ಶೀಘ್ರ ಬಿಜೆಪಿಯಲ್ಲಿ ವಿಲೀನ: ಶ್ರೀರಾಮುಲು

ಬಳ್ಳಾರಿ: ಬಿಜೆಪಿಯಿಂದ ಸಿಡಿದು ಹೊಸ ಪಕ್ಷ ಕಟ್ಟಿದ್ದ ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಮರಳಿ ಗೂಡಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಬುಧವಾರ ಬಳ್ಳಾರಿಯಲ್ಲಿ ನಡೆದ ಬಿಎಸ್ಆರ್ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಾನು ಬಿಜೆಪಿ ಸೇರುವುದಕ್ಕೆ ಸುಷ್ಮಾ ಸ್ವರಾಜ್ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಒಪ್ಪಿಕೊಂಡಿದ್ದಾರೆ. ಯಾರೂ ಅಪಸ್ವರ ಎತ್ತಿಲ್ಲ. ನನ್ನ ಸ್ವಾಭಿಮಾನಕ್ಕಿಂತ ದೇಶದ ಸ್ವಾಭಿಮಾನ ದೊಡ್ಡದು ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಇದೀಗ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿಯೂ ಬಿಎಸ್ಆರ್ ಕಾಂಗ್ರೆಸ್ನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಕ್ಕೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿ ಬಿಜೆಪಿ ಸೇರ್ಪಡೆ ಬಗ್ಗೆ ಅಂತಿಮ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದರು. ಅಂದು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬಿಜೆಪಿ ತೊರೆದಿದ್ದೆ. ಶ್ರೀರಾಮುಲು ಸ್ವಾಭಿಮಾನಕ್ಕೆ ಎಂದೂ ತಲೆಬಾಗುವುದಿಲ್ಲ. ಆದರೆ ದೇಶದ ಹಿತಕ್ಕಾಗಿ ಸ್ವಾರ್ಥವನ್ನು ಬಿಡಬೇಕಾಗುತ್ತದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಉದ್ದೇಶದಿಂದ ನನ್ನ ಸ್ವಾಭಿಮಾನಕ್ಕಿಂತ ದೇಶದ ಸ್ವಾಭಿಮಾನ ದೊಡ್ಡದಾಗಿದ್ದು, ಹಿಂದುಳಿದ ವರ್ಗದ ನಾಯಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಬಿಜೆಪಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ನ್ನು ವಿಲೀನ ಮಾಡಲಾಗುತ್ತಿದೆ ಎಂದರು.
ಬಿಎಸ್ಆರ್ ಮುಖಂಡರು, ಕಾರ್ಯಕರ್ತರ ಅನಿಸಿಕೆಯಂತೆ ನಾನು ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಮುಖಂಡರ ಹತ್ತಿರ ಹೋಗಿದ್ದೆ. ನಾವು ಯಾವುದೇ ಸ್ವಾರ್ಥಕ್ಕಾಗಿ ಪಕ್ಷ ವಿಲೀನ ಮಾಡಿಕೊಳ್ಳುವುದಿಲ್ಲ. ದೇಶಕ್ಕಾಗಿ ವಿಲೀನ ಮಾಡಿಕೊಳ್ಳಲಾಗುತ್ತದೆ. ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಹೊಸ ಪಕ್ಷಗಳು ಬಿಜೆಪಿಯಿಂದ ಉದಯವಾಗಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಕಾರಣವಾಗಿತ್ತು. ಈ ಪರಿಸ್ಥಿತಿ ಲೋಕಸಭೆ ಚುನಾವಣೆಯಲ್ಲೂ ಮರಕಳಿಸಬಾರದು ಎಂಬ ಉದ್ದೇಶದಿಂದ, ಮತ ಹಂಚಿಕೆಯಾಗಿ ಕಾಂಗ್ರೆಸ್ಗೆ ಲಾಭವಾಗಬಾರದು ಎಂಬ ಕಾರಣಕ್ಕೆ ಪಕ್ಷ ವಿಲೀನ ಮಾಡಲಾಗುತ್ತಿದೆ ಎಂದರು.
ಬಿಜೆಪಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಬಿಜೆಪಿ ಕಾರ್ಯಕರ್ತರಾಗಿ, ಯಾವುದೇ ಷರತ್ತಿಲ್ಲದೆ ಬಿಜೆಪಿಗೆ ಸೇರ್ಪಡೆಯಾಗಲು ನಿರ್ಧರಿಸಲಾಗಿದೆ. ಟಿಕೆಟ್ ನೀಡುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


