ಉಸಿರುಗಟ್ಟಿ ಐದು ಕಾರ್ಮಿಕರ ಸಾವು
ಕನ್ನಡಪ್ರಭ ವಾರ್ತೆ ಮಂಡ್ಯ ಮಾ.6
ಸಮೀಪದ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ತೈಲ ಶುದ್ಧೀಕರಣ ಘಟಕದಲ್ಲಿ ರಿಯಾಕ್ಟರ್ ಸ್ವಚ್ಛಗೊಳಿಸಲು ಮುಂದಾಗ ಐವರು ಕಾರ್ಮಿಕರು ಆಮ್ಲಜನಕದ ಕೊರತೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.
ತಾಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ರಿಫೈನರಿ ಘಟಕದಲ್ಲಿ ಕಾರ್ಮಿಕರಾಗಿರುವ ಬಿಹಾರ ಮೂಲದ ಶ್ರೀರಾಮ (25), ಬಿಚ್ಚೂ (26), ಗಾಮಾ (37), ಚೀತು (24) ಹಾಗೂ ರಾಜು (27) ಮೃತಪಟ್ಟವರು. ತೈಲ ಶುದ್ಧೀಕರಣ ಘಟಕದಲ್ಲಿ ಸುಮಾರು 20 ಅಡಿ ಎತ್ತರವಿರುವ ರಿಯಾಕ್ಟರ್ ಒಳಗೆ ಇಳಿದು ಕಲುಷಿತ ಆಯಿಲ್ ಅನ್ನು ಹೊರತೆಗೆಯುವ ಪ್ರಯತ್ನ ನಡೆಸಿದ ವೇಳೆ ಐವರು ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಅಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಾಯಿತು?: ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಪತ್ ರಿಫೈನರಿ ಘಟಕ ಕಾರ್ಯನಿರ್ವಹಿಸುತ್ತಿದೆ. ಈ ಘಟಕದಲ್ಲಿ ಬಿಹಾರ ಮೂಲದ ಎಂಟು ಮಂದಿ ಕೆಲಸ ಮಾಡುತ್ತಿದ್ದಾರೆ. ಘಟಕದ ಮಾಲೀಕ ಸಂಪತ್ ಬೆಂಗಳೂರಿನವರು. ಆಗಾಗ ಘಟಕಕ್ಕೆ ಬಂದು ಅದರ ಮೇಲುಸ್ತುವಾರಿ ನೋಡಿಕೊಂಡು ಹೋಗುತ್ತಿದ್ದರು.
ಕಳೆದ ನಾಲ್ಕು ವರ್ಷಗಳಿಂದಲೂ ಯಾವುದೇ ತೊಂದರೆ ಇಲ್ಲದೇ ಕೆಲಸ ಸಾಗಿತ್ತು. ಗುರುವಾರ ಬೆಳಗ್ಗೆ 9.30 ರ ವೇಳೆಗೆ ರಿಯಾಕ್ಟರ್ನಲ್ಲಿದ್ದ ಕಲುಷಿತ ಆಯಿಲ್ ಅನ್ನು ಹೊರ ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮೊದಲು ಇಬ್ಬರು ಕಾರ್ಮಿಕರು ಮುಂದಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಇನ್ನೂ ಮೂವರು ರಿಯಾಕ್ಟರ್ ಒಳಗೆ ಇಳಿದರು. ರಿಯಾಕ್ಟರ್ ಒಳಗೆ ಇಳಿದವರಿಗೆ ಏರ್ ಕಂಪ್ರೆಸರ್ ಮೂಲಕ ಆಮ್ಲಜನಕ ಪೂರೈಸಲಾಗುತ್ತಿತ್ತು. ಇದು ಅವರಿಗೆ ಸಾಕಾಗದೆ ಅಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ರಿಯಾಕ್ಟರ್ ಒಳಗಿಂದ ಕಲುಷಿತ ಆಯಿಲ್ ಅನ್ನು ಬಕೆಟ್ಗಳಲ್ಲಿ ತುಂಬಿ ಹಗ್ಗದ ಮೂಲಕ ಮೇಲೆಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ರಿಯಾಕ್ಟರ್ ಒಳಗೆ ಹೋದವರಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ಗಮನಿಸಿದ ಘಟಕದಲ್ಲಿದ್ದ ಇತರೆ ಮೂವರು ಆತಂಕಗೊಂಡರು. ಎಷ್ಟೇ ಕೂಗಿದರೂ ಒಳಗಿದ್ದವರಿಂದ ಉತ್ತರ ಬಾರದಿದ್ದಾಗ ಮತ್ತೊಬ್ಬ ಕಾರ್ಮಿಕ ಮುನ್ನಾ ಎಂಬಾತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಜಿ.ಬೊರಸೆ, ಡಿವೈಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಸಿಪಿಐ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಆಗಮಿಸಿದರು. ನಂತರ ರಿಯಾಕ್ಟರ್ ಅನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸಿ ಐವರನ್ನು ಹೊರತೆಗೆದು, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಐವರೂ ಅಸುನೀಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂಪನಿ ಮಾಲೀಕ ನಾಪತ್ತೆ
ಐವರು ಕಾರ್ಮಿಕರ ಸಾವಿಗೆ ಕಾರಣವಾಗಿರುವ ಸಂಪತ್ ರಿಫೈನರ್ ಕಂಪನಿಯ ಮಾಲೀಕ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ರಿಫೈನರಿ ಘಟಕದ ಮಾಲೀಕರಾದ ಕುಮಾರ್ ಮತ್ತು ಅರುಣ್ ವಿರುದ್ಧ ಕೇಸು ದಾಖಲಾಗಿದೆ. ಇವರಿಬ್ಬರೂ ಸಹೋದರರಾಗಿದ್ದು, ತಂದೆ ಸಂಪತ್ ಹೆಸರಿನಲ್ಲಿ ರಿಫೈನರಿ ಘಟಕವನ್ನು ಮಂಡ್ಯದಲ್ಲಿ ಕಳೆದ 4 ವರ್ಷಗಳ ಹಿಂದೆಯೇ ಆರಂಭಿಸಿದ್ದಾರೆ. ಘಟನೆ ನಡೆದ ನಂತರ ಮಾಲೀಕರಾದ ಕುಮಾರ್ ಮತ್ತು ಅರುಣ್ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಾಪತ್ತೆಯಾಗಿರುವ ಇವರಿಬ್ಬರನ್ನೂ ಬಂಧಿಸಲು ವಿಶೇಷ ತಂಡವನ್ನು ರಚಿಸಿ, ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಘಟನೆ ನಂತರದ ಕ್ರಮಗಳನ್ನು ಜಿಲ್ಲಾ ಎಸ್ಪಿ ಭೂಷಣ್ ಕನ್ನಡಪ್ರಭಕ್ಕೆ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

