಗದ ತಂತ್ರಜ್ಞರು, ಕಾರ್ಮಿಕರು ಕೆಲಸ ಕಳೆದುಕೊಳ್ಳುವುದಿಲ್ಲವೇ?
- ನನ್ನ ಪ್ರಕಾರ ಡಬ್ಬಿಂಗ್ನಿಂದ ಕೆಲಸ ಇನ್ನೂ ಹೆಚ್ಚಾಗುತ್ತದೆ. ಕಥೆಗಾರ (ಸಣ್ಣಪುಟ್ಟ ಮಾರ್ಪಾಟಿಗೆ), ಸಂಭಾಷಣಾಕಾರ (ಅನುವಾದಿತ ಸಂಭಾಷಣೆಗೆ), ಸಂಗೀತ ನಿರ್ದೇಶಕ(ಟ್ರ್ಯಾಕ್ ಮಾಡೋಕೆ), ಎಡಿಟರ್ (ಧ್ವನಿ ಜೋಡಿಸಲು) ಎಲ್ಲರಿಗೂ ಕೆಲಸ ಸಿಗುತ್ತದೆ. ಸ್ಟುಡಿಯೋ, ಎಡಿಟಿಂಗ್, ಪಬ್ಲಿಸಿಟಿ ರೂಂಗಳೂ ಬಿಜಿಯಾಗುತ್ತವೆ. ಊಟ- ಕಾಫಿ ತರುವ ಪ್ರೊಡಕ್ಷನ್ ಬಾಯ್ಗಳಿಗೂ ಡಬ್ಬಿಂಗ್ ಮುಗಿಯುವಷ್ಟು ದಿನ ಕೆಲಸ ಇದ್ದೇ ಇರುತ್ತದೆ. ಡಬ್ಬಿಂಗ್ ಬಂದರೆ ಕಂಠದಾನ ಕಲಾವಿದರಿಗಷ್ಟೇ ಕೆಲಸ ಎಂಬುದು ಸುಳ್ಳು.
ಟ ಡಬ್ಬಿಂಗ್ ಬಂದರೆ ಕನ್ನಡ ಭಾಷೆ- ಸಂಸ್ಕೃತಿಗೆ ಧಕ್ಕೆ ಆಗುತ್ತದೆ ಎಂಬ ಆತಂಕ ಇದೆ. ಅದು ನಿಜವೇ?
- ಇತ್ತೀಚಿನ ಚಿತ್ರಗಳಲ್ಲಿ ಹೆಣ್ಣನ್ನು ಫಿಗರು, ಪೀಸು ಎಂದು ಕರೆಯುತ್ತಿದ್ದಾರಲ್ಲ ಅದು ಸಂಸ್ಕೃತಿಯಾ? ಶರಶ್ಚಂದ್ರ, ರವೀಂದ್ರನಾಥ ಠಾಗೋರ್ ಅವರಂಥವರ ಕುರಿತ ಚಿತ್ರಗಳನ್ನು ಡಬ್ ಮಾಡಿ ಸಂಸ್ಕೃತಿ ಮೂಡಿಸಬಹುದಲ್ವಾ?
ಟ ಒಂದು ಭಾಷೆಯಿಂದ ಇನ್ನೊಂದಕ್ಕೆ 1 ಕಲಾಕೃತಿಯನ್ನು ಉಪಶೀರ್ಷಿಕೆ, ಪ್ಯಾರಾ ಡಬ್ಬಿಂಗ್, ರಿಮೇಕ್ ಅಥವಾ ಡಬ್ಬಿಂಗ್ ಮೂಲಕ ಅನುವಾದಿಸಬಹುದು. ಆದರೆ ಮೊದಲ ಮೂರನ್ನು ಬಿಟ್ಟು ಡಬ್ಬಿಂಗ್ ಮಾಡುವುದೇಕೆ?
- ನೋಡಿ.. ನನ್ನ 'ಸಿಂಹದ ಮರಿ ಸೈನ್ಯ' ಎಂಬ ಚಿತ್ರ ಪ್ಯಾರಿಸ್ನಲ್ಲಿ ಪ್ಯಾರಾ ಡಬ್ಬಿಂಗ್ ಆಗಿತ್ತು. ಪ್ಯಾರಾ ಡಬ್ಬಿಂಗ್ನಲ್ಲಿ ಪ್ರೇಕ್ಷಕರ ಆಸನ ಬಳಿ ಒಂದು ಹೆಡ್ಫೋನ್ ಇರುತ್ತದೆ. ಚಿತ್ರದಲ್ಲಿನ ಧ್ವನಿಯನ್ನು ಪ್ರೇಕ್ಷಕನ ಭಾಷೆಗೆ ಅನುವಾದಿಸಿದ್ದು ಅದರಲ್ಲಿ ಕೇಳುತ್ತದೆ. ಹಾಗೆ ಹೆಣ್ಣು- ಗಂಡು ಎಂಬ ಬೇಧವಿಲ್ಲದೆ ಎಲ್ಲ ಪಾತ್ರಕ್ಕೂ ಒಬ್ಬನೇ ಧ್ವನಿ ನೀಡಿದರೆ ಅದರಲ್ಲಿ ಏನು ಸ್ವಾರಸ್ಯ ಇರುತ್ತದೆ? ಉಪಶೀರ್ಷಿಕೆ ಎಂಬುದು ವಿಫಲ ಪ್ರಯೋಗ. ಪ್ರೇಕ್ಷಕ ಕೆಳಗೆ ಉಪಶೀರ್ಷಿಕೆ ನೋಡುತ್ತಿದ್ದರೆ ದೃಶ್ಯ ಆಸ್ವಾದಿಸಲು ಸಾಧ್ಯನಾ? ಇನ್ನು ನಾನು ರಿಮೇಕ್ ವಿರೋಧಿ, ನಾನೆಂದೂ ರಿಮೇಕ್ ಮಾಡಿಲ್ಲ.
ಟ ಡಬ್ಬಿಂಗ್ ವಿರುದ್ಧ ಹೋರಾಟಕ್ಕಿಳಿದವರು ಪರಭಾಷಾ ಚಿತ್ರಗಳ ಬಗ್ಗೆ ಮೌನ ತಾಳಿರುವುದೇಕೆ? ಅವುಗಳಿಂದಲೂ ಕನ್ನಡ ಭಾಷೆ-ಸಿನಿಮಾಗೆ ಧಕ್ಕೆ ಇದೆಯಲ್ವಾ?
- ಪರಭಾಷಾ ಚಿತ್ರ 27ಕ್ಕಿಂತ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬಾರದು ಎಂಬ ನಿಯಮ ಇತ್ತು. ಕೆಲವರ ಪಿತೂರಿಯಿಂದಾಗಿ ಅದು ಜಾರಿಯಾಗಿಲ್ಲ. ಅವುಗಳ ಹಾವಳಿಯಿಂದಾಗಿ ಕಳೆದ 3 ತಿಂಗಳಲ್ಲಿ ಹಬ್ಬದ ಸಂದರ್ಭದಲ್ಲಿ ಕನ್ನಡ ಚಿತ್ರ ಬಿಡುಗಡೆ ಮಾಡಲು ಆಗಿಲ್ಲ. ಐಪಿಎಲ್ ಪಂದ್ಯ, ಮಳೆಗಾಲ, ಪರೀಕ್ಷಾ ಸಮಯಗಳಲ್ಲಿ ಮಾತ್ರ ಕನ್ನಡ ಚಿತ್ರ ಬಿಡುಗಡೆ ಮಾಡುವ ಸ್ಥಿತಿ ಇದೆ. ಸ್ವಾರ್ಥಿಗಳು ಆ ಬಗ್ಗೆ ಹೋರಾಟವನ್ನೇ ಮಾಡುತ್ತಿಲ್ಲ. ನಿಜವಾದ ಆತಂಕ ಇರುವುದೇ ಪರಭಾಷಾ ಚಿತ್ರಗಳಿಂದ. ಡಬ್ಬಿಂಗ್ ಬಿಟ್ಟು ಅದರ ವಿರುದ್ಧ ಹೋರಾಡಲಿ.
ಟ ನೀವು ಚಿತ್ರ ಜೀವನದಲ್ಲಿ ಸೋತಿದ್ದಕ್ಕೆ ಡಬ್ಬಿಂಗ್ ಬೇಕು ಅಂತಿದ್ದೀರಂತೆ, ಹೌದಾ?
- ಸೋಲು ಗೆಲವು ಎಲ್ಲರಿಗೂ ಇದ್ದಿದ್ದೇ. ಮತ್ತೆ ಸಿಲ್ವರ್ ಜುಬಿಲಿ ಚಿತ್ರ ಮಾಡುತ್ತೇನೆ. ಮಾತ್ರವಲ್ಲ, 'ಗಾಂಧಿ', 'ಅಂಬೇಡ್ಕರ್', 'ಭಗತ್ಸಿಂಗ್' ಚಿತ್ರಗಳನ್ನು ಡಬ್ಬಿಂಗ್ ಮಾಡುತ್ತೇನೆ. ಅಗತ್ಯವಾದರೆ ಕಾನೂನು ರಕ್ಷಣೆ ಕೋರಿ ಬಿಡುಗಡೆ ಮಾಡುತ್ತೇನೆ. ಅದರಿಂದ ಬಂದ ಲಾಭಾಂಶದಲ್ಲಿ ನನ್ನ ಖರ್ಚು ಕಳೆದು ಉಳಿದಿದ್ದನ್ನು ಒಳ್ಳೆಯ ಉದ್ದೇಶಕ್ಕೆ ದಾನ ಮಾಡುತ್ತೇನೆ.
- ರವಿಕಾಂತ ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

