ಪ್ರಧಾನ ಸುದ್ದಿ

ಮೊದಲ ಮಹಾಯುದ್ಧದಲ್ಲಿ ಗೆದ್ದ ಎಂಎಸ್‌ಜಿ, ರಾಚಯ್ಯ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಮಾ. 7
ದೇಶದಲ್ಲಿ ಲೋಕಸಭೆಗೆ ಮೊದಲ ಸಾರ್ವತ್ರಿಕ ಚುನಾವಣೆ 1952 ರಲ್ಲಿ ನಡೆಯಿತು. ಆಗ ರಾಜ್ಯದಲ್ಲಿ ಇದ್ದಿದ್ದು ಕೇವಲ 9 ಕ್ಷೇತ್ರಗಳು ಮಾತ್ರ. ಅವುಗಳಲ್ಲಿ ಕೋಲಾರ ಮತ್ತು ಮೈಸೂರು ದ್ವಿಸದಸ್ಯ ಕ್ಷೇತ್ರಗಳು. ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಮಂಡ್ಯ, ಹಾಸನ- ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಏಕಸದಸ್ಯ ಕ್ಷೇತ್ರಗಳು.
ಕೋಲಾರದಿಂದ ಎಂ.ವಿ. ಕೃಷ್ಣಪ್ಪ, ದೊಡ್ಡತಿಮ್ಮಯ್ಯ, ತುಮಕೂರಿನಿಂದ ಸಿ.ಆರ್. ಬಸಪ್ಪ, ಬೆಂಗಳೂರು ಉತ್ತರಿಂದ ಎನ್. ಕೇಶವ ಅಯ್ಯಂಗಾರ್, ಬೆಂಗಳೂರು ದಕ್ಷಿಣದಿಂದ ಟಿ.ಮಾದಯ್ಯಗೌಡ, ಮಂಡ್ಯದಿಂದ ಎಂ.ಕೆ. ಶಿವನಂಜಪ್ಪ, ಮೈಸೂರಿನಿಂದ ಎನ್.ರಾಚಯ್ಯ, ಎಂ.ಎಸ್. ಗುರುಪಾದಸ್ವಾಮಿ, ಹಾಸನ- ಚಿಕ್ಕಮಗಳೂರಿನಿಂದ ಎಚ್. ಸಿದ್ದನಂಜಪ್ಪ, ಶಿವಮೊಗ್ಗದಿಂದ ಕೆ.ಜಿ. ಒಡೆಯರ್, ಚಿತ್ರದುರ್ಗದಿಂದ ಎಸ್. ನಿಜಲಿಂಗಪ್ಪ ಆಯ್ಕೆಯಾಗಿದ್ದರು. ಗುರುಪಾದಸ್ವಾಮಿ ಮಾತ್ರ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ (ಕೆಎಂಪಿಪಿಗೆ) ಸೇರಿದವರು. ಉಳಿದವರೆಲ್ಲಾ ಕಾಂಗ್ರೆಸ್ ಪಕ್ಷದವರು. 29 ವರ್ಷದ ಯುವಕನಾಗಿದ್ದ ಗುರುಪಾದಸ್ವಾಮಿ ಅವರು ಅಂದಿನ ಕಾಂಗ್ರೆಸ್ ಘಟಾನುಘಟಿ ನಾಯಕರಾಗಿದ್ದ ಎಚ್.ಸಿ. ದಾಸಪ್ಪ ಅವರನ್ನೇ ಸೋಲಿಸಿದ್ದು ವಿಶೇಷ.
ಎನ್. ರಾಚಯ್ಯ ಅವರು 2,09,203, ಎಂ.ಎಸ್. ಗುರುಪಾದಸ್ವಾಮಿ ಅವರು 1,96,175 ಮತಗಳನ್ನು ಗಳಿಸಿ, ಆಯ್ಕೆಯಾದರು. 1,64,577 ಮತಗಳನ್ನು ಪಡೆದ ಎಚ್.ಸಿ. ದಾಸಪ್ಪ, 1,42,363 ಮತಗಳನ್ನು ಪಡೆದ ಎಸ್.ಎಂ. ಸಿದ್ದಯ್ಯ ಸೋತರು.
ಮತ್ತೆ ಸ್ಪರ್ಧೆ ಮಾಡಲಿಲ್ಲ: ಎನ್. ರಾಚಯ್ಯ ಅವರು ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ. ಬದಲಿಗೆ ಹುಣಸೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ 1957 ರಲ್ಲಿ ವಿಧಾನಸಭೆಗೆ ಆಯ್ಕೆಯಾದರು. ಬಿ.ಡಿ. ಜತ್ತಿ ಸಂಪುಟದಲ್ಲಿ ಸಚಿವರಾಗಿದ್ದರು. 1962 ರಲ್ಲಿ ಎಚ್.ಡಿ. ಕೋಟೆ ಮೀಸಲು ಕ್ಷೇತ್ರವಾದಾಗ ಸ್ಪರ್ಧಿಸಿ ಸೋತರು. 1970 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಡಿ.ದೇವರಾಜ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು.
ಎಂ.ಎಸ್. ಗುರುಪಾದಸ್ವಾಮಿ ಅವರು 1957ರ ಚುನಾವಣೆಯಲ್ಲಿ ಎರಡನೇ ಬಾರಿ ಲೋಕಸಭೆಗೆ ಪಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 1977 ರಲ್ಲಿ ಭಾರತೀಯ ಲೋಕದಳ, 1980ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸೋತರು. ನೇರ ಚುನಾವಣೆಯಲ್ಲಿ ಗೆದ್ದಿದ್ದು ಅವರಿಗೆ 1952 ಕೊನೆ. ನಂತರ ಕರ್ನಾಟಕ ಹಾಗೂ ಉತ್ತರ ಪ್ರದೇಶದಿಂದ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಕೇಂದ್ರದಲ್ಲಿ ಇಂದಿರಾಗಾಂಧಿ, ವಿ.ಪಿ. ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿದ್ದರು. ವಿ.ಪಿ. ಸರ್ಕಾರ ಇದ್ದಾಗ ಆಡಳಿತ ಪಕ್ಷದ ನಾಯಕರೂ ಆಗಿದ್ದರು.
ಗುರುಪಾದಸ್ವಾಮಿ ಅವರು ಪ್ರಜಾಮತ ವಾರಪತ್ರಿಕೆಯ ಸಂಪಾದಕರಾಗಿದ್ದರು ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಅಧ್ಯಕ್ಷರಾಗಿದ್ದರು. ಎಸ್.ಎಂ. ಸಿದ್ದಯ್ಯ ಅವರು 1957 ರಲ್ಲಿ ಮೈಸೂರು, 1962 ರಿಂದ 1972 ರವರೆಗೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದರು. ಆದರೆ ಎಚ್.ಸಿ. ದಾಸಪ್ಪ ಅವರು ಮತ್ತೆ ಮೈಸೂರಿನಿಂದ ಸ್ಪರ್ಧಿಸಲಿಲ್ಲ. ಬದಲಿಗೆ 1957, 1962ರಲ್ಲಿ ಬೆಂಗಳೂರಿನಿಂದ ಆಯ್ಕೆಯಾಗಿದ್ದರು. ಆದರೆ ದಾಸಪ್ಪ ಅವರ ಪುತ್ರ ಎಚ್.ಡಿ. ತುಳಸೀದಾಸ್ ಅವರು 1967, 1972, 1977- ಹೀಗೆ ಸತತ ಮೂರು ಬಾರಿ  ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1980 ರಲ್ಲಿ ತುಳಸೀದಾಸ್ ಅವರು ಸೋತರು.


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.