ಹಾಲಿಗೆ ಹಿಂಡಿದ ಜಾತಿಭೇದದ ಹುಳಿ!

ಡೇರಿಗೆ ತಂದ ಹಾಲಿನಲ್ಲೂ ಜಾತಿಭೇದ ಮಾಡುವುದು ಯಾವ ಸರ್ಕಾರಕ್ಕೂ ಶೋಭೆ ತರುವ ಸಂಗತಿಯಲ್ಲ.
ಇದರಿಂದ ಸಮಾನತೆ ಹುಟ್ಟುವ ಬದಲು ಸಮಾಜದಲ್ಲಿ ಮತ್ತಷ್ಟು ಒಡಕು ಕಾಣಿಸಿಕೊಳ್ಳುತ್ತದೆ.
-ವಿನಾಯಕ ಭಟ್ಟ ಮೂರೂರು
ಸಮಾಜದಿಂದ ಜಾತೀಯತೆ ಹೊಡೆದೋಡಿಸಬೇಕಾದ, ಅದಕ್ಕಾಗಿ ಪ್ರಯತ್ನಿಸಬೇಕಾದ ಸರ್ಕಾರವೇ ಜಾತೀಯತೆ ಬಿತ್ತುತ್ತಿದೆ. ಜಾತಿ ಕಾರಣಕ್ಕೆ ವ್ಯಕ್ತಿ ಅಥವಾ ಸಮುದಾಯವನ್ನು ಕೀಳಾಗಿ ನಡೆಸಿಕೊಳ್ಳುವುದು ಎಷ್ಟು ಕೆಟ್ಟದ್ದೋ ಜಾತಿಯ ಕಾರಣಕ್ಕೆ ವ್ಯಕ್ತಿ ಅಥವಾ ಸಮುದಾಯವನ್ನು ತೀರಾ ಉನ್ನತವಾಗಿ, ಪ್ರತ್ಯೇಕವಾಗಿ ಪರಿಗಣಿಸುವುದು ಕೂಡ ತಪ್ಪೇ ಅಲ್ಲವೇ?
ನಮ್ಮ ರಾಜ್ಯ ಸರ್ಕಾರ ಆರಂಭದಲ್ಲಿ ಶಾದಿಭಾಗ್ಯ ಯೋಜನೆ ರೂಪಿಸಿತು. ನಂತರ ಅಹಿಂದ ಮಕ್ಕಳಿಗೆ ಪ್ರವಾಸ ಯೋಜನೆ ತಂದಿತು. ಬಳಿಕ ದುಬಾರಿ ಮದುವೆಗೆ ತೆರಿಗೆ ಹಾಕಹೊರಟಿತು. ಈಗ ಡೇರಿಗಳಿಗೆ ದಲಿತರು ಹಾಲು ತಂದರೆ ಉಳಿದವರಿಗಿಂತ ರು. 2 ಜಾಸ್ತಿ ಎಂದೆ. ಹಾಲಿನಲ್ಲೂ ಜಾತಿ ಹುಡುಕಿದ ಮೊದಲ ಸರ್ಕಾರ ಎಂಬ 'ಖ್ಯಾತಿ'ಗೊಳಗಾಗಿದೆ. ಸಮಾಜ ಕಲ್ಯಾಣ ಸಚಿವ ಆಂಜನೇಯ ಯೋಜನೆ ಘೋಷಿಸಿದ್ದಾರೆ.
ಹಾಲು ಮತ್ತು ನೀರಿಗೆ ಜಾತಿ ಮತ್ತು ಮೈಲಿಗೆ ಎರಡೂ ಇಲ್ಲ. ತುಂಬ ಮಡಿವಂತರೂ ಇದನ್ನು ಒಪ್ಪುತ್ತಾರೆ. ಆದರೆ ನಮ್ಮ ಸರ್ಕಾರ ಅದರಲ್ಲೂ ಜಾತಿ ಹುಡುಕುವಲ್ಲಿ ಯಶಸ್ವಿಯಾಗಿದೆ. ಇನ್ನು ಹಾಲು ಡೇರಿಯವರು ದಲಿತರು ತಂದ ಹಾಲಿನ ಲೆಕ್ಕವನ್ನು ಬೇರೆ ಇಡಬೇಕು. ಯಾಕೆಂದರೆ ಅವರಿಗೆ ರು. 2 ಹೆಚ್ಚು ಕೊಡಬೇಕಲ್ಲ!
ಅವರನ್ನು ಹೊರತುಪಡಿಸಿ ಉಳಿದ ಜಾತಿಯವರೇನು ದನವನ್ನು ಉಪವಾಸ ಕೆಡವಬೇಕೆ? ಇತರ ಜಾತಿಯವರಿಗೆ ಮಾರುಕಟ್ಟೆಯಲ್ಲಿ ಹಿಂಡಿ ಕಡಿಮೆ ದರಕ್ಕೆ ಸಿಗುತ್ತದೆಯೇ ಅಥವಾ ಜಾತಿ ನೋಡಿ ಹಿಂಡಿ ದರ ನಿಗದಿ ಮಾಡುತ್ತಾರೆಯೇ? ಜಾತಿ ಬೇರೆಯಾದ ತಕ್ಷಣ ದನ ನೀಡುವ ಹಾಲಿನ ಪ್ರಮಾಣವೇನು ಹೆಚ್ಚುಕಡಿಮೆಯಾಗುತ್ತದೆಯೇ? ದಲಿತರ ಮನೆಯಲ್ಲಿರುವ ದನಗಳು ಉಳಿದ ಜಾತಿಯ ಮನೆಯಲ್ಲಿರುವ ದನಗಳಿಗಿಂತ ಒಂದೆರಡು ಸೇರು ಕಡಿಮೆ ಹಾಲು ಕೊಡುತ್ತವೆ ಎಂದು ನಮ್ಮ ಸರ್ಕಾರವೇನಾದರೂ ಸಂಶೋಧನೆ ನಡೆಸಿದ್ದರೆ ಆಗ ಅವರಿಗೆ ಮಾತ್ರ ರು. 2 ಹೆಚ್ಚು ನೀಡುವುದರಲ್ಲಿ ಅರ್ಥವಿದೆ.
ಸಮಾನತೆ ತರಲು ಎಂದು ಹೇಳಬಹುದು. ಆದರೆ ಅಂಥದ್ದೇನೂ ಇಲ್ಲ. ಗೋವುಗಳು ಜಾತಿ ನೋಡಿ ಹಾಲು ಕೊಡುವುದಿಲ್ಲ.
ದಲಿತ ಕರೆದರೂ, ಬ್ರಾಹ್ಮಣ ಕರೆದರೂ ಕರೆದರೂ ಗೋವು ಕೊಡುವಷ್ಟೇ ಹಾಲು ಕೊಡುತ್ತದೆ. ಹಾಗಾದರೆ ಒಂದು ಜಾತಿಯವರು ತಂದ ಹಾಲಿಗೆ ಮಾತ್ರ ರು. 2 ಜಾಸ್ತಿ ಕೊಡುವುದರ ಮರ್ಮವೇನು?
ಸಮಾಜದಲ್ಲಿ ಜಾತಿ ಇದೆ, ಒಂದು ಜಾತಿಯನ್ನು ತುಳಿಯಲಾಗುತ್ತದೆ ಎಂದು ಹೇಳುವ ಮತ್ತು ತುಳಿಯುವುದನ್ನು ತಡೆಯಲು ನಾವಿದ್ದೇವೆ ಎಂದು ಪೋಸು ನೀಡುವ ರಾಜಕಾರಣಿಗಳೇ ಸಮಾಜದಲ್ಲಿ ಜಾತಿ ಪದ್ಧತಿಯನ್ನು ಹೆಚ್ಚಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತಮ್ಮ ಮತ ಗಳಿಕೆಗಾಗಿ ರಾಜಕಾರಣಿಗಳು ಜಾತ್ಯಾತೀತ, ಸಮಾನತೆಯ ಹೆಸರಿನಲ್ಲಿ ಹೇಗೆ ಜಾತೀಯತೆ ತುರುಕುತ್ತಿದ್ದಾರೆ ಎಂಬುದಕ್ಕೂ ಇದು ಉತ್ತಮ ಉದಾಹರಣೆ.
ಡೇರಿಗಳಲ್ಲಿ ದಲಿತರು ತಂದ ಹಾಲು ತೆಗೆದುಕೊಳ್ಳುತ್ತಿಲ್ಲ ಎಂದಾದರೆ ಅದನ್ನು ಖಂಡಿಸಬೇಕು ಮತ್ತು ಸರಿಪಡಿಸಬೇಕು. ದಲಿತರು ತಂದ ಹಾಲಿಗೆ ಕಡಿಮೆ ಹಣ ನೀಡುತ್ತಿದ್ದರೆ ಅದನ್ನೂ ಸರಿಪಡಿಸಬೇಕು.
ಆದರೆ, ಅಂತಹ ಘಟನೆಗಳು ಎಲ್ಲೂ ನಡೆದ ವರದಿಯಾಗಿಲ್ಲ. ದಲಿತರು ಹಾಲು ತಂದರೆ ಯಾರೂ ತೆಗೆದುಕೊಳ್ಳುವುದಿಲ್ಲ ಎಂಬ ಸ್ಥಿತಿ ಇದೆಯೇ? ದಲಿತರು ತಂದ ಹಾಲು ಎಂದರೆ ಯಾರೂ ಖರೀದಿಸುವುದಿಲ್ಲವೇ? ಅಥವಾ ದಲಿತರು ಡೇರಿಗೆ ಹಾಲೇ ತರುವ ಸ್ಥಿತಿ ಇಲ್ಲ ಎಂದಾದರೆ ಆಗಲೂ ಸರ್ಕಾರದ ನಿಲುವು ಸಮರ್ಥನೀಯ. ಆದರೆ ಇಂತಹ ಸ್ಥಿತಿ ರಾಜ್ಯದ ಯಾವ ಭಾಗದಲ್ಲೂ ಇಲ್ಲ. ಜಾತಿ ಕಾರಣಕ್ಕೆ ಅವರು ತಂದ ಹಾಲಿಗೆ ಕಡಿಮೆ ಹಣ ನೀಡುತ್ತಿದ್ದರೆ ಅದನ್ನು ಸರಿಪಡಿಸಬೇಕಾಗಿದ್ದು ಸರ್ಕಾರದ ಜವಾಬ್ದಾರಿ. ನಮ್ಮೆಲ್ಲರ ಕರ್ತವ್ಯ ಕೂಡ. ಆದರೆ ಗುಣಮಟ್ಟ ಆಧರಿಸಿ ಹಾಲಿಗೆ ದರ ನೀಡುತ್ತಿರುವಾಗ ದಲಿತರು ತಂದ ಹಾಲಿಗೆ ಮಾತ್ರ ರು. 2 ಹೆಚ್ಚು ಕೊಡಿ ಎಂದರೆ ತಪ್ಪಲ್ಲವೇ?
ಉಳಿದ ಜಾತಿಯವರು ಏನು ಅನ್ಯಾಯ ಮಾಡಿದ್ದಾರೆ ಸ್ವಾಮಿ? ಹಾಲಕ್ಕಿ ಜನಾಂಗದಲ್ಲಿ ಬಡವರಿಲ್ಲವೇ? ನಾಯ್ಕ ಜನಾಂಗದಲ್ಲಿ ಬಡವರಿಲ್ಲವೇ? ಅವರು ತಂದ ಹಾಲಿಗೆ ಯಾಕೆ ಸ್ವಾಮಿ ಕಡಿಮೆ ದರ? ಹಾಲು ಚೆನ್ನಾಗಿಲ್ಲವೇ? ನೀರಿನ ಪ್ರಮಾಣ ಜಾಸ್ತಿಯೇ? ಬೇರೆ ಜಾತಿಯವರು ತಂದ ಹಾಲಿನಲ್ಲಿ ಚಹಾ ಮಾಡಿದರೆ ಚೆನ್ನಾಗಿರುವುದಿಲ್ಲವೇ? ಯಾವ ಜಾತಿಯಲ್ಲಿ ಬಡವರಿಲ್ಲ ಹೇಳಿ. ಎಲ್ಲ ಜಾತಿಯಲ್ಲೂ ಬಡವ-ಶ್ರೀಮಂತರು ಇದ್ದಾರೆ. ಡೇರಿಗೆ ಯಾವ ಶ್ರೀಮಂತನೂ ಹಾಲು ಹೊತ್ತು ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನವೂ ನಮ್ಮ ಸರ್ಕಾರಕ್ಕಿಲ್ಲದಿರುವುದು ಬೇಸರದ ಸಂಗತಿ.
ಸಮಾನತೆ ತರಬೇಕೇ ಹೊರತು ಒಬ್ಬರನ್ನು ಮೇಲೆತ್ತುವ ಕಾಳಜಿಯಲ್ಲಿ ಇತರರನ್ನು ತುಳಿಯುವಂತಾಗಬಾರದು. ಅದು ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಬದಲು ಮತ್ತಷ್ಟು ಅಸಮಾನತೆಗೆ ಕಾರಣವಾಗುತ್ತದೆ.
ಸಮಾತನೆ ತರಬೇಕು ಎಂಬ ಕಾರಣಕ್ಕೆ ಮೀಸಲು ಜಾರಿಯಾಯಿತು. ಅದನ್ನು ಸಮಾಜವೂ ಒಪ್ಪಿಕೊಂಡಿದೆ. ಅವರಿಗೆ ಕಲಿಯಲು ಇತರರಷ್ಟು ಅವಕಾಶಗಳಿಲ್ಲ, ಅದಕ್ಕೆ ಬೇಕಾದ ಆರ್ಥಿಕ ಶಕ್ತಿಯಿಲ್ಲ ಎಂಬುದು ಕೂಡ ಸತ್ಯವೇ. ಆದರೆ ಹಾಲಿಗೂ ಜಾತಿಗೂ ಸಂಬಂಧ ಕಲ್ಪಿಸಿದ್ದನ್ನು ಯಾರೂ ಒಪ್ಪುವಂಥದ್ದಲ್ಲ. ಸರ್ಕಾರ ಮತಬ್ಯಾಂಕ್ಗಾಗಿ ಎಂತ ಕೀಳುಮಟ್ಟಕ್ಕೂ ಇಳಿಯಬಹುದು ಎಂಬುದಕ್ಕೆ ಈ ಯೋಜನೆಯೇ ಸಾಕ್ಷಿ. ಸರ್ಕಾರ ಇದನ್ನು ಒಪ್ಪಲಿಕ್ಕಿಲ್ಲವಾರೂ ಜನ ಮಾತ್ರ ಅದನ್ನು ಹಾಗೇ ಭಾವಿಸುವ ಸಾಧ್ಯತೆಯಿದೆ.
ಹಾಲಿನಲ್ಲಿ ಯಾವ ಅಸಮಾನತೆ ಇದೆ? ದಲಿತರು ಭಾರೀ ಹಣಕೊಟ್ಟು ಹಸು ಖರೀದಿಸಲು ಸಾಧ್ಯವಿಲ್ಲ ಎಂದಾದರೆ ಸರ್ಕಾರ ಬಡ್ಡಿರಹಿತ ಸಾಲ ನೀಡಲಿ. ಈಗಾಗಲೇ ಅಂತಹ ಯೋಜನೆಗಳಿವೆ. ಅದುಬಿಟ್ಟು ಡೇರಿಗೆ ತಂದ ಹಾಲಿನಲ್ಲೂ ಜಾತಿಭೇದ ಮಾಡುವುದು ಯಾವ ಸರ್ಕಾರಕ್ಕೂ ಶೋಭೆ ತರುವ ಸಂಗತಿಯಲ್ಲ. ಇದರಿಂದ ಸಮಾನತೆ ಹುಟ್ಟುವ ಬದಲು ಸಮಾಜದಲ್ಲಿ ಮತ್ತಷ್ಟು ಒಡಕು ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ರು. 2 ಒಬ್ಬರಿಗೆ ಹೆಚ್ಚು ಸಿಗುತ್ತದೆ ಅಂದಕೂಡಲೇ ಇತರ ಜಾತಿಯವರಿಗೆ ಸರ್ಕಾರ ತಮ್ಮನ್ನು ಕೀಳಾಗಿ ಕಾಣುತ್ತಿದೆ ಎಂಬ ಭಾವನೆ ಮೂಡುವುದಿಲ್ಲವೇ? ಹೆಚ್ಚು ಹಣ ನೀಡುತ್ತಿದೆ ಎಂಬ ಕಾರಣಕ್ಕೆ ದಲಿತರನ್ನು ಅಸೂಯೆ, ದ್ವೇಷದ ದೃಷ್ಟಿಯಿಂದ ನೋಡಲು ಅವಕಾಶವಾಗುವುದಿಲ್ಲವೇ? ಹೊರಗೆ ತೋರದಿದ್ದರೂ ಮನಸ್ಸಿನಲ್ಲಿ ಅದು ಇರುವುದಿಲ್ಲವೇ? ಒಂದು ಸಮಾಜಕ್ಕೆ ಒಳ್ಳೆಯದು ಮಾಡುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದರಿಂದ ಇತರ ಸಮಾಜವನ್ನು ತುಳಿದಂತೆ, ಕಡೆಗಣಿಸಿದಂತೆ ಭಾಸವಾಗಬಾರದು. ಅದರಲ್ಲೂ ಹಾಲಿನಂತಹ ವಿಷಯದಲ್ಲಿ ಜಾತಿಯ ವಿಷ ಬೆರೆಸುವ ಕುಕೃತ್ಯಕ್ಕೆ ಸರ್ಕಾರ ಮುಂದಾಗಬಾರದಿತ್ತು. ಇದರಿಂದ ದಲಿತರಿಗೆ ಮತ್ತು ಸರ್ಕಾರಕ್ಕೆ ಸಹಾಯವಾಗಬಹುದಾದರೂ ಒಟ್ಟಾರೆ ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯೇ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಪ್ರತಿಯೊಂದನ್ನೂ ಜಾತಿ ದೃಷ್ಟಿಯಿಂದ ನೋಡುವವರಿಗೆ, ಅದರಲ್ಲೆಲ್ಲ ತಮ್ಮ ಲಾಭ ನೋಡುವವರಿಗೆ ಇದೆಲ್ಲ ಎಲ್ಲಿ ಅರ್ಥವಾದೀತು. ಸಮಾಜದಲ್ಲಿ ಒಗ್ಗಟ್ಟು ಇರಬಾರದು, ಅಸಮಾನತೆ ಇರಬೇಕು. ಆಗಲೇ ತಾವೇನೊ ಭಾರೀ ಸಹಾಯ ಮಾಡುತ್ತಿರುವಂತೆ ಬಿಂಬಿಸಿ ತಮ್ಮ ಕಾರ್ಯಸಾಧಿಸಿಕೊಳ್ಳಬಹುದು. ಆಗ ತಾನೇ ಅವರಿಗೆ ಲಾಭ? ಸಮಾಜದ ಸ್ವಾಸ್ಥ್ಯ ಏನಾದರೇನು? ಅವರಿಗೆ ಉಪಯೋಗವಾದರೆ ಸಾಕು. ಅದಕ್ಕೇ ಹಾಲಿಗೂ ಬೆರೆಸಲಾಗಿದೆ ಜಾತಿಯ ಹಾಲಾಹಲ. ಹಾಲಿನಂಥ ಹಾಲಿಗೂ ಜಾತಿಯ ಹುಳಿಹಿಂಡುವ ಕೆಲಸ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


