ಪ್ರಧಾನ ಸುದ್ದಿ

ಮರುಕ ಹುಟ್ಟಿಸುವ ಮರಕುಂಬಿ ದಲಿತರ ಬದುಕು

Published On :

ಮರಕುಂಬಿ (ಕೊಪ್ಪಳ): ಅಘೋಷಿತ ಬಹಿಷ್ಕಾರಕ್ಕೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮಸ್ಥರು ತುತ್ತಾಗಿದ್ದಾರೆ.
ಕಿರಾಣಿ ಅಂಗಡಿಗಳು ಮೇಲ್ನೋಟಕ್ಕೆ ಮುಚ್ಚಿದ್ದರೂ ಮೇಲ್ಜಾತಿಯವರಿಗೆ ತೆರೆದುಕೊಳ್ಳುತ್ತವೆ. ದಲಿತರಿಗೆ ಒಂದು ಕೆ.ಜಿ  ಅಕ್ಕಿಯೂ ಸಿಗದು. ಇಲ್ಲಿ ಯಾವ ದಲಿತನ ಮನೆಯಲ್ಲೂ ಶೌಚಾಲಯವಿಲ್ಲ. ಗ್ರಾಮದ ಪಕ್ಕದ ಪಾಳು ಜಾಗದಲ್ಲಿ ಗಿಡ ಮರಗಳನ್ನೆಲ್ಲ ಕಡಿದುರುಳಿಸಿದ್ದರಿಂದ ಬಹಿರ್ದೆಸೆಗೂ ಹೋಗಲು ಜಾಗವಿಲ್ಲ.
ಗ್ರಾಮಕ್ಕೆ 'ಕನ್ನಡಪ್ರಭ' ಭೇಟಿ ನೀಡಿದಾಗ ಕಂಡ ಘೋರ ಸತ್ಯಗಳಿವು. ಶಾಂತಿ ಕಾಪಾಡಲು ಪೊಲೀಸ್ ಪಹರೆ ಹಾಕಿದ್ದರೂ ನಿತ್ಯಕರ್ಮ ಹಾಗೂ ಊಟಕ್ಕೆ ಪರದಾಟವಿದೆ. ಪಕ್ಕದ ಊರಿನಿಂದ ಊಟ ತರೋಣ ಎಂದರೆ ಆಟೋದವರೂ ಹತ್ತಿಸಿಕೊಳ್ಳುವುದಿಲ್ಲ. ದುಡಿಯದಿದ್ದರೆ ಬದುಕಿಲ್ಲ ಎಂಬಂತಿರುವ ದಲಿತರನ್ನು ಗ್ರಾಮದಲ್ಲಿ ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ. ಮೊದಲು ಕೆರೆ ನೀರನ್ನು ಯಾರಾದರೂ ಎತ್ತಿ ಕೊಡುತ್ತಿದ್ದರು. ದಂಡ ಪ್ರಯೋಗದಿಂದಾಗಿ ನೀರಿಗೂ ತತ್ವಾರ!
 ದಲಿತರು ಮತ್ತು ಮೇಲ್ಜಾತಿಯವರ ನಡುವಿನ ಕಿಚ್ಚು ಆಗಾಗ ಹೊಗೆಯಾಡುತ್ತಲೇ ಇದೆ. ದಲಿತರು 4 ವರ್ಷಗಳ ಹಿಂದೆ ಕ್ಷೌರದಂಗಡಿಯೊಂದಕ್ಕೆ ಹೋದಾಗ ಇದು ಆರಂಭವಾಯಿತು. ಬಳಿಕ ಕ್ಷೌರದಂಗಡಿಯನ್ನೆ ಮುಚ್ಚಲಾಗಿದೆ. 15 ದಿನ  ಹಿಂದೆ ಶಾಲಾ ಬಾಲಕನೊಬ್ಬ ನೀರು ತರಲು ಹೋದಾಗ ಮತ್ತೆ ಜಗಳವಾಗಿದೆ.
ಉಸ್ತುವಾರಿ ಸಚಿವರ ಸುಳಿವಿಲ್ಲ: ಇದು ಮೀಸಲು ಕ್ಷೇತ್ರ. ದಲಿತರೇ ಆಗಿರುವ ಶಿವರಾಜ ತಂಗಡಗಿ ಕ್ಷೇತ್ರದ ಶಾಸಕ. ಸಮಸ್ಯೆ ಇಷ್ಟು ಗಂಭೀರವಾಗಿದ್ದರೂ ಭೇಟಿ ನೀಡಿಲ್ಲ. ಎಸ್ಪಿ ಡಾ. ರೋಹಿಣಿ ಎರಡು ಸಲ ಭೇಟಿ ನೀಡಿ ಸಂಧಾನಕ್ಕೆ ಯತ್ನಿಸಿದರೂ ಫಲ ನೀಡಿಲ್ಲ.
ಏನಂತೀರಿ ಸಿದ್ದರಾಮಯ್ಯ?: ಸದಾ ಸಾಮಾಜಿಕ ನ್ಯಾಯವೆಂದು ಮಾತನಾಡುವ ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲೇ ರಾಜ್ಯದಲ್ಲಿ ದಲಿತರನ್ನು ಹೀನಾಯವಾಗಿ ಕಾಣಲಾಗುತ್ತಿದೆ.


-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.