ಲೋಕಸಭೆ ಪ್ರಮಾಣ ದಾಖಲೆ

ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಹಬ್ಬದ ಕಳೆ. ಹೊಸ ಸಂಸದರಿಗೆ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಡಗರ. ಅದಕ್ಕಾಗಿ ಬಣ್ಣಬಣ್ಣದ ದಿರಿಸು ಧರಿಸಿ ಬಂದಿದ್ದರು. ಕೆಲವರು ತಮ್ಮ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟಿದ್ದರು. ಹೊಸಬರು ಸಂಸತ್ ಭವನ ಪ್ರವೇಶಿಸುವ ಮುನ್ನ ಖುಷಿಯಲ್ಲಿ ನರ್ತಿಸಿದರು.
16ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನ ಪ್ರಮಾಣ ವಚನ ಸ್ವೀಕಾರದ್ದೇ ಕಾರುಬಾರು. ಹಂಗಾಮಿ ಸ್ಪೀಕರ್ ಕಮಲನಾಥ್ ಅವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಮಾಣ ಬೋಧಿಸಿದರು. ಮೋದಿ ಹಿಂದಿಯಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಎರಡನೇಯವರಾಗಿ ಸದನದ ಹಿರಿಯ ಸದಸ್ಯ ಎಲ್.ಕೆ.ಆಡ್ವಾಣಿ, ಮೂರನೇಯವರಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದರು.
ಲೋಕಸಭೆಯ 543 ಸದಸ್ಯರ ಪೈಕಿ 510 ಸಂಸದರು ಒಂದೇ ದಿನದಲ್ಲಿ ಪ್ರಮಾಣ ಸ್ವೀಕರಿಸಿದ್ದು ದಾಖಲೆ. ಶುಕ್ರವಾರ ಸ್ಪೀಕರ್ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕಲಾಪದ ಅವಧಿ ವಿಸ್ತರಿಸಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಸಚಿವರುಗಳೂ ಸೇರಿದಂತೆ ಬಹಳಷ್ಟು ಸದಸ್ಯರು ಮಾತೃಭಾಷೆಯಲ್ಲೇ ಪ್ರಮಾಣ ಸ್ವೀಕರಿಸಿದ್ದು ಗಮನಾರ್ಹ. ಪಕ್ಷ ಭೇದ ಮರೆತು ಸದಸ್ಯರು ಮೇಜುಕಟ್ಟಿ ಸ್ವಾಗತಿಸುವುದು, ಪರಸ್ಪರ ಶುಭಾಶಯ ವಿನಿಮಯ ಸಾಮಾನ್ಯ ದೃಶ್ಯವಾಗಿತ್ತು.
ಸಂಸ್ಕೃತ ಪ್ರೇಮ: ಸಚಿವರ ಪೈಕಿ ಮೊದಲು ಪ್ರಮಾಣ ಸ್ವೀಕರಿಸಿದ್ದು ಗೃಹ ಸಚಿವ ರಾಜನಾಥ ಸಿಂಗ್. ಸಂಪುಟ ಸದಸ್ಯರಲ್ಲಿ ಸುಷ್ಮಾ ಸ್ವರಾಜ್, ಉಮಾ ಭಾರತಿ, ಡಾ.ಹರ್ಷವರ್ಧನ್ ಅಲ್ಲದೆ ಉತ್ತರಾಖಂಡ, ರಾಜಸ್ಥಾನಗಳ ಬಹುತೇಕ ಸದಸ್ಯರು ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸಿದ್ದು ವಿಶೇಷ. ಎಐಎಡಿಎಂಕೆ ಸಂಸದರು ಇಂಗ್ಲಿಷ್ನಲ್ಲಿ, ದೇವರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.
ಎಡಿಎಂಕೆಗೆ ಡೆಪ್ಯುಟಿ ಸ್ಪೀಕರ್ ಹುದ್ದೆ?: ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯ ಸುಮಿತ್ರಾ ಮಹಾಜನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಆಯ್ಕೆಯನ್ನು ಗುರುವಾರ ಘೋಷಿಸಲಾಗುತ್ತದೆ. ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಲೋಕಸಭೆಯಲ್ಲಿ ಎಐಎಡಿಎಂಕೆ ನಾಯಕ ಎಂ.ತಂಬಿದೊರೈ ಹೆಸರು ಕೇಳಿಬರುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಕಳೆದ ವಾರ ಮೋದಿಯವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಈ ವಿಚಾರ ಚರ್ಚೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


