ಪ್ರಧಾನ ಸುದ್ದಿ

ಮರಾಠಿಗರ ಕಿಡಿಗೇಡಿತನ ಸಹಿಸಲಾಗದು

ಮರಾಠಿಗರ ಕಿಡಿಗೇಡಿತನ ಸಹಿಸಲಾಗದು
Published On :

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಯಳ್ಳೂರು ಪ್ರಕರಣವನ್ನು ಕೆಲವು ಕಿಡಿಗೇಡಿಗಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸಂಸದ ಪ್ರಹ್ಲಾದ ಜೋಷಿ ಆರೋಪಿಸಿದ್ದಾರೆ.
ಬೆಳಗಾವಿ ವಿಚಾರದಲ್ಲಿ ಶಿವಸೇನೆ ಸದಸ್ಯರು ಲೋಕಸಭೆಯಲ್ಲಿ ಬುಧವಾರ, ಗದ್ದಲ ಎಬ್ಬಿಸಿ ಮಾಡಿದ ಆರೋಪಕ್ಕೆ ಪ್ರತ್ಯುತ್ತರ ನೀಡಿ ಮಾತನಾಡಿದರು. ಯಳ್ಳೂರು ಪ್ರಕರಣೋತ್ತರ ವಿದ್ಯಮಾನಗಳಲ್ಲಿ ಕರ್ನಾಟಕ ಪೊಲೀಸರು ಮರಾಠಿಗರನ್ನು ಹಿಂಸಿಸುತ್ತಿದ್ದಾರೆ ಎಂದು ಶಿವಸೇನೆ ಸದಸ್ಯ ಪ್ರತಾಪ್‌ರಾವ್ ಜಾಧವ್  ಆರೋಪಿಸಿದರು. ಮಹಾರಾಷ್ಟ್ರ ಸದಸ್ಯರು ಅವರನ್ನು ಬೆಂಬಲಿಸಿ ಘೋಷಣೆ ಕೂಗಿದರು.  
ಈ ಸಂದರ್ಭದಲ್ಲಿ ಇಡೀ ಪ್ರಕರಣವನ್ನು ಪ್ರಹ್ಲಾದ ಜೋಷಿ ಸದನಕ್ಕೆ ವಿವರಿಸಿದರು. ಯಳ್ಳೂರಿನಲ್ಲಿ ಹಾಕಿದ್ದ ನಾಮಫಲಕವನ್ನು ಕರ್ನಾಟಕ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ಅಲ್ಲಿ ಮತ್ತೆ ನಾಮಫಲಕ ಹಾಕಿದ್ದಾರೆ. ಅದನ್ನು ತೆರವುಗೊಳಿಸಲು ಹೋದ ಪೊಲೀಸರು ಮತ್ತು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಹೈಕೋರ್ಟ್ ಆದೇಶ ಇದ್ದರೂ ಕೆಲ ಕಿಡಿಗೇಡಿಗಳು ಅಲ್ಲಿ ನಾಮಫಲಕ ಹಾಕಿ ಅಶಾಂತಿ ಸೃಷ್ಟಿಸುತ್ತಿದ್ದಾರೆ.
ಅಲ್ಲಿರುವ ಕನ್ನಡಿಗರು ಮತ್ತು ಮರಾಠಿಗರು ಅನ್ಯೋನ್ಯವಾಗಿಯೇ ಇದ್ದಾರೆ. ಆದರೆ, ರಾಜಕೀಯ ಲಾಭ ಪಡೆಯಲು ಕೆಲವರು ಇಂತಹ ಕುಚೋದ್ಯತನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಬೆಳಗಾವಿ ಮತ್ತು ಸುತ್ತಮುತ್ತಲ ಸಾವಿರಾರು ಹಳ್ಳಿಗಳು ಸೂರ್ಯಚಂದ್ರರಿರುವವರೆಗೂ ಕರ್ನಾಟಕದ ಭಾಗವಾಗಿಯೇ ಇರುತ್ತವೆ.
-ಪ್ರಹ್ಲಾದ ಜೋಷಿ, ಬಿಜೆಪಿ ಸದಸ್ಯ

ಕನ್ನಡಿಗರಿಗೆ ರಕ್ಷಣೆ ನೀಡಿ-ಗೃಹ ಸಚಿವರಿಗೆ ಮೊರೆ
ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ಮತ್ತು ರಾಜ್ಯದ ಲೋಕಸಭಾ ಸದಸ್ಯರು ಪ್ರತ್ಯೇಕವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬಳ್ಳಾರೆ ಮತ್ತಿತರ ಪದಾಧಿಕಾರಿಗಳು, ಮುಂಬೈಯಲ್ಲಿರುವ ಕನ್ನಡ ಸಂಘದ ಮೇಲೆ ಮತ್ತು ವಹಿವಾಟುಗಳ ಮೇಲೆ ದಾಳಿ ಮಾಡುವುದಾಗಿ ಎಂಇಎಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ರಾಜನಾಥ್ ಸಿಂಗ್, ರಾಜ್ಯ ಯಾವುದೇ ಆಗಲಿ, ಹಿಂಸೆ ಹಿಂಸೆಯೇ. ಯಾರೂ ಹಿಂಸಾಚಾರಕ್ಕೆ ಇಳಿಯಬಾರದು ಸೌಹಾರ್ದದಿಂದ ಇರಬೇಕು ಎಂದು ಹೇಳಿದ್ದಾರೆ.
ಸಂಸದರ ಮನವಿ: ಮರಾಠಿ ಸದಸ್ಯರ ಪುಂಡಾಟಿಕೆಯಿಂದ ಲೋಕಸಭಾ ಕಲಾಪವನ್ನು ಒಂದು ತಾಸು ಮುಂದೂಡಿದ್ದ ಅವಧಿಯಲ್ಲಿ ಕರ್ನಾಟಕದ ಲೋಕಸಭಾ ಸದಸ್ಯರೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಯಳ್ಳೂರು ನಾಮಫಲಕ ಕಿತ್ತೊಗೆದ ಪ್ರಕರಣದ ಹಿನ್ನೆಲೆ ವಿವರಿಸಿದ್ದಾರೆ. ಪ್ರಹ್ಲಾದ ಜೋಷಿ, ಸುರೇಶ್ ಅಂಗಡಿ, ಪಿ.ಸಿ. ಮೋಹನ್ ಮತ್ತಿತರ ಸದಸ್ಯರು, ಸಾಮ್ನಾ ಪತ್ರಿಕೆಯಲ್ಲಿ ಕನ್ನಡಿಗರ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿರುವ ಅಂಶವನ್ನು ಸಚಿವರ ಗಮನಕ್ಕೆ ತಂದು, ಮಹಾರಾಷ್ಟ್ರದಲ್ಲಿರುವ ಮುಖ್ಯವಾಗಿ ಮುಂಬೈನಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲರ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರ ಸಿಎಂ ಚೌಹಾಣ್ ಖಂಡನೆ
ಮುಂಬೈ:
ಬೆಳಗಾವಿ ಮತ್ತು ಯಳ್ಳೂರಲ್ಲಿ ಗಲಭೆ ನಡೆಸುತ್ತಿದ್ದ ಎಂಇಎಸ್ ಪುಂಡರಿಗೆ ಲಾಠಿ ಪ್ರಹಾರ ಮಾಡಿದ್ದನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಖಂಡಿಸಿದ್ದಾರೆ. ಜತೆಗೆ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಲಾಠಿ ಪ್ರಹಾರದಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ 1 ಲಕ್ಷ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.