ಪ್ರಧಾನ ಸುದ್ದಿ

ಪರೀಕ್ಷೆಯ ದಿನದ ಯಶಸ್ಸಿಗಾಗಿ 12 ರಹಸ್ಯಗಳು

ಪರೀಕ್ಷೆಯ ದಿನದ ಯಶಸ್ಸಿಗಾಗಿ 12 ರಹಸ್ಯಗಳು
Published On :

ಮೊದಲೇ ಓದಲು ಶುರು ಮಾಡಿದ್ದರೆ ಸಮಯ ಸಿಗುತ್ತಿತ್ತು ಎಂದು ದುಃಖ ಪಡುವುದು ಮಾಮೂಲು ಎಲ್ಲರಿಗೂ ಹೀಗೇ ಆಗುತ್ತದೆ. 'ಓದಲು ತುಂಬಾ ಇದೆ. ಆದ್ರೆ ಟೈಮ್ ಇಲ್ಲ' ಎಂದು ನಿಮಗೂ ಅನ್ನಿಸಬಹುದು. ಇರುವ  ದಿನಗಳನ್ನು ಸರಿಯಾಗಿ ಬಳಸುವ ಮನಸ್ಸು ಮಾಡಿ. ಟೈಮ್ ತುಂಬಾ ಕಡಿಮೆ ಇದೆ, ಓದುವುದು ಬೆಟ್ಟದಷ್ಟಿದೆ ಎಂಬ ಸ್ಥಿತಿ ಇರುವಾಗ ಸಮಾಧಾನದಿಂದ ಪರೀಕ್ಷೆಗೆ ಸಿದ್ಧರಾಗಿ. ತಡವೇನೂ ಆಗಿಲ್ಲ, ಓದಿ!

1. ಪರೀಕ್ಷೆ ಹಿಂದಿನ ದಿನ ಅಟ್‌ಲೀಸ್ಟ್ 6 ಗಂಟೆ ನಿದ್ದೆ ಮಾಡಿ. ನಿಮ್ಮನ್ನು ಇನ್ನಷ್ಟು ಫ್ರೆಷ್ ಮತ್ತು ಅಲರ್ಟ್ ಆಗಿರಿಸಲಿಕ್ಕೆ 8 ಗಂಟೆ ನಿದ್ದೆ ಇನ್ನೂ ಉತ್ತಮ. ಇದರಿಂದ ಏಕಾಗ್ರಚಿತ್ತತೆ (ಕಾನ್ಸಂಟ್ರೇಷನ್) ಮತ್ತು ಮೆಮೋರಿ ಪವರ್ ಹೆಚ್ಚಾಗುತ್ತೆ. ಪರೀಕ್ಷೆ ಬರೆವಾಗ ವೇಗವಾಗಿ, ಸರಿಯಾಗಿ, ಎಲ್ಲವುದನ್ನೂ ನೆನಪಿಸಿಕೊಂಡು ಬರೆಯಲಿಕ್ಕೆ ಸಾಧ್ಯವಾಗುತ್ತೆ.

2. ಲಘುವಾದ, ಪೌಷ್ಟಿಕಾಂಶ ಇರೋ ಆಹಾರ ಸೇವಿಸಿ. ಪರೀಕ್ಷೆಗೆ ಖಾಲಿ ಹೊಟ್ಟೆಯಲ್ಲಿ ಅಥವಾ ತುಂಬಾ ತಿಂದು ಹೋಗಬೇಡಿ. ನಿಮ್ಮ ದೇಹ ಮತ್ತು ಮನಸ್ಸನ್ನು ಚುರುಕಾಗಿಡಲಿಕ್ಕೆ, ಶಕ್ತಿಗಾಗಿ ಆಹಾರ ಬೇಕೇ ಬೇಕು.
ಅ) ರೊಟ್ಟಿ ಅಥವಾ ಚಪಾತಿ ಮತ್ತು ತರಕಾರಿಯ ಪಲ್ಯಗಳು.
ಆ)    ಅನ್ನ, ಸಾರು ಮತ್ತು ತರಕಾರಿ
ಇ)    ಕಾರ್ನ್‌ಫ್ಲೇಕ್ಸ್, ಹಾಲು, ಡ್ರೈ ಫ್ರೂಟ್ಸ್
ಈ)    ಬ್ರೆಡ್ ಸ್ಯಾಂಡ್‌ವಿಚ್ ಮತ್ತು ತರಕಾರಿ
ಒಂದುವೇಳೆ ತಿನ್ನೋದಕ್ಕೆ ನೀವು ನರ್ವಸ್ ಆಗಿದ್ರೆ, ಮೊಸರನ್ನ ನಿಮ್ಮ ಹೊಟ್ಟೆಯನ್ನ ತಂಪಾಗಿಡಬಲ್ಲುದು. ಅಥವಾ ಒಣ ಹಣ್ಣುಗಳ ಜೊತೆಗೆ (ದ್ರಾಕ್ಷಿ, ಬಾದಾಮಿ, ಗೋಡಂಬಿ) ಬಾಳೆಹಣ್ಣುಗಳನ್ನು ತಿನ್ನಿ. ಅದರ ಮೇಲೆ ಒಂದು ಗ್ಲಾಸ್ ಹಾಲು ಕುಡೀರಿ. ಕರಿದಿರೋ ಆಹಾರ ಅಥವಾ ಎಣ್ಣೆ ಹೆಚ್ಚಾದ ಆಹಾರ ತಿನ್ನಬೇಡಿ, ಏಕೆಂದರೆ ಜೀರ್ಣ ಆಗೋದು ಸುಲಭವಲ್ಲ!

3. ಪಾಸಿಟಿವ್ ಮೈಂಡ್ ಇರಲಿ. ಮನೆ ಬಿಡೋ ಮುನ್ನ ಈ ದೃಷ್ಟಿ ವ್ಯಾಯಾಮ ಮಾಡಿ.
ಅ) ಕುರ್ಚಿಯ ಮೇಲೆ ಆರಾಮಾಗಿ ಕುಳಿತುಕೊಳ್ಳಿ, ಕಣ್ಣು ಮುಚ್ಚಿ.
ಆ) ಮೂರ್ನಾಲ್ಕು ಬಾರಿ ದೀರ್ಘವಾಗಿ ಉಸಿರಾಡಿ. ನಂತರ ಕೆಳಕಂಡಂತೆ ಕಲ್ಪಿಸಿಕೊಳ್ಳಿ.
'ಮನೆಯಿಂದ ನೀವು ಖುಷಿಯಾಗಿ ಹೋಗುತ್ತಿದ್ದೀರಿ. ಪರೀಕ್ಷೆಯ ಹಾಲ್ ಅನ್ನು ಸುರಕ್ಷಿತವಾಗಿ ಸೇರಿದ್ದೀರಿ. ನಿಮ್ಮ ಮುಖದ ಮೇಲೆ ನಗು ಇದೆ. ಪರೀಕ್ಷೆಯ ಹಾಲ್‌ನ ಕುರ್ಚಿಯಲ್ಲಿ ಹಿತವಾಗಿ ಕುಳಿತಿದ್ದೀರಿ. ಪರೀಕ್ಷೆಯ ಪೇಪರ್ ಅನ್ನು ನೀಟಾಗಿ, ಕರೆಕ್ಟಾಗಿ ಬರೆಯುತ್ತಿದ್ದೀರಿ. ಅಷ್ಟೇ ಖುಷಿ ಮತ್ತು ಉತ್ಸಾಹದಿಂದ ಪರೀಕ್ಷೆ ಮುಗಿದಾಗ ಉತ್ತರ ಪತ್ರಿಕೆಯನ್ನು ಕೊಡುತ್ತಿದ್ದೀರಿ. ದೊಡ್ಡ ನಗುಮೊಗದೊಂದಿಗೆ ಆರಾಮವಾಗಿ ಮನೆಗೆ ಬರುತ್ತಿದ್ದೀರಿ!'
ಒಳ್ಳೆ ಕಲ್ಪನೆ ಅಲ್ವಾ? ಹಿತವಾದ ಭಾವನೆ ತರುತ್ತೆ! ಈ ವ್ಯಾಯಾಮದಿಂದ ನಿಮ್ಮ ಮೂಡ್ ಇದ್ದಕ್ಕಿದ್ದಂತೆ ಸರಿ ಹೋಗುತ್ತೆ, ನಿಮ್ಮೆಲ್ಲ ಯೋಚನೆಗಳು ಪಾಸಿಟಿವ್ ಆಗುತ್ತೆ. ಪರೀಕ್ಷೆಯ ಭಯ, ಒತ್ತಡ ಎಲ್ಲಾ ಕಡಿಮೆಯಾಗುತ್ತೆ. ಪರೀಕ್ಷೆಗೆ ಹೋಗುವ ಮುನ್ನ ಈ 'ಕಾಲ್ಪನಿಕ ದೃಶ್ಯ ವ್ಯಾಯಾಮ' ಮಾಡಿ.

4. ಪರೀಕ್ಷೆಗೆ ತಡವಾಗಿ ಹೋಗುವುದು, ಅವಸರಿಸಿ ಹೋಗುವುದು ಕೂಡದು. ಸ್ನೇಹಿತರಿಗೆ ಹಾಯ್ ಹೇಳಿ. ಆದರೆ ಪರೀಕ್ಷೆಯ ಬಗ್ಗೆ ಡಿಸ್ಕಸ್ ಮಾಡಬೇಡಿ! ಎಕ್ಸಾಮ್ ಹಾಲ್ ಅನ್ನು ನಗುತ್ತ ಪ್ರವೇಶ ಮಾಡಿ. ರಿಸಲ್ಟ್ ಅಥವಾ ಹೇಗೆ ಮಾಡ್ತೀನೋ ಅನ್ನೋದರ ಬಗ್ಗೆ ಎಲ್ಲಾ ಚಿಂತೆ ಮಾಡ್ಬೇಡಿ. ನಿಮ್ಮ ಕೆಲಸ ನೀವು ಮಾಡಿ. ಶಾಂತವಾಗಿರೋದನ್ನ ಕಲೀರಿ.
ಪರೀಕ್ಷೆ ಹಾಲ್ ಪ್ರವೇಶಿಸುತ್ತಿದ್ದಂತೆ ಹೃದಯ ಜೋರಾಗಿ ಹೊಡೆದುಕೊಳ್ಳೋದು, ಹೊಟ್ಟೆ ತುಂಬಾ ಚಿಟ್ಟೆ ಓಡಾಡಿದಂಗೆ ಆಗೋದು, ಕತ್ತು ಗಲ್ಲ ಕೆಂಪಗಾಗೋದು, ಕೈ ಬೆವರೋದು- ಎಲ್ಲಾ ನ್ಯಾಚುರಲ್! ಇದೆಲ್ಲವೂ ಒತ್ತಡದ ಚಿಹ್ನೆಗಳು!

ಡೋಂಟ್ ವರಿ! ಯಾವುದೇ 'ಫೈಟ್‌' ಎದುರಿಸಬೇಕಾಗಿ ಬಂದಾಗಲೂ ನಮ್ಮ ದೇಹ ಇದೇ ರೀತಿ ಕೆಲಸ ಮಾಡುತ್ತೆ! ಇಂಥ ಭಾವನೆಗಳನ್ನು ನೀವು ಸಂಪೂರ್ಣವಾಗಿ ನಿವಾರಿಸಲು ಆಗೋದಿಲ್ಲ. ಅದಲ್ಲದೆ ಸ್ವಲ್ಪೇ ಸ್ವಲ್ಪ ಟೆನ್ಷನ್ ಒಳ್ಳೆಯದೇ ಬಿಡಿ. ಯಾಕಂದ್ರೆ ಇದರಿಂದ ಬ್ರೇನ್ ಉತ್ತೇಜಿತಗೊಳ್ಳುತ್ತೆ, ನೀವು ಇನ್ನಷ್ಟು ಅಲರ್ಟ್ (ಜಾಗೃತ) ಆಗ್ತೀರಿ, ಇದರಿಂದ ಪರೀಕ್ಷೆ ಚೆನ್ನಾಗಿ ಆಗುತ್ತೆ! ಅದಕ್ಕಾಗೇ, ಒಂದುವೇಳೆ ಈ ಬಗೆಯ ಲಕ್ಷಣ ಕಾಣಿಸಿಕೊಂಡಲ್ಲಿ ಡೋಂಟ್ ವರಿ! ಇದು ನಿಮಗೆ ಒಳ್ಳೆಯದೇ. ಎದೆ ಹೊಡ್ಕೊಳ್ಳೋದನ್ನೆಲ್ಲ ಮರೆತು ಸ್ಮೈಲ್ ಮಾಡ್ಕೊಂಡು ಎಕ್ಸಾಮ್ ಹಾಲ್ ಪ್ರವೇಶ ಮಾಡಿ.

ನೀವು ಏನು ಸಾಧಿಸಬೇಕೆಂದಿದ್ದೀರೋ ಅದರ ಕುರಿತಷ್ಟೇ ಯೋಚಿಸಿ. ಏನಾಗಬಾರದು ಅನ್ನುವುದರ ಬಗ್ಗೆ ಎಂದೆಂದೂ ಯೋಚಿಸಬೇಡಿ. ಇದು - ಪರೀಕ್ಷೆ, ವೃತ್ತಿ ಮತ್ತು ಜೀವನದ- ಯಶಸ್ಸಿನ ಅತಿ ದೊಡ್ಡ ಸೀಕ್ರೆಟ್.

5. ಕುರ್ಚಿಯಲ್ಲಿ ಆರಾಮಾಗಿ ಕುಳಿತು, ರಿಲ್ಯಾಕ್ಸ್ ಮಾಡಿ ಮತ್ತು ಮೂರ್ನಾಲ್ಕು ದೀರ್ಘ ಉಸಿರು ತೆಗೆದುಕೊಳ್ಳಿ. ಇದು ತುಂಬಾ ಮುಖ್ಯ. ಚೇರ್‌ನಲ್ಲಿ ಕೂತಾಗ ಇದನ್ನು ಮರೀಬೇಡಿ. ಫೇಲ್ ಆದರೆ ಎಂದೆಲ್ಲ ಯೋಚಿಸಬಾರದು. ಪೇಪರ್ ಹೇಗೆ ಮಾಡ್ತೀನೋ ದೇವರೇ ಎಂದೂ ಚಿಂತಿಸಬೇಡಿ. 'ಐ ಯಾಮ್ ಕೂಲ್, ಐ ಯಾಮ್ ಸ್ಮಾರ್ಟ್‌' ಎಂದು ನಿಮಗೆ ನೀವೇ ಹೇಳಿಕೊಳ್ಳಿ.
6. ಪ್ರಶ್ನೆ ಪತ್ರಿಕೆ ಕೈ ಗೆ ಕೊಟ್ಟಾಗ, ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಿ. ಆಳವಾದ ದೀರ್ಘವಾದ ಉಸಿರು ಬಿಟ್ಟು ರಿಲ್ಯಾಕ್ಸ್ ಆಗಿ. ಸುತ್ತಮುತ್ತಲೂ ಇರುವವರತ್ತ ಗಮನ ಹೋಗದಿರಲಿ. ಏಕೆಂದರೆ   ಎಲ್ಲರೂ ಟೆನ್ಷನ್‌ನಲ್ಲೇ ಕೂತಿರುವುದನ್ನು ನೋಡುವುದರಿಂದ ಪ್ರಯೋಜನವಿಲ್ಲ. ಪ್ರಶ್ನೆ ಓದಿ, ತಲೆಯೊಳಗೆ ಉತ್ತರ ಬಂದೇ ಬರುತ್ತದೆ!
7. ಸುಲಭವಾದ ಪ್ರಶ್ನೆಗಳನ್ನು ಮೊದಲು ಉತ್ತರಿಸಿ. ನೀಟಾಗಿ ಬರೆಯಿರಿ. ಎಕ್ಸಾಮಿನರ್‌ಗೆ ನಿಮ್ಮ ಮೊದಲ ಪೇಜ್ ಮನ ಸೆಳೆಯಬೇಕು. ಪ್ರಶ್ನೆಗಳನ್ನು ಆಯ್ಕೆಮಾಡಿ. ನಿಮಗೆ ಗೊತ್ತಿರುವುದನ್ನು ಮೊದಲು ಬರೆಯಿರಿ. ಆತ್ಮವಿಶ್ವಾಸ ಮೂಡುತ್ತದೆ. ಒಂದೇ ಪ್ರಶ್ನೆಗೆ ತುಂಬಾ ಟೈಮ್ ಖರ್ಚು ಮಾಡಬೇಡಿ. ಅಂಕಗಳಿಗೆ ಸರಿಯಾಗಿ ಉತ್ತರ ಬರೆಯುವುದು ಗೊತ್ತಿರಲಿ. ಪ್ರಶ್ನೆಪತ್ರಿಕೆಯಲ್ಲಿರುವ ಸೂಚನೆಗಳಿಗೆ ಗಮನಕೊಡಿ. ಅರ್ಧ ಗಂಟೆ ಬರೆಯಬೇಕಾಗಿರುವ ಪ್ರಶ್ನೆಗೆ ಬರೆಯಲಿಕ್ಕೆ ಪರೀಕ್ಷೆ ಕೊನೆಗೆ ಕೇವಲ 10 ನಿಮಿಷ ಮಾತ್ರ ಇದೆ ಅನ್ನುವ ಸಂದರ್ಭ ತಂದುಕೊಳ್ಳಬೇಡಿ. ಅಪ್ಪಿತಪ್ಪಿ ಹೀಗಾದರೆ, ಉತ್ತರ ಬರೆಯುವುದಕ್ಕೆ ಒಂದು ವಿಶೇಷ ಮಾರ್ಗ ಅನುಸರಿಸಿ. ಉತ್ತರದಲ್ಲಿ ಔಟ್‌ಲೈನ್ ಇರಲಿ. ನಿಮಗೆ ಇದು ತಿಳಿದಿತ್ತು ಎಂಬುದು ಪರೀಕ್ಷಕರಿಗೆ ತಿಳಿಯಲಿ.

8. ಮುಖ್ಯ ಪಾಯಿಂಟ್‌ಗಳನ್ನು ಬರೆಯಿರಿ. ಇರುವ ಸಮಯದಲ್ಲಿ ಹೆಚ್ಚು ಅಂಕ ಸಿಗಲಿಕ್ಕೆ ಸಾಧ್ಯವಾಗುತ್ತದೆ.
ಒಂದುವೇಳೆ ಕೆಲವು ಪಾಯಿಂಟ್‌ಗಳು ಮರೆತು ಹೋದಲ್ಲಿ ಸ್ವಲ್ಪ ಖಾಲಿ ಜಾಗ ಬಿಟ್ಟು ಇತರೆ ಪ್ರಶ್ನೆಗಳನ್ನು ಉತ್ತರಿಸುತ್ತ ಹೋಗಿ. ಅಯ್ಯೋ ಮರೆತು ಹೋಯಿತಲ್ಲ, ಯಾವಾಗ್ಲೂ ಹಿಂಗೇ ಆಗುತ್ತೆ ಎಂದೆಲ್ಲ ಒದ್ದಾಡಬೇಡಿ. ಶಾಂತವಾಗಿರಿ. ಪರೀಕ್ಷೆಯ ಕೊನೆಗೆ ಅದು ನೆನಪಾಗಬಹುದು.

9. ಕಡ್ಡಾಯ ಎಂದು ಸೂಚಿಸಿರುವ ಎಲ್ಲ ಪ್ರಶ್ನೆಗಳನ್ನು ಉತ್ತರಿಸಿ. ಒಂದುವೇಳೆ ಉತ್ತರ ಹೊಳೆಯದಿದ್ದಲ್ಲಿ ಈ ಟ್ರಿಕ್‌ಗಳನ್ನು ಮಾಡಿ.
ಅ)    ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಆ ಪ್ರಶ್ನೆಗೆ ಉತ್ತರಿಸಿ.
ಆ)    ಒಂದುವೇಳೆ ನಿಮಗೆ ಉತ್ತರವೇ ಗೊತ್ತಿಲ್ಲ ಅಥವಾ ಸಂಪೂರ್ಣವಾಗಿ ಉತ್ತರಿಸಲಾಗುತ್ತಿಲ್ಲ ಎಂದಾದಲ್ಲಿ ಎಷ್ಟು ಗೊತ್ತಿದೆಯೋ ಅಷ್ಟು ಉತ್ತರಿಸಿ. ಉತ್ತರಿಸದೇ ಇದ್ದರೆ ಸೊನ್ನೆ ಬರುತ್ತದೆ. ಅದರ ಬದಲು ಏನಾದರೂ ಪ್ರಯತ್ನಿಸಿದಾಗ ಕೆಲವು ಅಂಕಗಳಾದರೂ ಸಿಗುತ್ತದೆ.
ಇ)    ನೇರವಾದ ಪಾಯಿಂಟ್‌ಗಳು ಗೊತ್ತಿರದಿದ್ದಾಗ ಅದಕ್ಕೆ ಸಂಬಂಧಿಸಿದ ಮಾಹಿತಿ ಬರೆಯಿರಿ. ಎಕ್ಸಾಮಿನರ್ ಅದಕ್ಕಾದರೂ ಮಾರ್ಕ್ಸ್ ಕೊಡುತ್ತಾರೆ. ಸೊನ್ನೆಗಿಂತ ಇದು ಉತ್ತಮ!
10. ಸುಸ್ತಾದರೆ, ಮೂರ್ಛೆ ಹೋದರೆ, ಟೆನ್ಷನ್ ಆದರೆ ಸಣ್ಣದೊಂದು ಬ್ರೇಕ್ ತೆಗೆದುಕೊಳ್ಳಿ.
ಕೆಲವೊಮ್ಮೆ ಭಯ ಅಥವಾ ಟೆನ್ಷನ್‌ನಿಂದ ಕಣ್ಣು ಕತ್ತಲು ಕವಿದಂತೆ ಆಗುತ್ತೆ. ಅಂಥ ಸಮಯದಲ್ಲಿ ತೀರಾ ಒದ್ದಾಡುವ ಅಗತ್ಯವಿಲ್ಲ. ಆಗ ಹೀಗೆ ಮಾಡಿ- ಬರೆಯುವುದನ್ನು ನಿಲ್ಲಿಸಿ, ನೇರವಾಗಿ ಕುಳಿತು, ಕಣ್ಮುಚ್ಚಿ 4-5 ಬಾರಿ ದೀರ್ಘ ಉಸಿರು ತೆಗೆದುಕೊಳ್ಳಿ. ನಂತರ ಸಹಜವಾದ ಉಸಿರಾಟ ಮಾಡಿ. ಈಗ ಕಣ್ತೆರೆದು ಬರೆಯುವುದನ್ನು ಮುಂದುವರೆಸಿ.
ಈ ಮಿನಿ ಬ್ರೇಕ್ ನಿಮಗೆ ಸಹಾಯ ಮಾಡುತ್ತೆ. ಸಾಧ್ಯವಾದರೆ ನೀರು ಕುಡಿಯಿರಿ. ಪರೀಕ್ಷೆಯ ವೇಳೆ ಒಂದು ಬಾಟಲ್ ನೀರು ಇಟ್ಟುಕೊಳ್ಳೋದು ಬಹಳ ಒಳ್ಳೇದು. ಬೇಕಾದರೆ ಚಾಕೊಲೆಟ್ ತೆಗೆದುಕೊಂಡು ಹೋಗಿ. ಇದರಿಂದ ಶಕ್ತಿ ಸಿಕ್ಕಿ ನೀವು ಉತ್ತಮವಾಗುತ್ತೀರಿ.

11. ಅಂತಿಮವಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೀರಾ ನೋಡಿಕೊಳ್ಳಿ. ಎಲ್ಲಾ ಉತ್ತರಗಳಿಗೆ ಸರಿಯಾದ ನಂಬರ್ ಹಾಕಿದ್ದೀರಾ ಚೆಕ್ ಮಾಡಿಕೊಳ್ಳಿ. ಆಮೇಲೆ ಬರೆಯೋಣ ಎಂದು ಖಾಲಿ ಜಾಗ ಬಿಟ್ಟಿದ್ದರೆ ಸರಿಯಾದ ಉತ್ತರಕ್ಕಾಗಿ ಪ್ರಯತ್ನಿಸಿ, ನೆನಪಾಗುತ್ತೆ! ಹೀಗೆ ಚೆಕ್ ಮಾಡಲಿಕ್ಕೆ, ಪರೀಕ್ಷೆಯನ್ನು 10-15 ನಿಮಿಷ ಮುಂಚೆಯೇ ಮುಗಿಸಿರಬೇಕು.
ಈ ಜೀವನ ಉಳಿಸುವ ಕೊನೆಯ ಟಿಪ್ ನೆನಪಿರಲಿ: ಒಮ್ಮೆ ನೀವು ಉತ್ತರ ಪತ್ರಿಕೆಯನ್ನು ಕೊಟ್ಟ ನಂತರ ಫಲಿತಾಂಶಕ್ಕಾಗಿ ಚಿಂತಿಸುವುದನ್ನು ಬಿಟ್ಟುಬಿಡಿ. ಎಲ್ಲವುದೂ ಚೆನ್ನಾಗೇ ಆಗುತ್ತೆ ಅನ್ನೋದರಲ್ಲಿ ವಿಶ್ವಾಸವಿಡಿ. ಪರೀಕ್ಷೆ ಹಾಲ್‌ನಿಂದ ಹೊರಬಂದ ಮೇಲೆ ಮರೆತುಬಿಡಿ! ಅದು ಮುಗಿದುಹೋದ ಕಥೆ!
ಗಣಿತ ಪರೀಕ್ಷೆ ಬರೆದಿದ್ದೀರಿ ಅಂದುಕೊಳ್ಳಿ. ಮಾರನೇ ದಿನ ವಿಜ್ಞಾನ ಇದ್ದರೆ, ಗಣಿತದಲ್ಲಿ ಏನು ತಪ್ಪು ಮಾಡಿಬಿಟ್ಟೆ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕೂರಬೇಡಿ. ಪರೀಕ್ಷೆ ಬರೆದಾಯ್ತು, ಅದನ್ನು ಮರೆತುಬಿಡಿ. ಈಗ ಅದನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎಂದು ಕೊರಗುವುದರಲ್ಲಿ ಅರ್ಥ ಇಲ್ಲ. ನಾಳೆ ಇರೋ ಪರೀಕ್ಷೆ ಎಷ್ಟು ಚೆನ್ನಾಗಿ ಮಾಡಬಹುದು ಎಂಬುದನ್ನಷ್ಟೇ ಯೋಚಿಸಿ.

12. ಸಂಜೆ, ನಿಮಗೆ ಕಷ್ಟವಾಗುವ ಮತ್ತು ಅನಿಷ್ಟ ಎಂದು ಶಾಪ ಹಾಕೋ ವಿಷಯವನ್ನು ಮೊದಲು ಓದಿ, ನಿಮಗೆ ಅತಿ ಇಷ್ಟವಾಗೋ ವಿಷಯವನ್ನು ನಂತರ ಓದಿ. ನಿಮಗೆ ಇಷ್ಟವಾಗದ ವಿಷಯವೂ ಅರ್ಥವಾಗುತ್ತಾ ಹೋಗುತ್ತದೆ.

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40028 ಗೆ ಭೇಟಿನೀಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.