ಪ್ರಧಾನ ಸುದ್ದಿ

ಸಂಗಮನ ಆಣೆ, ತಪ್ಪು ಮಾಡಿಲ್ಲವಂತೆ!

ಸಂಗಮನ ಆಣೆ, ತಪ್ಪು ಮಾಡಿಲ್ಲವಂತೆ!
Published On :

ಬೆಂಗಳೂರು: ಅಯ್ಯೋ, ನನಗೆ ಕುಡಿಯೋದು ಅಂದ್ರೆನೇ ಗೊತ್ತಿಲ್ಲ, ಅಂದೂ ಕುಡಿದಿರಲಿಲ್ಲ, ಸೋಮಶೇಖರ ಗೌಡ ರೌಡಿ ಎಂಬುದೇ ಗೊತ್ತಿರಲಿಲ್ಲ, ಸ್ಕೈ ಬಾರ್‌ನಲ್ಲಿ ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಿರಲಿಲ್ಲ. ಪೊಲೀಸರೇ ಸುಳ್ಳು ಹೇಳುತ್ತಿದ್ದಾರೆ...
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಶನಿವಾರ ಸಂಜೆ ಬೆಂಗಳೂರಿನಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಮಾಧ್ಯಮ ಮತ್ತು ಪ್ರತಿಪಕ್ಷಗಳ ವಿರುದ್ಧ ಬುಸುಗುಟ್ಟುತ್ತಲೇ ಮಾತನಾಡಿದ ಅವರು, ಕೂಡಲ ಸಂಗಮನ ಆಣೆ ನಾನು ತಪ್ಪೇ ಮಾಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ತಪ್ಪಿಸಿಕೊಂಡಿರಲಿಲ್ಲ: 'ಪ್ರಕರಣದಿಂದ ಕಾಶಪ್ಪನವರ್‌ಗೆ ತುಂಬಾ ನೋವಾಯಿತಂತೆ. ಹೀಗಾಗಿಯೇ ಮನಃಶಾಂತಿಗಾಗಿ ತಿರುಪತಿಗೆ ಹೋಗಿದ್ದರಂತೆ. ತಪ್ಪೇ ಮಾಡದ ನಾನು ತಲೆಮರೆಸಿಕೊಂಡು ಹೋಗುತ್ತೇನೆಯೇ?' ಎಂದು ಪ್ರಶ್ನಿಸಿದ್ದಾರೆ.
ಸಣ್ಣ ವಿಚಾರ: ಇದು ತೀರಾ ಸಣ್ಣ ವಿಚಾರ,  ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವೃಥಾ ದೊಡ್ಡದು ಮಾಡಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂಬುದು ವಿಜಯಾನಂದ ಆರೋಪ. ಮಾತ್ರವಲ್ಲ, ರಾತ್ರಿ 12 ಗಂಟೆಯ ಘಟನೆಯನ್ನು ಪೊಲೀಸರು ಬೆಳಗ್ಗೆ 8 ಗಂಟೆಗೆ ಏಕೆ ದಾಖಲಿಸಿಕೊಂಡದ್ದು? ಕೂಡಲೇ ದೂರು ದಾಖಲಿಸಬೇಕಿತ್ತಲ್ಲವೇ ಎಂಬುದು ಅವರ ಪ್ರಶ್ನೆ.
ಪೊಲೀಸರದ್ದೇ ತಪ್ಪಂತೆ: 'ನಮ್ಮೊಂದಿಗೆ ಪೊಲೀಸರೇ ಕೆಟ್ಟದಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ತಿಳಿಸಿದ್ದೇನೆ. ಮರುದಿನ ಟಿವಿಗಳಲ್ಲಿ ಸುದ್ದಿ ಬಂದಾಗಲೇ ಅಷ್ಟು ದೊಡ್ಡದು ಎನ್ನುವುದು ತಿಳಿಯಿತು. ಅಲ್ಲಿವರೆಗೂ ಏನು ಆಗಿದೆ ಎನ್ನುವುದೇ ಗೊತ್ತಿರಲಿಲ್ಲ. ನನ್ನ ವಿರುದ್ಧ ಮಾಜಿ ಶಾಸಕ ಸುಳ್ಳು ಆರೋಪಗಳನ್ನು ಮಾಡಿದ್ದು ಈ ಸಂಬಂಧ ಅವರನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ' ಎಂದು ಎಚ್ಚರಿಕೆಯನ್ನೂ ನೀಡಿದರು.

ರೌಡಿ ಎನ್ನುವುದೇ ಗೊತ್ತಿಲ್ಲ!

ಸೋಮಶೇಖರ್ ಗೌಡ ರೌಡಿ ಎನ್ನುವುದೇ ಕಾಶಪ್ಪನವರ್‌ಗೆ ಗೊತ್ತಿಲ್ಲವಂತೆ. '2001ರಲ್ಲಿ ಯುವ ಕಾಂಗ್ರೆಸ್ ಮುಖಂಡನಾಗಿದ್ದಾಗಿನಿಂದ ಸೋಮಶೇಖರ್ ಗೌಡ ಪರಿಚಯ. ಆತ ರೌಡಿ ಎನ್ನುವುದು ಗೊತ್ತಿಲ್ಲ. ಆತನೊಂದಿಗೆ ಪಾರ್ಟಿ ಮಾಡುವ ಅಗತ್ಯವಿಲ್ಲ. ಆತ ರೌಡಿ ಎನ್ನುವುದಕ್ಕೆ ಆತನೇನು ಹಣೆಗೆ ಬೋರ್ಡ್ ಹಾಕಿಕೊಂಡಿದ್ದನೇ?' ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.